ಟಿ.ವಿ. ಸಂವಾದ: ಮುಸ್ಲಿಮರು ಎದುರಿಸಲೇಬೇಕಾದ ಕೆಲವು ಪ್ರಶ್ನೆಗಳು

0
345

ಏ ಕೆ ಕುಕ್ಕಿಲ

ಭಾಗ- 1

ಮುಸ್ಲಿಮರು ಭಾಗವಹಿಸುವ ಯಾವುದೇ ಟಿ.ವಿ. ಸಂವಾದ ಅಥವಾ ಡಿಬೇಟ್‌ಗಳು ಈ ಕೆಳಗಿನ ಮೂರು ಪ್ರಶ್ನೆಗಳ ಹೊರತಾಗಿ ಮುಕ್ತಾಯ ಗೊಳ್ಳುವುದು ಕಡಿಮೆ.

1. ಬಹುದೇವ ವಿಶ್ವಾಸಿಗಳನ್ನು ಕೊಲ್ಲಿರಿ ಎಂದು ಕುರ್‌ಆನ್‌ನಲ್ಲಿ (9ನೇ ಅಧ್ಯಾಯದ 5ನೇ ವಚನವನ್ನು ಉ¯್ಲೆÃಖಿಸುತ್ತಾ) ಆದೇಶಿಸಿರು ವುದು ಸರಿಯೇ? ಇದು ಹಿಂದೂಗಳ ವಿರುದ್ಧ ಹತ್ಯೆಗೆ ಕರೆ ಕೊಟ್ಟಂತಲ್ಲವೇ?

2. ಮುಸ್ಲಿಮರು ಮತ್ತು ಮುಸ್ಲಿಮ್ ವಿದ್ವಾಂಸರೇಕೆ ಹಿಂದೂಗಳ ಹತ್ಯೆಯನ್ನು ಖಂಡಿ ಸುವುದಿಲ್ಲ? ಅವರೇಕೆ ಫತ್ವಾ ಹೊರಡಿಸುವುದಿಲ್ಲ?

3. ಮುಸ್ಲಿಮರು ಮೂಲತಃ ಅಸಹಿಷ್ಣುಗಳು. ಅವರು ಹಿಂಸಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಾರೆ. ಪ್ರತಿಭಟನೆಗಿಳಿದರೆ ಕಲ್ಲನ್ನೆತ್ತಿಕೊಳ್ಳುವುದು ಮತ್ತು ಬೆಂಕಿ ಹಚ್ಚೋದು ಸಾಮಾನ್ಯ. ಅಂದಹಾಗೆ,

ಈ ಪ್ರಶ್ನೆಗಳಲ್ಲಿ ಯಾವುದೇ ಕಿಡಿಗೇಡಿತನವಿಲ್ಲ ಮತ್ತು ತೀರಾ ಮುಗ್ಧವಾಗಿಯೇ ಇವನ್ನು ಕೇಳಲಾಗಿದೆ ಎಂದು ಅಂದುಕೊAಡೇ ಈ ಪ್ರ ಶ್ನೆiಗಳ ಒಳಾರ್ಥವನ್ನು ಬಿಡಿಸೋಣ.

ಪವಿತ್ರ ಕುರ್‌ಆನ್, ಭಗವದ್ಗೀತೆ, ಬೈಬಲ್, ತೋರಾ, ತ್ರಿಪಿಟಿಕ, ಗುರುಗ್ರಂಥ ಸಾಹೇಬ್ ಅಥವಾ ಇನ್ನಾವುದೇ ಧಾರ್ಮಿಕ ಗ್ರಂಥಗಳನ್ನು ಓದುವುದಕ್ಕೂ ಕಾದಂಬರಿ, ಕಥಾ ಸಂಕಲನ, ಲಲಿತ ಪ್ರಬಂಧ ಓದುವುದಕ್ಕೂ ವ್ಯತ್ಯಾಸವಿದೆ. ಕಾದಂಬರಿ ಓದಿದಂತೆ ಪವಿತ್ರ ಕುರ್‌ಆನನ್ನು ಓದಲಾಗದು. ಕುರ್‌ಆನನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅದು ಪ್ರವಾದಿ ಮುಹಮ್ಮದರಿಗೆ(ಸ) ದೇವನಿಂದ ಅವತೀರ್ಣವಾದ ಕಾಲ, ಸನ್ನಿವೇಶ ಮತ್ತು ಉದ್ದೇಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ ದಿಢೀರ್ ಆಗಿ ಉದ್ಭವ ಆದವರಲ್ಲ. ಇದೇ ಮಣ್ಣಿನ ಬಸವಣ್ಣ ಮತ್ತು ಬುದ್ಧ ಹೇಗೆ ಇಲ್ಲಿಯ ಜನರೊಂದಿಗೆ ಇದ್ದುಕೊಂಡು ಅವರ ನಡುವೆಯೇ ಬೆಳೆದರೋ ಹಾಗೆಯೇ ಪ್ರವಾದಿ ಮುಹಮ್ಮದರೂ ಮಕ್ಕಾದಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದರು. ತನ್ನ ಸುತ್ತಮುತ್ತಲಿನ ಪ್ರತಿ ಬೆಳವಣಿಗೆಯನ್ನೂ ಸತ್ಯ-ಮಿಥ್ಯಕ್ಕೆ ಮುಖಾಮುಖಿಗೊಳಿಸಿ ವಿಮರ್ಶಿಸತೊಡಗಿದರು. ಕೆಡುಕಿನಿಂದ ದೂರ ನಿಂತರು. ಒಳಿತಿನಲ್ಲಿ ಮಾತ್ರ ಭಾಗಿಯಾದರು. ಸತ್ಯವನ್ನು ಮಾತ್ರ ಹೇಳುವ ಅಭ್ಯಾಸ ರೂಢಿಸಿಕೊಂಡರು. ಹೀಗೆ ಜನರ ಜೊತೆಗಿದ್ದೂ ಅವರಂತಾಗದೇ ಬೆಳೆದ ಪ್ರವಾದಿಯವರು, ಏಕದೇವ ಮತ್ತು ಬಹುದೇವ ವಿಶ್ವಾಸಗಳ ಸುತ್ತ ಚರ್ಚೆಯೊಂದನ್ನು ಹುಟ್ಟು ಹಾಕಿದರು. ಮಾತ್ರವಲ್ಲ,

ಏಕದೇವ ವಿಶ್ವಾಸವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಮದ್ಯ, ಬಡ್ಡಿ, ಹೆಣ್ಣು ಶಿಶು ಹತ್ಯೆ, ಗುಲಾಮ ಪದ್ಧತಿ, ನಗ್ನ ನೃತ್ಯ, ಉಳ್ಳವರ ಪರವಾದ ನ್ಯಾಯ ವ್ಯವಸ್ಥೆ, ಬುಡಕಟ್ಟುಗಳ ನಡುವಿನ ಸಂಘರ್ಷ, ಅಸಮಾನತೆ, ಮೂರ್ತಿ ಪೂಜೆ… ಇತ್ಯಾದಿಗಳಿಗೆ ಒಗ್ಗಿಕೊಂಡಿದ್ದ ಸಮಾಜವೊಂದಕ್ಕೆ ಪ್ರವಾದಿ ಮುಹಮ್ಮದರ ಏಕದೇವ ಪ್ರತಿಪಾದನೆಯು ಆಘಾತವಷ್ಟೇ ಅಲ್ಲ, ಬುಡಕಟ್ಟು ಪ್ರತಿಷ್ಠೆಗೂ ಸವಾಲಾಗಿತ್ತು. ಪ್ರವಾದಿ ಮುಹಮ್ಮದರ ಏಕದೇವ ಪ್ರತಿಪಾದನೆಯನ್ನು ಒಪ್ಪಿಕೊಳ್ಳುವುದೆಂದರೆ, ಮಕ್ಕಾದ ಮಂದಿ ಆವರೆಗಿನ ರೂಢಿಗತ ಅಭ್ಯಾಸಗಳನ್ನೆಲ್ಲ ತಿರಸ್ಕರಿಸಬೇಕು ಎಂದರ್ಥ. ನಮ್ಮ ನಡುವೆಯೇ ಬೆಳೆದ ವ್ಯಕ್ತಿಯ ಪ್ರತಿಪಾದನೆಯನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು ಎಂಬ ಪ್ರಶ್ನೆಯ ಜೊತೆಗೇ ರೂಢಿಗತ ಅಭ್ಯಾಸಗಳನ್ನು ತಿರಸ್ಕರಿಸಿ ಬದುಕುವುದುಂಟೇ ಎಂಬ ಪ್ರಶ್ನೆ ಇನ್ನೊಂದು ಕಡೆ. ಈ ಪ್ರಶ್ನೆಗಳ ತಿಕ್ಕಾಟ ಮಕ್ಕಾದ ಪ್ರತಿ ಮನೆಯಲ್ಲೂ ನಡೆಯಿತು. ಪ್ರತಿಯೊಬ್ಬರ ಮಾತುಕತೆಯಲ್ಲೂ ಪ್ರವಾದಿ ಮುಹಮ್ಮದರ ಪ್ರತಿಪಾದನೆ ಮತ್ತು ಪರಿಣಾಮಗಳು ಚರ್ಚೆಗೊಳಗಾದವು. ಪ್ರತಿಯೊಬ್ಬರೂ ಸಮಾನರು ಎಂದು ಒಪ್ಪಿ ಕೊಳ್ಳುವುದೆಂದರೆ, ತಮ್ಮ ಪ್ರತಿಷ್ಠೆಯನ್ನೇ ಮಣ್ಣುಪಾಲು ಮಾಡಿ ಕೊಂಡಂತೆ. ಮದ್ಯಪಾನವನ್ನು ಕೈಬಿಟ್ಟು, ಬಡ್ಡಿಯನ್ನು ತಿರಸ್ಕರಿಸಿ, ಗುಲಾಮ ಪದ್ಧತಿಗೆ ತಿಲಾಂಜಲಿಯಿಟ್ಟು, ಅಸಮಾನ ನ್ಯಾಯ ಪದ್ಧತಿಗೆ ವಿದಾಯ ಹೇಳುವುದೆಂದರೆ ಆ ಬಳಿಕ ಉಳಿಯುವುದೇನು? ಆಫ್ರಿಕಾದಿಂದ ಖರೀದಿಸಿ ತಂದ ನೀಗ್ರೋ ಗುಲಾಮ ಮತ್ತು ಮಕ್ಕಾವನ್ನೇ ಖರೀದಿಸುವ ಸಾಮರ್ಥ್ಯವಿರುವ ತಾನು- ಇಬ್ಬರೂ ಸಮಾನರೆಂದರೆ ಏನರ್ಥ? ಬಡವರಿಗೂ ಶ್ರೀಮಂತರಿಗೂ ಸಮಾನ ನ್ಯಾಯ ಅಂದರೆ ಹೇಗೆ?… ಇಂಥ ಚರ್ಚೆಗಳು ಶ್ರೀಮಂತರು ಮತ್ತು ಬುಡಕಟ್ಟು ಪ್ರಮುಖರ ನಡುವೆ ನಡೆದರೆ ಇನ್ನೊಂದು ಕಡೆ ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ನಡುವೆ, ಇದಕ್ಕೆ ವಿರುದ್ಧವಾದ ಚರ್ಚೆಗಳು ನಡೆದುವು. ಅವರು ಪ್ರವಾದಿಯವರ ಈ ಪ್ರತಿಪಾದನೆಯಲ್ಲಿ ತಮ್ಮ ವಿಮೋಚನೆಯ ಬೆಳಕನ್ನು ಕಂಡರು. ಆದ್ದರಿಂದಲೇ,

ಆರಂಭಿಕ ಕಾಲದಲ್ಲಿ ಪ್ರವಾದಿ ಮುಹಮ್ಮದರ ಅನುಯಾಯಿಗಳಾದವರಲ್ಲಿ ಬಡವರು ಮತ್ತು ತುಳಿತಕ್ಕೊಳಗಾದವರೇ ಹೆಚ್ಚಿದ್ದರು. ಪ್ರವಾದಿಯವರ ಚಿಕ್ಕಪ್ಪಂದಿರೂ ಸಹಿತ ಧನಿಕರು ಮತ್ತು ಬುಡಕಟ್ಟು ಪ್ರಮುಖರು ಪ್ರವಾದಿಯ ವಿರುದ್ಧ ನಿಂತರು. ಅಂದಹಾಗೆ, ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಪ್ರತಿಪಾದಿಸಿದರು. ಈ ಅವಧಿಯಲ್ಲಿ ಅವರು ಸಾಕಷ್ಟು ಹಿಂಸೆಗಳನ್ನೂ ಅನುಭವಿಸಿದರು. ಅವರನ್ನು ಕಲ್ಲೆಸೆದು ಗಾಯಗೊಳಿಸಿದ್ದೂ ನಡೆಯಿತು. ಅವರ ಪ್ರಾರ್ಥನೆಗೆ ಹಲವು ರೀತಿಯಲ್ಲಿ ಅಡ್ಡಿ ಪಡಿಸಲಾಯಿತು. ಹಾಗಂತ,

ಹೀಗೆ ಹಿಂಸಾತ್ಮಕವಾಗಿ ಪೀಡಿಸಿದವರಾರೂ ಅವರಿಗೆ ಅಪರಿಚಿತರಾಗಿರಲಿಲ್ಲ. ಕೇವಲ ಪ್ರವಾದಿಯನ್ನು ಮಾತ್ರ ಅಲ್ಲ, ಅವರ ಅನುಯಾಯಿಗಳ ಮೇಲೂ ತೀವ್ರತರದ ಹಿಂಸೆಗಳು ನಡೆದುವು. ಕೆಲವರನ್ನು ಹತ್ಯೆಗೈದದ್ದೂ ನಡೆಯಿತು. ಕೊನೆಗೆ ಈ ಹಿಂಸೆಯನ್ನು ತಾಳಲಾರದೇ ಪ್ರವಾದಿ ಮುಹಮ್ಮದರು ಮದೀನಕ್ಕೆ ಹೊರಟು ಹೋದರು. ಹೀಗೆ ಅವರು ಮದೀನಕ್ಕೆ ಹೊರಟು ಹೋಗುವುದಕ್ಕಿಂತ ಮೊದಲೇ ಅವರ ಅನುಯಾಯಿಗಳಲ್ಲಿ ಅನೇಕರು ಬೇರೆ ರಾಷ್ಟ್ರಕ್ಕೆ ಪಲಾಯನಗೈದು ಆಶ್ರಯ ಕೋರಿದ್ದರು. ಈ ಪಲಾಯನಕ್ಕೂ ಹಿಂಸೆಯೇ ಕಾರಣ. ಪ್ರವಾದಿಯವರು ಮದೀನಕ್ಕೆ ಹೊರಟು ಹೋದ ಬಳಿಕ ಅವರ ಅನುಯಾಯಿಗಳಲ್ಲಿ ಒಬ್ಬೊಬ್ಬರೇ ಮದೀನಾಕ್ಕೆ ಹೋಗತೊಡಗಿದರು. ಹೀಗೆ ಮದೀನದಲ್ಲಿ ಪುಟ್ಟ ತಂಡವೇ ನಿರ್ಮಾಣವಾಗತೊಡಗಿತು. ಪ್ರವಾದಿಯವರು ಮದೀನಕ್ಕೆ ತಲುಪಿದ ಬಳಿಕ ಮಾಡಿದ ಮೊದಲ ಕೆಲಸವೇನೆಂದರೆ, ಅಲ್ಲಿನ ಬಹುಸಂಖ್ಯಾತ ಯಹೂದಿ ಸಮುದಾಯ ಮತ್ತು ಬಹುದೇವ ವಿಶ್ವಾಸಿಗಳೊಂದಿಗೆ ಶಾಂತಿಯುತ ಬದುಕಿನ ಒಪ್ಪಂದ ಮಾಡಿಕೊಂಡದ್ದು. ಲಿಖಿತ ಸಂವಿಧಾನ ರಚಿಸಿದ್ದು. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಪಾ ಲಿಸುವ ಮತ್ತು ಯಾರ ಮೇಲೂ ಯಾರ ಧರ್ಮವನ್ನೂ ಬಲಾತ್ಕಾರವಾಗಿ ಹೇರದಿರುವ ಕಲಂಗಳೂ ಸೇರಿದಂತೆ ಇವತ್ತಿನ ಆಧುನಿಕ ಜಗತ್ತಿನ ಸಂವಿಧಾನ ಪರಿಚ್ಛೇದಗಳು ಏನಿವೆಯೋ ಬಹುತೇಕ ಅವನ್ನೇ ಹೋಲುವ ಉದಾರವಾದಿ ಸಂವಿಧಾನಕ್ಕೆ ಪ್ರವಾದಿ ರೂಪಕೊಟ್ಟರು. ಮದೀನದ ಮೇಲೆ ಯಾರಾದರೂ ದಂಡೆತ್ತಿ ಬಂದರೆ ಜೊತೆಯಾಗಿ ಹೋರಾಡುವುದು ಮತ್ತು ನ್ಯಾಯ ವಿತರಣೆಯಲ್ಲಿ ತಾರತಮ್ಯ ಮಾಡದಿರುವುದೂ ಈ ಲಿಖಿತ ಸಂವಿಧಾನದ ಭಾಗವಾಗಿತ್ತು. ಈ ಸಂವಿಧಾನ ರಚಿಸುವಾಗ ಮದೀನದ ಒಟ್ಟು ಜನಸಂಖ್ಯೆ 5000ದಷ್ಟಿತ್ತು ಎಂದು ಹೇಳಲಾಗುತ್ತದೆ. ಪ್ರವಾದಿ ಅನುಯಾಯಿಗಳ ಸಂಖ್ಯೆ ಬರೇ 500ರಷ್ಟಿತ್ತು. ಹಾಗಿದ್ದೂ,

ಪ್ರವಾದಿ ಮುಹಮ್ಮದರನ್ನೇ ಮದೀನಾದ ಆಡಳಿತಾತ್ಮಕ ಮುಖ್ಯಸ್ಥರಾಗಿ ಅಲ್ಲಿನ ಮಂದಿ ನೇಮಿಸಿದರು. ಹೀಗೆ ಮದೀನಾ ಶಾಂತಿ ಮತ್ತು ಐಕ್ಯಭಾವದ ಕಾರಣಕ್ಕಾಗಿ ಸುದ್ದಿಯಲ್ಲಿರುವಾಗ ಇತ್ತ ಮಕ್ಕಾ ಇದಕ್ಕೆ ವಿರುದ್ಧವಾದ ಕಾರಣಕ್ಕಾಗಿ ಸುದ್ದಿಯಲ್ಲಿತ್ತು. ಮಕ್ಕಾದ ಪ್ರತಿ ಮನೆಯೂ ಬೂದಿ ಮುಚ್ಚಿದ ಕೆಂಡದಂತಿತ್ತು. ಅಪ್ಪ ಮತ್ತು ಮಗನ ನಡುವೆ, ತಾಯಿ ಮತ್ತು ಮಗಳ ನಡುವೆ, ಸಹೋದರಿ ಮತ್ತು ಸಹೋದರನ ನಡುವೆ, ಪತ್ನಿ ಮತ್ತು ಪತಿಯ ನಡುವೆ… ಹೀಗೆ ಪ್ರತಿ ಮನೆಯೊಳಗೂ ವೈಚಾರಿಕ ತಿಕ್ಕಾಟಗಳು ಸ್ಫೋಟಗೊಂಡವು. ಗುಲಾಮರು ಮತ್ತು ಬಡವರಲ್ಲಿ ವಿಮೋಚನೆಯ ಕನಸು ತಿರುಗತೊಡಗಿದರೆ, ಪ್ರತಿಷ್ಠರಲ್ಲಿ ಅಸ್ತಿತ್ವದ ಭಯ ಮೂಡತೊಡಗಿತ್ತು. ಇತ್ತ ತಮ್ಮ ಜೊತೆಗಿದ್ದವರಲ್ಲಿ ಒಬ್ಬೊಬ್ಬರೇ ಕಾಣೆಯಾಗುತ್ತಿರುವುದೂ ಮತ್ತು ಅವರೆಲ್ಲ ಮದೀನಾ ಸೇರಿಕೊಳ್ಳುತ್ತಿರುವುದೂ ಪ್ರತಿಷ್ಠಿತರನ್ನು ಕಳವಳಕ್ಕೀಡು ಮಾಡತೊಡಗಿತ್ತು. ತಾವು ಪ್ರವಾದಿ ಮುಹಮ್ಮದರಿಗೆ ಕೊಟ್ಟ ಕಿರುಕುಳ ಅತಿಯಾಯಿತೋ ಎಂಬ ಭಾವ ಒಂದು ಕಡೆಯಾದರೆ, ಮದೀನದಲ್ಲಿ ನೆಲೆ ಕಂಡುಕೊಂಡವರ ಮೇಲಿನ ಅಸೂಯೆ ಇನ್ನೊಂದು ಕಡೆ.

ಮಕ್ಕಾದಲ್ಲಿ ಪ್ರವಾದಿ ಮುಹಮ್ಮದ್ ಸತತ 13 ವರ್ಷಗಳ ಕಾಲ ತನ್ನನ್ನು ಸಮಾಜ ಸುಧಾರಣಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. 40ನೇ ವರ್ಷದಲ್ಲಿ ಈ ಸುಧಾರಣಾ ಅಭಿಯಾನ ಆರಂಭವಾಗಿತ್ತು. ಆವರೆಗೆ ಮಕ್ಕಾದ ಅತ್ಯಂತ ಸತ್ಯವಂತ ಮತ್ತು ಸರ್ವಮಾನ್ಯ ವ್ಯಕ್ತಿಯಾಗಿದ್ದ ಪ್ರವಾದಿಯವರು, ಯಾವಾಗ ಏಕದೇವಾರಾಧನೆಯ ಪರ ಮತ್ತು ಸಾಮಾಜಿಕ ಕೆಡುಕುಗಳ ವಿರುದ್ಧ ಮಾತಾಡತೊಡಗಿದರೋ ಪ್ರತಿಷ್ಠಿತರ ವೈರಿಯಾಗಿ ಮಾರ್ಪಟ್ಟರು. ಅವರ ಮೇಲೆ ಮಕ್ಕಾದ ಪ್ರತಿಷ್ಠಿತರು ಮತ್ತು ಶ್ರೀಮಂತರು ತಿರುಗಿ ಬಿದ್ದುದು 40ನೇ ವರ್ಷದ ಬಳಿಕದಿಂದ. ಅವರ ಕುಟುಂಬಿಕರೇ ಈ ವಿರೋಧದ ಮುಂಚೂಣಿ ಯಲ್ಲಿದ್ದರು. ಹೀಗೆ ನಿರಂತರ 13 ವರ್ಷಗಳ ಕಾಲ ಕಿರುಕುಳ ಮತ್ತು ಆರ್ಥಿಕ ಬಹಿಷ್ಕಾರವನ್ನು ಎದುರಿಸಿದ ಪ್ರವಾದಿ ಮುಹಮ್ಮದರು ಬಳಿಕ ತನ್ನ 53ನೇ ವರ್ಷ ಪ್ರಾಯದಲ್ಲಿ ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋದರು. ಹಾಗಂತ,

ಕಿರುಕುಳ ನೀಡಿದವರೆಲ್ಲ ಈ ವಲಸೆಯನ್ನು ಬಯಸಿದ್ದರು ಎಂದಲ್ಲ. ಪ್ರವಾದಿ ಮುಹಮ್ಮದರು ವಲಸೆ ಹೊರಟಿದ್ದಾರೆ ಎಂಬುದು ಗೊತ್ತಾದ ಕೂಡಲೇ ಅವರು ಅವರನ್ನು ತಡೆಯುವುದಕ್ಕೆ ಇನ್ನಿಲ್ಲದ ಶ್ರಮ ವಹಿಸಿದರು. ಪ್ರವಾದಿಯನ್ನು ಹುಡುಕಿ ತರುವವರಿಗೆ ಬಹುಮಾನವನ್ನು ಘೋಷಿಸಿದರು. ಒಂದುವೇಳೆ, ಪಕ್ಕದ ಮದೀನಾಕ್ಕೆ ವಲಸೆ ಹೋಗಿ ಪ್ರವಾದಿ ಮುಹಮ್ಮದ್ ಅಲ್ಲಿ ಬೆಳೆದರೆ, ಅದು ತಮ್ಮ ಅಸ್ತಿತ್ವಕ್ಕೆ ಸಂಚಕಾರ ತಂದೀತು ಎಂಬ ಭಯವೂ ಇದಕ್ಕೆ ಕಾರಣ ಇದ್ದೀತು. ಆದ್ದರಿಂದಲೇ,
ಪ್ರವಾದಿ ಮದೀನಾಕ್ಕೆ ಹೋದ ನಂತರದಲ್ಲಿ ಮಕ್ಕಾದ ಪ್ರತಿ ಮನೆಗಳಲ್ಲಿ ನಡೆದಿರಬಹುದಾದ ಚರ್ಚೆಗಳು ಅತ್ಯಂತ ಆಸಕ್ತಿಕರ ವಾಗಿರುವ ಸಾಧ್ಯತೆ ಇದೆ. ತಮ್ಮ ನಡುವೆ 53 ವರ್ಷಗಳ ಕಾಲ ಬದುಕಿ ಕೊನೆಗೆ ಕಿರುಕುಳವನ್ನು ತಾಳಲಾರದೇ ಊರನ್ನೇ ಬಿಟ್ಟು ಹೋಗುವುದೆಂದರೆ ಅದು ಊರಿಗೇ ಕಳಂಕ. ಒಂಟಿ ವ್ಯಕ್ತಿಯನ್ನು ಹಿಂಸಿಸಿ ಊರಿನಿಂದ ಹೊರಕ್ಕಟ್ಟುವುದು ಹೆಮ್ಮೆಯ ಸಂಗತಿಯಾಗುವುದಿಲ್ಲ. ಪ್ರವಾದಿ ತನ್ನ 53 ವರ್ಷಗಳಲ್ಲಿ ಒಮ್ಮೆಯೂ ಯಾರ ವಿರುದ್ಧವೂ ಕೈಯೆತ್ತಿಲ್ಲ. ಯಾರನ್ನೂ ನೋಯಿಸಿಲ್ಲ. ಕೆಟ್ಟ ಮಾತನ್ನಾಡಿಲ್ಲ. ಮದ್ಯ ಸೇವಿಸಿಲ್ಲ, ಬಡ್ಡಿ ಪಡೆದಿಲ್ಲ, ಅಸಮಾನತೆಯನ್ನು ಪಾಲಿಸಿಲ್ಲ, ಕುಟುಂಬ ಸಂಬಂಧವನ್ನು ಎಂದೂ ಕೆಡಿಸಿಲ್ಲ. ಅಲ್ಲದೆ, 25 ವರ್ಷದ ಯುವಕನಾಗಿದ್ದಾಗಲೇ ಮೂರು ಮಕ್ಕಳ ತಾಯಿಯಾಗಿದ್ದ 40 ವರ್ಷದ ವಿಧವೆಯನ್ನು ಮದುವೆಯಾಗಿ ಆದರ್ಶವೊಂದಕ್ಕೆ ಬೀಜ ಬಿತ್ತಿದವರು. ಅಲ್ಲದೆ, ತನ್ನ ಈ 53 ವರ್ಷಗಳ ಬದುಕಿನಲ್ಲಿ ಅವರು ಹಿಂಸೆಯನ್ನು ಪ್ರತಿಪಾದಿಸಿಲ್ಲ, ಸೇನೆ ಕಟ್ಟಿಲ್ಲ, ತನ್ನ ಮತ್ತು ಅನುಯಾಯಿಗಳ ಮೇಲೆ ಕ್ರೌರ್ಯವೆಸಗಿದವರ ವಿರುದ್ಧ ಪ್ರತೀಕಾರವನ್ನೂ ಘೋಷಿಸಿಲ್ಲ. ತಾಯಿಫ್ ಎಂಬ ಊರಿನವರು ಅವರ ವಿರುದ್ಧ ಕಲ್ಲೆಸೆದು ರಕ್ತ ಸೋರುವಂತೆ ಗಾಯಗೊಳಿಸಿದ ನಂತರವೂ ಅವರು ಸಹಜವಾಗಿಯೇ ಇದ್ದರು. ಇಂಥ ಓರ್ವ ವ್ಯಕ್ತಿಯ ಮೇಲೆ ವಲಸೆ ಅನಿವಾರ್ಯವಾಗು ವಷ್ಟು ಹಿಂಸಿಸುವುದೆಂದರೆ, ಅದು ಮಕ್ಕಾದ ಬಲಾಢ್ಯ ಬುಡಕಟ್ಟುಗಳ ಪ್ರತಿಷ್ಠೆಯ ಪಾಲಿಗೆ ಅವಮಾನಕರವೇ ಹೊರತು ಹೆಮ್ಮೆಯಾಗುವ ಸಾಧ್ಯತೆ ಕಡಿಮೆ. ಮಕ್ಕಾದ ಪ್ರತಿ ಮನೆಯೂ ಇವುಗಳನ್ನು ಚರ್ಚಿಸಿರುವ ಸಾಧ್ಯತೆ ಇದೆ. ಇವುಗಳಲ್ಲಿ ಶ್ರೀಮಂತ ಮನೆಗಳ ಚರ್ಚೆ ಒಂದು ರೀತಿಯಲ್ಲಿದ್ದರೆ, ಬಡವರ ಮನೆಗಳ ಚರ್ಚೆ ಇನ್ನೊಂದು ರೀತಿಯಲ್ಲಿರುವುದಕ್ಕೂ ಅವಕಾಶ ಇದೆ. ಯಾಕೆಂದರೆ,

ಪ್ರವಾದಿ ಯಾವ ವಿಚಾರಧಾರೆಯನ್ನು ಪ್ರತಿಪಾದಿಸಿದ್ದರೋ ಅದರ ವಿರೋಧಿಗಳಲ್ಲಿ ಶ್ರೀಮಂತರು ಹೆಚ್ಚಿದ್ದರೇ ಹೊರತು ಬಡವರು ಕಡಿಮೆ. ಯಾವುದನ್ನೆಲ್ಲ ಕೆಡುಕು ಎಂದು ಪ್ರವಾದಿ ಪಟ್ಟಿ ಮಾಡಿದ್ದರೋ ಅದು ಅತ್ಯಂತ ಹೆಚ್ಚು ಪಾಲನೆಯಲ್ಲಿದ್ದುದೂ ಶ್ರೀಮಂತರ ನಡುವೆಯೇ. ಮಕ್ಕಾದ ಇಡೀ ಸಮಾಜ ಶ್ರೀಮಂತರು ಮತ್ತು ಬುಡಕಟ್ಟು ಪ್ರಮುಖರ ಹಿಡಿತದಲ್ಲಿತ್ತು. ಸಮಾಜ ನಡೆಯುತ್ತಿದ್ದುದೇ ಬಡ್ಡಿಯಾಧಾರಿತ ವ್ಯವಸ್ಥೆಯಲ್ಲಿ. ಪಾನಗೋಷ್ಠಿಗಳು ಮತ್ತು ಯುವತಿಯರ ನೃತ್ಯಗಳು ಅವರ ಬದುಕಿನ ಭಾಗವಾಗಿತ್ತು. ಬಡವರ ಮೇಲೆ ಕಠಿಣವಾಗಿ ಎರಗುತ್ತಿದ್ದ ನ್ಯಾಯವೆಂಬ ಚೂರಿಯು ಶ್ರೀಮಂತರನ್ನು ಸುಮ್ಮನೆ ಬಿಟ್ಟು ಬಿಡುತ್ತಿತ್ತು. ಆ ಕಾಲದಲ್ಲಿ ಗುಲಾಮ ಪದ್ಧತಿ ಇತ್ತು ಎಂದು ಮಾತ್ರವಲ್ಲ, ಅವರನ್ನು ನಡೆಸಿ ಕೊಳ್ಳುತ್ತಿದ್ದ ರೀತಿಯುಂತೂ ಅತ್ಯಂತ ಕುಪ್ರಸಿದ್ಧವಾಗಿದೆ. ಗುಲಾಮರನ್ನು ಮಾರುಕಟ್ಟೆಯಿಂದ ಖರೀದಿಸಲಾಗುತ್ತಿತ್ತು. ಆಫ್ರಿಕಾ ಅಥವಾ ಇನ್ನಿತರ ಬಡ ದೇಶಗಳಿಂದ ಜನರನ್ನು ತಂದು ಮಾರುಕಟ್ಟೆಯಲ್ಲಿ ಮಾರುವುದು ಮತ್ತು ಶ್ರೀಮಂತರು ಅವರನ್ನು ಖರೀದಿಸಿ ತಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಎಷ್ಟು ಸಾಮಾನ್ಯವಾಗಿತ್ತೆಂದರೆ, ಈ ಖರೀದಿ ಮತ್ತು ಮಾರಾಟಗಳು ಪ್ರಾಣಿಗಳ ವ್ಯವಹಾರದಂತೆ ನಡೆಯುತ್ತಿತ್ತು. ಮಾನವ ಹಕ್ಕುಗಳ ಲವಲೇಶವೂ ಈ ಮನುಷ್ಯ ರೆಂಬ ಪ್ರಾಣಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇಂಥ ಗುಲಾಮರಲ್ಲಿ ಒಬ್ಬರಾದ ನೀಗ್ರೋ ಬಿಲಾಲ್‌ರನ್ನೇ ಪ್ರವಾದಿ ಮುಹಮ್ಮದರು ಅಪ್ಪಿಕೊಂಡರು. ಆ ಅಪ್ಪಿಕೊಳ್ಳುವಿಕೆಯು ಆ ಕಾಲದ ಅದ್ಭುತವಾಗಿ ಪರಿಗಣಿತವಾಯಿತು ಮತ್ತು ಅದು ಆ ಬಳಿಕ ಮಕ್ಕಾದಲ್ಲಿ ಬಹುದೊಡ್ಡ ಸಂಚಲನೆಗೆ ಕಾರಣವಾದದ್ದು ಇತಿಹಾಸ. (ಮುಂದುವರಿಯುವುದು)