ಶರೀಫ್ ಸಾಬ್‌ರನ್ನು ಭೇಟಿಯಾದ ಕ್ಷಣ

0
568

✍️ ಮುಹಮ್ಮದ್ ಅಬ್ದುಲ್ಲಾ ಜಾವೀದ್

(ಭಾಗ- 02)

ಶರೀಫ್ ಸಾಹಬ್‌ರು ಆಂದೋಲನದೊಂದಿಗಿನ ಸಂಬಂಧ ಮತ್ತು ಸತತ ಪರಿಶ್ರಮದ ಜೀವನವನ್ನು ನೋಡುವಾಗ, ವ್ಯಕ್ತಿಯ ವೈಯಕ್ತಿಕ ಆಸಕ್ತಿ ಮತ್ತು ಅಧ್ಯಯನವಲ್ಲದೆ ಹೊಣೆಗಾರರು ಹಾಗೂ ಸಹಪ್ರವರ್ತಕರ ಚಾರಿತ್ರ್ಯದ ಪಾತ್ರ ಬಹಳವಿರುವುದು ಕಾಣುತ್ತದೆ. ಅಧ್ಯಯನ ಇತ್ಯಾದಿಗಳಿಂದ ವ್ಯಕ್ತಿಯಲ್ಲಿ ಆಂದೋಲನಾತ್ಮಕ ಚಿಂತನೆ ಬೆಳೆದು ಬರುತ್ತದೆ; ಆದರೆ ಅದಕ್ಕೆ ಕ್ರಿಯಾರೂಪವನ್ನು ನೀಡಲು ಅಂದರೆ ಆಲೋಚನೆಯನ್ನು ಕರ್ಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಹಪ್ರವರ್ತಕರ ಮನಸೂರೆಗೊಳ್ಳುವಂತಹ ಚಾರಿತ್ರ್ಯಕ್ಕೆ ಬಹಳ ಮಹತ್ವವಿದೆ. ಆದ್ದರಿಂದಲೇ ತನ್ನ ಸಂಗಡಿಗರಿಗಾಗಿ ತನ್ನ ಸರ್ವಸ್ವವನ್ನೂ ಅರ್ಪಿಸಬೇಕು ಎಂದು ಆಂದೋಲನ ಬಾಂಧವರಿಗೆ ಉಪದೇಶಿಸಲಾಗಿದೆ.

“ಸತ್ಯವಿಶ್ವಾಸಿಗಳ ಪೈಕಿ ನಿಮ್ಮನ್ನು ಅನುಸರಿಸು ವವರೊಂದಿಗೆ ಸೌಜನ್ಯದಿಂದ ವರ್ತಿಸಿರಿ.” (ಅಶ್ಶುಅರಾ: 215)

ಅರ್ಥಾತ್ ಒಂದು ಉದ್ದೇಶದೊಂದಿಗೆ ಸಂಬಂಧವಿರಿಸಿಕೊಂಡಿರುವ ಮಂದಿ, ಪ್ರತಿಭೆಗಳು, ಸಾಮರ್ಥ್ಯಗಳು, ಜ್ಞಾನ-ಯುಕ್ತಿಯ ಮಟ್ಟ ಮತ್ತು ಸಂಪನ್ಮೂಲಗಳಲ್ಲಿ ವ್ಯತ್ಯಸ್ಥರಾಗಿರುವುದರ ಹೊರತಾಗಿಯೂ ಅವರು ಸೀಸದ ಎರಕ ಹೊಯ್ದ ಗೋಡೆಯಂತಾಗಿರಬೇಕು. ಸಂಘಟನೆಯಲ್ಲಿ ಪ್ರತಿಭಾವಂತರೇ ಮೇಲುಗೈ ಸಾಧಿಸಿರಬಾರದು ಮತ್ತು ಕಡಿಮೆ ಪ್ರತಿಭೆಯುಳ್ಳವರು ಕಡೆಗಣಿಸಲ್ಪಡಲೂಬಾರದು. ಶರೀಫ್ ಸಾಹಬ್‌ರಿಗೆ ಆರಂಭದಿಂದಲೇ ಇಂತಹುದೇ ಮನೋಹರವಾದ ಸಾಮೂಹಿಕ ಪರಿಸರ ಒದಗಿ ಬಂದಿತ್ತು. ಅವರು ತಮ್ಮ ಆರಂಭಿಕ ದಿನಗಳ ಒಂದು ಘಟನೆಯನ್ನು ಹೀಗೆ ತಿಳಿಸಿದ್ದರು:

ಒಮ್ಮೆ ಸಂಘಟನಾ ಕಾರ್ಯ ನಿಮಿತ್ತ ದಿಲ್ಲಿಯ ಕೇಂದ್ರ ಕಚೇರಿಗೆ ಹೋದರು. ಆಗ ಸುಮಾರು ಬೆಳಗ್ಗಿನ ನಾಲ್ಕು ಗಂಟೆಯಾಗಿತ್ತು. ಅತಿಥಿಗೃಹದ ಹೊಣೆಗಾರರು ಅವರಿಗೆ ನಿತ್ಯಕರ್ಮಗಳನ್ನೆಲ್ಲ ಮುಗಿಸಿ, ವಿರಮಿಸಲು ಅತ್ಯುತ್ತಮ ಸೌಲಭ್ಯವನ್ನು ಒದಗಿಸಿ ಕೊಟ್ಟದ್ದು ಮಾತ್ರವಲ್ಲ, ಅವರಿಗಾಗಿ ಚಹಾ ಮಾಡಿಯೂ ಕೊಟ್ಟಿದ್ದರು. ಈ ಸತ್ಕಾರದ ಪ್ರಭಾವ ಅವರ ಮೇಲೆ ಎಷ್ಟಾಗಿತ್ತೆಂದರೆ, ಹಲವು ವರ್ಷಗಳು ಕಳೆದ ಬಳಿಕವೂ ಈ ಘಟನೆಯನ್ನು ಸ್ಮರಿಸುವಾಗ ಅವರ ಕಣ್ಣಾಲಿಗಳು ತೇವಗೊಳ್ಳುತ್ತಿದ್ದುವು.

ಶರೀಫ್ ಸಾಹಬ್‌ರೊಂದಿಗೆ ವಿಶೇಷ ಭೇಟಿ

ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮಂಗಳೂರಿಗೆ ಪ್ರಯಾಣ ಕೈಗೊಂಡಿದ್ದಾಗ, ಶರೀಫ್ ಸಾಹಬ್‌ರೊಂದಿಗೆ ವಿಶೇಷ ಭೇಟಿಯಾಗಿತ್ತು. ಬೋಳಾರ ಇಸ್ಲಾಮಿಕ್ ಸೆಂಟರ್‌ನಲ್ಲಿ ಅಸ್ರ್ ನಮಾಝ್ ಬಳಿಕ ಎಂದಿನಂತೆ ಅಲ್ಲಿನ ಕಚೇರಿಯಲ್ಲಿ ತಮ್ಮ ಆಂದೋಲನ ಬಂಧುಗಳೊಂದಿಗೆ ವಿರಾಜಮಾನರಾಗಿದ್ದರು. ಆ ಸಂದರ್ಭದಲ್ಲಿ ನಮ್ಮ ಜೊತೆ ಮುಹಮ್ಮದ್ ಯೂಸುಫ್ ಪಕ್ಕಲಡ್ಕ, ಅಲ್ಲದೆ ಅಬ್ದುಲ್ ಹಸೀಬ್ ತರಫ್ದಾರ್ ಮತ್ತು ಸಯ್ಯದ್ ತನ್ವೀರ್ ಸಿಂಧನೂರು ಉಪಸ್ಥಿತರಿದ್ದರು. ಸಂಭಾಷಣೆಯ ವೇಳೆ ಶರೀಫ್ ಸಾಹಬ್‌ರವರು ಅನೇಕ ವಿಷಯಗಳ ಕುರಿತು ಅಭಿಪ್ರಾಯ ಹಂಚಿಕೊಂಡರು. ಕೆಲವು ವಿಷಯಗಳನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ.

ಇನ್ನು ಕೆಲವು ವಿಷಯಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಈ ಭೇಟಿಯು ಬಹಳ ವಿಶೇಷತೆಯನ್ನು ಹೊಂದಿತ್ತು. ಅವರು ತಮ್ಮ ಜೀವನದ ಕೊನೆಯ ಭಾಗದಲ್ಲಿ ಸಾಂಘಿಕ ಜೀವನ ಮತ್ತು ವೈಯಕ್ತಿಕ ಜೀವನದ ವಾಸ್ತವಿಕತೆಯನ್ನು ವಿವರಿಸಿದ ರೀತಿ ಇದೆಯಲ್ಲ, ಅದು ಬಹಳ ಹೃದಯಸ್ಪರ್ಶಿಯಾಗಿತ್ತು. ಈ ಸಂಭಾಷಣೆಯು ಕೇವಲ ಒಂದು ಔಪಚಾರಿಕ ಸಂಭಾಷಣೆಯಾಗಿರಲಿಲ್ಲ, ಬದಲಾಗಿ ಒಂದು ವಾಸ್ತವದ ಪ್ರಕಟಣೆಯೂ ಆಗಿತ್ತು.

ಒಂದರ್ಥದಲ್ಲಿ ಅವರು ತಮ್ಮ 85 ವರ್ಷಗಳ ಬದುಕು ಮತ್ತು 60 ವರ್ಷಗಳ ಸಂಘಟನಾತ್ಮಕ ಅನುಭವವನ್ನು ಒಂದಾಗಿಸಿ ಬಹಳ ಉತ್ತಮ ರೀತಿಯಲ್ಲಿ ಉಲ್ಲೇಖಿಸಲು ಪ್ರಯತ್ನಿಸುತ್ತಿದ್ದರು; ಜತೆಗೆ ಬಹಳ ಪ್ರಮುಖ ವಿಷಯಗಳ ಅರಿವು ನಮಗುಂಟಾಗ ಬೇಕೆಂದು ಬಯಸುತ್ತಿದ್ದರು. ಅವರ ಈ ತುಡಿತ ಮತ್ತು ಭಾವನೆಯ ಕಾರಣವೇ ಅವರ ನಾಲಗೆಯಲ್ಲಿ ಕುರ್‌ಆನ್ ವಚನಗಳು ಮತ್ತು ಹದೀಸ್‌ಗಳು ನಿರರ್ಗಳವಾಗಿ ಹೊರಡುತ್ತಿದ್ದುವು. ಈ ಒಂದು ಅನುಭೂತಿಯು ನಮಗೆ ಈ ಮುಂಚೆ ಆಗಿರಲಿಲ್ಲ.

(1) ಜಮಾಅತ್‌ನ ಪ್ರಸಕ್ತ ಮುನ್ನಡೆ

ಜಮಾಅತ್‌ನ ಈಗಿನ ಚಟುವಟಿಕೆಗಳನ್ನು ನೀವು ಹೇಗೆ ನೋಡುತ್ತೀರಿ ಎಂದು ಪ್ರಶ್ನಿಸಿದಾಗ, ಶರೀಫ್ ಸಾಹಬ್‌ರವರು ಬಹಳ ಮನಮುಟ್ಟುವ ಶೈಲಿಯಲ್ಲಿ ಉತ್ತರಿಸಿದ್ದರು. ಅದನ್ನು ಆಲಿಸುವಾಗ ಅವರ ಪ್ರದೇಶದಲ್ಲಿ ಜಮಾಅತೆ ಇಸ್ಲಾಮೀಯ ಸುಮಾರು ಎಪ್ಪತ್ತು ವರ್ಷಗಳ ಸತತ ಪರಿಶ್ರಮವನ್ನು ಒಂದು ಹೂಜಿಯಲ್ಲಿ ಬಂಧಿಸಿ ಉಲ್ಲೇಖಿಸುತ್ತಿರು ವಂತೆ ಅನಿಸಿತ್ತು. ಅವರೆಂದರು:

ಜಮಾಅತ್‌ನ ಪರಿಚಯ ಮತ್ತು ಜನಸೇವೆಯ ಕಾರ್ಯವು ಅತ್ಯುತ್ತಮ ಮಟ್ಟದಲ್ಲಿ ನಡೆಯುತ್ತಿದೆ. ಇಲ್ಲಿನ ಕೋಮುವಾದಿ ನಡೆಗಳನ್ನು ತಡೆಯಲು ಬಹಳಷ್ಟರ ಮಟ್ಟಿಗೆ ಪ್ರಯತ್ನಿಸಲಾಗಿದೆ. ಒಂದು ಬಹುಸಂಸ್ಕೃತಿಯ ಸಮಾಜದಲ್ಲಿ ನಮ್ಮ ಆದ್ಯತೆಗಳು ಏನಾಗಿರಬೇಕು ಮತ್ತು ಯಾವ ರಂಗಗಳಲ್ಲಿ ನಮ್ಮ ಸಾಮರ್ಥ್ಯವನ್ನು ವ್ಯಯಿಸಬೇಕು ಎಂಬ ಮಾರ್ಗದರ್ಶನವನ್ನು ಮಾದರಿ ಶೈಕ್ಷಣಿಕ ಮತ್ತು ಜನಕಲ್ಯಾಣ ಸಂಸ್ಥೆಗಳ ಮೂಲಕ ಸಮಾಜಕ್ಕೆ ವಿಶೇಷತಃ ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದೆ.

ಬಳಿಕ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಇಸ್ಲಾಮಿನ ಸಂದೇಶವನ್ನು ವ್ಯಾಪಕಗೊಳಿಸಲು ಮಾಡಿದ ಪ್ರಯತ್ನವು ಪರಿಗಣ ನಾರ್ಹವಾಗಿದೆ. ಇಸ್ಲಾಮ್ ಮತ್ತು ಮುಸ್ಲಿಮರಿಗೆ ಸಂಬAಧಿಸಿ ತಪ್ಪುಕಲ್ಪನೆಗಳನ್ನು ನೀಗಿಸುವ ಕಾರ್ಯವೂ ನಡೆದಿದೆ. ಆದರೆ ಈ ಎಲ್ಲ ಸಾಧನೆಗಳು ನಮ್ಮ ಪರಮ ಗುರಿಯಲ್ಲ, ನಮಗೆ ಇನ್ನಷ್ಟು ಸಂಘಟಿತ ರೂಪದಲ್ಲಿ ಈ ಕಾರ್ಯಗಳನ್ನು ವಿಸ್ತರಿಸಬೇಕಾಗಿದೆ.

ಮಾತು ಮುಂದುವರಿಸಿದ ಅವರು, ಜಮಾ ಅತ್‌ನ ಒಟ್ಟು ಪರಿಸರವನ್ನು ಉತ್ತಮಪಡಿಸುವ ಅಗತ್ಯಕ್ಕೆ ಒತ್ತು ನೀಡಿದರು. ಪ್ರಸಕ್ತ ಆಂತರಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತಾ ಅವರು ಗತ ಪ್ರಯತ್ನಗಳು ಮತ್ತು ಮರ್ಹೂಮ್ ಸಯ್ಯದ್ ಯೂಸುಫ್‌ರವರು ಪಟ್ಟ ಪರಿಶ್ರಮಗಳನ್ನು ಉಲ್ಲೇಖಿ ಸುತ್ತಾ ಹೇಳಿದರು: ಅಂದು ಆಂದೋಲನ ಬಾಂಧವರ ತರಬೇತಿಯು ಕಾರ್ಯಕ್ರಮಗಳಲ್ಲದೆ ಪ್ರಾಯೋಗಿಕ ಪ್ರಯತ್ನಗಳು ಮತ್ತು ವೈಯಕ್ತಿಕ ಸಂಪರ್ಕಗಳೊಂದಿಗೆ ಜೋಡಿಕೊಂಡಿತ್ತು. ಅದಕ್ಕೆ ಒಂದು ಉದಾಹರಣೆ ನೀಡಿದರು. ಇಸ್ಲಾಮಿನ ಆರ್ಥಿಕತೆಯನ್ನು ತಿಳಿಸಿಕೊಡಬೇಕಾದರೆ, ಇಸ್ಲಾಮಿನ ಆರ್ಥಿಕ ವ್ಯವಸ್ಥೆಯೊಂದಿಗೆ ಕಮ್ಯೂನಿ ಝಮ್‌ನ ಆರ್ಥಿಕ ದೃಷ್ಟಿಕೋನಗಳ ತುಲನಾತ್ಮಕ ಅಧ್ಯಯನ ನಡೆಸಬೇಕು. ಇದರ ಪರಿಣಾಮವಾಗಿ ಇಸ್ಲಾಮಿನ ಆರ್ಥಿಕ ಶಿಕ್ಷಣದ ಸರಿಯಾದ ಪ್ರಜ್ಞೆ ಬೆಳೆಯುತ್ತದೆ ಮತ್ತು ಎಲ್ಲ ಪ್ರಮುಖ ವ್ಯವಹಾರ ಗಳೂ ಸ್ಪಷ್ಟವಾಗಿ ಬಿಡುತ್ತದೆ. ಇದನ್ನು ಇಂದೂ ಬಹಳ ಸುಲಭದಲ್ಲಿ ಉಲ್ಲೇಖಿಸಲು ಸಾಧ್ಯವಿದೆ.

(2) ಆಂದೋಲನ ಮತ್ತು ಸಂಘಟನೆಯ ವ್ಯತ್ಯಾಸ

ಜಮಾಅತ್‌ನ ಪ್ರಸಕ್ತ ಪರಿಸ್ಥಿತಿಗೆ ಸಂಬಂಧಿಸಿ ಒಂದು ಪ್ರಶ್ನೆಗೆ ಉತ್ತರಿಸುತ್ತಾ ಅವರು ಯುವಕರು ಮತ್ತು ಜಮಾಅತ್‌ನಲ್ಲಿ ಸೇರುವ ಮಂದಿಯ ಗಮನವನ್ನು ಒಂದು ಪ್ರಮುಖ ವಿಷಯದ ಕಡೆಗೆ ಸೆಳೆದರು. ಅದು ಆಂದೋಲನ ಮತ್ತು ಸಂಘಟನೆಯ ನಡುವಿನ ಮೂಲಭೂತ ವ್ಯತ್ಯಾಸವಾಗಿದೆ, ಅದರ ಸರಿಯಾದ ವ್ಯಾಖ್ಯೆ ಹಾಗೂ ಪ್ರಜ್ಞೆಯಾಗಿದೆ.

ಶರೀಫ್ ಸಾಹಬ್ ಹೇಳುತ್ತಾರೆ: ಈಗ ಇವೆರಡನ್ನೂ ಮಿಶ್ರಗೊಳಿಸಲಾಗಿದೆ. ಇಂದು ಆಂದೋಲನ ಮತ್ತು ಸಂಘಟನೆಯ ನಡುವೆ ಮೇಲ್ನೋಟಕ್ಕೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅವರ ಪ್ರಕಾರ ಈ ವ್ಯತ್ಯಾಸದ ಸ್ಪಷ್ಟೀಕರಣದಿಂದಲೇ ಪ್ರತಿಯೊಬ್ಬ ಸಂಬಂಧಿತ ವ್ಯಕ್ತಿಯೂ ಇಸ್ಲಾಮೀ ಆಂದೋಲನಕ್ಕೆ ಬಲುದೊಡ್ಡ ಸಂಪತ್ತಾಗಿ ಪರಿಣಮಿಸ ಬಲ್ಲನು. ಆಂದೋಲನ ಮತ್ತು ಸಂಘಟನೆಯ ನಡುವೆ ಪ್ರಸಕ್ತ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾ ಅವರು ವಿವರಿಸಿದ ರೀತಿ ಇದೆಯಲ್ಲ, ಅದರಿಂದ ಇಸ್ಲಾಮೀ ಆಂದೋಲನವು ಒಂದು ಸಂಘಟನಾತ್ಮಕ ಒಲವು ಮತ್ತು ಭಾವನೆಯ ಹೆಸರಾಗಿದೆ ಎಂದು ತಿಳಿದು ಬರುತ್ತದೆ. ಅದಕ್ಕೆ ನಿರ್ದಿಷ್ಟ ಉದ್ದೇಶವಿರುತ್ತದೆ. ಇದರಲ್ಲಿ ಜನರು ಯಾರೂ ಯಾವ ಸ್ಥಾನಮಾನದೊಂದಿಗೆ ಬೇಕಾದರೂ ಸೇರಬಲ್ಲರು. ಅಂದರೆ ಇದರಲ್ಲಿ ಯಾವುದೇ ನಿರ್ದಿಷ್ಟ ಸಂಘಟನಾತ್ಮಕ ಚೌಕಟ್ಟು ಇಲ್ಲ.

ತದ್ವಿರುದ್ಧವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಒಂದು ನಿರ್ದಿಷ್ಟ ಸ್ಥಾನಮಾನ ಮತ್ತು ಹೊಣೆಗಾರಿಕೆಯೊಂದಿಗೆ ಸೇರುವಂತಹ ವ್ಯವಸ್ಥೆಯೇ ಸಂಘಟನೆಯಾಗಿದೆ. ಇವೆರಡರ ನಡುವೆ ವ್ಯತ್ಯಾಸ ಇಲ್ಲದಿರುತ್ತಿದ್ದರೆ, ಸಂಬಂಧಿತ ಮಂದಿಯ ಪರಿಶ್ರಮಗಳೆಲ್ಲವೂ ಸಾಂದರ್ಭಿಕ ಮತ್ತು ತಾತ್ಕಾಲಿಕವಾಗಿ ಬಿಡುವುದು. ಇತರ ಸಂಘಟನೆಗಳೊಂದಿಗೆ ಭಾವೈಕ್ಯತೆ ಮತ್ತು ಸಹಕಾರದ ನೀತಿಗಳಿಂದಲೂ ದೂರವುಳಿದು ಬಿಡುವುದು.
ಒಟ್ಟಿನಲ್ಲಿ ಸಂಘಟನೆ ಮತ್ತು ಆಂದೋಲನದ ವ್ಯತ್ಯಾಸ ಸ್ಪಷ್ಟವಾಗದಿದ್ದರೆ ವ್ಯಕ್ತಿಯ ಆಲೋಚನೆ ಮತ್ತು ಕರ್ಮದ ಪರಿಧಿಯು ತೀರಾ ಸೀಮಿತವಾಗಿ ಬಿಡುತ್ತದೆ. ಅವನಲ್ಲಿ ಆಂದೋ ಲನಕ್ಕೆ ಸಂಬಂಧಿಸಿದ ಸ್ವಭಾವದಲ್ಲಿ ಮತ್ತು ಆಂದೋಲನದ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಭಾವನೆಯಲ್ಲಿ ಕೊರತೆಯು ಎದ್ದು ಕಾಣುತ್ತದೆ.

ಇಂತಹ ವ್ಯಕ್ತಿಯು ಇಡಿ ಸಮಾಜವನ್ನು ತನ್ನದೆಂದು ಭಾವಿಸುವನು ಎಂದು ಭಾವಿಸಲಾಗದು; ಪ್ರತಿಯೊಂದು ನಿರ್ಮಾಣಾತ್ಮಕ ಪರಿಶ್ರಮವನ್ನು ತನ್ನ ಪರಿಶ್ರಮದ ನಿರಂತರತೆಯೆಂದು ಭಾವಿಸುವನೆಂದು ನಿರೀಕ್ಷಿಸಲಾಗದು; ಅವನು ವಿಶಾಲ ದೃಷ್ಟಿಕೋನ ಮತ್ತು ಹೃದಯವೈಶಾಲ್ಯದಿಂದ ಸಂಸ್ಥೆಗಳು, ಸಂಘಟನೆಗಳು ನಿರ್ಧರಿಸಿದ ನೀತಿಯಂತೆ ಸಹಕಾರ ನೀಡುವನು ಎಂದು ನಿರೀಕ್ಷಿಸಲಾಗದು.

ಶರೀಫ್ ಸಾಹಬ್‌ರ ಈ ಸಂಕ್ಷಿಪ್ತವಾದ ಆದರೆ ಸಮಗ್ರವಾದ ಉತ್ತರದಿಂದ ಆಂದೋಲನ ಮತ್ತು ಸಂಘಟನೆಯ ನಡುವಿನ ಮೂಲಭೂತ ವ್ಯತ್ಯಾಸವು ವ್ಯಕ್ತವಾಗುತ್ತದೆ. ಪ್ರಸಕ್ತ ಕಾಲದ ಸಾಂಸ್ಥಿಕ ಕಾರ್ಯಗಳ ಹಿನ್ನೆಲೆಯಲ್ಲಿ ಈ ಜ್ಞಾನ ಮತ್ತು ಪ್ರಜ್ಞೆಯು ಬಹಳ ಮಹತ್ವವನ್ನು ಪಡೆಯುತ್ತದೆ. ಮೌಲಾನಾ ಮೌದೂದಿಯವರು ಆರಂಭದಿಂದಲೇ ಯಾವ ವಿಷಯಗಳ ಕಡೆಗೆ ಆಂದೋಲನ ಬಾಂಧವರ ಗಮನ ಸೆಳೆಯುತ್ತಿದ್ದರೋ ಆ ಪೈಕಿ ಆಂದೋಲನ ಮತ್ತು ಸಂಘಟನೆಯ ನಡುವಿನ ವ್ಯತ್ಯಾಸವೂ ಒಂದಾಗಿದೆ. ಇಸ್ಲಾಮೀ ಆಂದೋಲನದ ಪರಮೋ ದ್ದೇಶವು ‘ಧರ್ಮಸಂಸ್ಥಾಪನೆ’ ಆಗಿದೆ ಎಂಬುದು ಆಂದೋಲನದ ಸಾಹಿತ್ಯಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಅದರ ಅರ್ಥವೇನೆಂದರೆ, ಅಲ್ಲಾಹನ ಪ್ರಭುತ್ವವನ್ನು ಅಂಗೀಕರಿಸುತ್ತಾ ವೈಯಕ್ತಿಕ ಮತ್ತು ಸಾಮೂಹಿಕ ಜೀವನವನ್ನು ಇಸ್ಲಾಮಿನ ಅಚ್ಚಿನಲ್ಲಿ ಎರಕ ಹೊಯ್ಯ ಬೇಕಾಗಿದೆ. ಈ ಆಂದೋಲನವು ಕೇವಲ ತಾತ್ಕಾಲಿಕವಾದ ಭಾವನೆಯೋ ಅಥವಾ ಪ್ರತಿರೋಧಾತ್ಮಕ ಕಾರ್ಯವೋ ಅಲ್ಲ, ಬದಲಾಗಿ ಸರ್ವತೋಮುಖ ಮತ್ತು ನಿರಂತರ ನಡೆಯುವ ಪರಿಶ್ರಮವಾಗಿದೆ. ಇದು ಸಾಮಾಜಿಕ, ಆರ್ಥಿಕ, ರಾಜಕೀಯ, ನಾಗರಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಪರಿವರ್ತನೆಗಳನ್ನು ಖಾತರಿಪಡಿಸಲು ಬಯಸುತ್ತದೆ.

ಈ ಆಂದೋಲನದ ಉದ್ದೇಶಗಳನ್ನು ಸಂಘಟಿತ ರೂಪದಲ್ಲಿ ಗಳಿಸಲು ಸ್ಥಾಪಿಸಲಾದ ಪ್ರಾಯೋಗಿಕ ರೂಪವೇ ಸಂಘಟನೆ. ಇದು ಜನರನ್ನು ಸಂಘ ಟಿಸುತ್ತದೆ, ಅವರ ತರಬೇತುಗೊಳಿಸುತ್ತದೆ ಮತ್ತು ಅವರನ್ನು ಒಂದು ಸಮಾನೋ ದ್ದೇಶದಡಿಯಲ್ಲಿ ಒಗ್ಗೂಡಿಸುತ್ತದೆ. ಸಂಘಟನೆಯ ಹೊರತು ಆಂದೋಲನದ ಪರಿಶ್ರಮಗಳು ಪರಿಣಾಮಕಾರಿಯಾಗಿ ಮುಂದುವರಿಯಲಾರದು. ಜಮಾಅತೆ ಇಸ್ಲಾಮಿಯ ಸಾಹಿತ್ಯಗಳಲ್ಲಿ ಆಂದೋಲನ ಮತ್ತು ಸಂಘಟನೆಯನ್ನು ಪರಸ್ಪರ ಪೂರ್ಣಗೊಳಿಸುವ ಅಂಗಗಳೆಂದು ಸಾರಲಾಗಿದೆ. ಆಂದೋಲನವು ಇಸ್ಲಾಮೀ ವ್ಯವಸ್ಥೆಯನ್ನು ಸ್ಥಾಪಿಸಬಯಸುವ ಒಂದು ಭಾವನೆಯಾಗಿದೆ. ಅದೇವೇಳೆ ಸಂಘಟನೆಯು ಆ ಭಾವನೆಯನ್ನು ಕಾರ್ಯರೂಪಕ್ಕಿಳಿಸುವ ಮಾಧ್ಯಮವಾಗಿದೆ. ಇವೆರಡೂ ಸೇರಿಯೇ ಇಸ್ಲಾಮೀ ಪರಿಶ್ರಮವನ್ನು ಪರಿಣಾಮಕಾರಿ ಮತ್ತು ಯಶಸ್ವಿಗೊಳಿಸಬಲ್ಲವು.

(ಮುಂದುವರಿಯುವುದು)