ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮ ಸಿಂಘೆ ಆಯ್ಕೆ: ನಾಗರಿಕರಿಂದ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ

0
45

ಸನ್ಮಾರ್ಗ ವಾರ್ತೆ

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಿ, ಅರಾಜಕತೆ ಉಂಟಾಗಿದ್ದ ದ್ವೀಪರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮ ಸಿಂಘೆ ಬುಧವಾರ ಆಯ್ಕೆಯಾಗಿದ್ದಾರೆ.

ವಾರದ ಹಿಂದೆ ಗೊಟಬಾಯ ರಾಜಪಕ್ಷ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಸರ್ವಪಕ್ಷಗಳು ಸಭೆ ಸೇರಿ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದವು. ಆದರೆ, ಸರ್ವಾನುಮತದ ಅಧ್ಯಕ್ಷರ ಆಯ್ಕೆ ಸಾಧ್ಯವಾಗಿರಲಿಲ್ಲ. ಬಹುತೇಕ ಸಂಸದರು ವಿಕ್ರಮಸಿಂಘೆ ಪರವಾಗಿದ್ದರೂ, ಮತ್ತಿಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇಂದು ನಡೆದ ಚುನಾವಣೆಯಲ್ಲಿ ರಾನಿಲ್ ವಿಕ್ರಮಸಿಂಘೆ ಪರವಾಗಿ 134 ಮತಗಳು ಲಭಿಸಿದ್ದು, ಮೂರನೇ ಎರಡು ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಿಂಗಾಪುರಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಷ ಅವರ ರಾಜೀನಾಮೆಯಿಂದ ಶ್ರೀಲಂಕಾದ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಗೊಟಬಯ ರಾಜಪಕ್ಷ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಈವರೆಗೆ ರಾನಿಲ್ ವಿಕ್ರಮಸಿಂಘ ಹಂಗಾಮಿ ಅಧ್ಯಕ್ಷರಾಗಿದ್ದರು.

ಇಂದು ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಶ್ರೀಲಂಕಾದ ಪ್ರಧಾನಿಯೂ ಆಗಿರುವ ರಾನಿಲ್ ವಿಕ್ರಮಸಿಂಘೆ ವಿರುದ್ಧ ಶ್ರೀಲಂಕನ್ನರು ಅಪಾರ ಅಸಮಾಧಾನ ಹೊಂದಿದ್ದಾರೆ.

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಂಗೆಟ್ಟಿರುವ ಪ್ರತಿಭಟನಾಕಾರರು ಇತ್ತೀಚೆಗೆ ರಾನಿಲ್ ವಿಕ್ರಮಸಿಂಘೆ ಅವರ ಮನೆಗೆ ಬೆಂಕಿ ಹಚ್ಚಿ, ಆಕ್ರೋಶ ಹೊರಹಾಕಿದ್ದರು.

ಇದೀಗ ಅವರು ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಕ್ರೋಶ ಭುಗಿಲೇಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

73 ವರ್ಷದ ರಾನಿಲ್ ವಿಕ್ರಮಸಿಂಘೆ ಆರು ಬಾರಿ ಶ್ರೀಲಂಕಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ರಾನಿಲ್ 134 ಮತಗಳನ್ನು ಪಡೆದರೆ, ಭಿನ್ನ ಗುಂಪಿನ ನಾಯಕ 63 ವರ್ಷದ ಡುಲ್ಲಾಸ್ ಅಲಹಪ್ಪೆರುಮ ಅವರು 82 ಮತಗಳನ್ನು ಗಳಿಸಿದ್ದಾರೆ. ಇತ್ತ 53 ವರ್ಷದ ಅರುಣಾ ಕುಮಾರ ಡಿಸ್ಸಾನಾಯಕೆ ಮೂರು ಮತಗಳನ್ನು ಗಳಿಸಿದ್ದಾರೆ.