ಸನ್ಮಾರ್ಗ ವಾರ್ತೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯ ನಡುವೆ ಟೂರಿಸ್ಟ್ ಗೈಡ್ ಒಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಾಲ್ವರನ್ನು ರಕ್ಷಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ನಜ್ಕತ್ ಅಹ್ಮದ್ ಶಾ ಎಂಬ ಸ್ಥಳೀಯ ಗೈಡ್, ಬಿಜೆಪಿ ಕಾರ್ಯಕರ್ತ ಅರವಿಂದ್ ಅಗರ್ವಾಲ್ ಅವರ ಪತ್ನಿ, ಮಗಳು ಸೇರಿದಂತೆ ನಾಲ್ವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಮೂಲಕ ಪ್ರಾಣ ಉಳಿಸಿದರು.
ಗುಂಡಿನ ದಾಳಿ ಆರಂಭವಾದಾಗ ತಕ್ಷಣ ಪ್ರತಿಕ್ರಿಯಿಸಿದ ನಜ್ಕತ್, ಎಲ್ಲರಿಗೂ ನೆಲದ ಮೇಲೆ ಮಲಗಲು ಸೂಚಿಸಿದರು. ನಂತರ ಅವರು ಮಕ್ಕಳು ಹಾಗೂ ಮಹಿಳೆಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಈ ಸಮಯದಲ್ಲಿ ಅಗರ್ವಾಲ್ ಅವರ ಪತ್ನಿ ಬೇರೆ ದಿಕ್ಕಿಗೆ ಓಡಿಹೋಗಿದ್ದು, ಈ ವಿಷಯ ಗಮನಕ್ಕೆ ಬಂದ ಕೂಡಲೇ, ನಜ್ಕತ್ ಅವರನ್ನು ಹುಡುಕಿ ಪತ್ತೆಹಚ್ಚಿ ಕಾರಿನಲ್ಲಿ ಸುರಕ್ಷಿತವಾಗಿ ಕರೆದೊಯ್ದರು.
ಆದರೆ ಈ ದಾಳಿಯಲ್ಲಿ ನಜ್ಕತ್ ಅವರ ಸೋದರಸಂಬಂಧಿ ಸೈಯದ್ ಆದಿಲ್ ಹುಸೇನ್ ಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು. ಈ ದುಃಖದ ನಡುವೆಯೂ ಜನರ ಪ್ರಾಣ ಉಳಿಸಲು ಅವರು ತೋರಿಸಿದ ಧೈರ್ಯ ಸಾಮಾಜಿಕ ವಲಯದಲ್ಲಿ ಪ್ರಸಂಶೆಗೆ ಪಾತ್ರವಾಗಿದೆ.
ಈ ಕುರಿತು ಬಿಜೆಪಿ ಯುವ ನಾಯಕ ಅರವಿಂದ್ ಅಗರ್ವಾಲ್ ಪ್ರತಿಕ್ರಿಯೆ ನೀಡುತ್ತಾ, “ನಜ್ಕತ್ ನನ್ನ ಕುಟುಂಬದ ಜೀವ ಉಳಿಸಿದ್ದಾರೆ. ಗುಂಡಿನ ದಾಳಿ ಆರಂಭವಾದಾಗ ಅವರು ಸ್ವಲ್ಪವೂ ಹೆದರದೆ ನೆಲದ ಮೇಲೆ ಮಲಗಲು ಹೇಳಿದರು. ನನ್ನ ಮಗಳು ಮತ್ತು ಸ್ನೇಹಿತನ ಮಗನನ್ನು ಅವರು ಎದೆಗೆ ಬಿಗಿದುಕೊಂಡು ನೆಲದ ಮೇಲೆ ಮಲಗಿದರು. ಬಳಿಕ ಧೈರ್ಯವಾಗಿ ಒಬ್ಬೊಬ್ಬರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ನನ್ನ ಪತ್ನಿ ಕಾಣದಾದಾಗ ಅವರನ್ನೂ ಹುಡಿಕಿ ತಂದಾಗ ನಾನು ನಿಟ್ಟುಸಿರು ಬಿಟ್ಟೆ. ಇಂತಹ ಧೈರ್ಯಕ್ಕೆ ನಾವೆಲ್ಲಾದರೂ ಕೃತಜ್ಞರಾಗಬೇಕು” ಎಂದು ತಿಳಿಸಿದ್ದಾರೆ.
“ಇಲ್ಲಿ ಪ್ರವಾಸೋದ್ಯಮವೇ ನಮ್ಮ ಜೀವನದ ಆಧಾರ. ನಿನ್ನೆಯ ಘಟನೆ ನಮ್ಮ ಮನಸ್ಸಿಗೆ ನೋವು ತಂದಿದೆ” ಎಂದು ನಜ್ಕತ್ ಶಾ ಅಂಗಡಿಗಳನ್ನು ಮುಚ್ಚಿ ಶಾಂತಿಯುತವಾಗಿ ಪ್ರತಿಭಟಿಸಿರುವ ಬಗ್ಗೆ ತಿಳಿಸಿದರು.












