ಉಳ್ಳಾಲ ದರ್ಗಾ ಅಧೀನ ಮಸೀದಿಗಳಲ್ಲಿ ಇಂದಿನಿಂದ ಜುಮಾ ನಮಾಝ್‌

0
1017

ಸನ್ಮಾರ್ಗ ವಾರ್ತೆ

ಉಳ್ಳಾಲ, ಜೂ.11: ಉಳ್ಳಾಲ ಕೇಂದ್ರ ಜುಮಾ ಮಸೀದಿ ಹೊರತುಪಡಿಸಿ ಈ ಮಸೀದಿಯ ಅಧೀನದಲ್ಲಿರುವ ಎಲ್ಲ ಮಸೀದಿಗಳಲ್ಲಿ ಜೂ.12ರಿಂದ ಸಾಮೂಹಿಕ ನಮಾಝ್ ಮತ್ತು ಜುಮಾ ನಮಾಝ್ ಆರಂಭಿಸಲು ಉಳ್ಳಾಲ ದರ್ಗಾ ಸಮಿತಿ ನಿರ್ಧರಿಸಿದೆ.

ಗುರುವಾರ ನಡೆದ ಸಭೆಯಲ್ಲಿ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಜೂ.30ವರೆಗೆ ನಮಾಝ್ ನಿರ್ವಹಿಸದೇ ಯಥಾಸ್ಥಿತಿ ಕಾಪಾಡಿಕೊಂಡು ಬರಲು ನಿರ್ಧರಿಸಲಾಗಿದೆ ಹಾಗೂ ಇದರ ಅಧೀನದ ಮಸೀದಿಗಳಲ್ಲಿ ಶುಕ್ರವಾರದಿಂದ ನಮಾಝ್ ಆರಂಭಿಸಲು ತೀರ್ಮಾನಿಸಲಾಗಿದೆ.

ಸರಕಾರದ ಆದೇಶ, ಸೂಚನೆಯನ್ನು ಪಾಲಿಸಿಕೊಂಡು ಸಾಮೂಹಿಕ ಹಾಗೂ ಜುಮಾ ನಮಾಝ್ ನಿರ್ವಹಿಸಲಾಗುವುದು ಎಂದು ದರ್ಗಾ ಅಧ್ಯಕ್ಷ ರಶೀದ್ ಹಾಜಿಯವರು ಪ್ರಕಟನೆಯಲ್ಲಿ ತಿಳಿಸಿದ್ದು, ದರ್ಗಾ ಸಮೀಪದ ಹೊಸ ಮಸೀದಿಯಲ್ಲಿ 4೦ ಜನರನ್ನು ಒಳಗೊಂಡ ಜುಮಾ ನಮಾಝ್ ನಿರ್ವಹಿಸಲಾಗುವುದೆಂದು ದರ್ಗಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್ ತಿಳಿದ್ದಾರೆ.

ಪ್ರತೀ ಮೊಹಲ್ಲ ನಿವಾಸಿಗಳ ಮಸೀದಿ ಪ್ರವೇಶಕ್ಕೆ ಈ ಕೆಳಗಿನ ಕೆಲವು ನಿಬಂಧನೆಗಳನ್ನು ಮದನಿ ದರ್ಗಾ ಆಡಳಿತ ಸಮಿತಿಯು ವಿಧಿಸಲಾಗಿದ್ದು, ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಬರುವವರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕೆಂದು ಸಮಿತಿಯು ತಿಳಿಸಿದೆ.

1. ಅಝಾನ್‌ಗೆ ಐದು ನಿಮಿಷ ಮೊದಲು ಮಸೀದಿ ತೆರೆಯಲಾಗುವುದು ಮತ್ತು ನಮಾಝ ಆದ ತಕ್ಷಣ ಮಸೀದಿಯನ್ನು ಮುಚ್ಚಲಾಗುವುದು ಸುನ್ನತ್ ನಮಾಝ್ ಮನೆಯಲ್ಲಿ ನಿರ್ವಹಿಸಲಾಗುವುದು.

2.ನಮಾಝ್’ಗೆ ಸಾಲು ನಿಲ್ಲುವಾಗ ಮಾರ್ಕ್ ಹಾಕಲಾಗಿರುವ ಸ್ಥಳದಲ್ಲಿ ನಿಲ್ಲಬೇಕು ಮತ್ತು 2 ಅಡಿ ಅಂತರದಲ್ಲಿ ನಿಲ್ಲಬೇಕು.

3. ಮನೆಗಳಲ್ಲಿ ವುಝೂ ಮಾಡಿ ಬರಬೇಕು. ಮಸೀದಿಯ ಶೌಚಾಲಯ ಹಾಗೂ ವಾಶ್‌ರೂಮನ್ನು ಬಳಸಬಾರದು.

4. ಹ್ಯಾಂಡ್ ಸ್ಯಾನಿಟೈಸರನ್ನು ಬಳಸಬೇಕು. ಮಾಸ್ಕ್ ಹಾಕಿ ಮಸೀದಿಗೆ ಬರಬೇಕು ಮತ್ತು ಮಸೀದಿಯಿಂದ ಹೋಗುವ ತನಕ ಮಾಸ್ಕನ್ನು ತೆಗೆಯಬಾರದು.

5. ಯಾರಿಗೂ ಹಸ್ತಲಾಘವ ಮಾಡಬಾರದು ಯಾರನ್ನೂ ಆಲಂಗಿಸಬಾರದು ಕೇವಲ ಸಲಾಮ್ ಮಾತ್ರ ಹೇಳಿದರೆ ಸಾಕು.

6.10 ವರ್ಷದ ಕೆಳಗಿನ ಮಕ್ಕಳು ಮತ್ತು 65 ವರ್ಷದ ಮೇಲಿನ ಹಿರಿಯರು ಮಸೀದಿಗೆ ಬರದಿರುವುದೇ ಉತ್ತಮ ಅವರು ಮನೆಗಳಲ್ಲಿ ನಮಾಝ್ ನಿರ್ವಹಿಸಬೇಕು.

7. ಮಸೀದಿಗೆ ಬರುವಾಗ ಮುಸಲ್ಲಾಗಳನ್ನು ಅಥವಾ ನಮಾಝ್‌ಗಾಗಿ ಹಾಸುವ ಯಾವದೇ ಬಟ್ಟೆಯನ್ನು ತಮ್ಮ ತಮ್ಮ ಮನೆಗಳಿಂದ ತರಬೇಕು ಮತ್ತು ನಮಾಝ್ ನಿರ್ವಹಿಸಿದ ಬಳಿಕ ಅದನ್ನು ಕೊಂಡು ಹೋಗಬೇಕು

8. ಅಝಾನ್ ಆಗಿ 5 ನಿಮಿಷಗಳಲ್ಲಿ ನಮಾಝ್ ನಿರ್ವಹಿಸಲಾಗುವುದು ಮತ್ತು ಜುಮಾದ ಅವಧಿಯನ್ನು ಕಡಿತಗೊಳಿಸಲಾಗುವುದು.

9. ಜ್ಬರ, ಶೀತ, ಗಂಟಲು ನೋವು, ಕೆಮ್ಮು ಮುಂತಾದ ರೋಗಗಳಿರುವವರು ದಯವಿಟ್ಟು ಮಸೀದಿಗೆ ಬರಬಾರದು.

10. ವಿದೇಶಗಳಿಂದ ಹಾಗು ಹೊರ ರಾಜ್ಯಗಳಿಂದ ಬಂದವರು ಕ್ವಾರಂಟೈನ್ ಮುಗಿಸಿದ ಪ್ರಮಾಣಪತ್ರ ತೋರಿಸದೆ ಮಸೀದಿ ಪ್ರವೇಶಿಸಬಾರದು.

11. ಮಸೀದಿಯೊಳಗೆ ಅಥವಾ ಮಸೀದಿಯ ಅಂಗಳದಲ್ಲಿ ಗುಂಪುಗೂಡಿ ನಿಲ್ಲಬಾರದು ನಮಾಝ್ ನಿರ್ವಹಿಸಿದ ತಕ್ಷಣ ಅವರವರ ಮನೆಗೆ ತೆರಳಬೇಕು.

12. ಈ ಊರಿಗೆ ಸಂಬಂಧ ಪಡದವರು ಹಾಗೂ ದಾರಿಹೋಕರು ಅವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ ಸ್ಥಳದಲ್ಲಿ ನಮಾಝ್ ನಿರ್ವಹಿಸುವುದು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.