ಸನ್ಮಾರ್ಗ ವಾರ್ತೆ
ಬೆಂಗಳೂರು : “ಬೆಳಕು ಮತ್ತು ಕತ್ತಲು ಸಮಾನವಾಗಿರಲು ಸಾಧ್ಯವಿಲ್ಲವೋ, ಅದೇ ರೀತಿ ತಿಳಿದವರು ಮತ್ತು ತಿಳಿಯದವರು ಕೂಡ ಸಮಾನರಾಗಲು ಸಾಧ್ಯವಿಲ್ಲ” ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳ್ಗಾಮಿ ಹೇಳಿದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ಪ್ರತಿಭಾ ಪುರಸ್ಕಾರ ಬಹುಮಾನ ವಿತರಣಾ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು. ಮುಂದುವರೆದು ಅವರು “ಯಾವ ಸಮುದಾಯ ಓದು ಮತ್ತು ಜ್ಞಾನ ಸಂಪಾದನೆಯಲ್ಲಿ ಮುಂದಿರುತ್ತದೆಯೊ ಅದು ಜಗತ್ತಿಗೆ ದಿಕ್ಕು ತೋರಿಸುವ ಅರ್ಹತೆ ಹೊಂದಿರುತ್ತದೆ,
ಪಾಲಕರು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು” ಎಂದವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಪ್ರಕಟಗೊಂಡ “ದೀನೇ ಇಸ್ಲಾಮ್” ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಸಯ್ಯದ್ ತನ್ವೀರ್ ಅಹ್ಮದ್ ಮಾತನಾಡಿ ” ಹೆತ್ತವರು ಮಕ್ಕಳಿಗೆ ಅವರ ಜೀವನದಲ್ಲಿ ಅನೇಕ ಸವಲತ್ತುಗಳನ್ನು ಒದಗಿಸಿಕೊಡುತ್ತಾರೆ, ಆದರೆ ದುರದೃಷ್ಟವಶಾತ್ ಅವರ ತರಬೇತಿ ಹಾಗೂ ಅವರನ್ನು ಒಳ್ಳೆಯ ಚಾರಿತ್ರ್ಯವಂತರನ್ನಾಗಿಸುವ ವಿಷಯದಲ್ಲಿ ಸೋಲುತ್ತಿರುವುದು ನಿಜಕ್ಕೂ ದುರಂತವೇ ಸರಿ, ಈ ನಿಟ್ಟಿನಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಸಂಸ್ಥೆಯು ಮಕ್ಕಳನ್ನು ರೂಪಿಸುವ, ಅವರ ಭವಿಷ್ಯವನ್ನು ಸುಧಾರಿಸುವ ಕೆಲಸಕ್ಕೆ ನಾಂದಿ ಹಾಡಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದವರು ಶ್ಲಾಘಿಸಿದರು.
ಕಾರ್ಯಕ್ರಮವು ಹಾಫೀಝ್ ಸಯ್ಯದ್ ಝುಬೇರ್ ಅಹ್ಮದ್ ಉಮರಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು, ಬಿ.ಐ.ಇ .ಅವರ ಕುರ್ ಆನ್ ಉದ್ಭೋದನೆಯಿಂದ ಪ್ರಾರಂಭಗೊಂಡಿತು.

ಬಿ.ಐ.ಇ. ಚೇರ್ಮನ್ ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ, ಬೆಂಗಳೂರು ನಗರ ಸಂಚಾಲಕ ಪ್ರೊ. ಶೇಖ್ ಹಾರೂನ್ ಸಫ್ದರ್ ಸಂದರ್ಭೋಚಿತವಾಗಿ ಮಾತನಾಡಿದರು.
ಬಿ.ಐ.ಇ. ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಪ್ರಾಸ್ತಾವಿಕ ಭಾಷಣ ಮಾಡಿದರು. ಬಿ.ಐ.ಇ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಮೌಲಾನಾ ಆಮೀರ್ ಹುಸೇನ್ ಉಮರಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಪುಸ್ತಕದ ಪರಿಚಯ ಮಾಡಿಸಿದರು ಎಸ್. ಎಂ . ಸಾದಾತ್ ಸ್ವಾಗತಿಸಿದರು. ಅಸದುಲ್ಲಾಹ್ ಆಮೀರ್ ಕಾರ್ಯಕ್ರಮವನ್ನು ನಿರೂಪಿಸಿದರು ಮೌಲಾನಾ ಮುಬಾರಕ್ ಉಮರಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.













