ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಅ.4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಕ್ರೆನ್ ಕುರಿತು ನಡೆಯುತ್ತಿರುವ ವಿವಾದದಲ್ಲಿ ಪತ್ರಿಕೆಗಳ ಪ್ರಶ್ನೆಗೆ ಕುಪಿತರಾಗಿದ್ದಾರೆ. ವೈಟ್ ಹೌಸ್ನಲ್ಲಿ ಪತ್ರಿಕಾ ಗೋಷ್ಠಿಗೆ ಟ್ರಂಪ್ ಬಂದಾಗ ಯುಕ್ರೆನ್ ವಿಷಯದಲ್ಲಿ ಪ್ರಶ್ನೆ ಕೇಳಲಾಯಿತು. ಪ್ರಶ್ನೆ ಕೇಳಿದ ವರದಿಗಾರ ಮೇಲೆ ಟ್ರಂಪ್ ಹರಿಹಾಯ್ದಿದ್ದಾರೆ.
ಬುಧವಾರ ಡೊನಾಲ್ಡ್ ಟ್ರಂಪ್ ಮತ್ತು ಫಿನ್ಲೆಂಡಿನ ಅಧ್ಯಕ್ಷ ಸೌಲಿ ನಿನಿಸ್ಟೊ ಜೊತೆ ಪತ್ರಿಕಾಗೋಷ್ಠಿ ನಡೆದಿದ್ದು, ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿ ರಾಯಿಟರ್ಸ್ಗಾಗಿ ವೈಟ್ ಹೌಸ್ನಿಂದ ವರದಿ ಮಾಡುವ ಜೆಫ್ ಮಾಸನ್ ಡೊನಾಲ್ಡ್ ಟ್ರಂಪ್ರೊಡನೆ ಡೆಮಕ್ರಾಟ್ ನಾಯಕ ಜೊ ಬಿಡೆನ್ ಮತ್ತು ಯುಕ್ರೆನ್ ಕುರಿತ ವಿವಾದವನ್ನು ಕೆದಕಿದರು.
ಯಕ್ರೆನ್ ಮತ್ತು ಜೊಬಿಡೆನ್ ಕುರಿತು ಇಷ್ಟೆಲ್ಲ ವಿವಾದ ವಾಗುತ್ತಿದ್ದು ನೀವು ಆ ಕುರಿತು ಯಾಕೆ ಮಾತಾಡುವುದಿಲ್ಲ ಎಂದು ಜೆಫ್ ಕೇಳಿದರು. ಇದಕ್ಕೆ ಕೋಪಗೊಂಡ ಟ್ರಂಪ್ ನೀವು ನನ್ನಲ್ಲಿ ಈ ಪ್ರಶ್ನೆ ಕೇಳುತ್ತೀರಾ. ನನ್ನ ಜೊತೆ ಫಿನ್ಲೆಂಡಿನ ಅಧ್ಯಕ್ಷರು ಇದ್ದಾರೆ. ನೀವು ನನ್ನಲ್ಲಿ ಪ್ರಶ್ನೆ ಕೇಳುತ್ತೀರಿ. ನಂತರ ವರದಿಗಾರ ಜೆಫ್ ಪುನಃ ಅದೇ ಪ್ರಶ್ನೆ ಕೇಳಿದರು. ಆಗ ಟ್ರಂಪ್ ಇನ್ನಷ್ಟು ಕುಪಿತರಾದರು. ನಿಮಗೆ ಹೇಳಿದ್ದು ಕೇಳಿಲ್ವಾ. ಕೇವಲ ಫಿನ್ಲೆಂಡ್ ಅಧ್ಯಕ್ಷರಲ್ಲಿ ಮಾತ್ರ ಪ್ರಶ್ನೆ ಕೇಳಿ. ನಾನು ಎಲ್ಲ ಹೇಳಿಯಾಗಿದೆ. ನಿಮ್ಮಂತಹ ವರದಿಗಾರರು ಕೇವಲ ಮೋಸ ಮಾಡುತ್ತೀರಿ ಎಂದು ಟ್ರಂಪ್ ಗರಂ ಆದರು.












