ಟ್ರಾಫಿಕ್ ಜಾಮ್‌‌ನಲ್ಲಿ ಕಾರು: ರೋಗಿಯ ಶಸ್ತ್ರಚಿಕಿತ್ಸೆ‌ಗಾಗಿ 3 ಕಿ.ಮೀ ಓಡಿ ಆಸ್ಪತ್ರೆ ಸೇರಿದ ವೈದ್ಯ

0
508

ಸನ್ಮಾರ್ಗ ವಾರ್ತೆ

ಬೆಂಗಳೂರು: ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ವೈದ್ಯರೊಬ್ಬರು ರೋಗಿಯ ತುರ್ತು ಶಸ್ತ್ರಚಿಕಿತ್ಸೆ‌ಗಾಗಿ ಕಾರನ್ನು ರಸ್ತೆಯಲ್ಲೇ ಬಿಟ್ಟು ಮೂರು ಕಿಲೋ ಮೀಟರ್ ಓಡಿ ಆಸ್ಪತ್ರೆ ತಲುಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಗೋವಿಂದ್ ನಂದಕುಮಾರ್ ಟ್ರಾಫಿಕ್ ಜಾಮ್‌‌‌ನಿಂದಾಗಿ ಓಡಿ ಆಸ್ಪತ್ರೆ ತಲುಪಿದವರು.

“ಪಿತ್ತಕೋಶದ ಕಾಯಿಲೆಯಿಂದಾಗಿ ತೀವ್ರ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಬೆಳಗ್ಗೆ 10 ಗಂಟೆಗೆ ಸರ್ಜಾಪುರ-ಮಾರತಹಳ್ಳಿ ರಸ್ತೆಗೆ ಬಂದ ಕಾರು ಟ್ರಾಫಿಕ್ ಜಾಮ್‌‌ನಲ್ಲಿ ಸಿಲುಕಿತು. ಸಾಮಾನ್ಯವಾಗಿ ಇಲ್ಲಿಂದ ಆಸ್ಪತ್ರೆಗೆ ಕೇವಲ 10 ನಿಮಿಷಗಳ ಪ್ರಯಾಣವಿತ್ತು. ಆದರೆ, ಟ್ರಾಫಿಕ್‌ನಿಂದಾಗಿ ಈ ದೂರವನ್ನು ಕ್ರಮಿಸಲು ಕನಿಷ್ಠ 45 ನಿಮಿಷಗಳು ಬೇಕು ಎಂಬುದನ್ನು ಮನಗಂಡ ಅವರು ವಾಹನವನ್ನು ತಲುಪಿಸಲು ಚಾಲಕನಿಗೆ ಹೇಳಿ ಕೆಳಗಿಳಿದು ಓಟಕ್ಕಿತ್ತರು.

ಪ್ರತಿನಿತ್ಯ ವ್ಯಾಯಾಮ ಮಾಡುತ್ತಿದ್ದರಿಂದ ನನಗೆ ಯಾವುದೇ ತೊಂದರೆ ಆಗಲಿಲ್ಲ. ಆಂಬ್ಯುಲೆನ್ಸ್‌ಗಳು ಕೂಡ ಹಾದು ಹೋಗಲಾರದಂತಹ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಭಾರಿ ತುರ್ತು ಪರಿಸ್ಥಿತಿ ಎದುರಾಗಲಿದೆ ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ರೋಗಿ ಚೇತರಿಸಿಕೊಂಡಿದ್ದಾಗಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಈಗಲೂ ರಸ್ತೆಗಳು ನೀರಿನಿಂದ ಆವೃತ್ತವಾಗಿದ್ದು, ನಗರದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಜನರು ಅನುಭವಿಸುತ್ತಿದ್ದಾರೆ.