2025ರಲ್ಲಿ ಮಕ್ಕಳ ಮೇಲಿನ ಗಂಭೀರ ದೌರ್ಜನ್ಯಗಳ ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಇಸ್ರೇಲ್ ಅಗ್ರಸ್ಥಾನ: ಸರ್ಕಾರಿ ಪಡೆಗಳೇ ಪ್ರಮುಖ ಅಪರಾಧಿಗಳು

0
179

ಸನ್ಮಾರ್ಗ ವಾರ್ತೆ

ವಿಶ್ವಸಂಸ್ಥೆಯ ಹೊಸ ವರದಿಯ ಪ್ರಕಾರ, 2025ರಲ್ಲಿ ಮಕ್ಕಳ ಮೇಲಿನ ಅತಿ ಹೆಚ್ಚು ಗಂಭೀರ ದೌರ್ಜನ್ಯಗಳು ಇಸ್ರೇಲ್‌ನಲ್ಲಿ ದಾಖಲಾಗಿವೆ. ಅಲ್ಲದೆ, ವಿಶ್ವಸಂಸ್ಥೆಯ ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ’ದ ನಿಯಮಾವಳಿ ಜಾರಿಗೆ ಬಂದ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಸರ್ಕಾರಿ ಪಡೆಗಳೇ ಇಂತಹ ದೌರ್ಜನ್ಯಗಳ ಪ್ರಮುಖ ಅಪರಾಧಿಗಳಾಗಿ ಹೊರಹೊಮ್ಮಿವೆ.

“ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ” ಎಂಬ ಶೀರ್ಷಿಕೆಯ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಾರ್ಷಿಕ ವರದಿಯು 2025ರಲ್ಲಿ ಮಕ್ಕಳ ವಿರುದ್ಧ 38,558 ಗಂಭೀರ ದೌರ್ಜನ್ಯ ಪ್ರಕರಣಗಳನ್ನು ದೃಢಪಡಿಸಿದೆ. ಇದು ಸತತ ನಾಲ್ಕನೇ ವರ್ಷದ ಆತಂಕಕಾರಿ ಅಂಕಿಅಂಶವಾಗಿದ್ದು, ನಿಗಾ ವಹಿಸಲು ಆರಂಭಿಸಿದಾಗಿನಿಂದ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ.

ವರದಿಯ ಪ್ರಕಾರ, 24,174 ಮಕ್ಕಳು ನೇರವಾಗಿ ಗಂಭೀರ ದೌರ್ಜನ್ಯಗಳಿಗೆ ತುತ್ತಾಗಿದ್ದಾರೆ. ಇದರಲ್ಲಿ ಕೊಲೆ ಮತ್ತು ಅಂಗವಿಕಲಗೊಳಿಸುವಿಕೆ, ಸಶಸ್ತ್ರ ಗುಂಪುಗಳಿಂದ ನೇಮಕಾತಿ ಮತ್ತು ಬಳಕೆ, ಅಪಹರಣ, ಅತ್ಯಾಚಾರ ಮತ್ತು ಇತರ ರೂಪದ ಲೈಂಗಿಕ ದೌರ್ಜನ್ಯ, ಶಾಲೆ-ಆಸ್ಪತ್ರೆಗಳ ಮೇಲಿನ ದಾಳಿ, ಮತ್ತು ಮಾನವೀಯ ನೆರವು ನಿರಾಕರಣೆ ಸೇರಿವೆ.

ಸಾವಿರಾರು ಮಕ್ಕಳು ಅನೇಕ ರೀತಿಯ ದೌರ್ಜನ್ಯಗಳನ್ನು ಅನುಭವಿಸಿದ್ದು, ಸಂತ್ರಸ್ತರ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಬಾಲಕಿಯರೇ ಆಗಿದ್ದಾರೆ.

ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ನಿಯಮಾವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಮಕ್ಕಳ ಮೇಲಿನ ಗಂಭೀರ ದೌರ್ಜನ್ಯಗಳಿಗೆ ಸರ್ಕಾರಿ ಪಡೆಗಳೇ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.

ಹೆಚ್ಚುತ್ತಿರುವ ಶತ್ರುತ್ವ, ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಕ ಶಸ್ತ್ರಾಸ್ತ್ರಗಳ ಬಳಕೆಯ ಹೆಚ್ಚಳ ಹಾಗೂ ಮಿಲಿಟರಿ ದಾಳಿ ಪ್ರಕ್ರಿಯೆಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯ ಮೇಲಿನ ಹೆಚ್ಚುತ್ತಿರುವ ಕಳವಳಗಳೇ ಈ ಟ್ರೆಂಡ್‌ಗೆ ಕಾರಣ ಎಂದು ವರದಿ ತಿಳಿಸಿದೆ.

ಹತ್ಯೆ ಮತ್ತು ಅಂಗವಿಕಲಗೊಳಿಸುವಿಕೆಯು ಅತಿ ಹೆಚ್ಚು ಬಾರಿ ದೃಢಪಟ್ಟ ದೌರ್ಜನ್ಯಗಳಾಗಿವೆ. ವಿಶ್ವಸಂಸ್ಥೆಯು 6,266 ಮಕ್ಕಳ ಹತ್ಯೆ ಮತ್ತು 7,958 ಮಕ್ಕಳನ್ನು ಅಂಗವಿಕಲಗೊಳಿಸಿರುವ ಬಗ್ಗೆ ದಾಖಲಿಸಿದೆ. 2024ಕ್ಕೆ ಹೋಲಿಸಿದರೆ ಮಕ್ಕಳ ಹತ್ಯೆಯು ಶೇಕಡಾ 34ರಷ್ಟು ಹೆಚ್ಚಾಗಿದೆ. ಮಾನವೀಯ ನೆರವು ನಿರಾಕರಿಸಿದ 8,322 ಘಟನೆಗಳು ನಡೆದಿದ್ದರೆ, ಸಂಘರ್ಷದಲ್ಲಿ ಭಾಗಿಯಾಗಿರುವ ಗುಂಪುಗಳು 6,607 ಮಕ್ಕಳನ್ನು ನೇಮಿಸಿಕೊಂಡು ಬಳಸಿಕೊಂಡಿವೆ. ನೇಮಕಾತಿ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ 5,129 ಮಕ್ಕಳ ಅಪಹರಣ ಪ್ರಕರಣಗಳನ್ನೂ ವರದಿ ದಾಖಲಿಸಿದೆ. ಅತ್ಯಾಚಾರ ಮತ್ತು ಇತರ ಸ್ವರೂಪದ ಲೈಂಗಿಕ ದೌರ್ಜನ್ಯಗಳು ಆತಂಕಕಾರಿ ಮಟ್ಟದಲ್ಲಿ ಮುಂದುವರಿದಿದ್ದು, ಸಾಮೂಹಿಕ ಅತ್ಯಾಚಾರವನ್ನು ಯುದ್ಧದ ತಂತ್ರವಾಗಿ ಹೆಚ್ಚಾಗಿ ಬಳಸಲಾಗುತ್ತಿದೆ.

2025ರಲ್ಲಿ ಇಸ್ರೇಲ್ ಮತ್ತು ಆಕ್ರಮಿತ ಫೆಲೆಸ್ತೀನ್ ಭೂಪ್ರದೇಶ (12,445) ದೃಢಪಡಿಸಿದ ಅತಿ ಹೆಚ್ಚು ದೌರ್ಜನ್ಯಗಳ ಮಟ್ಟವನ್ನು ದಾಖಲಿಸಿದೆ. ಇದರ ನಂತರದ ಸ್ಥಾನಗಳಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (4,114), ನೈಜೀರಿಯಾ (2,560), ಮ್ಯಾನ್ಮಾರ್ (2,203) ಮತ್ತು ಸೊಮಾಲಿಯಾ (2,195) ಇವೆ.

ಇಸ್ರೇಲ್ ಮತ್ತು ಆಕ್ರಮಿತ ಫೆಲೆಸ್ತೀನ್ ಭೂಪ್ರದೇಶದಲ್ಲಿ ನಡೆದ ಬಹುಪಾಲು ದೃಢಪಟ್ಟ ದೌರ್ಜನ್ಯಗಳಿಗೆ ಇಸ್ರೇಲಿ ಪಡೆಗಳೇ ಕಾರಣ ಎಂದು ವರದಿಯು ಉಲ್ಲೇಖಿಸಿದೆ.

2025ರಲ್ಲಿ 5,663 ಮಕ್ಕಳ ವಿರುದ್ಧ ದೃಢಪಟ್ಟ ಒಟ್ಟು 12,445 ಗಂಭೀರ ದೌರ್ಜನ್ಯಗಳಲ್ಲಿ, 9,465 ಪ್ರಕರಣಗಳಿಗೆ ಇಸ್ರೇಲ್ ಸಶಸ್ತ್ರ ಹಾಗೂ ಭದ್ರತಾ ಪಡೆಗಳು ಕಾರಣವಾದರೆ, 326 ಪ್ರಕರಣಗಳಿಗೆ ಇಸ್ರೇಲಿ ವಸಾಹತುಶಾಹಿಗಳು ಕಾರಣರಾಗಿದ್ದಾರೆ.

2,725 ಫೆಲೆಸ್ತೀನ್ ಮಕ್ಕಳ ಹತ್ಯೆಯನ್ನು ವಿಶ್ವಸಂಸ್ಥೆಯು ದೃಢಪಡಿಸಿದ್ದು, ಈ ಪೈಕಿ 2,668 ಮಕ್ಕಳು ಗಾಝಾದಲ್ಲಿ ಹಾಗೂ 57 ಮಕ್ಕಳು ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ ಹತ್ಯೆಯಾಗಿದ್ದಾರೆ. ಮತ್ತೊಂದೆಡೆ ದೃಢಪಟ್ಟಿರುವ ಇತರೆ 2,518 ಮಕ್ಕಳ ಹತ್ಯೆಯ ಹೊಣೆಯನ್ನು ನಿರ್ಧರಿಸುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.

ಇರಾನ್ ಸಶಸ್ತ್ರ ಪಡೆಗಳು ಮತ್ತು ಒಬ್ಬ ಫೇಲೆಸ್ತೀನಿಯಾದಿಂದ ಇಸ್ರೇಲ್‌ನಲ್ಲಿ ಹತ್ಯೆಯಾದ ಐದು ಮಕ್ಕಳ ಸಾವನ್ನೂ ವಿಶ್ವಸಂಸ್ಥೆ ದೃಢಪಡಿಸಿದೆ. ಇದರಲ್ಲಿ ಇಬ್ಬರು ಇಸ್ರೇಲಿ ಮತ್ತು ಮೂವರು ಉಕ್ರೇನಿಯನ್ ಮಕ್ಕಳು ಸೇರಿದ್ದಾರೆ.

2,921 ಫೆಲೆಸ್ತೀನ್ ಮಕ್ಕಳನ್ನು ಅಂಗವಿಕಲಗೊಳಿಸಿರುವುದನ್ನೂ ವಿಶ್ವಸಂಸ್ಥೆ ದೃಢಪಡಿಸಿದೆ. ಇವರಲ್ಲಿ ಹೆಚ್ಚಿನವರು ಗಾಝಾದವರಾಗಿದ್ದು, 2,760 ಪ್ರಕರಣಗಳಿಗೆ ಇಸ್ರೇಲಿ ಸಶಸ್ತ್ರ ಮತ್ತು ಭದ್ರತಾ ಪಡೆಗಳೇ ಕಾರಣವಾಗಿವೆ.

ಇದಲ್ಲದೆ, 981 ಫೇಲೆಸ್ತೀನ್ ಮಕ್ಕಳನ್ನು ಇಸ್ರೇಲ್ ಪಡೆಗಳು ಅಥವಾ ಫೆಲೆಸ್ತೀನ್ ಪ್ರಾಧಿಕಾರದ ಭದ್ರತಾ ಪಡೆಗಳು ಬಂಧಿಸಿವೆ. ಇಸ್ರೇಲ್ ಬಂಧನದಲ್ಲಿರುವಾಗ ದೈಹಿಕ ಹಿಂಸೆ ಮತ್ತು ದುರ್ವರ್ತನೆಗೊಳಗಾದ 66 ಫೆಲೆಸ್ತೀನ್ ಮಕ್ಕಳ ಹೇಳಿಕೆಗಳನ್ನು ವಿಶ್ವಸಂಸ್ಥೆ ದಾಖಲಿಸಿಕೊಂಡಿದೆ. ಇಸ್ರೇಲ್ ಕಸ್ಟಡಿಯಲ್ಲಿ ಒಬ್ಬ ಫೆಲೆಸ್ತೀನ್ ಬಾಲಕ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತೀವ್ರ ಅಪೌಷ್ಟಿಕತೆ ಮತ್ತು ಅಸಮರ್ಪಕ ವೈದ್ಯಕೀಯ ಆರೈಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ನಡೆದ 828 ದಾಳಿಗಳನ್ನು ವರದಿ ದೃಢಪಡಿಸಿದ್ದು, ಈ ಪೈಕಿ 773 ದಾಳಿಗಳನ್ನು ಇಸ್ರೇಲಿ ಸಶಸ್ತ್ರ ಮತ್ತು ಭದ್ರತಾ ಪಡೆಗಳು ನಡೆಸಿವೆ. ಮಾನವೀಯ ನೆರವು ನಿರಾಕರಣೆಯ 5,946 ಘಟನೆಗಳನ್ನೂ ಇದು ದಾಖಲಿಸಿದ್ದು, ಇದರಲ್ಲಿ 5,716 ಪ್ರಕರಣಗಳು ಇಸ್ರೇಲಿ ಸಶಸ್ತ್ರ ಮತ್ತು ಭದ್ರತಾ ಪಡೆಗಳಿಂದಲೇ ನಡೆದಿವೆ.

ಗಾಝಾಕ್ಕೆ ತೆರಳಬೇಕಿದ್ದ 1,684 ಮಾನವೀಯ ನೆರವಿನ ಕಾರ್ಯಾಚರಣೆಗಳನ್ನು ಇಸ್ರೇಲಿ ಅಧಿಕಾರಿಗಳು ನಿರಾಕರಿಸಿದ್ದಾರೆ ಅಥವಾ ತಡೆದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಜೊತೆಗೆ, 2025ರ ಮಾರ್ಚ್ ಮತ್ತು ಮೇ ತಿಂಗಳ ನಡುವೆ 11 ವಾರಗಳ ಕಾಲ ಈ ಪ್ರದೇಶಕ್ಕೆ ಮಾನವೀಯ ನೆರವು ಮತ್ತು ವಾಣಿಜ್ಯ ಪೂರೈಕೆ ಪ್ರವೇಶಿಸದಂತೆ ಇಸ್ರೇಲ್ ನಿರ್ಬಂಧಿಸಿದೆ ಎಂದು ಉಲ್ಲೇಖಿಸಿದೆ. ಈ ನಿರ್ಬಂಧಗಳಿಂದಾಗಿ ಆಹಾರ ಅಭದ್ರತೆಯು ಮತ್ತಷ್ಟು ಹದಗೆಟ್ಟಿದೆ ಎಂದು ವರದಿ ಹೇಳಿದೆ. ಅಪೌಷ್ಟಿಕತೆಗೆ ಸಂಬಂಧಿಸಿದ 113 ಮಕ್ಕಳ ಸಾವುಗಳನ್ನು ವರದಿ ಮಾಡಿದ್ದು, 2025ರ ಆಗಸ್ಟ್‌ನಲ್ಲಿ ಗಾಝಾದಲ್ಲಿ ಬರಗಾಲವನ್ನು ಘೋಷಿಸಲಾಗಿದೆ ಎಂದು ತಿಳಿಸಿದೆ.

ಇತರ ಉಲ್ಲಂಘನೆಗಳ ಪೈಕಿ, ಇಸ್ರೇಲಿ ಸಶಸ್ತ್ರ ಮತ್ತು ಭದ್ರತಾ ಪಡೆಗಳು ಇಬ್ಬರು ಫೆಲೆಸ್ತೀನ್ ಮಕ್ಕಳನ್ನು ಮಾನವ ಗುರಾಣಿಗಳಾಗಿ ಬಳಸಿಕೊಂಡಿರುವುದನ್ನು ವಿಶ್ವಸಂಸ್ಥೆ ದೃಢಪಡಿಸಿದೆ. ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನ್ ಮಕ್ಕಳ ಮೇಲಿನ ಸಂಘರ್ಷ-ಸಂಬಂಧಿತ ಲೈಂಗಿಕ ದೌರ್ಜನ್ಯದ ಅನೇಕ ಘಟನೆಗಳನ್ನು ದಾಖಲಿಸಿದೆ.

ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ವನೆಸ್ಸಾ ಫ್ರೇಜಿಯರ್ ಅವರು, 2025ನೇ ವರ್ಷವನ್ನು “ನಿಗಾ ವಹಿಸಲು ಆರಂಭಿಸಿದಾಗಿನಿಂದ, ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ” ಎಂದು ಬಣ್ಣಿಸಿದ್ದಾರೆ.

“ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರಗಳೇ ಅವರ ಸಂಕಟಕ್ಕೆ ಕಾರಣವಾದಾಗ, ಅದು ಅಂತರರಾಷ್ಟ್ರೀಯ ಕಾನೂನಿನ ಮೇಲಿನ ಗೌರವವು ತೀವ್ರವಾಗಿ ಕ್ಷೀಣಿಸುತ್ತಿರುವುದರ ಸಂಕೇತವಾಗಿದೆ,” ಎಂದು ಫ್ರೇಜಿಯರ್ ಹೇಳಿದ್ದಾರೆ.

ನೆಲಬಾಂಬ್‌ಗಳು ಮತ್ತು ಯುದ್ಧದ ಸ್ಫೋಟಕಗಳ ಅವಶೇಷಗಳಿಂದಾಗುವ ವಿನಾಶಕಾರಿ ಪರಿಣಾಮಗಳನ್ನು ವರದಿ ಎತ್ತಿ ತೋರಿಸಿದೆ. ಸಂಘರ್ಷಗಳು ಮುಗಿದ ಬಹಳ ಸಮಯದ ನಂತರವೂ ಮಕ್ಕಳು ಇಂತಹ ಶಸ್ತ್ರಾಸ್ತ್ರಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ. ಇದರಿಂದ ಬದುಕುಳಿದವರು ಆಜೀವ ಅಂಗವೈಕಲ್ಯ, ಆಘಾತ ಹಾಗೂ ಶಿಕ್ಷಣ ಮತ್ತು ಪುನರ್ವಸತಿಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.

ಸಂಘರ್ಷದಲ್ಲಿ ಭಾಗಿಯಾದ ಗುಂಪುಗಳೊಂದಿಗೆ ನೈಜ ಅಥವಾ ಆಪಾದಿತ ಸಂಪರ್ಕ ಹೊಂದಿದ ಕಾರಣಕ್ಕಾಗಿ 2025ರಲ್ಲಿ ಒಟ್ಟು 1,667 ಮಕ್ಕಳನ್ನು ಬಂಧಿಸಲಾಗಿದೆ. ಇಂತಹ ಮಕ್ಕಳನ್ನು ಪ್ರಾಥಮಿಕವಾಗಿ ಸಂತ್ರಸ್ತರೆಂದು ಪರಿಗಣಿಸಬೇಕು ಮತ್ತು ಬಂಧನವನ್ನು ಅಂತಿಮ ಅಸ್ತ್ರವಾಗಿ ಮಾತ್ರ ಬಳಸಬೇಕು ಎಂದು ವಿಶ್ವಸಂಸ್ಥೆ ಒತ್ತಿ ಹೇಳಿದೆ.

ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ನಿಯಮಾವಳಿಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಮಾತನಾಡಿದ ಫ್ರೇಜಿಯರ್, ಅಂತರರಾಷ್ಟ್ರೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಕಾನೂನನ್ನು ಎತ್ತಿಹಿಡಿಯುವಂತೆ ಸರ್ಕಾರಗಳು ಮತ್ತು ಸಶಸ್ತ್ರ ಗುಂಪುಗಳಿಗೆ ಕರೆ ನೀಡಿದರು.

“ಮಕ್ಕಳ ರಕ್ಷಣೆ ಒಂದು ಆಕಾಂಕ್ಷೆಯಲ್ಲ, ಅದು ನಮ್ಮ ಕರ್ತವ್ಯ,” ಎಂದು ಅವರು ಹೇಳಿದ್ದಾರೆ.