ಸನ್ಮಾರ್ಗ ವಾರ್ತೆ
ಖಾಸಗಿಯಾಗಿ ಟ್ರಾವೆಲ್ಸ್ ಮೂಲಕ ಹಜ್ ನಿರ್ವಹಿಸಲು ಸಿದ್ಧರಾಗಿರುವ 42 ಸಾವಿರಕ್ಕಿಂತಲೂ ಅಧಿಕ ಭಾರತೀಯರ ನೋಂದಣಿ ಆಗದೆ ಅತಂತ್ರ ಸ್ಥಿತಿಯಲ್ಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾಕ್ಕೆ ಭೇಟಿ ಕೊಟ್ಟಾಗ ಈ ಬಗ್ಗೆ ಆಶಾವಾದ ಉಂಟಾಗಿತ್ತು. ಸೌದಿ ನಾಯಕರೊಂದಿಗೆ ಚರ್ಚಿಸಿ ಪ್ರಧಾನಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುತ್ತಾರೆ ಎಂದು ನಂಬಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಹಾಗೆಯೇ ಉಳಿದಿದ್ದು ನಿರೀಕ್ಷೆ ಕಮರಿದೆ.
ಕಳೆದ ಫೆಬ್ರವರಿಯಲ್ಲಿಯೇ ಇವರ ನೋಂದಣಿ ಸಹಿತ ಎಲ್ಲಾ ಪ್ರಕ್ರಿಯೆಗಳು ಮುಗಿಯಬೇಕಿತ್ತು. ಖಾಸಗಿ ಟ್ರಾವೆಲ್ಸ್ ಗಳು ಈ ಎಲ್ಲ ಪ್ರಕ್ರಿಯೆ ಮುಗಿದಿದೆ ಎಂದೇ ಭಾವಿಸಿದ್ದರು. ಆದರೆ ಮುಗಿದಿಲ್ಲ ಎಂಬುದನ್ನು ಕೇಂದ್ರ ಸರಕಾರ ಇವರಿಗೆ ತಿಳಿಸಿಲ್ಲ. ಇದೀಗ ಈ ಸಮಸ್ಯೆಗೆ ಆಪರೇಟರ್ಗಳ ವೈಫಲ್ಯವೇ ಕಾರಣ ಎಂದು ಸರ್ಕಾರ ಹೇಳುತ್ತಿದೆ. ಆದರೆ ಹಜ್ ಗೆ ಹೊರಟು ನಿಂತವರು ಮಾತ್ರ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
ಸೌದಿಗೆ ಪ್ರಧಾನಿ ಭೇಟಿ ನೀಡಿದಾಗ ಈ ವಿಷಯದಲ್ಲಿ ಚರ್ಚೆ ನಡೆಸುತ್ತಾರೆ ಎಂದು ನಂಬಲಾಗಿತ್ತು ಆದರೆ ಕಾಶ್ಮೀರಿ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರು ದಿಢೀರ್ ಮರಳಿದ್ದಾರೆ ಹಾಗಂತ ಪ್ರಧಾನಿಯ ಮಾತುಕತೆಯ ಪಟ್ಟಿಯಲ್ಲಿ ಈ ವಿಷಯ ಇತ್ತೇ ಅನ್ನುವುದು ಸ್ಪಷ್ಟವಾಗಿಲ್ಲ.
ಕೇವಲ ಕೇರಳದಿಂದಲೇ 11000 ಮಂದಿ ಖಾಸಗಿಯಾಗಿ ಹಜ್ ನಿರ್ವಹಿಸಲು ಸಿದ್ಧತೆ ನಡೆಸಿದ್ದರು. ಒಬ್ಬೊಬ್ಬರಿಗೆ 6 ಲಕ್ಷ ರೂಪಾಯಿಯನ್ನು ಖಾಸಗಿ ಸಂಸ್ಥೆಗಳು ನಿಗದಿಪಡಿಸಿತ್ತು. ಅನೇಕರು ಪೂರ್ತಿ ಹಣವನ್ನು ಈಗಾಗಲೇ ಕಟ್ಟಿದ್ದಾರೆ. ಯಾತ್ರಿಕರಿಂದ ಪಡೆದುಕೊಂಡ ಅಡ್ವಾನ್ಸ್ ಹಣವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವುದಾಗಿ ಖಾಸಗಿ ಸಂಸ್ಥೆಗಳು ಹೇಳುತ್ತಿವೆ.
ಸರಕಾರಿ ಕೋಟದಲ್ಲಿ ಹಜ್ ನಿರ್ವಹಿಸಲು ಅವಕಾಶ ಪಡೆದವರಲ್ಲಿ ಅನೇಕರು ಖಾಸಗಿ ಸಂಸ್ಥೆಗಳಲ್ಲಿ ಹಜ್ ಪ್ರಯಾಣ ಮಾಡುವುದಕ್ಕೆ ಇಷ್ಟಪಟ್ಟಿದ್ದರು. ಮಾತ್ರ ಅಲ್ಲ ಸರಕಾರಿ ಕೋಟವನ್ನು ತಿರಸ್ಕರಿಸಿ ಖಾಸಗಿ ಸಂಸ್ಥೆಗಳ ಮೂಲಕ ಹಜ್ ಗೆ ಹೋಗಲು ತೀರ್ಮಾನಿಸಿದ್ದರು. ಮಾತ್ರ ಅಲ್ಲ ಖಾಸಗಿ ಹಜ್ಜ್ ಸಂಸ್ಥೆಗಳು ಕೂಡ ತಮ್ಮ ನಿಗದಿತ ಮೊತ್ತವನ್ನು ಕಡಿಮೆಗೊಳಿಸಿ ಗ್ರಾಹಕರನ್ನು ಆಕರ್ಷಿಸಿತ್ತು. ಇದೀಗ ಹೀಗೆ ಆಕರ್ಷಿತರಾದವರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಬೇಕಾದ ಕೇಂದ್ರ ಸರಕಾರ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ.
ಈ ಬಾರಿ ಒಂದು ಲಕ್ಷದ ಎಪ್ಪತ್ತೈದು ಸಾವಿರ ಮಂದಿಗೆ ಭಾರತದಿಂದ ಹಜ್ ನಿರ್ವಹಿಸುವುದಕ್ಕೆ ಅವಕಾಶ ಸಿಕ್ಕಿತ್ತು . ಇದರಲ್ಲಿ 30 ಶೇಕಡ ಮಂದಿ ಖಾಸಗಿಯಾಗಿ ಹಜ್ ನಿರ್ವಹಿಸುವುದಕ್ಕೆ ಅವಕಾಶವಿತ್ತು. ಅಂದರೆ 52500 ಮಂದಿ ಖಾಸಗಿ ಯಾಗಿ ಹಜ್ ನಿರ್ವಹಿಸಬಹುದಿತ್ತು. ಇದೀಗ ಅವರಲ್ಲಿ 42,500 ಮಂದಿ ಹಜ್ ನಿರ್ವಹಿಸಲಾಗದ ಸ್ಥಿತಿಗೆ ತಲುಪಿದ್ದಾರೆ.












