ವಾಹನ ಸೌಕರ್ಯವಿಲ್ಲದ್ದರಿಂದ ಆಸ್ಪತ್ರೆಯ ದಾರಿ ಮಧ್ಯೆ ಹೆತ್ತ ಆದಿವಾಸಿ ಮಹಿಳೆ

0
467

ಸನ್ಮಾರ್ಗ ವಾರ್ತೆ

ಮುರ್‍ಬಾದ್: ದೇಶದಲ್ಲಿ ಆದಿವಾಸಿಗಳ ದಯನೀಯ ಅವಸ್ಥೆಯನ್ನು ಪರಿಚಯಿಸುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈಗೆ ಸಮೀಪದ ಮುರ್‍ಬಾದ್ ಎಂಬಲ್ಲಿನ ಮನಿವಾಲಿ ಗ್ರಾಮದಲ್ಲಿ ನಡೆದಿದೆ. ವಾಹನ ಸೌಕರ್ಯವಿಲ್ಲದ್ದರಿಂದ ಗರ್ಭಿಣಿ ಆದಿವಾಸಿ ಮಹಿಳೆಯನ್ನು ಆಸ್ಪತ್ರೆಗೆ ಕೊಂಡು ಹೋಗುವ ವೇಳೆ ದಾರಿಯ ಮಧ್ಯೆ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ.

ಮುರ್‍ಬಾದಿನಿಂದ ಎಂಟು ಕಿಲೊಮೀಟರ್ ದೂರದ ಆದಿವಾಸಿ ಗ್ರಾಮದಲ್ಲಿ 24 ವರ್ಷದ ಪುಷ್ಪ ಮತ್ತು ಕುಟುಂಬ ವಾಸವಿದೆ. ಇಲ್ಲಿ ಅರುವತ್ತರಷ್ಟು ಮನೆ, ಇನ್ನೂರರಷ್ಟು ಜನರು ವಾಸಿಸುತ್ತಿದ್ದಾರೆ. ಈ ಗ್ರಾಮದ ಮೂರು ಕಡೆಯೂ ನೀರು ಇರುವುದಲ್ಲದೆ, ಇನ್ನೊಂದು ಕಡೆಗಳಲ್ಲಿ ದಟ್ಟ ಅರಣ್ಯ. ಸರಿಯಾದ ಮಾರ್ಗ ಇಲ್ಲದ್ದರಿಂದ ರೋಗಿಗಳನ್ನು, ಗರ್ಭಿಣಿಯರನ್ನು ಹೊತ್ತೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಇಂತಹ ಒಂದು ಪ್ರಯಾಣದಲ್ಲಿ ಡಿಸೆಂಬರ್ 12 ರಂದು ಕಾರ್ಮಿಕ ಮಹಿಳೆ ಪುಷ್ಪಾರಿಗೆ ದಾರಿಯ ನಡುವೆ ಹೆರಿಗೆಯಾಗಿದೆ. ಮಗುವಿನ ಹೊಕ್ಕುಳ ಬಳ್ಳಿ ಕತ್ತರಿಸಲು ಆಗದ್ದರಿಂದ ಸಂಬಂಧಿಕರು ಮಹಿಳೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ತಲುಪಸಿದ ಬಳಿಕ ಘಟನೆ ವರದಿಯಾಗಿದೆ.

ಪತಿಯ ಊರಿನಿಂದ ತನ್ನ ಮನೆಗೆ ಬಂದಿದ್ದ ಪುಷ್ಪರವರಿಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಬಂದಿಕರು ಹಾಗೂ ಊರವರು ಜೊತೆಯಲ್ಲಿ ಅರಣ್ಯದ ದಾರಿಯಲ್ಲಿ ನಡೆಯಲು ತೊಡಗಿದ ಬಳಿಕ ಹೆರಿಗೆ ನೋವು ಹೆಚ್ಚಾದ್ದರಿಂದ ಟಾರ್ಚ್ ಮತ್ತು ಮೊಬೈಲ್ ಫೋನ್‍ನ ಬೆಳಕಿನ ಸಹಾಯದಿಂದ ಹೆರಿಗೆ ಮಾಡಿಸಲಾಯಿತು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಹೊಕ್ಕುಳ ಬಳ್ಳಿ ಕತ್ತರಿಸಲು ಸಾಧ್ಯವಾಗದ್ದರಿಂದ ತೂಗು ಮಂಚದಲ್ಲಿ ಮಲಗಿಸಿ ಪುಷ್ಪಾರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.

ದಾರಿ ಮಧ್ಯೆ ಹೆರಿಗೆಯಾದ ವಿವರ ಕೇಳಿ ಮೊದಲು ಹೆದರಿದರೂ ತಾಯಿ ಮಗು ಕ್ಷೇಮವಾಗಿದ್ದಾರೆ ತಿಳಿದು ಸಮಾಧಾನಿಸಿಕೊಂಡೆ ಎಂದು ಪುಷ್ಪಾರ ಪತಿ ರಮೇಶ್ ಹೇಳಿದರು.