ಸನ್ಮಾರ್ಗ ವಾರ್ತೆ-
ವಾಷಿಂಗ್ಟನ್, ಜ.7: ಖಾಸಿಂ ಸುಲೈಮಾನಿಯ ಹತ್ಯೆಯ ನಂತರ ಬಿಗಡಾಯಿಸಿದ ಅಮೆರಿಕ-ಇರಾನ್ ಸಂಬಂಧದ ನಡುವೆ ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಸಾರಿಫ್‍ರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ.
ನ್ಯೂಯಾರ್ಕಿನಲ್ಲಿ ನಡೆಯುವ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಜವಾದ್ ಸಾರಿಫ್ ವೀಸಾಕ್ಕೆ ಅರ್ಜಿ ಹಾಕಿದ್ದರು. ಆದರೆ ಅಮೆರಿಕ ವೀಸಾ ನೀಡಲು ನಿರಾಕರಿಸಿತು. ಗುರುವಾರ ನಡೆಯುವ ಭದ್ರತಾ ಸಮಿತಿ ಸಂಭೆಯಲ್ಲಿ ಅವರು ಪಾಲ್ಗೊಳ್ಳುವುದಕ್ಕೆ ಇದು ಅಡ್ಡಿಯಾಗಿದೆ. ಜನರಲ್ ಸುಲೈಮಾನಿ ಹತ್ಯೆಯ ನಂತರ ಮೊದಲ ಬಾರಿ ಜವಾದ್ ಸಾರಿಫ್ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಜಗತ್ತನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಎಂದು ಸೂಚನೆಯಿತ್ತು. ವಿಶ್ವಸಂಸ್ಥೆಯ ಶೃಂಗ ಸಭೆಗಳಿಗೆ ಸದಸ್ಯ ದೇಶಗಳ ವಿದೇಶ ಅಧಿಕಾರಿಗಳಿಗೆ ವೀಸಾ ನೀಡಬೇಕೆಂದು 1947ರ ಒಪ್ಪಂದವಿದ್ದು ಅಮೆರಿಕ ಅದನ್ನು ಉಲ್ಲಂಘಿಸಿದೆ. ಇರಾನ್‍ನ ಸೇನೆಯ ಉನ್ನತ ಸ್ಥಾನಮಾನ ಹೊಂದಿದ್ದ ಮೇಜರ್ ಜನರಲ್ ಸುಲೈಮಾನಿಯನ್ನು ಕಳೆದ ಶುಕ್ರವಾರ ಅಮೆರಿಕ ಇರಾಕ್‍ನಲ್ಲಿ ಡ್ರೋಣ್ ದಾಳಿ ಮೂಲಕ ಹತ್ಯೆ ಮಾಡಿತ್ತು. ನಂತರ ಇರಾನ್ ಮತ್ತು ಅಮೆರಿಕಗಳ ನಡುವೆ ಉದ್ವಿಗ್ನ ಸ್ಥಿತಿ ನೆಲೆಸಿದೆ.












