ಪ್ರಾರಂಭಗೊಂಡ ಎರಡೇ ದಿನದಲ್ಲಿ ಗೋಡ್ಸೆ ಗ್ರಂಥಾಲಯ ಬಂದ್

0
776

ಸನ್ಮಾರ್ಗ ವಾರ್ತೆ

ಗ್ವಾಲಿಯರ್ : ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ನಾಥೂರಾಂ ವಿನಾಯಕ್ ಗೋಡ್ಸೆಯ ಹೆಸರಿನಲ್ಲಿ ಹಿಂದೂ ಮಹಾಸಭಾ ಎರಡು ದಿವಸಗಳ ಹಿಂದೆ ಆರಂಭಿಸಿದ ಗ್ರಂಥಾಲಯವನ್ನು ಮುಚ್ಚಿಸಲಾಗಿದ್ದು, ಅಲ್ಲಿದ್ದ ಪುಸ್ತಕ, ಬ್ಯಾನರ್ ಪೋಸ್ಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್ ನ ಹಿಂದೂ ಮಹಾಸಭಾ ಕಚೇರಿಯಲ್ಲಿ ಗೋಡ್ಸೆಯ ಹೆಸರಿನಲ್ಲಿ ಲೈಬ್ರರಿ ಆರಂಭ ಮಾಡಲಾಗಿತ್ತು. ನಂತರ ಹಲವು ದೂರುಗಳು ಬಂದವು ಎಂದು ಗ್ವಾಲಿಯರ್ ಎಸ್ಪಿ ಅಮಿತ್ ಸಿಂಗ್ ಹೇಳಿದ್ದು, ಕಾನೂನು ವ್ಯವಸ್ಥೆಗೆ ಸವಾಲಾಗುವ ಭೀತಿಯಲ್ಲಿ ಮಹಾಸಭಾ ಕಚೇರಿಯಿರುವ ಪ್ರದೇಶದಲ್ಲಿ ಸೆಕ್ಷನ್ 144 ಘೋಷಿಸಲಾಗಿದೆ. ಹಿಂದೂ ಮಹಾ ಸಭಾದ ನಾಯಕರೊಂದಿಗೆ ಚರ್ಚಿಸಿದ ಬಳಿಕವೇ ಲೈಬ್ರೆರಿಯನ್ನು ಮುಚ್ಚಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಗೋಡ್ಸೆ ನಿಜವಾದ ದೇಶಪ್ರೇಮಿಯೆಂದು ಲೋಕಕ್ಕೆ ತೋರಿಸಿಕೊಡಲು ಲೈಬ್ರೆರಿ ಆರಂಭಿಸಿದ್ದ ಮತ್ತು ಗೋಡ್ಸೆ ದೇಶ ವಿಭಜನೆಯ ವಿರುದ್ಧ ಇದ್ದರು ಎಂದು ಹಿಂದೂ ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಹೇಳಿದ್ದರು.