ಪರರ ನೋವನ್ನು ಅನುಭವಿಸಲು ಆಧ್ಯಾತ್ಮಿಕತೆಯು ಅಗತ್ಯ. ಪ್ರವಾದಿ ಮುಹಮ್ಮದರ ಬೋಧನೆಗಳು ಸಾರ್ವತ್ರಿಕವಾದದ್ದು: ಸೀರತ್ ವಿಚಾರಗೋಷ್ಠಿಯಲ್ಲಿ ಡಾ. ವಾಸು ಹೆಚ್.ವಿ

0
312

ಸನ್ಮಾರ್ಗ ವಾರ್ತೆ

ಮಂಗಳೂರು: ಇನ್ನೊಬ್ಬನ ನೋವನ್ನು ನನ್ನ ನೋವು ಎಂದು ಅರಿಯಲು ಆಧ್ಯಾತ್ಮಿಕ ಅರಿವಿನ ಅಗತ್ಯವಿದೆ. ಇನ್ನೊಬ್ಬನ ನೋವು ನಮ್ಮ ನೋವು ಎಂದು ಅನುಭವಿಸಲು ಮಾದರಿಯಾಗಿ ಪ್ರವಾದಿ ಮುಹಮ್ಮದ್ ರ ಚಿಂತನೆಯನ್ನು ಅರ್ಥಮಾಡಿಕೊಂಡಿದ್ದೇನೆ. ಅಧಿಕಾರವಿದ್ದಾಗಲೂ ನಾವು ವಿನೀತರಾಗಿರಬೇಕು ಸಮಾಜದ ದುರ್ಬಲರ ಜೊತೆ ಸರಿಯಾದ ರೀತಿಯಲ್ಲಿ ವರ್ತಿಸಬೇಕಾದರೆ ರಾಜಕೀಯ ಮಾತ್ರ ಸಾಲದು ಅದಕ್ಕೆ ಆಧ್ಯಾತ್ಮಿಕತೆಯೂ ಬೇಕು. ತನ್ನನ್ನು ಹಿಂಸಿಸಿದವರನ್ನು ಕ್ಷಮಿಸುವಂತಹ ಗುಣ ಆಧ್ಯಾತ್ಮಿಕತೆಯಿಂದ ಬರುವಂತಹದ್ದು. ಪ್ರವಾದಿ ಮಹಮ್ಮದರು ಅದನ್ನು ಬೋಧಿಸಿದರು ಜೊತೆಯಲ್ಲಿ ಹಾಗೆಯೇ ಬದುಕಿ ತೋರಿಸಿದರು. ಪ್ರವಾದಿ ಮುಹಮ್ಮದ್ ರ ಬೋಧನೆಗಳು ಸಾರ್ವತ್ರಿಕವಾದದ್ದು ಎಂದು ಈ ದಿನ ಡಾಟ್ ಕಾಮ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಡಾಕ್ಟರ್ ವಾಸು ಅಭಿಪ್ರಾಯಪಟ್ಟರು.

ನಗರದ ಪುರಭವನದಲ್ಲಿ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ( ಸ) ಸೀರತ್ ಅಭಿಯಾನದ ಪ್ರಯುಕ್ತ ಪ್ರವಾದಿ ಮಹಮ್ಮದ್ ವರ್ತಮಾನ ಭಾರತದ ಪೂರ್ವಗ್ರಹ ಮತ್ತು ವಾಸ್ತವ ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಅವರು ಮುಂದುವರೆಯುತ್ತಾ ಪ್ರವಾದಿ ಮುಹಮ್ಮದ್ ರು ಬಡವರ ನೆರೆಹೊರೆಯವರ ಬಗೆಗಿನ ಉದಾತ್ತವಾದ ಚಿಂತನೆಗಳನ್ನು ಏಳನೇ ಶತಮಾನದಲ್ಲಿಯೇ ಬೋಧಿಸಿದರು. ಮದೀನಾದ ಎಲ್ಲ ಜನರನ್ನು ಒಟ್ಟುಗೂಡಿಸಿ ಎಲ್ಲರಿಗೂ ಸಮಾನತೆ ಸಾರುವ ಸಂವಿಧಾನವನ್ನು ರಚಿಸಿದರು. ಇಂದು ಮಸೀದಿ ಮಂದಿರ ಚರ್ಚುಗಳು ಹೆಚ್ಚಾಗುತ್ತಿವೆ . ಆದರೆ ಆಧ್ಯಾತ್ಮಿಕತೆ ಇಂದು ಕಡಿಮೆಯಾಗುತ್ತಿದೆ. ಪ್ರವಾದಿ ಮುಹಮ್ಮದ್, ನಾರಾಯಣ ಗುರು, ಬಸವಣ್ಣ , ಗಾಂಧಿ ಮುಂತಾದವರು ಆಧ್ಯಾತ್ಮ ಗುರುಗಳು ಅವರ ಉದಾತ್ತ ಹಾದಿಯಲ್ಲಿ ನಡೆದು ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾಗಿದೆ. ನಮ್ಮಲ್ಲಿರುವ ಪೂರ್ವಗ್ರಹಗಳನ್ನು ಹೋಗಲಾಡಿಸಲು ಪರಸ್ಪರ ಐಕ್ಯದಿಂದ ಇರಲು ವಿಶ್ವ ವ್ಯಾಪ್ತಿ ಪ್ರಯತ್ನವಾಗಬೇಕಾಗಿದೆ. ಎಂದೂ ಅವರು ಅಭಿಪ್ರಾಯಪಟ್ಟರು.

ನನಗೆ ಹಸಿವಾಗುತ್ತಿದೆ ಎನ್ನುವುದು ಭೌತಿಕವಾಗಿದ್ದು ಇನ್ನೊಬ್ಬರ ಹಸಿವನ್ನು ಅನುಭವಿಸುವುದು ಬೌದ್ಧಿಕವಾದದ್ದು ಇನ್ನೊಬ್ಬರ ಹಸಿವು ನನ್ನ ಹಸಿವು ಎಂಬುದು ಆಧ್ಯಾತ್ಮಿಕವಾದದ್ದು ಇಬ್ರಾಹಿಂ ಸಈದ್ ರವರ ಮಾತನ್ನು ನೆನಪಿಸಿದರು.

ವಿಚಾರ ಮಂಡನೆಗೈದ ಸನ್ಮಾರ್ಗ ಸಮೂಹ ಮಾಧ್ಯಮದ ಸಂಪಾದಕ ಏ.ಕೆ ಕುಕ್ಕಿಲ ಮಾತನಾಡುತ್ತಾ ಪ್ರವಾದಿ ಮುಹಮ್ಮದ್ (ಸ) ಮದೀನಾದಲ್ಲಿ ಇಡೀ ಸಮಾಜವನ್ನು ಒಟ್ಟುಗೂಡಿಸಿ ಸಂವಿಧಾನ ರಚಿಸಿದರು‌. ನ್ಯಾಯ ಸಮಾನತೆ ಸ್ಥಾಪಿಸಿದರು. ಸರ್ವಾಧಿಕಾರ ಇಲ್ಲದ ಸಮಾಜದ ನಿರ್ಮಾಣ ಮಾಡಿದರು. ಬಂಧಿತ ಕೈದಿಗಳನ್ನು ಕ್ಷಮಿಸಿದರು. ಶಿಲುಬೆ ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಬರಹಗಾರರು ಇಸ್ಲಾಮಿನ ಬಗ್ಗೆ ಪ್ರವಾದಿಯವರ ಬಗ್ಗೆ ಅಪಪ್ರಚಾರದ ತಂತ್ರದಲ್ಲಿ ತೊಡಗಿಸಿಕೊಂಡರು. ಬ್ರಿಟಿಷ್ ಸಾಹಿತ್ಯದ ಮೂಲಕ ಭಾರತವನ್ನು ಅದು ಪ್ರವೇಶಿಸಿತ್ತು. ಆ ಅಪಪ್ರಚಾರ ಇಂದು ವ್ಯಾಪಕವಾಗಿದೆ. ಆದ್ದರಿಂದ ಇಲ್ಲಿ ವಾಸ್ತವ ವಿಚಾರಗಳ ಬಗ್ಗೆ ಸಂವಾದ ಚರ್ಚೆ ನಡೆಯಬೇಕಿದೆ. ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಫಾದರ್ ವೆಲೇರಿಯನ್ ಡಿಸೋಜಾ (ಪ್ರಧಾನ ಗುರುಗಳು ರೊಝಾರಿಯೋ ಚರ್ಚ್ ಮಂಗಳೂರು) ಮಾತನಾಡುತ್ತಾ ಅಂತರಂಗದ ಪರಿವರ್ತನೆ ಎಲ್ಲಾ ಮನುಷ್ಯರಿಗೂ ಅತಿ ಅಗತ್ಯ ಅರಬನಿಗೆ ಅರಬೇತರನಿಗಿಂತ ಶ್ರೇಷ್ಠ ತೆ ಇಲ್ಲ. ಬಿಳಿಯನಿಗೆ ಕರಿಯನಿಗಿಂತ ಶ್ರೇಷ್ಠತೆ ಇಲ್ಲ ಮಾನವರ ಸಮಾನರು. ಎಂದು ಪ್ರವಾದಿ ಮಹಮ್ಮದರು ಸಾರಿದರು ಪವಿತ್ರ ಗ್ರಂಥಗಳ ಅಧ್ಯಯನ ಮಾಡಿ ಅದು ನಮ್ಮ ಬದುಕಿನಲ್ಲಿ ಪ್ರತಿಬಿಂಬಿಸಿ ನಮ್ಮನ್ನು ನಾವು ಪರಿವರ್ತಿಸಲು ಮುಂದಾಗೋಣ ಎಂದು ಹೇಳಿದರು.

ಇನ್ನೋರ್ವ ಅತಿಥಿ ಅನುಪಮಾ ಮಹಿಳಾ ಮಾಸಿಕದ ಸಂಪಾದಕಿ ಸಬಿಹಾ ಫಾತಿಮಾರವರು ಮಾತನಾಡುತ್ತಾ, ಪ್ರವಾದಿ ಮುಹಮ್ಮದ್ ( ಸ)ರು ಪರಲೋಕದ ಶಾಶ್ವತ ಜೀವನದ ಬಗ್ಗೆ ಸಂದೇಶ ನೀಡಿದರು. ಇಸ್ಲಾಮ್ ಮಹಿಳೆಯರ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತದೆ. ಮಹಿಳೆಯನ್ನು ಮನೆಯಲ್ಲಿ ಬಂಧಿಸಿಡಲಾಗುತ್ತಿದೆ ಮುಂತಾದ ಹತ್ತು ಹಲವು ಪೂರ್ವಗ್ರಹಗಳಿವೆ. ಇದನ್ನು ಹೋಗಲಾಡಿಸಲು ಪ್ರಯತ್ನವಾಗಬೇಕು. ಪ್ರವಾದಿವರ್ಯರು ತನ್ನ ಪತ್ನಿಯರಿಗೆ ಮನೆ ಕೆಲಸಕ್ಕೆ ನೆರವಾಗುತ್ತಿದ್ದರು. ಬಹುಪತ್ನಿತ್ವಕ್ಕೆ ನಿಯಂತ್ರಣ ಹೇರಿದ ಧರ್ಮ ಇಸ್ಲಾಮ್ ಆಗಿದೆ. ಇಸ್ಲಾಮಿನಲ್ಲಿ ತಲಾಕ್ ಮಾತ್ರವಲ್ಲ ಮಹಿಳೆಯರಿಗಾಗಿ ಖುಲಾ ಕೂಡಾ ಇದೆ. ಪರಸ್ಪರ ಸರ್ವರನ್ನು ಅರಿಯೋಣ… ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಇದರ ಮಂಗಳೂರು ಉತ್ತರದ ಅಧ್ಯಕ್ಷ ಇಸ್ಹಾಕ್ ಪುತ್ತೂರು ಮಾತನಾಡಿ, ತಮ್ಮ ಸಂದೇಶ ಸಾರುವ ಮೂಲಕ ಪ್ರವಾದಿ ವರ್ಯರು ಇದು ಪರಲೋಕ ಮೋಕ್ಷಕ್ಕಿರುವ ಏಕೈಕ ಮಾರ್ಗವಾಗಿದೆ. ನಾನು ನಿಮಗೆ ಕಲಿಸಿರುವಂತಹದ್ದು ದೇವನಿಂದ ಬಂದಂತಹದ್ದು ಆದ್ದರಿಂದ ನನ್ನನ್ನು
ಅನುಸರಿಸಿರಿ. ನೀವು ಯಶಸ್ವಿಯಾಗುವಿರಿ. ಪ್ರವಾದಿಗಳು ಧರ್ಮವನ್ನು ಬಲವಂತವಾಗಿ ಹೇರಲಿಲ್ಲ ಆಮಿಶ ನೀಡಲಿಲ್ಲ. ಎಚ್ಚರಿಸಿದರು. ಆದರೆ ಇದರಿಂದ ದೂರ ನಿಲ್ಲಲು ಅವರಿಗೆ ಆಮಿಷ ನೀಡಲಾಗಿತ್ತು. ಅಧಿಕಾರ ಇದ್ದಾಗ ಕ್ಷಮಿಸಿದರು ಇಲ್ಲದಾಗ ಸಹಿಸಿಕೊಂಡು ಬದುಕಿದರು. ಧರ್ಮ ಇರುವುದು ಅನುಸರಿಸಲು ಇರುವುದೇ ಹೊರತು ಜಗಳ ಮಾಡಲಿಕ್ಕಿರುವುದಲ್ಲ ಎಂದು ಹೇಳಿದರು.

ಅಬ್ದುಲ್ ಲತೀಫ್ ಆಲಿಯಾರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾದ ಅಬ್ದುಲ್ ಕಪೂರ್ ಕುಳಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಶಹೀದಾ ಉಮರ್ ಮತ್ತು ಲುಬ್ನಾ ಝಕೀಯ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

ವೇದಿಕೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು ಎಚ್. ಉಮರ್, ಜಮಾಅತೆ ಇಸ್ಲಾಮಿ ಮಂಗಳೂರು ವಲಯ ಸಂಚಾಲಕ ಸಈದ್ ಇಸ್ಮಾಯಿಲ್, ಜ.ಇ. ಮಂಗಳೂರು ನಗರ ಅಧ್ಯಕ್ಷ ಕೆ.ಎಂ ಅಶ್ರಫ್. ಜ ಇ. ಮಹಿಳಾ ವಿಭಾಗದ ದ.ಕ.ಜಿಲ್ಲಾ ಸಂಚಾಲಕಿ ಸಾಜಿದಾ ಮೂಮಿನ್ ಉಪಸ್ಥಿತರಿದ್ದರು.