ಸನ್ಮಾರ್ಗ ವಾರ್ತೆ-
ಮುಝಪ್ಫರ್ ನಗರ್, ಜ.1: ಮದುವೆ ನಿಶ್ಚಯವಾಗಿದ್ದ ಸಹೋದರಿಯರ ಮೇಲೆ ಇಲ್ಲಿನ ಸರ್ವತ್ ರಸ್ತೆ ಪ್ರದೇಶದಲ್ಲಿ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮುಂದಿನ ತಿಂಗಳು ಮದುವೆಯಾಗಬೇಕಾಗಿದ್ದ ರುಖಿಯ್ಯಾ ಪರ್ವೀನ್ ಪೆಟ್ಟು ತಿಂದು ನಿಶ್ಶಕ್ತರಾಗಿದ್ದಾರೆ. ಮದುವೆ ನಿಶ್ಚಯವಾಗಿರುವ ಅವರ ಸಹೋದರಿ ಮುಬಶ್ಶೀರ ಪೊಲೀಸರ ಹಲ್ಲೆಯಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ. ಪೌರತ್ವ ಪ್ರತಿಭಟನೆಯೊಂದಿಗೆ ಯಾವುದೇ ಸಂಬಂಧ ಇಲ್ಲದ ಇವರ ಅಜ್ಜ ಹಾಜಿ ಹಾಮಿದ್ ಹುಸೈನ್ರನ್ನೂ ಮಾರಣಾ೦ತಿಕವಾಗಿ ಥಳಿಸಲಾಗಿದೆ. ಮೊಮ್ಮಕ್ಕಳ ಮದುವೆಗೆ ಹಾಜಿಯವರು ಸಂಗ್ರಹಿಸಿಟ್ಟಿದ ವಸ್ತುಗಳ ಸಹಿತ ಎಲ್ಲವನ್ನೂ ಪುಡಿಗಟ್ಟಲಾಗಿದೆ. ಪ್ರತಿಭಟನೆಯ ಹೆಸರಿನಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿದ ದಾಂಧಲೆಗೆ ಈ ಕುಟುಂಬ ಜೀವಂತ ಸಾಕ್ಷಿಯಾಗಿದೆ.
ಮಹಿಳಾ ಪೊಲೀಸರು ಕೂಡ ಇರಲಿಲ್ಲ. ರಾತ್ರೆಯ ವೇಳೆ ಮನೆಯೊಳಗೆ ನುಗ್ಗಿ ರುಖಿಯಾರಿಗೆ ಪೊಲೀಸರು ಹೊಡೆದರು. ಹಣೆಯಲ್ಲಿ ಎಂಟು ಕಡೆ ಗಾಯಗಳಾಗಿದ್ದು ಹೊಲಿಗೆ ಹಾಕಲಾಗಿದೆ. ಜೀವನದಲ್ಲಿ ಈವರೆಗೂ ಕೇಳದ ನಿಂದನೆಯನ್ನು ಕೇಳಬೇಕಾಯಿತು. ವರ್ಷದ ಹಿಂದೆ ತಾಯಿಯನ್ನು ಕಳಕೊಂಡಿದ್ದ ಎರಡು ಹೆಣ್ಣುಮಕ್ಕಳ ಮದುವೆಯ ಎಲ್ಲ ಸಿದ್ಧತೆ ಮಾಡಿ ಕಾಯುತ್ತಿದ್ದ ಎಪ್ಪತ್ತನಾಲ್ಕು ವರ್ಷದ ಅಜ್ಜ ಹಾಜಿ ಮುಹಮ್ಮದ್ ಹುಸೈನ್ ರನ್ನು ಥಳಿಸಲಾಯಿತಲ್ಲದೆ, ಮದುವೆಯ ಸಾಮಾನುಗಳನ್ನು ಪೊಲೀಸರು ನಾಶಪಡಿಸಿದರು. ಹಾಜಿಯವರ ಮಗ ಸಾಜಿದ್ರನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿದ್ದಾರೆ. ಈಗಲೂ ಮುಬಶ್ಶೀರ ಮಾನಸಿಕ ಆಘಾತದಿಂದ ಹೊರಬಂದಿಲ್ಲ. ಅವರನ್ನು ತಾಯಿಯ ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ.
ಫೆಬ್ರುವರಿ ನಾಲ್ಕಕ್ಕೆ ಮದುವೆ ನಡೆಯಲಿದ್ದು ಆಹಾರ ಸಾಮಗ್ರಿಗಳನ್ನು ಮಾತ್ರ ಹಾಜಿ ಸಂಗ್ರಹಿಸುವುದು ಬಾಕಿ ಉಳಿದಿತ್ತು. ಮೊಮ್ಮಕ್ಕಳಿಗಾಗಿ ತೆಗೆದಿದ್ದ ಹಣ, ಚಿನ್ನವನ್ನು ಪೊಲೀಸರು ಕೊಂಡುಹೋಗಿದ್ದಾರೆ. ಲಕ್ಷಾಂತರ ರೂಪಾಯಿಯ ಆಸ್ತಿಯನ್ನು ನಾಶಪಡಿಸಿದರೂ ಎಫ್ಐಆರ್ ಕೂಡ ದಾಖಲಿಸಿಲ್ಲ. ಬೆದರಿಕೆ ಹಾಕುತ್ತಿದ್ದಾರೆ ಎಂದು ಹಾಜಿಯವರು ಹೇಳಿದ್ದಾರೆ. ತನ್ನ ಮೇಲೆ ನಾಲ್ಕೈದು ಪೊಲೀಸರು ಮುಗಿಬಿದ್ದು ಹೊಡೆದರು. ಕಾಲಿಗೆ, ಕತ್ತಿಗೆ ಪೆಟ್ಟಾಗಿದೆ ಎಂದು ಹಾಜಿ ಹೇಳಿದ್ದಾರೆ.












