ಒಲಿಂಪಿಕ್ ಮಹಿಳೆಯರ ಗಾಲ್ಫ್: ಕೂದಲೆಳೆಯ ಅಂತರದಲ್ಲಿ ಕನ್ನಡತಿ ಅದಿತಿ ಅಶೋಕ್​ಗೆ ಸೋಲು; 4ನೇ ಸ್ಥಾನ ಪಡೆದು ತಪ್ಪಿತು ಪದಕ

0
4225

ಸನ್ಮಾರ್ಗ ವಾರ್ತೆ

ಟೋಕಿಯೋ: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಗಾಲ್ಫ್ ನಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಕನ್ನಡತಿ ಅದಿತಿ ಅಶೋಕ್ ಅಮೋಘ ಪ್ರದರ್ಶನ ನೀಡಿದರಾದರೂ ಕೂದಲೆಳೆಯ ಅಂತರದಲ್ಲಿ 4ನೇ ಸ್ಥಾನ ಪಡೆದು ಪದಕ ಕೈ ತಪ್ಪಿತು. ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದಿದ್ದಾರೆ.

ಮಹಿಳೆಯರ ವೈಯಕ್ತಿಕ ಸ್ಟ್ರೋಕ್‌ ಪ್ಲೇ ವಿಭಾಗದಲ್ಲಿ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ಶನಿವಾರ ನಡೆದ ಸುತ್ತಿನಲ್ಲಿ ಅದಿತಿ ಮೂರನೇ ಸ್ಥಾನ ಪಡೆದುಕೊಂಡರಾದರೂ ನ್ಯೂಜಿಲೆಂಡ್​ನ ಲೈಡಿಯಾ ಕೊ ಜೊತೆ ಟೈ ಆಯಿತು. ಎರಡನೇ ಸ್ಥಾನದಲ್ಲಿ ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ಅಮೆರಿಕಾ ಇತ್ತು. ಇದೇ ವೇಳೆ ಮಳೆ ಬಂದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಬಳಿಕ ನಡೆದ ಫೈನಲ್ ರೌಂಡ್ ನಲ್ಲಿ ಅದಿತಿ 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಮೊದಲ ಮೂರು ಸುತ್ತಿನ ಅಂತ್ಯಕ್ಕೆ ಪದಕ ಬೇಟೆಯಲ್ಲಿದ್ದ ಅದಿತಿ, ಶನಿವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಎರಡನೇ ಸ್ಥಾನದಲ್ಲಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಹಾಗಿದ್ದರೂ 23 ವರ್ಷದ ಬೆಂಗಳೂರು ಮೂಲದ ಅದಿತಿ, ಒಲಿಂಪಿಕ್ಸ್ ಗಾಲ್ಫ್ ಇತಿಹಾಸದಲ್ಲೇ ಭಾರತದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.