ಕಾಲದ ವೇಗ, ಇಸ್ಲಾಮೀ ಆಂದೋಲನಗಳಿಗೂ ಅನಿವಾರ್ಯವಾಗಿದೆ; ಸಯ್ಯದ್ ಸಾದತುಲ್ಲಾ ಹುಸೈನಿ

0
228

ಸನ್ಮಾರ್ಗ ವಾರ್ತೆ

[ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಸಯ್ಯದ್ ಸಾದತುಲ್ಲಾ ಹುಸೈನಿಯವರೊಂದಿಗೆ ಜ.ಇ.  ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕೇಂದ್ರ ಸಲಹಾ ಸಮಿತಿ ಸದಸ್ಯೆ ರಹ್ಮತುನ್ನಿಸಾ ನಡೆಸಿದ ಮಾತುಕತೆಯ ಮೊದಲ ಭಾಗ]

ಕನ್ನಡಕ್ಕೆ: ಎ.ಎಸ್. ಉಪ್ಪಿನಂಗಡಿ

ನೂತನ ಕಾರ್ಯಾವಧಿಗೆ ಪ್ರವೇಶಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುಂದಿನ ನಾಲ್ಕು ವರ್ಷಗಳ ಧೋರಣೆ ಮತ್ತು ಕಾರ್ಯಕ್ರಮಗಳ  ಕುರಿತು ಹಾಗೂ ಆಂದೋಲನ ಆದ್ಯತೆ ನೀಡಲು ಬಯಸುವ ವಿಷಯಗಳ ಬಗ್ಗೆ ತಿಳಿದು ಕೊಳ್ಳಬೇಕಾಗಿದೆ. ಅದಕ್ಕೂ ಮುನ್ನ, ಜ.ಇ.  ಹಿಂದ್ ರಾಷ್ಟ್ರೀಯ ಯ ಅಧ್ಯಕ್ಷ (ಅಮೀರೆ ಜಮಾಅತ್) ಎಂಬ ನೆಲೆಯಲ್ಲಿ ನಿಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಂದೋಲನ ಬಂಧುಗಳು  ಹಾಗೂ ಸಮಾಜ ಬಾಂಧವರು ಬಯಸುತ್ತಿದ್ದಾರೆ.

ನಾಯಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮೂಲಕ ಈ ಆಂದೋಲನ ಮುಂದಿರಿಸುವ ಧೋರಣೆ ಮತ್ತು ಕಾರ್ಯಕ್ರಮಗಳನ್ನು ಇನ್ನೂ  ಹೆಚ್ಚು ಅರ್ಥ ಮಾಡಿಕೊಳ್ಳಲು ಪ್ರಯೋಜನಕಾರಿಯಾದೀತು. ಆದ್ದರಿಂದ, ಈ ಮಾತುಕತೆಯನ್ನು ನಿಮ್ಮ ವೈಯಕ್ತಿಕ ಬದುಕಿನ ಮುಖಾಂತರ ಆರಂಭಿಸೋಣ.

? ಮೊದಲನೆಯದಾಗಿ, ನಿಮ್ಮ ಮಾತಾ-ಪಿತರ ಬಗ್ಗೆ ಹಾಗೂ ನಿಮ್ಮ ಬಾಲ್ಯ ಕಾಲದ ಬಗ್ಗೆ ವಿವರಿಸಬಹುದೇ?

1973 ಜೂನ್ 7ರಂದು ತೆಲಂಗಾಣದ ಮಕ್ತಲ್ ಎಂಬಲ್ಲಿ ನನ್ನ ಜನನವಾಯಿತು. ನನ್ನ ತಂದೆ ಹಾಗೂ ಪೂರ್ವಜರು ಕರ್ನಾಟಕದವರಾಗಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣವನ್ನು ಬೇರ್ಪಡಿಸುವ ಕೃಷ್ಣ ನದಿಯ ಒಂದು ತೀರದಲ್ಲಿ ತಂದೆ ವಾಸವಾಗಿದ್ದರೆ,  ನದಿಯ ಇನ್ನೊಂದು ತೀರದ ತೆಲಂಗಾಣದಲ್ಲಿ ತಾಯಿಯ ಪೂರ್ವಜರು ವಾಸವಾಗಿದ್ದರು.

14-15ನೇ ಶತಮಾನಗಳಲ್ಲಿ ಬದುಕಿದ ಹನಫೀ ಮದ್‌ರೂರೀ ವಿಭಾಗದ ವಿದ್ವಾಂಸರೂ ಸೂಫಿವರ್ಯರೂ ಹಾಗೂ ದಕ್ಷಿಣ ಭಾರತದ  ಪ್ರಮುಖ ಧರ್ಮ ಪ್ರಚಾರಕರೂ ಆದ ಗುಲ್ಬರ್ಗಾದ ಖ್ವಾಜಾ ಬಂದೇ ನವಾಝ್ (ಮುಹಮ್ಮದ್ ಬಿನ್ ಯೂಸುಫ್ ಅಲ್ ಹುಸೈನಿ,  ಹಿ. 1321-1422) ನನ್ನ ತಂದೆಯ ಪೂರ್ವಜರಾಗಿದ್ದಾರೆ. ಉರ್ದು ಭಾಷೆಯ ಜನಕರಲೋರ್ವರಾಗಿ ಅವರು ಗುರುತಿಸಲ್ಪಡುತ್ತಾರೆ.  ಉರ್ದುವಿನಲ್ಲಿ ಮೊಟ್ಟಮೊದಲಿಗೆ ಪ್ರಕಟಗೊಂಡ ಪುಸ್ತಕ ಕೂಡಾ ಅವರದ್ದಾಗಿದೆ.

ನನ್ನ ತಂದೆ ಓರ್ವ ಸಿವಿಲ್ ಇಂಜಿನಿಯರ್ ಆಗಿದ್ದರು. ತಂದೆಯ ಉದ್ಯೋಗದ ಕಾರಣದಿಂದ ನಾವು ಕೂಡಾ ಬೇರೆ ಬೇರೆ ಕಡೆಗಳಲ್ಲಿ  ಬೆಳೆದೆವು. ನನ್ನ ಶಾಲಾ ವಿದ್ಯಾಭ್ಯಾಸ ಮಹಾರಾಷ್ಟ್ರದಲ್ಲಿ ನಡೆಯಿತು. ನನ್ನ ತಂದೆ ನಮಗೆ ಒಂದು ಉತ್ತಮ ಶಿಕ್ಷಕರೂ ಆಗಿದ್ದರು. ಅವರು ಯಾವುದಾದರೊಂದು ಸಂಘಟನೆಯಲ್ಲಿ ಗುರುತಿಸಿಕೊಳ್ಳದಿದ್ದರೂ ತನ್ನ ಸುತ್ತಮುತ್ತಲಿನವರಿಗೆ ಇಸ್ಲಾಮಿನ ಶಿಕ್ಷಣವನ್ನು ಕಲಿಸಿ ಕೊಡುವುದರಲ್ಲಿ ಹಾಗೂ ಸಂದೇಶ ಪ್ರಚಾರ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಪ್ರಭಾತ ನಮಾಝಿನ ನಂತರ ಇತರರಿಗೆ  ಉದ್ಭೋಧನಾ ತರಗತಿಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ನನ್ನ ತಾಯಿ ಕೂಡಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

? ನಿಮ್ಮ ಕುಟುಂಬ?

2004ರಲ್ಲಿ ನಾನು ವಿವಾಹಿತನಾದೆ. ಪತ್ನಿ ಡಾ| ನಾಝ್ ನೀನ್ ಸಾದತ್. ವಿವಾಹವಾದ ಕೂಡಲೇ ಅವರು ಎನ್‌ವಯನ್ಮೆಂಟ್ ಸಯನ್ಸ್ ನಲ್ಲಿ ಪಿಹೆಚ್‌ಡಿ ಪೂರ್ತಿಗೊಳಿಸಿದರು. ನಂತರ ಇಂಜಿನಿಯರಿಂಗ್ ಕಾಲೇಜಿ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದರು. ನನಗೆ ಇಬ್ಬರು  ಮಕ್ಕಳಿದ್ದಾರೆ. ಇಬ್ಬರೂ ಗಂಡು ಮಕ್ಕಳು. ದೊಡ್ಡವನು 12ನೇ ತರಗತಿ ಕಲಿಯುತ್ತಿದ್ದಾನೆ. ಬಿಬಿಎಯಲ್ಲಿ ಕಲಿಕೆಯನ್ನು ಮುಂದುವರಿಸಲು  ಬಯಸುತ್ತಿದ್ದಾನೆ. ಎರಡನೇಯವನು 5ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

? ಇಸ್ಲಾಮೀ ಸಂಸ್ಕೃತಿ ಹಾಗೂ ವಿದ್ವತ್ತಿನ ಸಮೃದ್ಧ ಪರಂಪರೆಯ ಕೌಟುಂಬಿಕ ಹಿನ್ನೆಲೆಯಿಂದ ಬಂದವರು ನೀವು. ಖಂಡಿತವಾಗಿಯೂ  ಅದು ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿರಬಹುದು. ನಿಮ್ಮ ಶಾಲಾ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿ ಕೊಡಬಹುದೇ?

ನನ್ನ ಪ್ರಾಥಮಿಕ ಶಾಲಾ ಶಿಕ್ಷಣ ಮಹಾರಾಷ್ಟ್ರದ ಯವಾತ್ಮಲ್ ಜಿಲ್ಲೆಯ ಇಶಾಪೂರ್ ಎಂಬ ಸಣ್ಣ ಗ್ರಾಮದಲ್ಲಿ ನಡೆಯಿತು. ಅದೊಂದು  ಉರ್ದು ಮೀಡಿಯಂ ಶಾಲೆಯಾಗಿತ್ತು. ಶಾಲೆಯ ಸಮೀಪದಲ್ಲೇ ತಂದೆಯ ಇಂಜಿನಿಯರ‍್ಸ್ ಕ್ವಾಟರ್ಸ್ ಕ್ಯಾಂಪ್ ಕೂಡಾ ಇತ್ತು. ನನ್ನ  ಕಿರಿಯ-ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸ ಅಲ್ಲೇ ನಡೆಯಿತು. ಆದರೆ, ಪರಿಸರದಲ್ಲಿರುವ ಶಾಲೆಗಳೆಲ್ಲ ಮರಾಠಿ ಮಾಧ್ಯಮ ಶಾಲೆಗಳಾಗಿರುವುದರಿಂದ ಹೈಸ್ಕೂಲ್ ಶಿಕ್ಷಣವನ್ನು 30 ಕಿ.ಮೀ. ದೂರದ ಕಲಂದೂರಿನ ಶಾಲೆಯಲ್ಲಿ ಮುಂದುವರಿಸಬೇಕಾಯಿತು. ಪ್ರತಿದಿನ ಬಸ್ಸಿನಲ್ಲಿ  ಹೋಗಿ ಬರುತ್ತಿದ್ದೆ.

ಅದರ ನಂತರ ನನ್ನ ತಂದೆ ನಾಂದೇಡಿಗೆ ವರ್ಗಾವಣೆಯಾದರು. ಅದು ಒಂದು ದೊಡ್ಡ ನಗರ. ಅಲ್ಲಿ ನನ್ನ 11, 12 ತರಗತಿಗಳ ಸಹಿತ  ಇಂಜಿನಿಯರಿಂಗ್ ಬಿರುದು ಪೂರ್ಣಗೊಂಡಿತು. ನನಗೆ ಜಮಾಅತ್‌ನ ಪರಿಚಯವಾದದ್ದು ನಾಂದೇಡ್‌ನಲ್ಲಿ. ಅಲ್ಲಿ ಜಮಾಅತ್‌ನ  ವತಿಯಿಂದ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಅದರಲ್ಲಿ ನಾನೂ ಭಾಗವಹಿಸುತ್ತಿದ್ದೆ. ಅದುವೇ ನನಗೆ  ಜಮಾಅತ್‌ನೊಂದಿಗಿನ ಪ್ರಥಮ ಪರಿಚಯ. ಅದಕ್ಕೂ ಮುಂಚೆ ನಮ್ಮ ಮನೆಯಲ್ಲಿ ಜಮಾಅತ್ ಸಾಹಿತ್ಯಗಳಿದ್ದುವು.

? ಇಂಜಿನಿಯರಿಂಗ್ ಎಂಬುದು ಈಗ ತಾವು ನಿರ್ವಹಿಸುತ್ತಿರುವ ಕಾರ್ಯಚಟುವಟಿಕೆಗಳಿಗಿಂತ ತೀರಾ ಭಿನ್ನವಾದ ಒಂದು  ಕ್ಷೇತ್ರವಾಗಿದೆ. ನೀವು ಯಾವಾಗಿನಿಂದ ನಿಮ್ಮ ಕಾರ್ಯಕ್ಷೇತ್ರವನ್ನು ಇಸ್ಲಾಮೀ ಆಂದೋಲನದ ಚಟುವಟಿಕೆಗಳಿಗೆ ಹಾಗೂ ಬರವಣಿಗೆ ಮತ್ತು ಅಧ್ಯಯನಗಳಿಗಾಗಿ ಬದಲಾಯಿಸಿಕೊಂಡಿರಿ? ಆ ಬದಲಾವಣೆಯ ಪರ್ವವನ್ನು ವಿವರಿಸಬಹುದಾ?

ನಾನು ಎಸ್.ಐ.ಓ.ನ ಭಾಗವಾಗುವುದರೊಂದಿಗೆ ನನ್ನ ಬದಲಾವಣೆಯ ಪರ್ವ ಆರಂಭಗೊಳ್ಳುತ್ತದೆ. 11ನೇ ತರಗತಿಯಲ್ಲಿರುವಾಗ ಎಸ್.ಐ.ಓ.ನಲ್ಲಿ ಸೇರಿಕೊಂಡೆ. ಬಹಳ ಬೇಗನೇ ರಾಜ್ಯಮಟ್ಟದ ಹೊಣೆಗಾರಿಕೆಯನ್ನು ನನಗೆ ವಹಿಸಿಕೊಡಲಾಯಿತು. ಆಗ ನನಗೆ 17 ವರ್ಷ ವಯಸ್ಸು. ಇಂಜಿನಿಯರಿಂಗ್ ಕಲಿಕೆಯ ಪ್ರಥಮ ವರ್ಷ. ಅದು ಪೂರ್ಣಗೊಳ್ಳುವುದರೊಂದಿಗೆ ನನ್ನನ್ನು ಮಹಾರಾಷ್ಟ್ರದ  ರಾಜ್ಯಾಧ್ಯಕ್ಷನಾಗಿ ಮತ್ತು ಕೇಂದ್ರ ಸಲಹಾ ಸಮಿತಿ ಸದಸ್ಯನಾಗಿ ಆಯ್ಕೆ ಮಾಡಲಾಯಿತು. ಪ್ರಸ್ತುತ ಅವಧಿ ಮುಗಿಯುವುದರೊಂದಿಗೆ  ಎಸ್.ಐ.ಓ.ನ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆ ಮಾಡಲಾಯಿತು. ಎಸ್.ಐ.ಓ.ನಿಂದ ನಿರ್ಗಮಿಸಿದ ಬಳಿಕವಷ್ಟೇ ನನ್ನ ಇಂಜಿನಿಯರಿಂಗ್  ಕೆರಿಯರ್ ಆರಂಭಿಸಲು ಸಾಧ್ಯವಾಯಿತು. ಹೈದರಾಬಾದಿನಲ್ಲಿ ಒಂದು ಕಂಪೆನಿಯನ್ನು ಸ್ಥಾಪಿಸಿ 2015ರ ವರೆಗೆ ನಾನು ಅದರಲ್ಲಿ  ಮುಂದುವರಿದೆ.

? 2015ರಲ್ಲಿ ನೀವು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿರಿ. ನಂತರ 2019ರಲ್ಲೂ ಇದೀಗ  2023 ರಲ್ಲಿಯೂ ಜಮಾಅತ್‌ನ ಅಮೀರ್ ಆಗಿ ರಾಷ್ಟ್ರೀಯ ಅಧ್ಯಕ್ಷರಾಗಿ) ಆಯ್ಕೆಯಾಗಿರುತ್ತೀರಿ. ನಿಮ್ಮ ಅಧಿಕೃತ ಶಿಕ್ಷಣ ಇಸ್ಲಾಮೀ  ಸಂಸ್ಥೆಗಳಿಂದ ಪಡೆದುದಲ್ಲ ಎಂದು ಮೇಲಿನ ವಿವರಣೆಗಳಿಂದ ಮನವರಿಕೆಯಾಯಿತು. ಆದರೂ ಕೂಡಾ ನಿಮ್ಮ ಭಾಷಣ ಮತ್ತು  ಬರಹಗಳು ಆಳವಾದ ಇಸ್ಲಾಮೀ ಜ್ಞಾನದಿಂದಲೂ ಚಿಂತನೆಗಳಿಂದಲೂ ಕೂಡಿರಲು ಕಾರಣವೇನು?

ನನ್ನ ತಂದೆ ನಮ್ಮ ಇಸ್ಲಾಮೀ ಜ್ಞಾನದ ಬಗ್ಗೆ ಬಾಲ್ಯದಿಂದಲೇ
ವಿಶೇಷ ಗಮನವನ್ನುಹರಿಸುತ್ತಿದ್ದರು. ಅದಕ್ಕಾಗಿ ಅವರು ಮೂರು ವಿಷಯಗಳನ್ನು ಮುಖ್ಯವಾಗಿ ಅವಲಂಬಿಸುತ್ತಿದ್ದರು.
1. ಮೂಲಭೂತ ಧಾರ್ಮಿಕ ವಿಷಯಗಳನ್ನು ಕಲಿಸುವುದರಲ್ಲಿ ಅವರೇ ನಮ್ಮ ಗುರುವಾಗಿದ್ದರು.
2. ಓರ್ವ ಇಸ್ಲಾಮೀ ವಿದ್ವಾಂಸರನ್ನು ನಮಗಾಗಿ ನೇಮಕಗೊಳಿಸಿದ್ದರು. ಅವರು ಪ್ರತಿದಿನ ನಮ್ಮ ಮನೆಗೆ ಬರುತ್ತಿದ್ದರು. ಕುರ್‌ಆನಿನ ಅನುವಾದವನ್ನು ಸಂಪೂರ್ಣವಾಗಿ ಅವರಿಂದಲೇ ನಾವು ಕಲಿತೆವು. ನಾನು ಏಳನೇ ತರಗತಿಯಲ್ಲಿರುವಾಗಲೇ ಅದನ್ನು ಸಂಪೂರ್ಣಗೊಳಿಸಿದ್ದೆ.
3. ತಂದೆಯವರು ನಮಗಾಗಿ ಸಾಹಿತ್ಯಗಳನ್ನು ಮತ್ತು ನಿಯತಕಾಲಿಕಗಳನ್ನು ತರಿಸುತ್ತಿದ್ದರು. ಅದು ಬಾಲ್ಯದಿಂದಲೇ ನನ್ನಲ್ಲಿ ಓದುವ  ಹವ್ಯಾಸವನ್ನು ಬೆಳೆಸಲು ಸಹಕಾರಿಯಾಯಿತು.

ಎಸ್.ಐ.ಓ.ನಲ್ಲಿ ಸೇರಿಕೊಂಡ ನಂತರ ಅರಬಿ ಭಾಷೆ ಯನ್ನು ಅಧಿಕೃತವಾಗಿ ಕಲಿಯಲು ಪ್ರಯತ್ನಿಸಿದೆ. ಅದು ನನಗೆ ಅರಬಿ ಭಾಷೆಯಲ್ಲಿರುವ ಹಲವಾರು ಇಸ್ಲಾಮಿಕ್ ಕ್ಲಾಸಿಕಲ್ ಸಾಹಿತ್ಯಗಳನ್ನು ಹಾಗೂ ಹದೀಸ್ ಗ್ರಂಥಗಳನ್ನು ಓದಲು ನೆರವಾಯಿತು. ಆ ಕಾಲದಲ್ಲಿ  ಇಮಾಮ್ ಗಝ್ಝಾಲಿ, ಶಾ ವಲಿಯುಲ್ಲಾಹ್, ಇಬ್ನು ಖಲ್‌ದೂನ್ ಮುಂತಾದವರನ್ನು ಓದಲು ನಾನು ಸಮಯವನ್ನು ಮೀಸಲಿಡುತ್ತಿದ್ದೆ.

? ಅಂದರೆ, ನೀವು ಇದಕ್ಕಾಗಿ ಯಾವುದೇ ಔಪಚಾರಿಕ ಶಿಕ್ಷಣ ರೀತಿಯನ್ನು ಅವಲಂಬಿಸಿಲ್ಲ?

ಇಲ್ಲ, ಅಧ್ಯಯನದ ಮುಖಾಂತರ ನಾನು ಈ ಶಿಕ್ಷಣಗಳನ್ನು ಪಡೆದಿರುತ್ತೇನೆ.

? ನಿಮ್ಮ ಲೇಖನ ಮತ್ತು ಭಾಷಣಗಳನ್ನು ಗಮನಿಸಿದರೆ ನೀವೋರ್ವ ವಿಶಾಲ ಓದುಗ ಎಂದು ತಿಳಿಯುತ್ತದೆ. ಅಂದರೆ, ಇಸ್ಲಾಮೀ  ಸಾಹಿತ್ಯಗಳನ್ನು ಮಾತ್ರವಲ್ಲ, ಇನ್ನಿತರ ಶೈಕ್ಷಣಿಕ ಮೂಲಗಳ ಸಾಹಿತ್ಯಗಳನ್ನೂ ತಾವು ಓದುತ್ತೀರಿ. ನಿಮ್ಮ ಓದುವ ಹವ್ಯಾಸದ ಕುರಿತು ಸ್ವಲ್ಪ ವಿವರಿಸಬಹುದೇ?

ಹೊಸ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಗಳಿಸುವುದು ನನ್ನ ಒಂದು ಪ್ಯಾಷನ್ (Passion) ಆಗಿತ್ತು. ಇಂಜಿನಿಯರಿಂಗ್ ಕಲಿಯುತ್ತಿರುವ ಸಮಯದಲ್ಲೇ ಸೋಷಿಯಲ್ ಸಾಯನ್ಸ್, ಸೈಕಾಲಜಿ, ಎಕನಾಮಿಕ್ಸ್ ಮುಂತಾದ ವಿಷಯಗಳಲ್ಲಿ ಸಾಮಾನ್ಯ ಜ್ಞಾನ ಗಳಿಸುವುದಕ್ಕಾಗಿ ಉದ್ದೇಶ ಪೂರ್ವಕವಾಗಿ ಪ್ರಯತ್ನಿಸುತ್ತಿದ್ದೆ. ಅರ್ಥಶಾಸ್ತ್ರವನ್ನು ಸ್ವಲ್ಪ ಹೆಚ್ಚಾಗಿಯೇ ಓದಿ ತಿಳಿದುಕೊಂಡಿದ್ದೆ. ನಾನು ಬಹಳ ಅಪರೂಪವಾಗಿಯೇ ಇಂಜಿನಿಯರಿಂಗ್ ಪುಸ್ತಕಗಳನ್ನು ತೆಗೆದುಕೊಳ್ಳುತ್ತಿದ್ದೇನೆಂದು ಒಮ್ಮೆ ಕಾಲೇಜು ಲೈಬ್ರೇರಿಯನ್ ಹೇಳಿದ್ದು ನೆನಪಾಗುತ್ತಿದೆ.

ನನ್ನ ಶಿಕ್ಷಣ ಮುಗಿದ ಬಳಿಕವೂ ಓದುವ ಹವ್ಯಾಸ ಮುಂದುವರಿಯಿತು. ಹೊಸ ಹೊಸ ಟೆಕ್ನಾಲಜಿಗಳನ್ನು ತಿಳಿಯುವ ಪ್ರಯತ್ನಗಳನ್ನೂ  ನಾನು ಮಾಡುತ್ತಿದ್ದೆ. ಎಸ್.ಐ.ಓ. ಮತ್ತು ಜಮಾಅತ್‌ನಲ್ಲಿ ಕೆಲಸ ಮಾಡುವಾಗ ಅದಕ್ಕೆ ನನಗೆ ಪ್ರೇರಣೆ ಕೂಡಾ ಲಭಿಸುತ್ತಿತ್ತು. ಇಸ್ಲಾಮೀ  ಆಂದೋಲನಗಳ ಕಾರ್ಯಚಟುವಟಿಕೆಗಳು ಸದಾ ಸವಾಲುಗಳಿಂದ ತುಂಬಿವೆ. ಪ್ರಸಕ್ತ ಸ್ಥಿತಿಗತಿಗಳನ್ನು ಆಳವಾಗಿ ಅರಿಯಲು ಮತ್ತು ಕಲಿಯಲು ಹಾಗೂ ಅದನ್ನು ಎದುರಿಸಿಕೊಂಡು ಪರಿಹಾರಗಳನ್ನು ಕಂಡು ಹುಡುಕಲು ಇಂತಹ ಅಧ್ಯಯನಗಳ ತೀವ್ರ ಅಗತ್ಯವಿದೆಯೆಂದು  ನಾನು ಮನಗಂಡಿದ್ದೇನೆ. ಯಾವಾಗಲೂ ಅಧಿಕೃತ ಮೂಲಗಳಿಂದಲೇ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಲು ಪ್ರಯತ್ನಿಸಬೇಕು.     (ಮುಂದುವರಿಯುವುದು)