ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಮಂಗಳೂರು ಕಮಿಷನರ್ ರಿಂದ ನನಗೆ ಮಾನಸಿಕ ‌ಕಿರುಕುಳ: ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಆರೋಪ

0
313

ಸನ್ಮಾರ್ಗ ವಾರ್ತೆ

ಮಂಗಳೂರು: “ಪೊಲೀಸರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣಕ್ಕಾಗಿ ಪದೇ ಪದೇ ನನಗೆ ಕರೆ ಮಾಡುತ್ತಿದ್ದಾರೆ. ಮನೆಯ ಹತ್ತಿರ ಪೊಲೀಸರನ್ನು ಕಳುಹಿಸಿ ನನ್ನ ಹೆಂಡತಿ ಮಕ್ಕಳನ್ನು ಭಯ ಪಡಿಸುತ್ತಿದ್ದಾರೆ. ನನ್ನನ್ನು ವಿಚಾರಣೆಗಾಗಿ ಕಛೇರಿಗೆ ಬರಬೇಕೆಂದು ಆಗಾಗ್ಗೆ ಕಾಲ್ ಮಾಡಿ ನೋಟೀಸು ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ” ಎಂದು ಆರ್‌ಟಿಐ ಕಾರ್ಯಕರ್ತ ಹಾಗೂ ಕೆಆರ್ ಎಸ್ ಪಕ್ಷದ ಮುಖಂಡ ಕಬೀರ್ ಉಳ್ಳಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಗಳೂರು ನಗರದ ಪ್ರೆಸ್ ಕ್ಲಬ್‌ನಲ್ಲಿ‌ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಇದರ ಹಿಂದೆ ಪೊಲೀಸ್ ಕಮಿಷನರ್‌ರವರ ಪಾತ್ರವಿದೆ ಅನ್ನಿಸುತ್ತದೆ. ಇಂತಹ ಮಾನಸಿಕ ಹಿಂಸೆ ಈ ಹಿಂದೆ ಅನುಭವಿಸಿಲ್ಲ. ಪೊಲೀಸ್ ಆಯುಕ್ತರ ಕಚೇರಿಯ ಪೊಲೀಸರ ಮಾನಸಿಕ ಕಿರುಕುಳಕ್ಕೆ ಬೇಸತ್ತಿದ್ದೇನೆ. ನಾನು ಲೋಕಾಯುಕ್ತಕ್ಕೆ ಪೊಲೀಸರ ವಿರುದ್ಧ ದೂರು ನೀಡಿದರೆ ದೂರಿನಲ್ಲಿ ಹೆಸರಿಸಿದ ಅಧಿಕಾರಿಗಳಿಂದಲೇ ತನಿಖೆ ನಡೆಸಲು ಆದೇಶಿಸುವುದಾದರೆ ನಾವು ದೂರು ನೀಡಿ ಮಾನಸಿಕ ಹಿಂಸೆ ಅನುಭವಿಸಬೇಕೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಉಳ್ಳಾಲ ಇನ್ಸ್‌ಪೆಕ್ಟರ್ ಸಂದೀಪ್, ಎಸ್‌ಐ ಪ್ರದೀಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಮಂಗಳೂರು ಪೊಲೀಸ್ ಕಮಿಷನರ್‌ರವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಇನ್ಸ್ಪೆಕ್ಟರ್, ಎಸ್‌ಐ ವಿರುದ್ಧ ಹಣ ವಸೂಲಿ ಸೇರಿ ಹಲವು ಆರೋಪಗಳನ್ನು ಕಬೀರ್ ಮಾಡಿದ್ದರು. ಬ್ರೋಕರ್ ಮೂಲಕ ಹಣ ವಸೂಲಿ ಆರೋಪ, ಗಾಂಜಾ ಮಾಫಿಯಾ, ಮರಳು ಮಾಫಿಯಾಗಳಿಂದ ಹಣ ವಸೂಲಿ, ಹೋಟೆಲ್ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಚಿನ್ನದ ಅಂಗಡಿ ಡರೋಡೆ ಕೇಸ್‌ನಲ್ಲಿ ಜಪ್ತಿ ಮಾಡಲಾಗಿದ್ದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್‌ಪೆಕ್ಟರ್ ಸಂದೀಪ್ ಎಗರಿಸಿದ್ದಾರೆ ಎಂದು ದೂರಿನಲ್ಲಿ ಕಬೀರ್ ಉಲ್ಲೇಖಿಸಿದ್ದರು. ಅಲ್ಲದೇ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧವೂ ಆರೋಪ ಮಾಡಿದ್ದರು. ಕಮಿಷನರ್ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತರಿಗೆ ಕಬೀರ್ ಉಳ್ಳಾಲ್ ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿ ಫೆಬ್ರವರಿ 14 ರೊಳಗೆ ಉತ್ತರಿಸುವಂತೆ ಕಮಿಷನರ್‌ರಿಗೆ ನೋಟಿಸ್ ನೀಡಿದ್ದರು.

ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಪ್ರತಿನಿಧಿ ಅಲೆಕ್ಸಾಂಡರ್, ದಯಾನಂದ, ಪ್ರೇಮಾ ಕೋಟ್ಯಾನ್ ಹಾಗೂ ಇಮ್ತಿಯಾಝ್ ಉಪಸ್ಥಿತರಿದ್ದರು.