ಸನ್ಮಾರ್ಗ ವಾರ್ತೆ
ಅಂಕಾರಾ: ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಟರ್ಕಿ- ಸಿರಿಯಾ ನಲುಗಿ ಹೋಗಿವೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಇದುವರೆಗೆ 7,926 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಭೀತಿ ಇದೆ ಎಂಬ ಆತಂಕವನ್ನು ಉಭಯ ದೇಶಗಳ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆಯವರೆಗಿನ ದತ್ತಾಂಶಗಳ ಪ್ರಕಾರ, ಉಭಯ ರಾಷ್ಟ್ರಗಳಲ್ಲಿ ಮೃತರ ಸಂಖ್ಯೆ ಒಟ್ಟು 7926ಕ್ಕೆ ಏರಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ರಕ್ಷಣೆಗಾಗಿ ಕೊರೆವ ಚಳಿಯ ನಡುವೆಯೂ ತ್ವರಿತ ಕಾರ್ಯಾಚರಣೆ ಮುಂದುವರಿದಿದೆ. ಸಾವು– ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯ ಚುರುಕುಗೊಳಿಸಲಾಗುತ್ತಿದೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಟರ್ಕಿಯಲ್ಲಿ ಇದುವರೆಗೆ 5,894 ಜನರು ಮೃತಪಟ್ಟಿರುವುದಾಗಿ ವರದಿಯಾಗಿದ್ದು, 34,810 ಜನರು ಗಾಯಗೊಂಡಿದ್ದಾರೆ.
ಸಿರಿಯಾದಲ್ಲಿ ಮೃತರ ಸಂಖ್ಯೆ 2,032ಕ್ಕೆ ಏರಿಕೆಯಾಗಿದ್ದು, 2600ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಡಗಳು ನೆಲಸಮವಾಗಿವೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಬ್ ಉರ್ದುಗಾನ್, ಟರ್ಕಿಯ ಆಗ್ನೇಯದ ಹತ್ತು ಪ್ರಾಂತ್ಯಗಳಲ್ಲಿ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಭಾರತ, ಅಮೆರಿಕ, ಬ್ರಿಟನ್ ಸೇರಿ ವಿಶ್ವದ ಹಲವು ರಾಷ್ಟ್ರಗಳು ಉಭಯ ದೇಶಗಳ ಸಂತ್ರಸ್ತರ ನೆರವಿಗಾಗಿ ಔಷಧಿ, ಪರಿಹಾರ ಸಾಮಗ್ರಿ ಹಾಗೂ ವಿಪತ್ತು ಸ್ಪಂದನಾ ಪಡೆಗಳನ್ನು ರವಾನಿಸುತ್ತಿವೆ.












