ಮುಸ್ಲಿಮ್ ಯುವಕರಿಗೆ ಪೌರತ್ವ ಸಾಬೀತು ಪಡಿಸಲು ಹೇಳಿದ ಯುಐಡಿಎಐ: ಕಾನೂನು ಪ್ರಕಾರ ಇಂಥ ಆದೇಶ ತಪ್ಪು ಎಂದ ತಜ್ಞರು

0
1457

ಸನ್ಮಾರ್ಗ ವಾರ್ತೆ

ಹೈದರಾಬಾದ್, ಫೆ.19: ಪೌರತ್ವ ಸಾಬೀತು ಪಡಿಸಲು ಆಗ್ರಹಿಸಿ ಹೈದರಾಬಾದಿನ ಮೂವರು ಮುಸ್ಲಿಮ್ ಯುವಕರಿಗೆ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ನೋಟಿಸು ಕಳುಹಿಸಿದೆ. ಯುವಕರು ಭಾರತ ಪ್ರಜೆಗಳಲ್ಲ ಎಂದು ದೂರು ಬಂದ ಹಿನ್ನೆಲೆಯಲ್ಲಿ ಯುಐಡಿಎಐ ಅಥಾರಿಟಿ ಪೌರತ್ವ ಸಾಬೀತು ಪಡಿಸುವಂತೆ ಸೂಚಿಸಿದೆ. ನಕಲಿ ದಾಖಲೆ ಬಳಸಿ ಆಧಾರ ಪಡೆದುಕೊಂಡಿಲ್ಲ ಎಂಬುದಕ್ಕೆ ಪುರಾವೆ ಕೊಡುವಂತೆ ಫೆಬ್ರುವರಿ 3ಕ್ಕೆ ಅಥಾರಿಟಿ ಹೈದರಾಬಾದಿನ ರೀಜನಲ್ ಕಚೇರಿಯಿಂದ ಮೂವರಿಗೆ ನೋಟಿಸು ಜಾರಿ ಮಾಡಲಾಗಿದ್ದು ಮೂವರು ಪೌರತ್ವ ಸಾಬೀತು ಪಡಿಸುವ ಸರ್ಟಿಫಿಕೆಟಿನ ಮೂಲ ಪ್ರತಿಯನ್ನು ಫೆಬ್ರವರಿ 20ರಂದು ತನಿಖಾ ಅಧಿಕಾರಿಯ ಮುಂದೆ ಹಾಜರುಪಡಿಸಬೇಕಾಗಿದೆ. ದಾಖಲೆ ಹಾಜರುಪಡಿಸದಿದ್ದರೆ ಆಧಾರ್ ನಂಬ್ರ ರದ್ದಾಗಲಿದೆ. ಇದೇವೇಳೆ ಪೌರತ್ವ ಸಾಬೀತುಪಡಿಸುವ ದಾಖಲೆ ಯಾವುದೆಂದು ಅಥಾರಿಟಿ ತಿಳಿಸಿಲ್ಲ. 2016ರ ಆಧಾರ್ ಕಾನೂನು ಪ್ರಕಾರ ಆಧಾರ್ ನಂಬರುಗಳು ವ್ಯಕ್ತಿಯ ವಾಸ ದಾಖಲೆ ಮಾತ್ರ. ಅದು ಪೌರತ್ವ ದಾಖಲೆಯಲ್ಲ ಎಂದು ಹೇಳುತ್ತದೆ. ಭಾರತದಲ್ಲಿ ವಾಸವಿರುವ ವಿದೇಶಿಯರಿಗೆ ಆಧಾರ್ ಗೆ ಅರ್ಜಿ ಸಲ್ಲಿಸುವ ಅರ್ಹತೆ ಇದೆ. ಆದರೆ ಭಾರತದಲ್ಲಿ 182 ದಿನವಾದರೂ ವಾಸಿಸಿರಬೇಕಾಗಿದೆ. ಘಟನೆ ಬಹಿರಂಗವಾದ ಬಳಿಕ ಯುಐಡಿಎಐ ಕ್ರಮ ಪ್ರಶ್ನಿಸಿದ ಹಲವರು ರಂಗಪ್ರವೇಶಿಸಿದ್ದಾರೆ. ಪೌರತ್ವ ಸಾಬೀತುಪಡಿಸುವಂತೆ ಹೇಳುವ ಅಧಿಕಾರ ಅಥಾರಿಟಿಗಿಲ್ಲ ಎಂದು ಇವರು ಹೇಳುತ್ತಿದ್ದಾರೆ.

ಯುಐಡಿಎಐಗೆ ಜನರಲ್ಲಿ ಪೌರತ್ವ ಸಾಬೀತುಪಡಿಸಲು ಹೇಳುವ ಅಧಿಕಾರ ಇಲ್ಲ ಎಂದು ಯುವಕರ ವಕೀಲ ಮುಝಫರುಲ್ಲ ಖಾನ್ ಶಾಪತ್ ಹೇಳಿದರು. ಆಧಾರ್ ಕಾನೂನು ಪ್ರಕಾರ ಒಬ್ಬನ ಐಡಿಯ ಕುರಿತು ಸಂದೇಹ ಉಂಟಾದರೆ ಆಧಾರ್ ನಂಬರ್ ರದ್ದುಪಡಿಸಬೇಕು. ಅಲ್ಲದೆ ಪೌರತ್ವ ಸಾಬೀತುಪಡಿಸಲು ಹೇಳುವಂತಿಲ್ಲ. ಅನಕ್ಷರಸ್ಥ ಕಾರ್ಮಿಕ ಕುಟುಂಬದ ಯುವಕರು ಹೈದರಬಾದಿನಲ್ಲಿ ವಾಸಿಸುತ್ತಿದ್ದಾರೆ. ದಾಖಲೆಗಳು ಹಾಜರುಪಡಿಸಿ ಪೌರತ್ವ ಸಾಬೀತುಪಡಿಸಲಾಗುವುದೆಂದು ವಕೀಲರು ನಿರೀಕ್ಷೆ ವ್ಯಕ್ತಪಡಿಸಿದರು.