ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಟಿಕೆಟ್, ಬೆಂಗರೆ ಶಾಲೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿಗೆ ಎಸ್ ಐಓ ಮನವಿ

0
543

ಸನ್ಮಾರ್ಗ ವಾರ್ತೆ

ಮಂಗಳೂರು: ವಿದ್ಯಾರ್ಥಿಗಳಿಗೆ ಖಾಸಗಿ ಬಸ್ ಗಳಲ್ಲಿ ರಿಯಾಯಿತಿ ಟಿಕೆಟ್ ದರವನ್ನು ನೀಡಬೇಕೆಂದು ಹಾಗೂ ಬೆಂಗರೆ ಪ್ರದೇಶ ಸರಕಾರಿ ಪ್ರಾಥಮಿಕ ಶಾಲೆಗೆ ಸೂಕ್ತವಾದ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಇಂದು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಕೋವಿಡ್-19 ಸೋಂಕಿನ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಶಾಲಾ ಕಾಲೇಜಿನ ತರಗತಿಗಳು ಪುನಃ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಎಲ್ಲಾ ರೀತಿಯ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನೇ ಬಳಸಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೇಲ್ ಬೆಲೆ ಏರಿಕೆಯಾದ್ದರಿಂದ ಎಲ್ಲಾ ಖಾಸಗಿ ಬಸ್ ಪ್ರಯಾಣ ದರ ಕೂಡ ವಿಪರೀತ ಏರಿಕೆಯಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿದೆ ಅದಕ್ಕಾಗಿ ಖಾಸಗಿ ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರವನ್ನು ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಅದೇ ರೀತಿ ಮಂಗಳೂರಿನ ಬೆಂಗ್ರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಪ್ರಾಥಮಿಕ ಶಾಲೆಯು ಸೂಕ್ತ ಸೌಲಭ್ಯಗಳ ಕೊರತೆಯಿಂದ ಶಿಥಿಲಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಶಾಲೆಯು 18 ಕೊಠಡಿಗಳನ್ನು ಹೊಂದಿದ್ದು, ಅದರಲ್ಲಿ ಎಲ್ಲಾ ಮೇಲ್ಛಾವಣಿಗಳು ಸೋರುತ್ತಿದ್ದು, ಶಾಲೆಯಲ್ಲಿ ಬೆಂಚ್ ಹಾಗೂ ಮೇಜುಗಳ ಕೊರತೆಯೂ ಎದ್ದು ಕಾಣುತ್ತಿದೆ. ಶೌಚಾಲಯಗಳು ಕೂಡ ಬಳಸಲಾಗದಂತಹ ಸ್ಥಿತಿಯಲ್ಲಿದೆ. ತರಗತಿಗಳು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವುದರಿಂದ ಮೂಲ ಸೌಕರ್ಯಗಳ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆಯು ಹಿಂದುಳಿದ ವಿದ್ಯಾರ್ಥಿಗಳಲ್ಲಿ ಅತೀವ ಸಂಕಷ್ಟವನ್ನುಂಟು ಮಾಡಬಹುದು. ಆದ್ದರಿಂದ ಸರಕಾರಿ ಪ್ರಾಥಮಿಕ ಶಾಲೆಗೆ ಸೂಕ್ತವಾದ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಸ್ ಐ ಓ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ರಿಝ್ವಾನ್ ಅಹ್ಮದ್ , ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರು, ಸದಸ್ಯರಾದ ರಾಝಿಕ್ ಬೆಂಗ್ರೆ, ಅಝೀಝ್ ಬೆಂಗ್ರೆ, ಅಯಾನ್ ಕುದ್ರೋಳಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ದರ: ಎಸ್ ಐ ಓ ಬೇಡಿಕೆಗಳು
1. ಸಿಟಿ ಬಸ್ ಗಳಲ್ಲಿ ಸ್ವೀಕರಿಸಲಾಗುವ ಚಲೋ ಕಾರ್ಡ್’ನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸನ್ನು ಶೀಘ್ರವಾಗಿ ಆರಂಭಿಸುವುದು.
2. ವಿದ್ಯಾರ್ಥಿ ಪಾಸ್ ಆರಂಭವಾಗುವ ತನಕ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ದರದಲ್ಲಿ ಶೇ 50% ರಿಯಾಯಿತಿಯನ್ನು ನೀಡಬೇಕು.
3. ಚಲೋ ಕಾರ್ಡನ್ನು ಎಲ್ಲಾ ಸಿಟಿಬಸ್ ಗಳಲ್ಲಿ ಸ್ವೀಕರಿಸುವುದು. ಇಲ್ಲವೇ ಸಾರ್ವತ್ರಿಕ ಪಾಸ್’ವೊಂದನ್ನು ನೀಡಿ ಎಲ್ಲ ಕಡೆ ಅನ್ವಯವಾಗುವಂತೆ ಕ್ರಮ ವಹಿಸುವುದು.
4. ವಿದ್ಯಾರ್ಥಿ ರಿಯಾಯಿತಿ ಕಾರ್ಡ್ ನಲ್ಲಿ ಮಾಸಿಕ ಪಾವತಿ ಮಿತಿಯಲ್ಲಿರಬೇಕು.
5..ಜಿಲ್ಲಾಡಳಿತವು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಬಸ್ಸಿ‌ನ ವ್ಯವಸ್ಥೆ ಕಲ್ಪಿಸಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಸೇವೆ ನೀಡಬೇಕು.