ಉಡುಪಿ: “ಮಣ್ಣಿನೊಂದಿಗೆ ಕೈಗಳು, ಭಾರತದೊಂದಿಗೆ ಹೃದಯಗಳು” – ಚಿಣ್ಣರಿಂದ “ಪರಿಸರ ಜಾಗೃತಿ” | CIO ಚಿಣ್ಣರಿಂದ ವಿಶಿಷ್ಟ ಸುದ್ದಿಗೋಷ್ಟಿ

0
553

ಸನ್ಮಾರ್ಗ ವಾರ್ತೆ

“ಮಣ್ಣಿನೊಂದಿಗೆ ಕೈಗಳು, ಭಾರತದೊಂದಿಗೆ ಹೃದಯಗಳು” – ಚಿಣ್ಣರಿಂದ “ಪರಿಸರ ಜಾಗೃತಿ” ಮಾಸಿಕ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಆ ಹಿನ್ನೆಲೆಯಲ್ಲಿ ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.

ಪರಿಸರ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕಳಕಳಿಯೊಂದಿಗೆ ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (CIO), ಉಡುಪಿ ಜಿಲ್ಲೆಯು “ಮಣ್ಣಿನೊಂದಿಗೆ ಕೈಗಳು, ಭಾರತದೊಂದಿಗೆ ಹೃದಯಗಳು” ಎಂಬ ಶೀರ್ಷಿಕೆಯೊಂದಿಗೆ ಮಾಸಪೂರ್ತಿ ಹಸಿರು ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.

ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದರೊಂದಿಗೆ ಸಹಬಾಳ್ವೆಯ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಅಭಿಯಾನದ ಉದ್ಘಾಟನೆ ಮತ್ತು ಮಾಧ್ಯಮ ಸಂದರ್ಶನ: ಈ ಅಭಿಯಾನವನ್ನು ಹೂಡೆಯಲ್ಲಿ ಇರುವ ಸಾಲಿಹಾತ್ ಎಡ್ಯುಕೇಶನಲ್ ಟ್ರಸ್ಟ್ನಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಾಲಿಹಾತ್ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಗಣ್ಯಾತಿಥಿಗಳು ಅಧಿಕೃತ ಅಭಿಯಾನ ಲೋಗೊ ಬಿಡುಗಡೆ ಮಾಡಿ, ವಿದ್ಯಾರ್ಥಿಗಳೊಂದಿಗೆ ಸಾಂದರ್ಭಿಕ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇಂದು (27 ಜೂನ್ 2025) ಮಾಧ್ಯಮ ಮತ್ತು ಸಾರ್ವಜನಿಕರಿಗೆ ಅಭಿಯಾನದ ಉದ್ದೇಶ, ಕಾರ್ಯಕ್ರಮಗಳು ಮತ್ತು ನಾಗರಿಕರ ಪಾತ್ರವನ್ನು ಪರಿಚಯಿಸುವ ಮಾಧ್ಯಮ ಸಂವಾದ ಸಭೆ ನಡೆಯುತ್ತಿದೆ.

“ಪ್ರತಿ ಮಗುವಿಗೆ ಒಂದು ಗಿಡ” – ಜಿಲ್ಲೆಯಲ್ಲಿ 5,000 ಗಿಡ ನೆಡುವ ಗುರಿ: ಶಾಲೆ, ಮದ್ರಸಾ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ 5,000 ಗಿಡಗಳನ್ನು ನೆಡುವ ಯೋಜನೆಯು ಶಾಲಾ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಯೋಜನೆಯಾಗಿದೆ. “ಪರಿಸರ ವಾರ” ಆಚರಿಸಲು ಎಲ್ಲಾ ಶಾಲೆಗಳಿಗೆ CIO ಸಹಾಯ ನೀಡಲಿದೆ.

ಧಾರ್ಮಿಕ ಸಂದೇಶ – ಜುಮಾ ಖುತ್ಬಾ ಪ್ರಚಾರ: ಜಿಲ್ಲೆಯ 50 ಮಸೀದಿಗಳಲ್ಲಿ, ಪ್ರತಿ ಶುಕ್ರವಾರದ ಖುತ್ಬಾ ಮೂಲಕ ಪರಿಸರ ಸಂರಕ್ಷಣೆ ಕುರಿತು ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತ ಸಂದೇಶವನ್ನು ನೀಡಲಾಗುತ್ತದೆ.

ಮದ್ರಸಾ ಮತ್ತು CIO ಸರ್ಕಲ್ : ಸಹಭಾವ ಮತ್ತು ಸಹಕಾರ ಹೆಚ್ಚಿಸಲು ಜಿಲ್ಲೆಯ ಎಲ್ಲ ಮದ್ರಸಾಗಳಲ್ಲಿ ಮತ್ತು CIO ಸರ್ಕಲ್ ಗಳಲ್ಲಿ ಗಿಡ ನೆಡುವ ಸಮೂಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಸೃಜನಾತ್ಮಕ ಸ್ಪರ್ಧೆಗಳು – ಕಲೆ, ಕವನ, ಪ್ರಬಂಧ, ರೀಲ್ಸ್: ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರತಿ ಕಾಳಜಿ ವಹಿಸಲು ಚಿತ್ರಕಲೆ, ಪ್ರಬಂಧ, ಕವನ ಮತ್ತು ಸಾಮಾಜಿಕ ಮಾಧ್ಯಮ ರೀಲ್ಸ್ ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುವುದು.

ಪೋಷಕರು, ಮಾರ್ಗದರ್ಶಕರು ಮತ್ತು ಮಕ್ಕಳಿಗಾಗಿ ಕಾರ್ಯಾಗಾರ: ಉಡುಪಿ ದೋಡ್ಡನಗುಡ್ಡೆಯಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ Eco-Friendly Gardening Workshop ನಡೆಯಲಿದೆ.

ಸಫಾಯಿ ಅಭಿಯಾನ ಮತ್ತು ಸಾರ್ವಜನಿಕ ಗಿಡ ನೆಡುವ ಕಾರ್ಯಕ್ರಮ: 25 ಕಡೆಗಳಲ್ಲಿ ಪಾರ್ಕ್, ಶಾಲಾ ಆವರಣ, ಮದ್ರಸಾ ಕ್ಯಾಂಪಸ್, ಮಸೀದಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಗಿಡಗಳನ್ನು ನೆಡಲಾಗುತ್ತದೆ.

ಮನೆಯ ಮನೆಗೆ ಜಾಗೃತಿ ಅಭಿಯಾನ: 5,000 ಮನೆಗಳಿಗೆ CIO ಕಾರ್ಯಕರ್ತರು ಭೇಟಿ ನೀಡಿ ಪರಿಸರದ ಕುರಿತು ಜಾಗೃತಿ ಮೂಡಿಸುವರು.

ಸಾರ್ವಜನಿಕ ಜಾಗೃತಿ ರ್ಯಾಲಿಗಳು: ಉಡುಪಿ ನಗರ, ಮಲ್ಪೆ, ಹೂಡೆ, ತೋನ್ಸೆ, ಕಾಪು, ಕಟಪಾಡಿ, ಉದ್ಯಾವರ, ಕುಕ್ಕಿಕಟ್ಟೆ, ಕುಂದಾಪುರ, ಮಾವಿನಕಟ್ಟೆ,, ಗಂಗೊಳ್ಳಿ, ಶಿರೂರು, ಕಾರ್ಕಳ ಸೇರಿದಂತೆ ಕನಿಷ್ಠ 20 ಸ್ಥಳಗಳಲ್ಲಿ ರ‍್ಯಾಲಿಗಳನ್ನು ನಡೆಸಲಾಗುತ್ತದೆ.

“ಹಸಿರು ಸೆಲ್ಫಿ” ಅಭಿಯಾನ: “Selfie with a Sapling” – ಗಿಡ ಹಿಡಿದು ಮಕ್ಕಳ ಸಂತೋಷದ ಕ್ಷಣ ಸೆರೆಹಿಡಿಯುವುದು, “Green Hands Selfie” – ಹಸಿರು ಮಣ್ಣಿನ ಕೈಗಳು, “Tree Hug Selfie” – ಮರವನ್ನು ಅಪ್ಪಿಕೊಳ್ಳುವ ಫೋಟೋ.

ಸಮುದಾಯ ತೊಡಗಿಸು – ಕನಿಷ್ಠ 50 ಸ್ಥಳಗಳಲ್ಲಿ: ಮಕ್ಕಳು ತಮ್ಮ ಸ್ಥಳೀಯ ಸಮುದಾಯ ಕೇಂದ್ರಗಳು, ಮಸೀದಿಗಳು ಇತ್ಯಾದಿಗಳೊಂದಿಗೆ plantation ಕಾರ್ಯಕ್ರಮ ನಡೆಸಲು ಪ್ರೋತ್ಸಾಹಿಸಿವುದು.

ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರ ಜೊತೆಗೆ ಸಂಬಂಧ ಬಲಪಡಿಸು: ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು, ಪುರಸಭಾ ಸದಸ್ಯರು, ಶಿಕ್ಷಣಾಧಿಕಾರಿಗಳು ಇತ್ಯಾದಿಗಳಿಗೆ ಗಿಡವನ್ನು ಕೊಡುಗೆ ನೀಡಿ ಅಭಿಯಾನವನ್ನು ಬೆಂಬಲಿಸಲು CIO ಆಹ್ವಾನಿಸುತ್ತದೆ.

ಅಭಿಯಾನ ಸಮಾಪನ ಸಮಾರಂಭ – ಜುಲೈ 27, 2025 (ಭಾನುವಾರ): 1,000ಕ್ಕೂ ಹೆಚ್ಚು ಪಾಲುದಾರರು ಪಾಲ್ಗೊಳ್ಳಲಿರುವ ಸಮಾರಂಭದಲ್ಲಿ ಅಭಿಯಾನದ ಪರಿನಾಮ ಚರ್ಚೆ, ವಿಜೇತರಿಗೆ ಬಹುಮಾನ ವಿತರಣಾ, ಧಾರ್ಮಿಕ ಮತ್ತು ನಾಗರಿಕ ನಾಯಕರ ಸಂದೇಶ.

ಶೈಕ್ಷಣಿಕ ಕ್ಷೇತ್ರ ಭೇಟಿ – ಆಗಸ್ಟ್ 3, 2025: ಅಭಿಯಾನದ ಅಂತ್ಯ ಭಾಗವಾಗಿ ವಿದ್ಯಾರ್ಥಿಗಳು ಅಲ್ವಾಸ್ ಆಯುರ್ವೇದಿಕ ಉದ್ಯಾನವನಕ್ಕೆ ಭೇಟಿ ನೀಡುವರು. ಹಸಿರು ಜಗತ್ತಿನ ಬಗ್ಗೆ ಗೌರವ ಮತ್ತು ಅರಿವು ಬೆಳೆಯಲು ಇದು ಉಪಯುಕ್ತ ಅವಕಾಶವಾಗಲಿದೆ.