ಅಮೇರಿಕ- ಇಸ್ರೇಲ್ ಡಬಲ್ ಸ್ಟ್ಯಾಂಡರ್ಡ್ ಪರಮಾಣು ಧೋರಣೆ; ಇರಾನ್ ವಿರುದ್ಧ ಗುಡುಗು, ಇಸ್ರೇಲ್ ಪರ ನಗು?

0
5297

✍️ ಅಬೂ ಕುತುಬ್

(ವಿಚಾರ ದರ್ಶನ – 4)

ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಇತ್ತೀಚೆಗೆ ಇರಾನ್‌‌ನ ಕುರಿತಾದ ಚರ್ಚೆ, ಉದ್ವಿಗ್ನತೆಗಳು ಜಾಗತಿಕವಾಗಿ ಎಲ್ರ ಗಮನ ಸೆಳೆಯಿತು. ಇನ್ನೊಂದು ಕಡೆ ಇಸ್ರೇಲ್‌ ತನ್ನ ಸಾಮ್ರಾಜ್ಯವನ್ನು ಶಸ್ತ್ರಾಸ್ತ್ರಗಳ ಮೂಲಕ ಹೆಚ್ಚಿಸುತ್ತಾ, ಬಲಪಡಿಸುತ್ತಾ ಇದೆ. ಇದರ ಹಿಂದೆ ಅಮೆರಿಕದ ಉದ್ದೇಶಪೂರ್ವಕ ಮೌನ ಮತ್ತು ಜಾಗತಿಕ ಸಂಸ್ಥೆಗಳ ನಿರ್ಲಕ್ಷ್ಯವೂ ಬಹಳ ಪ್ರಮುಖವಾಗಿದೆ. ಇಸ್ರೇಲ್ ತನ್ನ ಪರಮಾಣು ಶಸ್ತ್ರಾಗಾರವನ್ನು ಸಂಪೂರ್ಣವಾಗಿ ಎಲ್ಲಾ ರೀತಿಯ ತನಿಖೆ ಮತ್ತು ನಿಯಂತ್ರಣದಿಂದ ಹೊರಗೆ ಇಟ್ಟಿದೆ. 1968 ರ ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ಇಸ್ರೇಲ್, ಅಂತಾರಾಷ್ಟ್ರೀಯ ಪರಮಾಣು ಧೋರಣೆ, ನಿಯಮಗಳಿಗೆ ಒಳಪಡುವುದಿಲ್ಲ. ಇದರರ್ಥ, ಇಸ್ರೇಲ್‌ನ ಯಾವುದೇ ಪರಮಾಣು ಸೌಲಭ್ಯವು ಅಂತಾರಾಷ್ಟ್ರೀಯವಾಗಿ ಯಾವುದೇ ತಪಾಸಣೆಗೆ ಒಳಪಡಿಸುವಂತಿಲ್ಲ.

ಅಮೆರಿಕ ವಿಜ್ಞಾನಿಗಳ ಒಕ್ಕೂಟದ ಅಂದಾಜು ಪ್ರಕಾರ, ಇಸ್ರೇಲ್‌ನಲ್ಲಿ 80 ರಿಂದ 400 ನಡುವಿನ ಪರಮಾಣು ಶಸ್ತ್ರಾಸ್ತ್ರಗಳ ಸಿದ್ದತೆ ಇದೆ. ಡಿಮೋನಾ ಪರಮಾಣು ಕೇಂದ್ರ ಈ ಶಸ್ತ್ರಸಾಮರ್ಥ್ಯವನ್ನು ಹೊಂದಿರುವ ಕೇಂದ್ರಬಿಂದುವಾಗಿದೆ. ಫ್ರಾನ್ಸ್‌ನ ಸಹಾಯದಿಂದ 1950ರ ದಶಕದಲ್ಲಿ ನಿರ್ಮಿಸಲಾದ ಈ ಕೇಂದ್ರ, ನೆಗೆವ್ ಮರುಭೂಮಿಯ ಆಳದಲ್ಲಿ ಅತಿ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಮೊದಲಿಗೆ 26 ಮೆಗಾವ್ಯಾಟ್ ಶಕ್ತಿಯ ರಿಯಾಕ್ಟರ್ ಹೊಂದಿದ್ದ ಈ ಕೇಂದ್ರ, ಇತ್ತೀಚಿನ ವರ್ಷಗಳಲ್ಲಿ ಶಕ್ತಿವೃದ್ಧಿ ಹೊಂದಿ ವಾರ್ಷಿಕವಾಗಿ ಎರಡು ಪರಮಾಣು ಬಾಂಬ್‌ಗಳಿಗೆ ಬೇಕಾದಷ್ಟು ಪ್ಲುಟೋನಿಯಂ ಉತ್ಪಾದಿಸುತ್ತಿದೆ ಎಂದು ವರದಿಯಾಗಿದೆ.

ಡಿಮೋನಾ ಕೇಂದ್ರದ ಭದ್ರತೆ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ. 1999ರ ಉಪಗ್ರಹ ವಿಶ್ಲೇಷಣೆಯ ವೇಳೆ ಡಿಮೋನಾದ ಕಾಂಕ್ರೀಟ್ ಗೋಡೆಗಳು ನ್ಯೂಟ್ರಾನ್ ವಿಕಿರಣದಿಂದ ದುರ್ಬಲಗೊಂಡಿವೆ ಎಂದು ಎಚ್ಚರಿಸಲಾಗಿದ್ದು, ಈ ಸೌಲಭ್ಯವು ತಂತ್ರಜ್ಞರ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ ಎಂಬ ಅಂಶವನ್ನು ಮತ್ತೆ ಸಾಬೀತಾಯಿತು. 2004 ಮತ್ತು 2015ರಲ್ಲಿ ಪ್ರಸಾರವಾದ ವರದಿಗಳ ಪ್ರಕಾರ, ಡಜನ್‌ಗಟ್ಟಲೆ ಕಾರ್ಮಿಕರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂಬ ಅಂಶ ಬಹಿರಂಗವಾಗಿವೆ. ಇಸ್ರೇಲ್ ಸರ್ಕಾರ ಈ ಬಗ್ಗೆ ಯಾವುದೇ ಹೊಣೆಗಾರಿಕೆಯನ್ನು ಇದುವರೆಗೆ ತೆಗೆದುಕೊಳ್ಳಲಿಲ್ಲ.

ಇಸ್ರೇಲ್ ತನ್ನ ಶಸ್ತ್ರಸಾಮರ್ಥ್ಯವನ್ನು ಕೇವಲ ರಕ್ಷಾತ್ಮಕವಾಗಿ ಇರಿಸಿಕೊಂಡಿಲ್ಲ. ತನ್ನ ಶತ್ರು ರಾಷ್ಟ್ರಗಳ ಶಾಂತಿಯುತ ಪರಮಾಣು ಯೋಜನೆಗಳ ವಿರುದ್ಧ ದಾಳಿಗೆ ಬಳಸಿದ ಇತಿಹಾಸವೂ ಇದೆ. 1981ರಲ್ಲಿ ಇರಾಕ್‌ನ ಒಸಿರಾಕ್ ರಿಯಾಕ್ಟರ್ ಮೇಲೆ ಇಸ್ರೇಲ್ ದಾಳಿ ನಡೆಸಿತು, ನಂತರ ಹಲವು ಇರಾನಿ ಪರಮಾಣು ವಿಜ್ಞಾನಿಗಳನ್ನು ಹತ್ಯೆಗೊಳಿಸಿರುವುದು ವರದಿಯಾಗಿದೆ. ಅಲ್ಲದೇ, ಇರಾನ್‌ನಲ್ಲಿ ತಾಂತ್ರಿಕ ದೌರ್ಬಲ್ಯ ಉಂಟುಮಾಡಿದ “ಸ್ಟಕ್ಸ್‌ನೆಟ್” ಎಂಬ ಸೈಬರ್ ವೈರಸ್ ಕೂಡ ಇಸ್ರೇಲ್-ಅಮೆರಿಕ ಸಂಯುಕ್ತ ಸಂಚುಕೃತಿಯನ್ನೇ ಸೂಚಿಸುತ್ತದೆ.

ಇಸ್ರೇಲ್ ತನ್ನ ಶಸ್ತ್ರಸಾಮರ್ಥ್ಯವನ್ನು ಜೆರಿಕೋ ಸರಣಿಯ ಕ್ಷಿಪಣಿಗಳ ಮೂಲಕ ಬಲಪಡಿಸಿದೆ. ಜೆರಿಕೋ I, II, ಮತ್ತು III ಮಾರುಕಟ್ಟೆಯಲ್ಲಿ ಇದ್ದು, ಇವು 500 ಕಿ.ಮೀದಿಂದ 7000 ಕಿ.ಮೀ ದೂರದವರೆಗೆ ಹಾರುವ ವ್ಯಾಪ್ತಿ ಹೊಂದಿವೆ. ಮಾತ್ರವಲ್ಲದೆ F-15, F-35 ಫೈಟರ್ ಜೆಟ್‌ಗಳು ಮತ್ತು ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ನೌಕೆಗಳು ಸಹ ಇಸ್ರೇಲ್ ಬಳಿ ಇರುವುದಾಗಿ ಅಂದಾಜಿಸಲಾಗಿದೆ. ಈ ಎಲ್ಲ ಶಕ್ತಿಯ ನಡುವೆಯೂ ಇಸ್ರೇಲ್ ತನ್ನ ಶಸ್ತ್ರಾಗಾರದ ಅಸ್ತಿತ್ವವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

1986ರಲ್ಲಿ ಇಸ್ರೇಲ್‌ನ ಡಿಮೋನಾದ ತಂತ್ರಜ್ಞ ಮೊರ್ಡೆಚೈ ವನುನು ಎಂಬವರು, ಇಸ್ರೇಲ್‌ನ ಪರಮಾಣು ಶಸ್ತ್ರಾಗಾರದ ಚಿತ್ರಗಳು ಹಾಗೂ ಮಾಹಿತಿ ಸಂಡೇ ಟೈಮ್ಸ್‌ಗೆ ನೀಡಿದ ನಂತರ, ಅವರನ್ನು ಇಸ್ರೇಲ್ ಗುಪ್ತಚರ ಸಂಸ್ಥೆಯ ಮೋಸಾದ್ ಏಜೆಂಟ್‌ಗಳು ಅಪಹರಿಸಿ ಇಸ್ರೇಲ್‌ಗೆ ಕರೆದುಕೊಂಡು ಹೋಗಿ 18 ವರ್ಷಗಳ ಜೈಲಿಗೆ ಹಾಕಿದರು. ಈ ವರದಿಯಿಂದ ಡಿಮೋನಾದಲ್ಲಿಯೇ ಮಾತ್ರ ನೂರಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ ನಡೆಯುತ್ತಿದೆ ಎಂಬುದು ಬಹಿರಂಗವಾಯಿತು.

ಇಸ್ರೇಲ್ ಅಮೆರಿಕದ ಬೆಂಬಲದೊಂದಿಗೆ ಇರಾನ್‌ನೊಂದಿಗೆ ಯುದ್ಧಕ್ಕೆ ಇಳಿದರೆ, ಡಿಮೋನಾ ಪರಮಾಣು ತಾಣ ನಮ್ಮ ಮೊದಲ ಗುರಿಯಾಗಿರುತ್ತದೆ ಎಂದು ಇತ್ತೀಚೆಗೆ ಇರಾನ್‌ನ ಸೇನಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಯುದ್ಧ ಮುಂದುವರಿದರೆ, ಇಸ್ರೇಲ್ ತನ್ನ ಶಕ್ತಿಯ ಅಡಿಪಾಯವಾಗಿರುವ ಡಿಮೋನಾವನ್ನು ರಕ್ಷಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆ ಮುಂದೆ ಬರುತ್ತದೆ. ಅದರ ಹೊರತಾಗಿ ಈ ಸೌಲಭ್ಯಕ್ಕೆ ಯುದ್ಧ ಹೊರತುಪಡಿಸಿ, ಯಾವುದೇ ರೀತಿಯ ತಾಂತ್ರಿಕ ವೈಫಲ್ಯದಿಂದ ಅಪಾಯ ಸಂಭವಿಸಿದರೆ, ಅದು ಈ ಪ್ರದೇಶದ ಲಕ್ಷಾಂತರ ಜನರ ಜೀವನದ ಮೇಲೆ ಶಾರೀರಿಕ, ಆರ್ಥಿಕ ಹಾಗೂ ಅಲ್ಲಿನ ಪರಿಸರ ಮೂಲದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ತನ್ನ ಶಸ್ತ್ರಾಸ್ತ್ರಗಳ ಮೇಲೆ ಪಾರದರ್ಶಕ ನಿಲುವು ತಾಳದಿರಲು ಹೇಗೆ ಅನುಮತಿ ದೊರೆಯುತ್ತಿದೆ ಎಂಬುದು ಜಾಗತಿಕ ರಾಜಕೀಯ ಪ್ರಶ್ನೆಯಾಗಿದೆ. ಅಮೆರಿಕ, ಯುರೋಪ್ ರಾಷ್ಟ್ರಗಳು ತಮ್ಮ ಶಿಸ್ತು, ನಿಯಮ, ನಿಯಂತ್ರಣಗಳ ಮೇಲೆ ಜಂಭ ಕೊಚ್ಚಿಕೊಳ್ಳುವಾಗ, ಇಸ್ರೇಲ್‌ಗೆ ಮಾತ್ರ ಅವುಗಳಿಂದ ವಿನಾಯಿತಿ ನೀಡಿರುವುದು, ಅವರದ್ದು ‘ಡಬಲ್ ಸ್ಟಾಂಡರ್ಡ್’ ಧೋರಣೆಯಾಗಿದೆ ಎಂಬುದು ಆರೋಪವಾಗಿ ಉಳಿದಿಲ್ಲ.

ಈ ಬೆಳವಣಿಗೆಗಳು ಭಾರತ ಸೇರಿದಂತೆ ಎಲ್ಲಾ ಶಾಂತಿ ಬಯಸುವ ರಾಷ್ಟ್ರಗಳಿಗೆ ಎಚ್ಚರಿಕೆ, ಬೆದರಿಕೆಯ ಸಂಕೇತವಾಗಿದೆ. ಇರಾನ್‌ನ ಪರಮಾಣು ಯೋಜನೆಗೆ ವಿರುದ್ಧವಾಗಿ ತೀವ್ರ ನಿಲುವು ತಾಳುತ್ತಿರುವ ಜಾಗತಿಕ ಸಮುದಾಯ, ಇಸ್ರೇಲ್‌ನ ಶಸ್ತ್ರಸಜ್ಜಿತ ದಿಕ್ಕಿಗೆ ಮೌನ ವಹಿಸುವುದಾದರೆ, ಅದು ಬೇಟೆಗಾಗಿ ಕಾಯುತ್ತಾ ಕೂತಿರುವ ಬಾಂಬ್‌ನ ಮುಂದೆ ಮೌನವಾಗಿ ಕುಳಿತಂತೆ ಆಗುವುದು. ಡಿಮೋನಾದಂತಹ ಪರಮಾಣು ಸೌಲಭ್ಯಗಳನ್ನು ತಾತ್ಕಾಲಿಕ ಶಕ್ತಿಯ ಸಂಕೇತವಾಗಿ ನೋಡದೆ, ಜಾಗತಿಕ ಭದ್ರತಾ ಹಿತದೃಷ್ಟಿಯಿಂದ ಎಚ್ಚರಿಕೆ ರೂಪದಲ್ಲಿ ಪರಿಗಣಿಸುವ ಅಗತ್ಯತೆ ಇದೆ. ಇಲ್ಲದಿದ್ದರೆ, ಮುಂದಿನ ತಲೆಮಾರುಗಳಿಗೆ ನಾವು ಸುಂದರ ವಿಶ್ವವನ್ನು ಬಿಟ್ಟು ಹೋಗುವ ಬದಲು, ಶವಾಗಾರಗಳ ಸಾಮ್ರಾಜ್ಯವನ್ನು ಬಿಟ್ಟು ಹೋಗಬೇಕಾದೀತು.