ಇಡಿ ವಶಪಡಿಸಿಕೊಂಡಿರುವ ಬಿಎಂಡಬ್ಲ್ಯು ಕಾರು ಹೇಮಂತ್ ಸೊರೇನ್ ಅವರದ್ದಲ್ಲ

0
149

ಸನ್ಮಾರ್ಗ ವಾರ್ತೆ

ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಮನೆಯಿಂದ ಅಧಿಕಾರಿಗಳು ವಶಪಡಿಸಿಕೊಂಡಿರುವ ಬಿಎಂಡಬ್ಲ್ಯು ಕಾರು ಅವರದ್ದಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಈ ಕಾರು ಕಾಂಗ್ರೆಸ್ ರಾಜ್ಯಸಭಾ ಸಂಸದ ಮತ್ತು ಕುಖ್ಯಾತ ಧೀರಜ್ ಪ್ರಸಾದ್ ಸಾಹು ಅವರ ಒಡೆತನದಲ್ಲಿದೆ ಎಂದು ತನಿಖಾ ತಂಡ ಹೇಳಿದೆ. ಇಡಿ ತಂಡವು ಜನವರಿ 29 ರಂದು ದೆಹಲಿಯಲ್ಲಿರುವ ಸೋರೆನ್ ಅವರ ನಿವಾಸದಿಂದ ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದೆ.

ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಸಾಹು ಕಪ್ಪು ಹಣ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಾಹು ಒಡೆತನದ ಕಂಪೆನಿಯ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ ಎಂದು ಇಡಿ ಸ್ಪಷ್ಟ ಪಡಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಆದಾಯ ತೆರಿಗೆ ದಾಳಿ ವೇಳೆ ಸಾಹು ಅವರ ವಿವಿಧ ಸಂಸ್ಥೆಗಳಲ್ಲಿ 351 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿತ್ತು. 40 ನೋಟು ಎಣಿಕೆ ಯಂತ್ರಗಳ ಸಹಾಯದಿಂದ ಐದು ದಿನಗಳಲ್ಲಿ ನೋಟುಗಳನ್ನು ಎಣಿಸಲಾಗಿತ್ತು. ಇವುಗಳನ್ನು 200 ಚೀಲಗಳಲ್ಲಿ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗಿದೆ. 80 ಜನರನ್ನು ಒಳಗೊಂಡ ಒಂಬತ್ತು ತಂಡಗಳನ್ನು ಹಗಲಿರುಳು ಎಣಿಸಲಾಗಿದೆ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇಡಿ ಹೇಮಂತ್ ಸೊರೇನ್ ಅವರನ್ನು 31ರಂದು ಬಂಧಿಸಿತ್ತು.