ಉಳ್ಳಾಲ: “ಕುರ್‌ಆನಿನಡೆಗೆ ಮರಳಿರಿ” ಅಭಿಯಾನದ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮ
ಮಂಗಳೂರು(ಸನ್ಮಾರ್ಗ ವಾರ್ತೆ): ಜಮಾಅತೆ ಇಸ್ಲಾಮಿ ಹಿಂದ್ ಅಕ್ಕರೆಕೆರೆ-ಉಳ್ಳಾಲ ವರ್ತುಲದ ವತಿಯಿಂದ ಅ.28ರಂದು ಕುರ್‌ಆನಿನೆಡೆಗೆ ಮರಳಿರಿ ರಾಷ್ಟ್ರೀಯ ಮಟ್ಟದ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮವು ಅಕ್ಕರೆಕೆರೆಯ ಬಿ ಹೆಚ್ ಗ್ರೌಂಡ್‌ನಲ್ಲಿ ಜರುಗಿತು.
ಬೋಳಂಗಡಿಯ ಹವ್ವಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮದನಿಯವರು ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯಿರಿ ಎಂಬ ಕೇಂದ್ರೀಯ ವಿಷಯದಲ್ಲಿ ಮಾತನಾಡಿ, ಪ್ರವಾದಿ(ಸ)ರನ್ನು ಅನುಸರಿಸುವುದು ಮುಸ್ಲಿಮರ ಜೀವನದ ಮುಖ್ಯ ಧ್ಯೇಯ ವಾಗಿರಬೇಕೆಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿಯವರು ಮಾತನಾಡುತ್ತಾ, ಕುರ್‌ಆನ್ ನೆಡೆಗೆ ಮರಳುವುದು ಇಂದಿನ ಮುಸ್ಲಿಮರ ಸರ್ವಾಂಗೀಣ ಸಮಸ್ಯೆಗಳಿಗೆ ಪರಿಹಾರ ಎಂಬ ಸಂದೇಶವನ್ನಿತ್ತರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಉಳ್ಳಾಲ ಶಾಖೆಯ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಕರೀಮ್ ಮತ್ತು ಅಕ್ಕರೆಕೆರೆ ವರ್ತುಲ ಸಂಚಾಲಕ ಉಮರ್ ಕೆ.ಯು ಉಪಸ್ಥಿತರಿದ್ದರು. ಸುಲ್ತಾನ್ ನಬೀಲ್ ರವರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಗಿ, ಸ್ಥಾನೀಯ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್‌ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಶಾಖೆಯ ಸದಸ್ಯ ನಿಝಾಮುದ್ದೀನ್ ಉಮರ್ ಕಾರ್ಯಕ್ರಮ, ನಿರೂಪಿಸಿ ಧನ್ಯವಾದವಿತ್ತರು.












