ಸನ್ಮಾರ್ಗ ವಾರ್ತೆ
ಇಸ್ತಾಂಬುಲ್: ಟರ್ಕಿಯ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಸ್ವೀಡನ್ ರಾಜಕಾರಣಿ ರಾಸ್ಮಸ್ ಪಾಲುದಾನ್‌ರವರು ಟರ್ಕಿ ರಾಯಭಾರ ಕಚೇರಿಯ ಮುಂದೆ ಪವಿತ್ರ ಕುರ್‌ಆನಿನ ಪ್ರತಿಯನ್ನು ಸುಟ್ಟ ಘಟನೆಯ ವಿರುದ್ಧ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗಿದೆ.
ಸ್ವತಃ ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಈ ಕೃತ್ಯವನ್ನು ಖಂಡಿಸಿದ್ದು, “ಅನೇಕರಿಗೆ ಪವಿತ್ರವಾದ ಗ್ರಂಥವನ್ನು ಸುಡುವುದು ಆಳವಾದ ಅಗೌರವದ ಕೃತ್ಯವಾಗಿದೆ. ಇಂದು ಸ್ಟಾಕ್‌ಹೋಮ್‌ನಲ್ಲಿ ನಡೆದ ಘಟನೆಯಿಂದ ಮನನೊಂದಿರುವ ಎಲ್ಲಾ ಮುಸ್ಲಿಮರಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಮೊರಕ್ಕೊ, ಇಂಡೋನೇಷ್ಯಾ ಸಹಿತ ಈಜಿಪ್ಟಿನ ಅಲ್ ಅಝರ್ ಯೂನಿವರ್ಸಿಟಿ ಸೇರಿದಂತೆ ಅನೇಕ ರಾಷ್ಟ್ರಗಳು ಸ್ವೀಡನ್ ನಲ್ಲಿ ನಡೆದ ಈ ಘಟನೆಯನ್ನು ಖಂಡಿಸಿವೆ.
ಟರ್ಕಿಯಲ್ಲಿರುವ ಸ್ವೀಡನ್ ರಾಯಭಾರಿಯ ಕಚೇರಿಯ ಎದುರು ನೂರಾರು ಮಂದಿ ಜಮಾಯಿಸಿದ ಪ್ರತಿಭಟನಾಕಾರರು ಸ್ವೀಡನ್ ರಾಷ್ಟ್ರಧ್ವಜವನ್ನು ಸುಟ್ಟರು. ಸ್ವೀಡನ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರಾಸ್ಮಸ್ ನೆದರ್ಲ್ಯಾಂಡ್ ಸಂಜಾತ ಸ್ವೀಡನ್ ವ್ಯಕ್ತಿಯಾಗಿದ್ದು ಜನಾಂಗೀಯ ನಿಂದನೆಗಾಗಿ ಈಗಾಗಲೇ ಶಿಕ್ಷೆಗೆ ಒಳಗಾದವರಾಗಿದ್ದಾರೆ. ಹಾಗೆಯೇ ಕಳೆದ ವರ್ಷ ಅವರು ಕುರ್‌ಆನ್’ನ್ನು ಸುಟ್ಟ ಆರೋಪವನ್ನೂ ಹೊತ್ತುಕೊಂಡಿದ್ದಾರೆ.