ಬಹುಸಂಸ್ಕೃತಿಯ ದೇಶದ ಅಗತ್ಯಗಳು 

0
191

✍️ ಸೈಯದ್ ಸಾದತುಲ್ಲಾ ಹುಸೇನಿ
ರಾಷ್ಟಾಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್‌

ಪ್ರಸ್ತುತ ಆತಂಕಕಾರಿ ಪರಿಸ್ಥಿತಿಯಲ್ಲಿ, ಜನರು ಈ ದೇಶದ ವಾಸ್ತವಿಕ ನೆಲೆಗಟ್ಟನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ನಡುವಿನ ಸಮಾನತೆ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಶೀಘ್ರದಲ್ಲೇ ಅಥವಾ ಮುಂದಾದರೂ ಉತ್ತಮ ನೀತಿಗಳತ್ತ ಹೊರಳುವ ಉತ್ತಮ ಸಾಧ್ಯತೆಯಿದೆ. ಹಿಂದೆ, ವಿಶ್ವದ ಅನೇಕ ದೇಶಗಳಲ್ಲಿ ತೀವ್ರಗಾಮಿ ಚಳವಳಿಗಳ ಏರಿಕೆ ಮತ್ತು ಅದರ ಪರಿಣಾಮವಾಗಿ ಉಂಟಾದ ರಕ್ತಪಾತವು ವ್ಯವಸ್ಥೆಗಳಲ್ಲಿ ಆಳವಾದ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇಟಲಿ ಮತ್ತು ಜರ್ಮನಿಯ ಫ್ಯಾಸಿಸಂನ ದುರಂತಗಳು ಅನೇಕ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಪ್ರೇರಣೆಯಾದವು, ಇದು ಈ ದೇಶಗಳಲ್ಲಿಯೇ ಪ್ರಜಾಪ್ರಭುತ್ವ ಸುಧಾರಣೆಗಳನ್ನು ಉತ್ತೇಜಿಸಿತು ಮತ್ತು ವಿಶ್ವಸಂಸ್ಥೆ ಹಾಗೂ ಅದರ ಹಲವಾರು ಅಂಗಸಂಸ್ಥೆಗಳನ್ನು ಸ್ಥಾಪಿಸಿತು.

ಬಾಲ್ಕನ್ ಮತ್ತು ಪೂರ್ವ ಹಾಗೂ ಮಧ್ಯ ಯುರೋಪಿನ ಕಮ್ಯುನಿಸ್ಟ್ ದೌರ್ಜನ್ಯ ಮತ್ತು ಜನಾಂಗೀಯ ಚಳವಳಿಗಳ ಕ್ರೌರ್ಯವು ವಿವಿಧ ಸಾಂಸ್ಕೃತಿಕ ಘಟಕಗಳ ಹಕ್ಕುಗಳಿಗೆ ಸಂಬಂಧಿಸಿದ ಅನೇಕ ಕ್ರಾಂತಿಕಾರಿ ಮತ್ತು ವಿಶಿಷ್ಟ ಹಾಗೂ ನವೀನ ಪ್ರಸ್ತಾಪಗಳ ಅನುಷ್ಠಾನಕ್ಕೆ ಕಾರಣವಾಯಿತು. ಆದ್ದರಿಂದ, ಕೋಮುವಾದಿ ಶಕ್ತಿಗಳು ಸೃಷ್ಟಿಸಿದ ದೋಷಗಳು ಮತ್ತು ಪ್ರಚೋದನೆಗಳು ಮುಂದಿನ ದಿನಗಳಲ್ಲಿ ದೇಶದಲ್ಲಿ ಶಾಶ್ವತ ಸುಧಾರಣೆಗಳ ಮೂಲವಾಗುತ್ತವೆ ಎಂದು ನಾನು ಭಾವಿಸುತ್ತೇನೆ. ಇಸ್ಲಾಮಿನ ಅನುಯಾಯಿಗಳು ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುವತ್ತ ಗಮನ ಹರಿಸಬೇಕು. ಇಂದಿನ ಪರಿಸ್ಥಿತಿಯ ಬಗ್ಗೆ ಫಲಹೀನವಾದ ಪ್ರಲಾಪ ಮತ್ತು ಶೋಕದಲ್ಲಿ ನಮ್ಮೆಲ್ಲಾ ಶಕ್ತಿಯನ್ನು ವ್ಯಯಿಸುವ ಬದಲು, ಬರುವ ನಾಳೆಯನ್ನು ಪರಿಕಲ್ಪಿಸೋಣ. ದೇಶದ ಎಲ್ಲಾ ಜನರಿಗೆ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಖಚಿತಪಡಿಸಲು ಮತ್ತು ಕೋಮುವಾದಿಗಳ ಪ್ರಚೋದನೆಗಳಿಂದ ದೇಶವನ್ನು ರಕ್ಷಿಸಲು ನಮ್ಮ ದೇಶದಲ್ಲಿ ಇನ್ನು ಏನೇನು ಸುಧಾರಣೆಗಳು ಬೇಕು ಎಂಬ ಚರ್ಚೆಗಳನ್ನು ಎತ್ತಲು ಪ್ರಯತ್ನಿಸೋಣ.

ಬಹುತ್ವದ ಸಮಾಜ ಮತ್ತು ವಸಾಹತುಶಾಹಿ ಧೋರಣೆ: 

ಸ್ವಾತಂತ್ರ್ಯಕ್ಕೂ ಮುನ್ನ, ಯುರೋಪಿಯನ್ ಆಡಳಿತಗಾರರು ಮತ್ತು ಬುದ್ಧಿಜೀವಿಗಳು ಭಾರತದಂತಹ ಬಹುತ್ವದ ಅಥವಾ ಬಹುಸಂಸ್ಕೃತಿಯ ದೇಶವನ್ನು ಎದುರಿಸಿದಾಗ, ಈ ಪರಿಸ್ಥಿತಿಯು ಅವರಿಗೆ ಸಂಪೂರ್ಣವಾಗಿ ಹೊಸದಾಗಿತ್ತು. ಆಧುನಿಕತೆಯ ರಾಷ್ಟ್ರೀಯತಾವಾದಿ ಪರಿಕಲ್ಪನೆಗಳ ಅಡಿಯಲ್ಲಿ ಬೆಳೆದ ಈ ರಾಜಕಾರಣಿಗಳು ಅಥವಾ ಸಿದ್ಧಾಂತಿಗಳಿಗೆ ಬಹುಸಂಸ್ಕೃತಿಯ ದೇಶದ ಬಗ್ಗೆ ಯಾವುದೇ ಸ್ಪಷ್ಟ ದೃಷ್ಟಿಕೋನವಿರಲಿಲ್ಲ. ಬದಲಾಗಿ, ಈ ಬುದ್ಧಿಜೀವಿಗಳ ಪ್ರಕಾರ, ಈ ಬಹುತ್ವದ ಸಮಾಜಗಳಲ್ಲಿ ವಿಭಿನ್ನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಾ ಗುಂಪುಗಳನ್ನು ಸಂಪರ್ಕಿಸುವ ಯಾವುದೇ ಆಂತರಿಕ ಮೌಲ್ಯಗಳಿರಲಿಲ್ಲ ಮತ್ತು ಅವು ಕೇವಲ ಹೊರಗಿನ ಸರ್ಕಾರದ ಬಲಾತ್ಕಾರದ ಕಾರಣದಿಂದಾಗಿ ಒಂದು ಘಟಕವಾಗಿ ಉಳಿದಿವೆ ಎಂದು ಭಾವಿಸಿದ್ದರು.

ಉದಾಹರಣೆಗೆ, ಬ್ರಿಟಿಷ್ ಕಾಲದ ಪ್ರಸಿದ್ಧ ಲೇಖಕ ಜಾನ್ ಎಸ್. ಫರ್ನಿವಾಲ್ (1878-1960), ಭಾರತದಂತಹ ಬಹುಸಂಸ್ಕೃತಿಯ ಸಮಾಜಗಳಲ್ಲಿ ಪ್ರತಿಯೊಂದು ಪಂಗಡದ ಮೌಲ್ಯಗಳು ಒಂದಕ್ಕೊಂದು ಸಂಪೂರ್ಣವಾಗಿ ಭಿನ್ನವಾಗಿವೆ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದರು. ಈ ಪಂಗಡಗಳ ನಡುವೆ ಒಗ್ಗಟ್ಟಿಗೆ ಯಾವುದೇ ಆಧಾರವಿಲ್ಲ. ಯಾವುದೇ “ಸಾಮಾನ್ಯ ಸಾಮಾಜಿಕ ಬೇಡಿಕೆ” ಇಲ್ಲ ಮತ್ತು ಆದ್ದರಿಂದ ಈ ಸಮಾಜಗಳು ಯಾವಾಗಲೂ ಹಿಂಸಾತ್ಮಕ ಸಂಘರ್ಷದ ಅಪಾಯದಲ್ಲಿರುತ್ತವೆ ಮತ್ತು ಶಾಂತಿ ಹಾಗೂ ಸುವ್ಯವಸ್ಥೆಗಾಗಿ ಹೊರಗಿನ ಶಕ್ತಿಯ (ಅಂದರೆ ವಸಾಹತುಶಾಹಿ) ಉಪಸ್ಥಿತಿ ಅಗತ್ಯ ಎಂದು ಅವರು ವಾದಿಸಿದ್ದರು.

ಆ ಕಾಲದ ಹಲವಾರು ಪಾಶ್ಚಾತ್ಯ ಬರಹಗಾರರ ಚಿಂತನೆಗಳ ಅಧ್ಯಯನವು ಅವರು ಅಂತಹ ಸಮಾಜಗಳಿಗೆ ಶಾಂತಿಯುತ ಸಹಬಾಳ್ವೆಯ ಯಾವುದೇ ದೃಷ್ಟಿಕೋನವನ್ನು ಹೊಂದಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಎಂ. ಜಿ. ಸ್ಮಿತ್ ರವರಂತಹವರು ಸಮಾಜಗಳಲ್ಲಿ ಒಂದೇ ಒಂದು ಸಾಂಸ್ಕೃತಿಕ ಗುಂಪಿನ ಏಕಸ್ವಾಮ್ಯ ಅತ್ಯಗತ್ಯ ಎಂದು ಕರೆದಿದ್ದಾರೆ.

ಈ ಆಲೋಚನೆಗಳು ನಮ್ಮ ದೇಶದ ಆಧುನಿಕ ಶಿಕ್ಷಿತ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳ ಮೇಲೆಯೂ ಪ್ರಭಾವ ಬೀರಿದವು. ಅವರು ಸಹ ಒಂದು ದೇಶಕ್ಕೆ ಒಂದು ನಾಗರಿಕತೆಯ ಅಸ್ತಿತ್ವ ಅತ್ಯಗತ್ಯ ಎಂದು ಪರಿಗಣಿಸಲು ಪ್ರಾರಂಭಿಸಿದರು. ಈ ಜನರು ಎರಡು ಗುಂಪುಗಳಾಗಿ ವಿಭಜಿಸಲ್ಪಟ್ಟರು. ಒಂದೆಡೆ, ಒಂದೇ ದೇಶದಲ್ಲಿ ವಿವಿಧ ಧರ್ಮದ ಜನರು ಒಟ್ಟಿಗೆ ವಾಸಿಸುವುದು ಅಸಾಧ್ಯ ಎಂದು ಪರಿಗಣಿಸಿದವರಿದ್ದರು ಮತ್ತು ಇನ್ನೊಂದೆಡೆ, ಐಕ್ಯ ದೇಶದ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ನಾಗರಿಕತೆಗಳನ್ನು ವಿಲೀನಗೊಳಿಸುವುದು ಮತ್ತು ಏಕಸಂಸ್ಕೃತಿಯ ಏಕರೂಪದ ರಾಷ್ಟ್ರದತ್ತ ಸಾಗುವುದು ಅಗತ್ಯ ಎಂದು ಪರಿಗಣಿಸಿದವರಿದ್ದರು.

ಆಧುನಿಕ ಸಮಾಜಶಾಸ್ತ್ರದಲ್ಲಿ, ಬಹುತ್ವದ ಸಮಾಜಗಳಿಗೆ ಸಂಬಂಧಿಸಿದಂತೆ ಎರಡು ರೀತಿಯ ಸಿದ್ಧಾಂತಗಳಿವೆ. ಒಂದು ಕಲ್ಪನೆಯನ್ನು ‘ಮೆಲ್ಟಿಂಗ್ ಪಾಟ್’ (Melting Pot) ಸಿದ್ಧಾಂತ ಎಂದು ಕರೆಯಲಾಗುತ್ತದೆ. ಅದರಲ್ಲಿ ಸಮಾಜವನ್ನು ಕರಗುವ ಪಾತ್ರೆ ಅಥವಾ ಸಕ್ಕರೆ ಪಾಕದ ಜಾರಿಗೆ ಹೋಲಿಸಲಾಗುತ್ತದೆ. ಸಕ್ಕರೆ ಪಾಕದ ಜಾರಿಯಲ್ಲಿ, ವಿವಿಧ ವಸ್ತುಗಳು ಕರಗಿ ಒಂದಾಗುತ್ತವೆ. ಅವುಗಳಲ್ಲಿ ಪ್ರತಿಯೊಂದರ ವೈಯಕ್ತಿಕ ಬಣ್ಣ ಮತ್ತು ರುಚಿ ಕಳೆದುಹೋಗುತ್ತದೆ ಮತ್ತು ಎಲ್ಲದರ ಸಂಯೋಜನೆಯಿಂದ ಹೊಸ ಬಣ್ಣ ಮತ್ತು ರುಚಿ ಸೃಷ್ಟಿಯಾಗುತ್ತದೆ. ಯಾವ ವಸ್ತುವು ಹೆಚ್ಚಿನ ಪ್ರಮಾಣದಲ್ಲಿದೆಯೋ ಅದರ ರುಚಿ ಮತ್ತು ಬಣ್ಣ ಪ್ರಾಬಲ್ಯ ಸಾಧಿಸುತ್ತದೆ. ಸಣ್ಣ ವಸ್ತುಗಳು ಕೂಡ ಪಾಕದ ಬಣ್ಣ ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತವೆ, ಆದರೆ

ಅವುಗಳ ಪ್ರತ್ಯೇಕ ಗುರುತು ಮತ್ತು ವ್ಯಕ್ತಿತ್ವ ಉಳಿಯುವುದಿಲ್ಲ. ಈ ಎಲ್ಲಾ ಬಣ್ಣಗಳು ಮತ್ತು ವಾಸನೆಗಳ ಸಂಯೋಜನೆಯು ಹೊಸ ಬಣ್ಣ ಮತ್ತು ಹೊಸ ವಾಸನೆಯೊಂದಿಗೆ ಸಂಪೂರ್ಣವಾಗಿ ಹೊಸ ವಸ್ತುವನ್ನು ಸೃಷ್ಟಿಸುತ್ತದೆ. ಎರಡನೇ ಸಿದ್ಧಾಂತವನ್ನು ‘ಸಲಾಡ್ ಬೌಲ್’ (Salad Bowl) ಸಿದ್ಧಾಂತ ಎಂದು ಕರೆಯಲಾಗುತ್ತದೆ, ಅದರಲ್ಲಿ ಸಮಾಜವನ್ನು ಸಲಾಡ್ ತಟ್ಟೆಗೆ ಹೋಲಿಸಲಾಗುತ್ತದೆ. ವಿವಿಧ ವಸ್ತುಗಳು ಸೇರಿ ಸಲಾಡ್ ಅನ್ನು ರೂಪಿಸುತ್ತವೆ. ಆದರೆ, ಪ್ರತಿಯೊಂದು ವಸ್ತುವು ತನ್ನದೇ ಆದ ವಿಶಿಷ್ಟ ಬಣ್ಣ ಮತ್ತು ರುಚಿಯೊಂದಿಗೆ ಉಳಿಯುತ್ತದೆ. ಸಲಾಡ್‌ನ ಭಾಗವಾದ ಪರಿಣಾಮವಾಗಿ ಯಾರ ಗುರುತೂ ಕಳೆದುಹೋಗುವುದಿಲ್ಲ ಮತ್ತು ಇದು ಕ್ಯಾರೆಟ್, ಇದು ಸೌತೆಕಾಯಿ ಮತ್ತು ಇದು ಆಲಿವ್ ಎಂದು ಸ್ಪಷ್ಟವಾಗಿ ಗುರುತಿಸುತ್ತೀರಿ. ಅಂದರೆ, ಪ್ರತಿಯೊಂದು ಘಟಕವು ತನ್ನದೇ ಆದ ಗುರುತಿನೊಂದಿಗೆ ದೊಡ್ಡ ಸಮೂಹದ ಭಾಗವಾಗುತ್ತದೆ.

ವಸಾಹತುಶಾಹಿ ಯುಗದ ರಾಷ್ಟ್ರೀಯತಾವಾದಿ ಆದರ್ಶಗಳು ‘ಮೆಲ್ಟಿಂಗ್ ಪಾಟ್’ ಕಲ್ಪನೆಯನ್ನು ಉತ್ತೇಜಿಸಿದ್ದವು. ಆದರೆ, ಬದಲಾಗುತ್ತಿರುವ ಪ್ರಪಂಚದ ವಾಸ್ತವಗಳು ಈಗ ಇಡೀ ಜಗತ್ತನ್ನು ಸಲಾಡ್ ಬೌಲ್ ವಿಧಾನದತ್ತ ಸೆಳೆದಿವೆ. ಭಾರತದಂತಹ ದೇಶಕ್ಕೆ ಈ ವಿಧಾನವು ಸಮಂಜಸವಾಗಿದೆ ಮತ್ತು ಇದು ಸಾಮಾನ್ಯವಾಗಿ ಅಂಗೀಕೃತವಾಗಿದೆ. ಆದರೆ, ಈ ವಿಧಾನದ ಪ್ರಾಯೋಗಿಕ ಅಗತ್ಯತೆಗಳು ಯಾವುವು? ಇದಕ್ಕೆ ಗಂಭೀರ ಚರ್ಚೆಯ ಅಗತ್ಯವಿದೆ.

ಬಹುಸಂಸ್ಕೃತಿವಾದದ ಉತ್ತಮ ಮಾದರಿಯ ಅಗತ್ಯ 

ಇಸ್ಲಾಮಿನ ಅನುಯಾಯಿಗಳು ಕೇವಲ ಅಸ್ಮಿತೆಯ ರಾಜಕಾರಣದಲ್ಲಿ ತೊಡಗಬಾರದು ಆದರೆ ಅಸ್ಮಿತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇಸ್ಲಾಮಿನ ಬೋಧನೆಗಳ ಬೆಳಕಿನಲ್ಲಿ ಪರಿಹಾರಗಳನ್ನು ಪ್ರಸ್ತುತಪಡಿಸಬೇಕು. ಈ ಸಮಸ್ಯೆಯು ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ಇದು ಈ ದೇಶದ ನೂರಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಗುಂಪುಗಳ ಸಮಸ್ಯೆಯಾಗಿದೆ. ಇದು ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಯಾಗಿದೆ. ಇದು ಯಾವುದೇ ರಾಜ್ಯಕ್ಕೆ ಸೀಮಿತವಾಗಿಲ್ಲದ ಅಥವಾ ತಮ್ಮ ರಾಜ್ಯದ ಹೊರಗಿನ ಇತರ ರಾಜ್ಯಗಳಲ್ಲಿ ವಾಸಿಸುವ ಅನೇಕ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಯೂ ಹೌದು. ಇವರನ್ನು ಹೊರತುಪಡಿಸಿ, ಪರಿಶಿಷ್ಟ ಜಾತಿಗಳು, ದಲಿತರು, ಒಬಿಸಿಗಳು, ಬುಡಕಟ್ಟುಗಳು ಮತ್ತು ಆದಿವಾಸಿಗಳು ಮತ್ತು ಹಿಂದೂಗಳ ಅನೇಕ ವರ್ಗಗಳು (ಉದಾಹರಣೆಗೆ ಮಹಾರಾಷ್ಟ್ರದ ಮರಾಠರು, ಕರ್ನಾಟಕದ ಲಿಂಗಾಯತರು ಇತ್ಯಾದಿ) ತಮ್ಮ ಪ್ರತ್ಯೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆ ಸಂವೇದನಾಶೀಲರಾಗಿದ್ದಾರೆ. ಇದು ಅವರೆಲ್ಲರ ಸಮಸ್ಯೆಯಾಗಿದೆ.

ನಮ್ಮ ದೇಶದಲ್ಲಿ ವ್ಯಕ್ತಿಗಳ ಹಕ್ಕುಗಳನ್ನು ಸಂಪೂರ್ಣವಾಗಿ ಗುರುತಿಸಲಾಗಿದೆ. ಆದರೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಘಟಕಗಳ ಸಾಮೂಹಿಕ ಹಕ್ಕುಗಳಿಗೆ ಬಹಳ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ. ಇದು ಸಂವಿಧಾನ ರಚನೆಯ ಸಮಯದಲ್ಲಿ ಚಾಲ್ತಿಯಲ್ಲಿದ್ದ ಮೇಲೆ ತಿಳಿಸಿದ ಜಾಗತಿಕ ಚಿಂತನೆಯ ಪರಿಣಾಮವಾಗಿತ್ತು ಮತ್ತು ವಿಶೇಷವಾಗಿ ಪ್ರಜಾಪ್ರಭುತ್ವ ರಾಷ್ಟ್ರ-ರಾಜ್ಯದ ಆಂಗ್ಲೋ-ಸ್ಯಾಕ್ಸನ್ ಮಾದರಿಯ ಮೇಲಿನ ಅತಿಯಾದ ಅವಲಂಬನೆಯ ಪರಿಣಾಮವಾಗಿತ್ತು. ಗಾಂಧಿ ಮತ್ತು ಅಂಬೇಡ್ಕರ್ ಅವರಂತಹ ನಾಯಕರು ಭಾರತದ ವಾಸ್ತವಿಕ ನೆಲೆಗಟ್ಟನ್ನು ಅರ್ಥಮಾಡಿಕೊಂಡಿದ್ದರು ಮತ್ತು ಸಾಂಸ್ಕೃತಿಕ ಗುಂಪುಗಳ ಸಾಮೂಹಿಕ ಸ್ಥಾನಮಾನವನ್ನು ಗುರುತಿಸಲು ಮತ್ತು ಅವರಿಗೆ ಅಗತ್ಯವಾದ ಹಕ್ಕುಗಳನ್ನು ನೀಡಲು ಬಯಸಿದ್ದರು. ಆದರೆ

ಪಟೇಲ್ ಮತ್ತು ನೆಹರೂ ಅವರಂತಹ ನಾಯಕರು ಇದನ್ನು ಸೂಕ್ತವೆಂದು ಪರಿಗಣಿಸಲಿಲ್ಲ. ಆಂಗ್ಲೋ-ಸ್ಯಾಕ್ಸನ್ ಮಾದರಿಯೊಂದಿಗೆ ಸ್ಟಾಲಿನ್ ಕೂಡ ನೆಹರೂ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದರು. ಸ್ಟಾಲಿನ್‌ ರಷ್ಯಾದಲ್ಲಿ ಸಾಂಸ್ಕೃತಿಕ ಘಟಕಗಳನ್ನು ವಿಲೀನಗೊಳಿಸಲು ಮತ್ತು ಎಲ್ಲರನ್ನೂ ‘ಒಂದೇ ರಾಷ್ಟ್ರ’ ಮಾಡಲು ಶ್ರಮಿಸುತ್ತಿದ್ದರು. ಹೀಗಾಗಿ, ಅಂಬೇಡ್ಕರ್ ಅವರ ಕೆಲವು ಪ್ರಮುಖ ಮತ್ತು ಮೂಲಭೂತ ಪ್ರಸ್ತಾಪಗಳನ್ನು ತಿರಸ್ಕರಿಸಲಾಯಿತು. ಡ್ರಾಫ್ಟ್ ಕಮಿಟಿಯಿಂದ ಅನುಮೋದಿಸಲ್ಪಟ್ಟ ಮತ್ತು ಕರಡು ಸಂವಿಧಾನದಲ್ಲಿ ಸೇರಿಸಲ್ಪಟ್ಟ ವಿಷಯಗಳನ್ನೂ ಸಂವಿಧಾನ ಸಭೆಯಲ್ಲಿ ತಿರಸ್ಕರಿಸಲಾಯಿತು. ಈ ಮಹನೀಯರು ಭಾರತವನ್ನು ಯುರೋಪಿಯನ್ ರಾಷ್ಟ್ರಗಳಂತೆ ಏಕೀಕೃತ ಮತ್ತು ಏಕರೂಪದ ರಾಷ್ಟ್ರವೆಂದು ಪರಿಗಣಿಸುವ ಮೂಲಕ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿದರು. ಈ ಅಸ್ವಾಭಾವಿಕ ಪ್ರಯತ್ನ ಮತ್ತು ವಿಧಾನವು ಈ ದೇಶದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಪ್ರಸ್ತುತ ಕೋಮು ರಾಜಕಾರಣದ ಮೂಲವು ಈ ತಪ್ಪಿನಲ್ಲಿದೆ. ಈ ಸಮಯದಲ್ಲಿ, ನಮ್ಮ ದೇಶವು ಅನೇಕ ನಾಗರಿಕತೆಗಳ ತೊಟ್ಟಿಲು ಎಂಬುದನ್ನು ದೇಶದ ಜನರು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅದನ್ನು ಒಂದೇ ನಾಗರಿಕ ಘಟಕವಾಗಿ ಪರಿಗಣಿಸುವುದು ಸಂಘರ್ಷಗಳು ಮತ್ತು ತೊಂದರೆಗಳಿಗೆ ಕಾರಣವಾಗುತ್ತದೆ.

ಧಾರ್ಮಿಕ ಅಲ್ಪಸಂಖ್ಯಾತರಿಗೆ, ದೇಶದ ಪ್ರಸ್ತುತ ಸಂವಿಧಾನವು ಮೂರು ನಿಬಂಧನೆಗಳನ್ನು ಒದಗಿಸುತ್ತದೆ, ಅವುಗಳೆಂದರೆ, ವಿಧಿ 26 (ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಧಾರ್ಮಿಕ ಗುಂಪುಗಳ ಹಕ್ಕು), ವಿಧಿ 29(1) [ತಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವ ಸಾಂಸ್ಕೃತಿಕ ಮತ್ತು ಭಾಷಾ ಗುಂಪುಗಳ ಹಕ್ಕು] ಮತ್ತು ವಿಧಿ 30 (ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಅಲ್ಪಸಂಖ್ಯಾತರ ಹಕ್ಕು), ಇವುಗಳು ಒಟ್ಟಾಗಿ ಅವರಿಗೆ ಕೆಲವು ಸೀಮಿತ ಹಕ್ಕುಗಳನ್ನು ನೀಡುತ್ತವೆ. ಇದರ ಜೊತೆಗೆ, ಮುಸ್ಲಿಂ ವೈಯಕ್ತಿಕ ಕಾನೂನು ಕಾಯ್ದೆ, 1937, ವೈಯಕ್ತಿಕ ಕಾನೂನಿನ ಹಕ್ಕನ್ನು ಒದಗಿಸುತ್ತದೆ. ಉಳಿದ ಹಕ್ಕುಗಳನ್ನು ವ್ಯಕ್ತಿಗಳು ಅನುಭವಿಸುತ್ತಾರೆ, ಸಾಂಸ್ಕೃತಿಕ, ಧಾರ್ಮಿಕ ಅಥವಾ ಜನಾಂಗೀಯ ಗುಂಪುಗಳಲ್ಲ.

ಭಾಷಾ ಗುಂಪುಗಳು ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಗೆ ಸೀಮಿತವಾಗಿರುವುದರಿಂದ, ಭಾಷಾವಾರು ರಾಜ್ಯಗಳನ್ನು ಸೃಷ್ಟಿಸುವ ಮೂಲಕ ಮತ್ತು ಭೌಗೋಳಿಕ ಆಧಾರದ ಮೇಲೆ ಅವರಿಗೆ ಒಂದು ರೀತಿಯ ಪ್ರಾದೇಶಿಕ ಸ್ವಾಯತ್ತತೆಯನ್ನು ನೀಡುವ ಮೂಲಕ ಅವರ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲಾಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಲಾಯಿತು. ಇದು ಸಮಸ್ಯೆಗೆ ಬಹಳ ಸೀಮಿತ ಪರಿಹಾರವಾಗಿತ್ತು.

ಸಾಂಸ್ಕೃತಿಕ ಘಟಕಗಳ ಅಶಾಂತಿ ಮತ್ತು ಅತೃಪ್ತಿ ಇಡೀ ದೇಶಕ್ಕೆ ಹಾನಿಕಾರಕ ಎಂಬುದು ಈಗ ಗುರುತಿಸಲ್ಪಟ್ಟಿದೆ. ಬಹುಸಂಖ್ಯಾತ ಗುಂಪು ಪ್ರಾಯೋಗಿಕವಾಗಿ ದೇಶದ ವ್ಯವಹಾರಗಳನ್ನು ನಿಯಂತ್ರಿಸುವ ವ್ಯವಸ್ಥೆಯು ದೇಶದಲ್ಲಿದ್ದರೆ, ಇತರ ಸಾಂಸ್ಕೃತಿಕ ಘಟಕಗಳು ದೇಶಕ್ಕೆ ಸೇರಿದ ಭಾವನೆಯನ್ನು ಹೊಂದುವುದಿಲ್ಲ. ಪ್ರತಿಯೊಂದು ಸಾಂಸ್ಕೃತಿಕ ಘಟಕವು ತನ್ನದೇ ಆದ ವ್ಯವಹಾರಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರೆ ಮತ್ತು ದೇಶದ ಸಾಮೂಹಿಕ ವ್ಯವಹಾರಗಳಲ್ಲಿ ಅಗತ್ಯವಾದ ಪ್ರಭಾವವನ್ನು ಹೊಂದಿದ್ದರೆ, ಇದು ದೇಶದ ಎಲ್ಲಾ ಜನರ ನಡುವೆ ನಿಜವಾದ ಏಕತೆಗೆ ದಾರಿ ಮಾಡಿಕೊಡುತ್ತದೆ. ಇದು ಪ್ರತ್ಯೇಕತಾವಾದ, ಸಂಘರ್ಷ ಮತ್ತು ಹಿತಾಸಕ್ತಿಗಳ ಸಂಘರ್ಷವನ್ನು ತಡೆಯಲು ಸಹಾಯ ಮಾಡುತ್ತದೆ. ಸಾಂಸ್ಕೃತಿಕ ಘಟಕಗಳ ಸಾಮೂಹಿಕ ಅಸ್ತಿತ್ವವನ್ನು ಗುರುತಿಸುವುದರಿಂದ ದೇಶವು ವಿಭಜನೆಯಾಗುವುದಿಲ್ಲ ಬದಲಾಗಿ ಬಲಗೊಳ್ಳುತ್ತದೆ.

ವೈಯಕ್ತಿಕ ಹಕ್ಕುಗಳೋ ಅಥವಾ ಸಾಮೂಹಿಕ ಹಕ್ಕುಗಳೋ? 

18 ಮತ್ತು 19 ನೇ ಶತಮಾನದ ಯುರೋಪಿಯನ್ ರಾಜಕೀಯ ಚಿಂತಕರಲ್ಲಿ, ಆಧುನಿಕ ರಾಜ್ಯದಲ್ಲಿ ಹಕ್ಕುಗಳನ್ನು ವ್ಯಕ್ತಿಗಳಿಗೆ ನೀಡಬೇಕೇ ಅಥವಾ ಸಾಮಾಜಿಕ ಗುಂಪುಗಳಿಗೆ ನೀಡಬೇಕೇ ಎಂಬುದು ಗಂಭೀರ ಚರ್ಚೆಯ ವಿಷಯವಾಗಿತ್ತು. ಸಾಂಪ್ರದಾಯಿಕ ಬುಡಕಟ್ಟು ಸಮಾಜಗಳಲ್ಲಿ, ಬುಡಕಟ್ಟನ್ನು ಒಂದು ಘಟಕವಾಗಿ ಗುರುತಿಸಲಾಯಿತು ಮತ್ತು ಬುಡಕಟ್ಟಿಗೆ ಅನೇಕ ಹಕ್ಕುಗಳನ್ನು ನೀಡಲಾಯಿತು. ಆದರೆ, ಉದಾರವಾದಿ ಯುರೋಪಿಯನ್ ದಾರ್ಶನಿಕರ ಒತ್ತು ವ್ಯಕ್ತಿಗಳ ಹಕ್ಕುಗಳ ಮೇಲಿತ್ತು ಮತ್ತು ವೈಯಕ್ತಿಕತೆಯನ್ನು ಆಧುನಿಕ ಉದಾರವಾದಿ ಚಿಂತನೆಯ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗಿದೆ. ಈ ಚಿಂತಕರ ಪ್ರಕಾರ, ಮಾನವರ ಒಟ್ಟುಗೂಡುವಿಕೆಗೆ ಏಕೈಕ ಆಧಾರ ರಾಷ್ಟ್ರವಾಗಿತ್ತು, ಇದನ್ನು ರಾಷ್ಟ್ರ-ರಾಜ್ಯದ ಮೂಲಕ ಸಂಘಟಿಸಲಾಯಿತು. ಈ ರಾಷ್ಟ್ರಗಳು ಅಥವಾ ರಾಷ್ಟ್ರ-ರಾಜ್ಯಗಳು ಅಂತರರಾಷ್ಟ್ರೀಯ ಸಮುದಾಯದಲ್ಲಿ ಕೆಲವು ಹಕ್ಕುಗಳನ್ನು ಅನುಭವಿಸಿದವು, ಅವುಗಳಲ್ಲಿ ಪ್ರಮುಖವಾದುದು ಸಾರ್ವಭೌಮತ್ವದ ಹಕ್ಕು. ರಾಷ್ಟ್ರ-ರಾಜ್ಯದೊಳಗೆ, ಯಾವುದೇ ಗುಂಪಿಗೆ ಯಾವುದೇ ಸಾಮೂಹಿಕ ಹಕ್ಕುಗಳನ್ನು ನೀಡುವುದು ಅಗತ್ಯವಿಲ್ಲ ಎಂದು ಹೇಳಲಾಯಿತು. ವ್ಯಕ್ತಿಗಳಿಗೆ ಗರಿಷ್ಠ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿದರೆ ಅದು ಸಾಕಾಗುತ್ತದೆ ಮತ್ತು ಇದು ಸ್ವಯಂಚಾಲಿತವಾಗಿ ಧಾರ್ಮಿಕ, ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಭಾವಿಸಲಾಗಿತ್ತು.

ಅನೇಕ ರಾಜಕೀಯ ಚಿಂತಕರು ಸಾಮೂಹಿಕ ಹಕ್ಕುಗಳನ್ನು ವೈಯಕ್ತಿಕ ಹಕ್ಕುಗಳ ವಿರೋಧಾಭಾಸವೆಂದು ನೋಡಿದ್ದಾರೆ. ಅವರ ಅಭಿಪ್ರಾಯದಲ್ಲಿ, ಗುಂಪುಗಳ ಹಕ್ಕುಗಳನ್ನು ಗುರುತಿಸಿದರೆ, ಅದು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಗುಂಪುಗಳು ತಮ್ಮ ಸಂಪ್ರದಾಯಗಳನ್ನು ಜಾರಿಗೆ ತರಲು ಬಯಸುತ್ತವೆ, ಇದು ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಾಗರಿಕರಿಗೆ ವೈಯಕ್ತಿಕವಾಗಿ ಹಕ್ಕುಗಳನ್ನು ನೀಡಬೇಕು ಮತ್ತು ಅವರಿಗೆ ತಮ್ಮ ಆಯ್ಕೆಯ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಗುರುತನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು.

ಆದರೆ ಈ ಪರಿಕಲ್ಪನೆಯನ್ನು ಏಕ ನಾಗರಿಕ ಸಮಾಜದ ದೃಷ್ಟಿಯಿಂದ ಸ್ಥಾಪಿಸಲಾಯಿತು. ಇದು ಆ ಸಮಯದಲ್ಲಿ ಯುರೋಪಿಯನ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಬಹುಸಂಸ್ಕೃತಿಯ ಸಮಾಜದಲ್ಲಿ, ವ್ಯಕ್ತಿಗಳಿಗೆ ನೀಡಲಾಗುವ ಹಕ್ಕುಗಳು ಸಾಕಾಗುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಮುಕ್ತವಾಗಿ ಚಲಾಯಿಸಲು ಸಾಧ್ಯವಾಗುವುದು ಅವನಿಗೆ ಈ ಬಗ್ಗೆ ಸಾಮೂಹಿಕ ಬೆಂಬಲವಿದ್ದಾಗ ಮಾತ್ರ. ಉದಾಹರಣೆಗೆ, ಭಾಷಾ ಅಲ್ಪಸಂಖ್ಯಾತರು ತಮ್ಮ ಭಾಷೆಯನ್ನು ರಕ್ಷಿಸುವ ವೈಯಕ್ತಿಕ ಹಕ್ಕನ್ನು ಹೊಂದಿರಬಹುದು. ಆದರೆ, ಈ ಭಾಷೆಯ ಬೋಧನೆ ಮತ್ತು ಸಾಮೂಹಿಕ ಜೀವನದಲ್ಲಿ ಅದರ ಬಳಕೆಗೆ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ, ಈ ಹಕ್ಕು ಅರ್ಥಹೀನವಾಗುತ್ತದೆ. ಶಿಕ್ಷಣದ ಪ್ರಕ್ರಿಯೆಯನ್ನು ಕೇವಲ ಖಾಸಗಿ ಸಂಸ್ಥೆಗಳ ಮೂಲಕ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ,

ಸಾಂಸ್ಕೃತಿಕ ಗುಂಪುಗಳಿಗೆ ತಮ್ಮ ಆಯ್ಕೆಯ ಶಿಕ್ಷಣದ ಹಕ್ಕನ್ನು ನೀಡಿದರೂ, ರಾಜ್ಯದ ಪ್ರೋತ್ಸಾಹದ ಕೊರತೆಯಿಂದಾಗಿ ಅವರು ಈ ಹಕ್ಕನ್ನು ಬಹಳ ಸೀಮಿತ ಪ್ರಮಾಣದಲ್ಲಿ ಚಲಾಯಿಸಲು ಸಾಧ್ಯವಾಗುತ್ತದೆ. ಕುಟುಂಬ ಜೀವನಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜಾರಿಗೆ ತರಲು ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ, ವೈಯಕ್ತಿಕ ಕಾನೂನಿನ ಜಾರಿಗಾಗಿ ಸರ್ಕಾರಿ ವ್ಯವಸ್ಥೆಯಿಲ್ಲದೆ, ಈ ಮೌಲ್ಯಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಸರ್ಕಾರಗಳು ಬಹುಮತದಿಂದ ಚುನಾಯಿತವಾಗುತ್ತವೆ, ಆದ್ದರಿಂದ ಅವು ಸಾಂಸ್ಕೃತಿಕ ಘಟಕಗಳ ಮೂಲಭೂತ ಸಾಂಸ್ಕೃತಿಕ ಹಕ್ಕುಗಳ ಮೇಲೆ ಪರಿಣಾಮ ಬೀರುವ ಕ್ರಮಗಳನ್ನು ತೆಗೆದುಕೊಳ್ಳಬಹುದು. ವ್ಯಕ್ತಿಗಳಿಗೆ ನೀಡಲಾದ ಹಕ್ಕುಗಳಿಂದ ಈ ಕ್ರಮಗಳನ್ನು ಎದುರಿಸಲು ಸಾಧ್ಯವಿಲ್ಲ. ಆದ್ದರಿಂದ, ವೈಯಕ್ತಿಕ ಹಕ್ಕುಗಳು ಸಾಂಸ್ಕೃತಿಕ ಗುಂಪುಗಳ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಲ್ಲವು ಎಂಬ ಕಲ್ಪನೆ ತಪ್ಪು.

ನಮ್ಮ ಅಭಿಪ್ರಾಯದಲ್ಲಿ, ಸಾಮೂಹಿಕ ಗುಂಪುಗಳಿಗೆ ಹಕ್ಕುಗಳನ್ನು ನೀಡುವುದು ವ್ಯಕ್ತಿಗಳ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಲ್ಪನೆಯು ತಪ್ಪು ಕಲ್ಪನೆಯಾಗಿದೆ. ಪ್ರತಿಯೊಂದು ಸಾಮೂಹಿಕತೆಯು ಅನಿವಾರ್ಯವಾಗಿ ವ್ಯಕ್ತಿಗಳ ಹಕ್ಕುಗಳನ್ನು ಮಿತಿಗೊಳಿಸುತ್ತದೆ. ಸ್ಟೇಟ್‌ ಮೂಲಭೂತವಾಗಿ ವೈಯಕ್ತಿಕ ಹಕ್ಕುಗಳ ಮೇಲಿನ ನಿರ್ಬಂಧಗಳ ಗುಂಪಾಗಿದೆ. ಈ ನಿರ್ಬಂಧಗಳ ಉದ್ದೇಶ ವ್ಯಕ್ತಿಗಳ ಒಳಿತು. ಸಾಮೂಹಿಕ ಗುಂಪುಗಳಿಗೆ ಅಥವಾ ಸಾಂಸ್ಕೃತಿಕ ಘಟಕಗಳಿಗೆ ಹಕ್ಕುಗಳನ್ನು ನೀಡುವುದು ಎಂದರೆ ವ್ಯಕ್ತಿಗಳ ಹಕ್ಕುಗಳಲ್ಲಿನ ಕಡಿತವಲ್ಲ, ಬದಲಾಗಿ ಸ್ಟೇಟ್‌ನ ಅಧಿಕಾರಗಳಲ್ಲಿನ ಕಡಿತ. ವ್ಯಕ್ತಿಗಳ ಗುರುತಿಸಲ್ಪಟ್ಟ ಹಕ್ಕುಗಳು ಹಾಗೆಯೇ ಉಳಿಯಬೇಕು. ಆದರೆ, ಸ್ಟೇಟ್‌ ತನ್ನ ಕೆಲವು ಕಾರ್ಯಗಳನ್ನು ಮತ್ತು ಅಧಿಕಾರಗಳನ್ನು ಸಾಂಸ್ಕೃತಿಕ ಘಟಕಗಳ ಸಾಮೂಹಿಕ ವ್ಯವಸ್ಥೆಗೆ ವರ್ಗಾಯಿಸಬಹುದು, ಇದನ್ನು ಕೆಳಗೆ ಚರ್ಚಿಸಲಾದ ಕೆಲವು ದೇಶಗಳಲ್ಲಿ ಮಾಡಲಾಗಿದೆ.

ಪ್ರಸಿದ್ಧ ರಾಜಕೀಯ ತತ್ವಜ್ಞಾನಿ ವಿಲ್ ಕಿಮ್ಲಿಕಾ ಅವರು ‘ಆಂತರಿಕ ನಿರ್ಬಂಧಗಳು ಮತ್ತು ಬಾಹ್ಯ ರಕ್ಷಣೆ’ (internal restrictions versus external protection) ಎಂಬ ಪದಗಳನ್ನು ಬಳಸಿಕೊಂಡು ಈ ವ್ಯತ್ಯಾಸವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಅಂದರೆ, ಸಾಂಸ್ಕೃತಿಕ ಗುಂಪುಗಳಿಗೆ ಹಕ್ಕುಗಳನ್ನು ನೀಡಬೇಕು, ಆದರೆ ಈ ಹಕ್ಕುಗಳು ಆಂತರಿಕವಾಗಿ ತಮ್ಮ ವ್ಯಕ್ತಿಗಳ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಅವಕಾಶ ನೀಡದಂತೆ ಇರಬೇಕು. ಬದಲಾಗಿ ಸ್ಟೇಟ್‌ ಮತ್ತು ಉಳಿದ ಸಮಾಜದಿಂದ ತಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ಎದುರಾಗುವ ಅಪಾಯಗಳಿಂದ ಅವರನ್ನು ರಕ್ಷಿಸುವಂತಿರಬೇಕು.

ಇತ್ತೀಚಿನ ಇತಿಹಾಸ ಮತ್ತು ವಿಶ್ವ ಚಿಂತನೆಯಲ್ಲಿನ ಬದಲಾವಣೆಗಳು

ಇಪ್ಪತ್ತನೇ ಶತಮಾನದ ದ್ವಿತೀಯಾರ್ಧವು ಜಗತ್ತಿನಲ್ಲಿ ಆಧುನಿಕತೆಯ ಅನೇಕ ಊಹೆಗಳನ್ನು ಸವಾಲು ಮಾಡುವ ಬದಲಾವಣೆಗಳಿಗೆ ಸಾಕ್ಷಿಯಾಯಿತು. ಪೂರ್ವ ಯುರೋಪಿನ ಹೆಚ್ಚಿನ ಕಮ್ಯುನಿಸ್ಟ್ ರಾಷ್ಟ್ರಗಳು ಬಹುಸಂಸ್ಕೃತಿಯ ಸಮಾಜಗಳಾಗಿದ್ದವು. ಆಧುನಿಕತೆಯ ರಾಷ್ಟ್ರೀಯತಾವಾದಿ ಕಲ್ಪನೆಗಳಿಂದ ಪ್ರೇರಿತರಾದ ಕಮ್ಯುನಿಸ್ಟ್ ಸರ್ಕಾರಗಳು ಈ ರಾಜ್ಯಗಳಲ್ಲಿ ಕಟ್ಟುನಿಟ್ಟಾದ ಸಾಂಸ್ಕೃತಿಕ ಸರ್ವಾಧಿಕಾರವನ್ನು ಸ್ಥಾಪಿಸಿದವು ಮತ್ತು ಎಲ್ಲಾ ಸಾಂಸ್ಕೃತಿಕ ಘಟಕಗಳನ್ನು ಒಂದೇ ರಾಷ್ಟ್ರೀಯ ಸಮಾಜದಲ್ಲಿ ವಿಲೀನಗೊಳಿಸಲು ಕ್ರೂರ ವಿಧಾನಗಳನ್ನು ಅಳವಡಿಸಿಕೊಂಡವು. ಕಮ್ಯುನಿಸಂನ ಪತನದ ನಂತರ, ಸಾಂಸ್ಕೃತಿಕ ಘಟಕಗಳ ನಡುವೆ ತೀವ್ರ ಘರ್ಷಣೆ ಉಂಟಾಯಿತು. ವೈಯಕ್ತಿಕ ಹಕ್ಕುಗಳು ಮತ್ತು ಬಹುಸಂಖ್ಯಾತ ಆಳ್ವಿಕೆಯ ಉದಾರ ಪ್ರಜಾಪ್ರಭುತ್ವ ಮಾದರಿಯು ವಿಫಲವಾಗಿದೆ ಮತ್ತು ಹೊಸ ಪ್ರಪಂಚದ ಅಗತ್ಯಗಳನ್ನು ಪೂರೈಸಲು ಇನ್ನು ಮುಂದೆ ಸಾಧ್ಯವಿಲ್ಲ ಎಂಬುದು ಜಗತ್ತಿಗೆ ಸ್ಪಷ್ಟವಾಯಿತು. 1976 ರಲ್ಲಿ, ವಿಶ್ವಸಂಸ್ಥೆಯು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದ ಎಂಬ ಅಂತರರಾಷ್ಟ್ರೀಯ ಒಪ್ಪಂದವನ್ನು ಅಂಗೀಕರಿಸಿತು. ಅದರ ವಿಧಿ 27 ಸಹ ಹೀಗೆ ಹೇಳಿದೆ: “ಜನಾಂಗೀಯ, ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರು ಇರುವ ದೇಶಗಳಲ್ಲಿ, ಅವರ ಗುಂಪಿನ ಸದಸ್ಯರು ತಮ್ಮದೇ ಆದ ಸಂಸ್ಕೃತಿಯನ್ನು ಆನಂದಿಸುವ, ತಮ್ಮದೇ ಆದ ಧರ್ಮವನ್ನು ಪ್ರತಿಪಾದಿಸುವ ಮತ್ತು ಆಚರಿಸುವ ಅಥವಾ ತಮ್ಮದೇ ಆದ ಭಾಷೆಯನ್ನು ಬಳಸುವ ಹಕ್ಕನ್ನು ಅವರ ಗುಂಪಿನ ಇತರ ಸದಸ್ಯರೊಂದಿಗೆ ಸಮುದಾಯದಲ್ಲಿ ನಿರಾಕರಿಸಬಾರದು.”

ಇದು ಅಲ್ಪಸಂಖ್ಯಾತರ ಸಾಮೂಹಿಕ ಹಕ್ಕುಗಳ ಬಗ್ಗೆ ಸ್ಪಷ್ಟ ಉಲ್ಲೇಖವನ್ನು ಒಳಗೊಂಡಿತ್ತು. 1992 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಾಷ್ಟ್ರೀಯ ಅಥವಾ ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಸೇರಿದ ವ್ಯಕ್ತಿಗಳ ಹಕ್ಕುಗಳ ವಿಶ್ವಸಂಸ್ಥೆಯ ಘೋಷಣೆ (1992) ಎಂದು ಕರೆಯಲ್ಪಡುವ ಪ್ರಮುಖ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಈ ಘೋಷಣೆಯ ಕೆಳಗಿನ ಅಂಶಗಳು ಈ ಸಮಯದಲ್ಲಿ ನಮ್ಮ ಚರ್ಚೆಗೆ ವಿಶೇಷವಾಗಿ ಪ್ರಸ್ತುತವಾಗಿವೆ:

  • ಅಲ್ಪಸಂಖ್ಯಾತರ ರಾಷ್ಟ್ರೀಯ, ಸಾಂಸ್ಕೃತಿಕ, ಜನಾಂಗೀಯ, ಧಾರ್ಮಿಕ ಮತ್ತು ಭಾಷಾ ಅಸ್ಮಿತೆಯನ್ನು ರಕ್ಷಿಸುವುದು ಮತ್ತು ಅವರ ಅಸ್ಮಿತೆಗಳನ್ನು ಉತ್ತೇಜಿಸಲು ಅಗತ್ಯವಾದ ಶಾಸಕಾಂಗ ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಘೋಷಿಸಲಾಯಿತು (ವಿಧಿ 1).
  • ಅಲ್ಪಸಂಖ್ಯಾತ ಗುಂಪುಗಳ ಮೇಲೆ ಪರಿಣಾಮ ಬೀರಬಹುದಾದ ಸರ್ಕಾರಿ ನಿರ್ಧಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರು ಪರಿಣಾಮಕಾರಿಯಾಗಿ ಭಾಗವಹಿಸುವ ಹಕ್ಕನ್ನು ಅದು ಗುರುತಿಸಿದೆ (ವಿಧಿ 2[3]).
  • ಇದು ತಮ್ಮದೇ ಗುಂಪಿನ ಇತರ ಸದಸ್ಯರೊಂದಿಗೆ ಶಾಂತಿಯುತ ಸಂಬಂಧಗಳನ್ನು ಕಾಪಾಡಿಕೊಳ್ಳುವ ಅವರ ಹಕ್ಕನ್ನು ಗುರುತಿಸಿದೆ. ವ್ಯಾಖ್ಯಾನದ ಪ್ರಕಾರ, ತಮ್ಮ ಧರ್ಮ, ಭಾಷೆ ಅಥವಾ ಸಂಸ್ಕೃತಿಯನ್ನು ಹಂಚಿಕೊಳ್ಳುವ ದೇಶದ ಹೊರಗಿನ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುವ ಹಕ್ಕನ್ನು ಸಹ ಗುರುತಿಸಿದೆ (ವಿಧಿ 2[5]).
  • ಒಬ್ಬರ ಸಾಂಸ್ಕೃತಿಕ ಹಕ್ಕುಗಳನ್ನು ವೈಯಕ್ತಿಕವಾಗಿ ಆನಂದಿಸುವ ಹಕ್ಕು, ಹಾಗೆಯೇ ಅವುಗಳನ್ನು ಸಾಮೂಹಿಕವಾಗಿ ಆನಂದಿಸುವ ಹಕ್ಕನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ (ವಿಧಿ [1] 3).
  • ಅಲ್ಪಸಂಖ್ಯಾತರು ತಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಪೂರ್ಣವಾಗಿ ಆಚರಿಸಲು, ತಮ್ಮದೇ ಭಾಷೆಯನ್ನು ಕಲಿಯಲು ಮತ್ತು ತಮ್ಮ ಮಕ್ಕಳಿಗೆ ತಮ್ಮದೇ ಭಾಷೆಯಲ್ಲಿ ಶಿಕ್ಷಣ ನೀಡಲು ಅನುಕೂಲಕರ ವಾತಾವರಣವನ್ನು ಒದಗಿಸುವುದು ರಾಜ್ಯದ ಜವಾಬ್ದಾರಿ ಎಂದು ಘೋಷಿಸಲಾಯಿತು (ವಿಧಿ 4[2], 4[3]).
  • ರಾಷ್ಟ್ರೀಯ ನೀತಿಗಳ ರೂಪೀಕರಣ ಮತ್ತು ಅನುಷ್ಠಾನದಲ್ಲಿ ಹಾಗೂ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಅಲ್ಪಸಂಖ್ಯಾತರ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಸರ್ಕಾರವು ಗಣನೆಗೆ ತೆಗೆದುಕೊಳ್ಳುವುದು ಅಗತ್ಯ ಎಂದು ನಿರ್ಧರಿಸಲಾಯಿತು. (ವಿಧಿ 5)

ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಈ ಘೋಷಣೆಯು ಜಾಗತಿಕ ಚಿಂತನೆಯಲ್ಲಿ ಸ್ಪಷ್ಟ ಬದಲಾವಣೆಯಾಗಿದೆ ಮತ್ತು ವ್ಯಕ್ತಿಗಳ ಹಕ್ಕುಗಳ ಜೊತೆಗೆ ಗುಂಪುಗಳ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡುವುದು ಅಗತ್ಯವಾಗಿದೆ ಎಂಬುದನ್ನು ಸಾಬೀತುಪಡಿಸಿತು.

ಇಸ್ಲಾಮಿನ ನಿಲುವು 

ಇಸ್ಲಾಮ್‌ ವ್ಯಕ್ತಿಗಳ ಹಕ್ಕುಗಳನ್ನು ಗುರುತಿಸುವುದರ ಜೊತೆಗೆ, ಅಲ್ಪಸಂಖ್ಯಾತರ ಮತ್ತು ಸಾಂಸ್ಕೃತಿಕ ಗುಂಪುಗಳ ಹಕ್ಕುಗಳನ್ನೂ ಗುರುತಿಸುತ್ತದೆ. ಈ ಪರಿಕಲ್ಪನೆಯ ಪ್ರಾಯೋಗಿಕ ಉದಾಹರಣೆಯನ್ನು ಅಲ್ಲಾಹನ ಸಂದೇಶವಾಹಕರು(ಸ) ಸ್ವತಃ ಪ್ರಸ್ತುತಪಡಿಸಿದರು.

ಪ್ರವಾದಿಯವರು(ಸ) ಮದೀನಾಕ್ಕೆ ವಲಸೆ ಹೋದಾಗ, ಮದೀನಾದ ಜನಸಂಖ್ಯೆಯು ಸುಮಾರು ಹನ್ನೆರಡು ಸಾವಿರದಷ್ಟಿತ್ತು. ಜನಸಂಖ್ಯೆಯ ಅರ್ಧದಷ್ಟು ಜನರು ಯಹೂದಿಗಳಾಗಿದ್ದರು, ಅವರು ಹತ್ತು ಬುಡಕಟ್ಟುಗಳಾಗಿ ವಿಂಗಡಿಸಲ್ಪಟ್ಟಿದ್ದರು ಮತ್ತು ಅರ್ಧದಷ್ಟು ಜನರು ಅರಬರಾಗಿದ್ದರು, ಅವರು ಔಸ್ ಮತ್ತು ಖಜ್ರಾಜ್ ಎಂಬ ವಿಭಿನ್ನ ಬುಡಕಟ್ಟುಗಳಾಗಿ ವಿಂಗಡಿಸಲ್ಪಟ್ಟಿದ್ದರು. ಚಾಲ್ತಿಯಲ್ಲಿದ್ದ ಬುಡಕಟ್ಟು ವ್ಯವಸ್ಥೆಯಲ್ಲಿ, ಈ ಎಲ್ಲಾ ಬುಡಕಟ್ಟುಗಳು ಸ್ವತಂತ್ರವಾಗಿದ್ದವು. ಪ್ರತಿಯೊಂದು ಬುಡಕಟ್ಟೂ ಸಹ ‘ಸಖೀಫಾ’ ಎಂದು ಕರೆಯಲ್ಪಡುವ ದೊಡ್ಡ ಮೇಲ್ಕಟ್ಟು ಹೊಂದಿತ್ತು ಮತ್ತು ಇಲ್ಲಿ ಅವರು ಕುಳಿತು ತಮ್ಮ ವ್ಯವಹಾರಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು.

ಪ್ರವಾದಿ(ಸ) ರವರ ಆಗಮನವಾದ ಮೇಲೆ, (ಕೆಲವು ಅಭಿಪ್ರಾಯಗಳ ಪ್ರಕಾರ ಮೊದಲ ವರ್ಷದಲ್ಲಿ ಮತ್ತು ಇತರರ ಪ್ರಕಾರ ಎರಡು ವರ್ಷಗಳ ಬಳಿಕ) ಬದ್ರ್ ಕದನದ ನಂತರ ತಕ್ಷಣವೇ ಪ್ರವಾದಿಯವರು (ಸ) ಎಲ್ಲಾ ಬುಡಕಟ್ಟುಗಳೊಂದಿಗೆ ಸಮಾಲೋಚಿಸಿದರು ಮತ್ತು ‘ಮದೀನಾ ಒಪ್ಪಂದ’ ಎಂದು ಕರೆಯಲ್ಪಡುವ ಲಿಖಿತ ಒಪ್ಪಂದವನ್ನು ಅಂತಿಮಗೊಳಿಸಿದರು. ಈ ಒಪ್ಪಂದದ ಫಲವಾಗಿ, ಮದೀನಾದ ಎಲ್ಲಾ ನಿವಾಸಿಗಳು ಅಲ್ಲಾಹನ ಸಂದೇಶವಾಹಕರ(ಸ) ನೇತೃತ್ವದ ರಾಜಕೀಯ ಏಕತೆ ಮತ್ತು ಸಾಮಾನ್ಯ ರಕ್ಷಣಾ ವ್ಯವಸ್ಥೆಯ ಭಾಗವಾದರು. ಈ ಒಪ್ಪಂದವು ಎಲ್ಲಾ ಮಿಲಿಟರಿ, ಆಡಳಿತಾತ್ಮಕ ಮತ್ತು ನ್ಯಾಯಾಂಗ ವಿಷಯಗಳಲ್ಲಿ ಅವರ ಅಧಿಕಾರವನ್ನು ಅಂತಿಮ ಅಧಿಕಾರವೆಂದು ಗುರುತಿಸಿದೆ. ಈ ಒಪ್ಪಂದದ ಪೂರ್ಣ ಪಠ್ಯವು ಹಲವಾರು ಇಸ್ಲಾಮಿಕ್ ಮೂಲಗಳಲ್ಲಿ ಲಭ್ಯವಿದೆ ಮತ್ತು ಆಧುನಿಕ ಪಾಶ್ಚಾತ್ಯ ವಿದ್ವಾಂಸರಿಂದ ವ್ಯಾಪಕವಾಗಿ ಅಧ್ಯಯನ ಮಾಡಲ್ಪಟ್ಟಿದೆ. ಅದರ 47 ಷರತ್ತುಗಳಲ್ಲಿ, ಮೊದಲ 23 ಷರತ್ತುಗಳು ಮುಸ್ಲಿಮರಿಗೆ ಮತ್ತು ಉಳಿದ 24 ಯಹೂದಿಗಳಿಗೆ ಸಂಬಂಧಿಸಿವೆ. ಇದು ಹತ್ತು ಯಹೂದಿ ಬುಡಕಟ್ಟುಗಳನ್ನು ಹೆಸರಿಸುತ್ತದೆ ಮತ್ತು ಅವರು ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳುತ್ತದೆ.

ಧಾರ್ಮಿಕ ಸ್ವಾತಂತ್ರ್ಯವು ಕೇವಲ ವೈಯಕ್ತಿಕ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರಲಿಲ್ಲ. ದಿವಂಗತ ಡಾ. ಹಮೀದುಲ್ಲಾ ಅವರ ಮಾತುಗಳಲ್ಲಿ, “ಧಾರ್ಮಿಕ, ನ್ಯಾಯಾಂಗ ಮತ್ತು ಕಾನೂನು ಸ್ವಾತಂತ್ರ್ಯವನ್ನು ಖಾತರಿಪಡಿಸಲಾಯಿತು” ಮತ್ತು ಮುಸ್ಲಿಮೇತರ ನಿವಾಸಿಗಳು “ವೈಯಕ್ತಿಕ ವಿಷಯಗಳಲ್ಲಿ ಮಾತ್ರವಲ್ಲದೆ ನ್ಯಾಯ, ಕಾನೂನು ಮತ್ತು ಶಾಸನದ ವಿಷಯಗಳಲ್ಲಿಯೂ ಮುಕ್ತರಾಗಿದ್ದರು.” ಯಹೂದಿ ವಿವಾದಗಳನ್ನು ಅವರ ‘ಥಖೀಫ್‌ಗಳಲ್ಲಿ’ ಯಹೂದಿ ಹಲಾಖಿಕ್ ಕೋರ್ಟ್‌ಗಳು ನಿರ್ಧರಿಸುತ್ತಿದ್ದವು. ಈ ನಿರ್ಧಾರಗಳನ್ನು ಪ್ರವಾದಿ ಮುಹಮ್ಮದ್(ಸ) ಅವರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಆದರೆ, ಪ್ರವಾದಿ(ಸ) ಯಹೂದಿಗಳ ಕಾನೂನಿನ ಪ್ರಕಾರವೇ ಅವರ ಪ್ರಕರಣಗಳನ್ನು ನಿರ್ಧರಿಸುತ್ತಿದ್ದರು. ಯಹೂದಿಗಳು ತಮ್ಮದೇ ಆದ ಬೊಕ್ಕಸವನ್ನು ಸ್ಥಾಪಿಸಲು ಮತ್ತು ಬುಡಕಟ್ಟಿನ ಕಲ್ಯಾಣಕ್ಕಾಗಿ ತಮ್ಮ ಸ್ವಂತ ವ್ಯವಹಾರಗಳಿಗಾಗಿ ಖರ್ಚು ಮಾಡಲು ಹಕ್ಕನ್ನು ಹೊಂದಿದ್ದರು. ಅಂದರೆ ಕಾನೂನು ಮತ್ತು ನ್ಯಾಯ, ವೈಯಕ್ತಿಕ ಕಾನೂನು ಮತ್ತು ಕ್ರಿಮಿನಲ್ ಕಾನೂನು, ಕಲ್ಯಾಣ ಮತ್ತು ಹಣಕಾಸು, ಈ ಎಲ್ಲಾ ವಿಷಯಗಳಲ್ಲಿ ಯಹೂದಿಗಳು ಸ್ವಾಯತ್ತತೆಯನ್ನು ಹೊಂದಿದ್ದರು. ರಕ್ಷಣೆ, ವಿದೇಶಿ ವ್ಯವಹಾರಗಳು ಮತ್ತು ಕೆಲವು ಪ್ರಮುಖ ವಿಷಯಗಳನ್ನು ಕೇಂದ್ರೀಕರಿಸಲಾಗಿತ್ತು. ಹೀಗಾಗಿ, ಇದು ಸಶಕ್ತ ಧಾರ್ಮಿಕ ಸಮುದಾಯಗಳ ಒಕ್ಕೂಟದ ಸ್ಥಾನಮಾನವನ್ನು ಹೊಂದಿರುವ ವ್ಯವಸ್ಥೆಯಾಗಿತ್ತು.

ಇದೇ ರೀತಿಯ ಹಕ್ಕುಗಳನ್ನು ನಂತರ ನಜ್ರಾನ್‌ನ ಕ್ರೈಸ್ತರಿಗೆ ಮತ್ತು ಇತರ ಮುಸ್ಲಿಮೇತರರಿಗೆ ನೀಡಲಾಯಿತು. ಉಮರ್(ರ) ಅವರು ಮುಸ್ಲಿಮೇತರ ಪ್ರಜೆಗಳೊಂದಿಗೆ ಮಾಡಿಕೊಂಡ ಕೆಲವು ಒಪ್ಪಂದಗಳನ್ನು ಅಲ್ಲಾಮಾ ಶಿಬ್ಲಿ ಅಲ್-ನುಮಾನಿ ಉಲ್ಲೇಖಿಸಿದ್ದಾರೆ. ಉದಾಹರಣೆಗೆ, ಹುದೈಫಾ ಇಬ್ನ್ ಅಲ್-ಯಮಾನ್(ರ) ಅವರು ಮಹ್ಧಿ ದಿನಾರ್‌ನ ಜನರಿಗೆ ನೀಡಿದ ಲಿಖಿತ ಗ್ಯಾರಂಟಿ ಹೀಗಿದೆ: “ಅವರು ತಮ್ಮ ಧರ್ಮವನ್ನು ಬದಲಾಯಿಸಬೇಕಿಲ್ಲ, ಅಥವಾ ಅವರ ಕಾನೂನುಗಳಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ.” ಜುರ್ಜಾನ್ ವಿಜಯದ ಸಮಯದಲ್ಲಿ ಸಹಿ ಮಾಡಲಾದ ಒಪ್ಪಂದವು ಈ ಮಾತುಗಳನ್ನು ಒಳಗೊಂಡಿತ್ತು: “ಅವರು ತಮ್ಮ ಜೀವನ, ತಮ್ಮ ಆಸ್ತಿ ಮತ್ತು ತಮ್ಮ ಕಾನೂನುಗಳ ಮೇಲೆ ಭದ್ರತೆಯನ್ನು ಹೊಂದಿದ್ದಾರೆ ಮತ್ತು ಅವುಗಳಲ್ಲಿ ಯಾವುದನ್ನೂ ಬದಲಾಯಿಸಲಾಗುವುದಿಲ್ಲ.”

ಮಧ್ಯಕಾಲೀನ ಯುಗದಲ್ಲಿ, ಈ ವ್ಯವಸ್ಥೆಯನ್ನು ಹೆಚ್ಚಾಗಿ ಅಟೋಮನ್ ಟರ್ಕರು ತಮ್ಮ ವಿಶಾಲ ಸಾಮ್ರಾಜ್ಯದಲ್ಲಿ ಸ್ಥಾಪಿಸಿದ್ದರು. ಅವರು ಮೂರು ಸ್ವತಂತ್ರ ರಾಷ್ಟ್ರಗಳನ್ನು ಗುರುತಿಸಿದರು. ರೋಮನ್ ಆರ್ಥೊಡಾಕ್ಸ್ ಕ್ರೈಸ್ತರು (ಮಿಲ್ಲೆಟ್ ರೂಮಿ), ಅರ್ಮೇನಿಯನ್ ಕ್ರೈಸ್ತರು (ಮಿಲ್ಲೆಟ್ ಅರ್ಮೇನಿಯನ್) ಮತ್ತು ಯಹೂದಿಗಳು (ಮಿಲ್ಲೆಟ್ ಜೂಡಿ), ಇವರು ಮುಸ್ಲಿಮರ ಜೊತೆಗೆ ಮೂರು ಪ್ರತ್ಯೇಕ ರಾಷ್ಟ್ರಗಳಾಗಿದ್ದರು. ಈ ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ಸ್ವತಂತ್ರ ಶೈಕ್ಷಣಿಕ, ಧಾರ್ಮಿಕ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿತ್ತು. ಪ್ರತಿಯೊಂದು ರಾಷ್ಟ್ರಕ್ಕೂ ಒಬ್ಬ ಮುಖ್ಯಸ್ಥನಿದ್ದನು, ಅವನನ್ನು ‘ಮಿಲ್ಲೆಟ್ ಬಾಸಿ’ (ಅಂದರೆ, ರಾಷ್ಟ್ರಕ್ಕಾಗಿ ಖಲೀಫನ ಉಪ ಪ್ರತಿನಿಧಿ) ಎಂದು ಕರೆಯಲಾಗುತ್ತಿತ್ತು. ಅವನ ಮೇಲ್ವಿಚಾರಣೆಯಲ್ಲಿ, ಅವರ ಧಾರ್ಮಿಕ ಕಾನೂನುಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಅನುಗುಣವಾಗಿ ಅವರ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು ಸ್ವತಂತ್ರ ವ್ಯವಸ್ಥೆಯಿತ್ತು.

ರಾಷ್ಟ್ರದ ಮುಖ್ಯಸ್ಥನನ್ನು ಸಂಬಂಧಪಟ್ಟ ರಾಷ್ಟ್ರದ ಸದಸ್ಯರು ಆರಿಸುತ್ತಿದ್ದರು. ಖಲೀಫನಿಂದ ತನ್ನ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಅವನಿಗೆ ವಿಶೇಷ ಆಡಳಿತಾತ್ಮಕ, ಹಣಕಾಸು, ನ್ಯಾಯಾಂಗ ಮತ್ತು ಧಾರ್ಮಿಕ ಅಧಿಕಾರಗಳನ್ನು ನೀಡಲಾಗಿತ್ತು. ಈ ಕೆಲವು ರಾಷ್ಟ್ರಗಳು ಹಲವಾರು ಉಪಗುಂಪುಗಳನ್ನು ಹೊಂದಿದ್ದವು (ಉದಾಹರಣೆಗೆ, ರೋಮನ್ ರಾಷ್ಟ್ರವು ಗ್ರೀಕ್, ಅಲ್ಬೇನಿಯನ್, ಅರಬ್, ಬಲ್ಗೇರಿಯನ್, ಜಾರ್ಜಿಯನ್ ಮತ್ತು ಸರ್ಬಿಯನ್ ಜನಾಂಗೀಯ ಗುಂಪುಗಳನ್ನು ಹೊಂದಿತ್ತು). ಈ ಗುಂಪುಗಳು ಸಹ ವಿವಿಧ ಕ್ಷೇತ್ರಗಳಲ್ಲಿ ಸ್ವಾಯತ್ತತೆಯನ್ನು ಅನುಭವಿಸಿದವು. ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ನ್ಯಾಯಾಲಯಗಳನ್ನು, ತನ್ನದೇ ಆದ ಶಿಕ್ಷಣ ವ್ಯವಸ್ಥೆಯನ್ನು, ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ನಿರ್ವಹಣೆಗಾಗಿ ಸಂಸ್ಥೆಗಳನ್ನು ಮತ್ತು ತನ್ನದೇ ಆದ ಶಿಕ್ಷೆಯ ವ್ಯವಸ್ಥೆಯನ್ನು ಹೊಂದಿತ್ತು.

ಹೀಗಾಗಿ, ಈ ವ್ಯವಸ್ಥೆಯಲ್ಲಿ, ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುಂಪುಗಳ ಹಕ್ಕುಗಳನ್ನು ಗುರುತಿಸುವಾಗ, ಅವರಿಗೆ ಅವರ ಸ್ವಂತ ನಾಗರಿಕತೆ ಮತ್ತು ಅದರ ಸಾಮೂಹಿಕ ವ್ಯವಸ್ಥೆಗೆ ಅನುಗುಣವಾಗಿ ತಮ್ಮ ಸಾಮೂಹಿಕ ವ್ಯವಹಾರಗಳನ್ನು ನಡೆಸುವ ಹಕ್ಕನ್ನು ಒದಗಿಸಲಾಯಿತು. ಇಂದು, ರಾಜಕೀಯ ವಿಜ್ಞಾನದ ಗಂಭೀರ ಶೈಕ್ಷಣಿಕ ಚರ್ಚೆಗಳಲ್ಲಿ, ಬಹುಸಂಸ್ಕೃತಿಯ ಸಮಾಜಗಳ ಅಗತ್ಯತೆಗಳಿಗೆ ಸಂಬಂಧಿಸಿದಂತೆ ಈ ವ್ಯವಸ್ಥೆಯನ್ನು ಆಗಾಗ್ಗೆ ಚರ್ಚಿಸಲಾಗುತ್ತಿದೆ. ಕಿಮ್ಲಿಕಾ ಇದನ್ನು ‘ಧಾರ್ಮಿಕ ಸಹಿಷ್ಣುತೆಯ ಅತ್ಯುತ್ತಮ ಮತ್ತು ನೈಸರ್ಗಿಕ ವ್ಯವಸ್ಥೆ’ ಎಂದು ಕರೆದಿದ್ದಾರೆ. ವಿಶ್ವದಲ್ಲಿ ಅಲ್ಪಸಂಖ್ಯಾತರ ಸಾಮೂಹಿಕ ಹಕ್ಕುಗಳ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಚರ್ಚೆಗಳಲ್ಲಿ, ಈ ವ್ಯವಸ್ಥೆಯನ್ನು ಆದರ್ಶ ವ್ಯವಸ್ಥೆಯಾಗಿ ಪ್ರಸ್ತುತಪಡಿಸಲಾಗುತ್ತಿದೆ. ವಿಪರ್ಯಾಸವೇನೆಂದರೆ, ಈ ಮಧ್ಯಕಾಲೀನ ಸರ್ಕಾರಗಳು ತೋರಿದ ವಿಶಾಲ ಮನೋಭಾವವನ್ನು ಪ್ರಜಾಪ್ರಭುತ್ವ ರಾಷ್ಟ್ರಗಳು ಬಹಳ ಕಡಿಮೆ ಪ್ರದರ್ಶಿಸಿವೆ.

ಕೆಲವು ಸಮಕಾಲೀನ ಅನುಭವಗಳು 

ಇಂತಹ ಪ್ರಯೋಗಗಳು ಈಗ ಅನೇಕ ಬಹುಸಂಸ್ಕೃತಿಯ ಸಮಾಜಗಳಲ್ಲಿ ನಡೆಯುತ್ತಿವೆ. ಹಂಗೇರಿಯಂತಹ ಕೆಲವು ದೇಶಗಳಲ್ಲಿ ಸಾಂಸ್ಕೃತಿಕ ಘಟಕಗಳಿಗೆ ತಮ್ಮ ಸಾಂಸ್ಕೃತಿಕ ವ್ಯವಹಾರಗಳನ್ನು ನಡೆಸಲು ಸೀಮಿತ ಅಧಿಕಾರಗಳನ್ನು ನೀಡಲಾಗಿದೆ. ಸಾಂಸ್ಕೃತಿಕ ಘಟಕಗಳು ತಮ್ಮ ಸ್ವಂತ ಶಿಕ್ಷಣ, ಧಾರ್ಮಿಕ ವ್ಯವಹಾರಗಳು ಮತ್ತು ಕೆಲವು ಸಾಂಸ್ಕೃತಿಕ ವ್ಯವಹಾರಗಳನ್ನು ನಡೆಸುವ ಸಾಧ್ಯತೆಯನ್ನು ದೇಶದ ಸಂವಿಧಾನವು ಒದಗಿಸುತ್ತದೆ. ಇದಕ್ಕಾಗಿ, ಅವರ ಅಧಿಕೃತ ಅಸೆಂಬ್ಲಿಗಳನ್ನು ಚುನಾಯಿಸಲಾಗುತ್ತದೆ ಮತ್ತು ಸರ್ಕಾರಗಳು ಅವರಿಗೆ ಅನುದಾನವನ್ನು ನೀಡುತ್ತವೆ.

ಸ್ಥಳೀಯ ಜನರ ಸಮಸ್ಯೆ ನಮ್ಮ ದೇಶದಲ್ಲಿ ಇನ್ನೂ ಗಂಭೀರ ಸಮಸ್ಯೆಯಾಗಿದೆ. ಸ್ವೀಡನ್, ನಾರ್ವೆ ಮತ್ತು ಫಿನ್ಲೆಂಡ್‌ನಂತಹ ದೇಶಗಳು ತಮ್ಮ ಪ್ರಾಚೀನ ನಿವಾಸಿಗಳು ಮತ್ತು ಬುಡಕಟ್ಟು ಜನರ ಹಕ್ಕುಗಳಿಗಾಗಿ ಮಾಡಿಕೊಂಡಿರುವ ವ್ಯವಸ್ಥೆಗಳಿಂದ ಬಹಳಷ್ಟು ಕಲಿಯಬಹುದು. ‘ಸಾಮಿ’ (Sami) ಗಳು ಉತ್ತರ ಯುರೋಪ್‌ನಲ್ಲಿ (ಸ್ಕ್ಯಾಂಡಿನೇವಿಯಾ) ಕಂಡುಬರುವ ಪ್ರಾಚೀನ ಬುಡಕಟ್ಟು ಜನವಾಗಿದ್ದು ಅವರ ಭಾಷೆ, ಸಂಸ್ಕೃತಿ ಮತ್ತು ಜೀವನ ವಿಧಾನವು ಸಾಮಾನ್ಯ ಯುರೋಪಿಯನ್ನರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಉತ್ತರ ಯುರೋಪಿನ ಮೂರು ದೇಶಗಳು ನಿಯಮಿತವಾಗಿ ಚುನಾಯಿತ ಸಂಸತ್ತುಗಳನ್ನು ಹೊಂದಿವೆ, ಅವುಗಳಿಗೆ ಸಾಮಿ ಜನರ ಶಿಕ್ಷಣ ಮತ್ತು ನಾಗರಿಕತೆಗೆ ಸಂಬಂಧಿಸಿದಂತೆ ತಮ್ಮ ಸಂವಿಧಾನಗಳಲ್ಲಿ ಅನೇಕ ಅಧಿಕಾರಗಳನ್ನು ನೀಡಲಾಗಿದೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಅಲ್ಪಸಂಖ್ಯಾತರ ಪ್ರಮುಖ ವಿಷಯವೆಂದರೆ ವೈಯಕ್ತಿಕ ಕಾನೂನಿನ ವಿಷಯ. ನಮ್ಮ ದೇಶದಲ್ಲಿ, ಮುಸ್ಲಿಮರಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಕಾಯ್ದೆ, 1937 ರ ಅಡಿಯಲ್ಲಿ ವೈಯಕ್ತಿಕ ಕಾನೂನಿನ ಹಕ್ಕನ್ನು ನೀಡಲಾಗಿದೆ. ಆದರೆ, ಒಂದೆಡೆ ಸರ್ಕಾರಗಳು ಮತ್ತು ನ್ಯಾಯಾಲಯಗಳು ಇದರಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸಿವೆ ಮತ್ತು ಇನ್ನೊಂದೆಡೆ ಅದರ ಅನುಷ್ಠಾನವು ಮುಸ್ಲಿಮರ ಕೈಯಲ್ಲಿ ಇಲ್ಲದ ಕಾರಣ ವೈಯಕ್ತಿಕ ಕಾನೂನಿನ ರೂಪೀಕರಣ, ನಿರ್ಧಾರ ತೆಗೆದುಕೊಳ್ಳುವಿಕೆ ಇತ್ಯಾದಿಗಳಲ್ಲಿ ಅನೇಕ ಅಡೆತಡೆಗಳಿವೆ. ಆದಾಗ್ಯೂ, ಈ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಬಹಳ ಮುಖ್ಯವಾದ ಮತ್ತು ಬಹಳ ಕಾರ್ಯಸಾಧ್ಯವಾದ ನಿದರ್ಶನಗಳು ಕಂಡುಬರುತ್ತವೆ. ಸಿಂಗಾಪುರ, ಇಸ್ರೇಲ್ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ, ಶರಿಯತ್ ನ್ಯಾಯಾಲಯಗಳ ವ್ಯವಸ್ಥೆಯನ್ನು ಸರ್ಕಾರದ ಆಶ್ರಯದಲ್ಲಿ ಸ್ಥಾಪಿಸಲಾಗಿದೆ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯು ಅವುಗಳನ್ನು ಗುರುತಿಸುತ್ತದೆ. ಮುಸ್ಲಿಂ ವಿದ್ವಾಂಸರನ್ನು ಈ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸಲಾಗುತ್ತದೆ. ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ಪ್ರಕರಣಗಳು ಈ ನ್ಯಾಯಾಲಯಗಳಿಗೆ ಹೋಗುತ್ತವೆ ಮತ್ತು ಅಲ್ಲಿ ನಿರ್ಧರಿಸಲ್ಪಡುತ್ತವೆ. ಈ ವ್ಯವಸ್ಥೆಯು ಮುಸ್ಲಿಂ ವಿದ್ವಾಂಸರ ನಿಯಂತ್ರಣದಲ್ಲಿದೆ. ಆದ್ದರಿಂದ, ನ್ಯಾಯಾಲಯಕ್ಕೆ ಕೆಲವು ಅಧಿಕಾರಗಳನ್ನು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ನೀಡಲು ಸಾಧ್ಯವಾಗಿದೆ. ನಿರ್ದಿಷ್ಟ ಶರಿಯತ್ ನ್ಯಾಯಾಲಯಗಳಲ್ಲಿ, ಮುಸ್ಲಿಂ ನ್ಯಾಯಾಧೀಶರು ಇಸ್ಲಾಮಿಕ್ ಶರಿಯತ್‌ನ ಮನೋಭಾವವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ.

ಸಾಮಾಜಿಕವಾಗಿ, ಆರ್ಥಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದ ಗುಂಪುಗಳ ಅಭಿವೃದ್ಧಿ ಒಂದು ಪ್ರಮುಖ ವಿಷಯವಾಗಿದೆ. ಇದನ್ನು ಪರಿಹರಿಸಲು ನಮ್ಮ ದೇಶದಲ್ಲಿ ಮೀಸಲಾತಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಈಗ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಾತಿ ನೀತಿ ಸಾಕಾಗುವುದಿಲ್ಲ ಎಂದು ಪದೇ ಪದೇ ಚರ್ಚೆಗಳು ನಡೆಯುತ್ತಿವೆ. ಚುನಾವಣೆಗಳಲ್ಲಿ, ಮೀಸಲು ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾರರು ಬಹುಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಕ್ಷೇತ್ರಗಳಿಂದ, ಹೆಚ್ಚಾಗಿ ಪ್ರಮುಖ ರಾಜಕೀಯ ಪಕ್ಷಗಳ ನಾಮನಿರ್ದೇಶಿತ ಪ್ರತಿನಿಧಿಗಳು ಮಾತ್ರ ಚುನಾಯಿತರಾಗುತ್ತಾರೆ, ಅವರು ತಮ್ಮ ಹಿಂದುಳಿದ ಸಮುದಾಯದ ನಿಜವಾದ ಪ್ರತಿನಿಧಿಗಳೂ ಅಲ್ಲ ಅಥವಾ ಅವರ ಉದ್ದೇಶಕ್ಕೆ ಪ್ರಾಮಾಣಿಕರಲ್ಲ. ಮೀಸಲಾತಿಗಾಗಿ ಹೊಸ ಬೇಡಿಕೆಗಳು ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡುತ್ತವೆ ಏಕೆಂದರೆ ಬಹುಸಂಖ್ಯಾತ ವರ್ಗವು ತಮ್ಮ ಸ್ಥಾನಗಳು ಮತ್ತು ಅವರ ಉದ್ಯೋಗಗಳು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿನ ಸ್ಥಾನಗಳನ್ನು ಅನ್ಯಾಯವಾಗಿ ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಭಾವಿಸುತ್ತದೆ. ನಂತರ ಮೀಸಲಾತಿಯ ವ್ಯಾಪ್ತಿಯು ಕೇವಲ ಕೆಲವು ರಾಜಕೀಯ ಸ್ಥಾನಗಳು ಮತ್ತು ಸರ್ಕಾರಿ ಉದ್ಯೋಗಗಳಿಗೆ ಸೀಮಿತವಾಗಿದೆ. ಹೊಸ ಆರ್ಥಿಕ ರಚನೆಯಲ್ಲಿ, ಸರ್ಕಾರಿ ಉದ್ಯೋಗಗಳ ಸಂಖ್ಯೆ ಮತ್ತು ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಆದ್ದರಿಂದ,

ಈ ಗುಂಪುಗಳ ಅಭಿವೃದ್ಧಿಯಲ್ಲಿ ಅವರಿಗೆ ಸಹಾಯ ಮಾಡಲು ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವುದು ಅಗತ್ಯವಾಗಿದೆ. ಸಚ್ಚಾರ್ ಸಮಿತಿಯು ವೈವಿಧ್ಯತೆ ಸೂಚ್ಯಂಕದ (Diversity Index) ರೂಪದಲ್ಲಿ ಪ್ರಮುಖ ಕ್ರಾಂತಿಕಾರಿ ಪ್ರಸ್ತಾಪವನ್ನು ಮಂಡಿಸಿತು. ಅಂದರೆ, ಪ್ರತಿಯೊಂದು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಉದ್ಯೋಗಿಗಳು ಮತ್ತು ಫಲಾನುಭವಿಗಳಲ್ಲಿ ವಿಭಿನ್ನ ಸಾಮಾಜಿಕ ಗುಂಪುಗಳ ಅನುಪಾತವನ್ನು ನೋಡಬೇಕು. ಈ ಅನುಪಾತವು ಜನಸಂಖ್ಯೆಯಲ್ಲಿನ ಈ ಗುಂಪುಗಳ ವಾಸ್ತವಿಕ ಅನುಪಾತಕ್ಕೆ ಎಷ್ಟು ಹತ್ತಿರವಾಗಿದೆಯೋ ಅಷ್ಟು ಅವರ ಸೂಚ್ಯಂಕ ಹೆಚ್ಚಾಗಿರುತ್ತದೆ. ಒಂದು ಜನಸಂಖ್ಯೆಯಲ್ಲಿ ದಲಿತರು ಶೇಕಡಾ ಮೂವತ್ತು, ಬುಡಕಟ್ಟುಗಳು ಶೇಕಡಾ ಇಪ್ಪತ್ತು, ಅಲ್ಪಸಂಖ್ಯಾತರು ಶೇಕಡಾ ಹತ್ತು ಮತ್ತು ಅಲ್ಲಿನ ಶಿಕ್ಷಣ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಗುಂಪುಗಳ ಅನುಪಾತವು ಒಂದೇ ಆಗಿದ್ದರೆ, ವೈವಿಧ್ಯತೆಯ ಸೂಚ್ಯಂಕವು ಗರಿಷ್ಠವಾಗಿರುತ್ತದೆ, ಅಂದರೆ 100. ಯಾವುದೇ ಗುಂಪಿನ ಅನುಪಾತವು ಕಡಿಮೆಯಿದ್ದರೆ, ಸೂಚ್ಯಂಕವು ಕಡಿಮೆಯಿರುತ್ತದೆ. ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯನ್ನು ಆಡಿಟ್ ಮಾಡಬೇಕು ಮತ್ತು ಅದರ ವೈವಿಧ್ಯತೆಯ ಸೂಚ್ಯಂಕವನ್ನು ನಿರ್ಧರಿಸಬೇಕು ಮತ್ತು ಸರ್ಕಾರದ ಪ್ರಯೋಜನಗಳನ್ನು ಈ ಸೂಚ್ಯಂಕಕ್ಕೆ ಜೋಡಿಸಬೇಕು ಎಂದು ಸಚ್ಚಾರ್ ಸಮಿತಿ ಶಿಫಾರಸು ಮಾಡಿದೆ. ಅಂದರೆ, ಉದಾಹರಣೆಗೆ, ವಿಶ್ವವಿದ್ಯಾನಿಲಯಕ್ಕೆ ಅನುದಾನ ಪಡೆಯಲು ಸೂಚ್ಯಂಕವು ಕನಿಷ್ಠ ಇಷ್ಟಿರಬೇಕು ಅಥವಾ ಸೂಚ್ಯಂಕ ಇಷ್ಟಿದ್ದರೆ ಖಾಸಗಿ ಸಂಸ್ಥೆಗೆ ತೆರಿಗೆ ವಿನಾಯಿತಿ ಸಿಗುತ್ತದೆ ಇತ್ಯಾದಿಗಳನ್ನು ನಿರ್ಧರಿಸಬೇಕು. ಈ ಪ್ರಸ್ತಾಪದಲ್ಲಿ, ಯಾವುದೇ ನಿರ್ದಿಷ್ಟ ಗುಂಪಿಗೆ ಯಾವುದೇ ಸವಲತ್ತುಗಳನ್ನು ನೀಡಲಾಗುತ್ತಿಲ್ಲ, ಬದಲಾಗಿ ಎಲ್ಲಾ ಗುಂಪುಗಳ ಜನರಿಗೆ ಅನುಪಾತದ ರೀತಿಯಲ್ಲಿ ಪ್ರಯೋಜನವನ್ನು ನೀಡುವ ಕ್ರಮವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಇಂತಹ ಕ್ರಮಗಳ ಅಗತ್ಯವಿದೆ.

ನಮ್ಮ ದೇಶದ ಪರಿಸ್ಥಿತಿ ಬಹಳ ಸಂಕೀರ್ಣವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೇಲೆ ತಿಳಿಸಿದ ಮಾದರಿಗಳನ್ನು ಇಲ್ಲಿ ನಕಲು ಮಾಡಲು ಸಾಧ್ಯವಾಗದಿರಬಹುದು. ಹಲವಾರು ಪ್ರಾಯೋಗಿಕ ತೊಂದರೆಗಳೂ ಇರಬಹುದು. ಈ ಮಾದರಿಗಳನ್ನು ಉಲ್ಲೇಖಿಸುವ ಉದ್ದೇಶವು ಅವುಗಳ ಅನುಕರಣೆಯನ್ನು ಸೂಚಿಸುವುದಲ್ಲ. ಬದಲಾಗಿ, ಅವುಗಳನ್ನು ಮುಂದಿಟ್ಟು ನಮ್ಮ ಬಹುಸಂಸ್ಕೃತಿಯ ದೇಶದ ಎಲ್ಲಾ ಗುಂಪುಗಳಿಗೆ ತಮ್ಮ ನಾಗರಿಕತೆಗೆ ಸಂಬಂಧಿಸಿದ ವಿಷಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿರ್ವಹಿಸಲು ಅವಕಾಶವನ್ನು ನೀಡುವ ಹೊಸ ಮಾರ್ಗಗಳನ್ನು ಯೋಚಿಸುವುದು ಇದರ ಉದ್ದೇಶವಾಗಿದೆ. ಎಲ್ಲಾ ನಾಗರಿಕತೆಗಳು ಪ್ರವರ್ಧಮಾನಕ್ಕೆ ಬರಲು ಅವಕಾಶಗಳನ್ನು ಹೊಂದಿವೆ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ದೇಶದ ಒಟ್ಟಾರೆ ನಿರ್ವಹಣೆಯಲ್ಲಿ ಎಲ್ಲಾ ಗುಂಪುಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಇದು ಪ್ರಸ್ತುತ ಇರುವ ಉದ್ವಿಗ್ನತೆ ಮತ್ತು ಸಂಘರ್ಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪ್ರತಿಯೊಬ್ಬರೂ ದೇಶದ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತದೆ. ಮತ್ತು ಇದು ವಿಭಜಕ ರಾಜಕಾರಣಕ್ಕೆ ತಡೆ ಒಡ್ಡುತ್ತದೆ.