ಗುಜರಾತ್‌ನಲ್ಲಿ AAP ಕಚೇರಿ ಮೇಲೆ ಪೊಲೀಸ್ ದಾಳಿ: ಆಮ್ ಆದ್ಮಿ ಪಕ್ಷದ ಜನಪ್ರೀಯತೆಗೆ ಬಿಜೆಪಿ ಹೆದರುತ್ತಿದೆ

0
373

ಸನ್ಮಾರ್ಗ ವಾರ್ತೆ

ನವದೆಹಲಿ: ಅಹಮದಾಬಾದ್‌ನಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ, “ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷಕ್ಕೆ ಸಿಗುತ್ತಿರುವ ಭಾರೀ ಬೆಂಬಲ ಆಡಳಿತಾರೂಢ ಬಿಜೆಪಿಯನ್ನು ಅಸಮಾಧಾನಗೊಳಿಸುತ್ತಿದೆ” ಎಂದು ಆಪ್ ಆರೋಪಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ಗೆ ಆಗಮಿಸಿದ ಬೆನ್ನಲ್ಲೇ ದಾಳಿ ನಡೆಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಗುಜರಾತ್ ಘಟಕದ ನಾಯಕರು ಟ್ವೀಟ್ ಮಾಡಿದ್ದಾರೆ.

“ಗುಜರಾತಿ‌ನ ಜನರಿಂದ ಸಿಗುತ್ತಿರುವ ಅಪಾರ ಬೆಂಬಲದಿಂದ ಬಿಜೆಪಿ ತೀವ್ರ ನಲುಗಿದೆ. ಗುಜರಾತ್‌ನಲ್ಲಿ ಎಎಪಿ ಪರವಾಗಿ ಬಿರುಗಾಳಿ ಬೀಸುತ್ತಿದೆ. ದೆಹಲಿಯ ನಂತರ ಈಗ ಗುಜರಾತ್‌ನಲ್ಲೂ ದಾಳಿ ಆರಂಭಿಸಿದೆ. ದೆಹಲಿಯಲ್ಲಿ ಏನೂ ಸಿಗಲಿಲ್ಲ, ಗುಜರಾತ್‌ನಲ್ಲೂ ಏನೂ ಸಿಗಲಿಲ್ಲ. ನಾವು ನಿಷ್ಠಾವಂತ, ಪ್ರಾಮಾಣಿಕ ಮತ್ತು ದೇಶಭಕ್ತರಾಗಿದ್ದೇವೆ” ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ. ಆದರೆ ದಾಳಿಯಲ್ಲಿ ಏನಾದರೂ ಪತ್ತೆಯಾಗಿದೆಯೇ ಎಂಬ ಬಗ್ಗೆ ಗುಜರಾತ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೆ ಬರುತ್ತೇವೆ ಎಂದು ಹೇಳಿ ವಾಪಸ್ ಹೋದರು ಎಂದು ಪಕ್ಷದ ಗುಜರಾತ್ ಘಟಕದ ನಾಯಕ ಇಸುದನ್ ಗಧ್ವಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ಹೆಚ್ಚುತ್ತಿರುವ ಆಮ್ ಆದ್ಮಿ ಪಕ್ಷದ ಜನಪ್ರಿಯತೆಗೆ ಬಿಜೆಪಿ ತುಂಬಾ ಹೆದರುತ್ತಿದೆ ಮತ್ತು ಕಚೇರಿ ಮೇಲೆ ದಾಳಿ ಮಾಡಲು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎಎಪಿ ಗುಜರಾತ್ ಘಟಕ ಟ್ವೀಟ್‌ನಲ್ಲಿ ಆರೋಪಿಸಿದೆ‌. ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.