ಸನ್ಮಾರ್ಗ ವಾರ್ತೆ
ನೈನಿತಾಲ್: ಉತ್ತರಾಖಂಡದಲ್ಲಿ ಅರ್ಧ ಲಕ್ಷ ಜನರನ್ನು ಸಾಮೂಹಿಕವಾಗಿ ತೆರವು ಗೊಳಿಸಲಾಗುತ್ತಿದೆ. ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ರೈಲ್ವೆ ನಿಲ್ದಾಣದ ಸಮೀಪದ ಕಾಲನಿಯಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ 5000ದಷ್ಟು ಕುಟುಂಬ, ಮನೆಮಠವನ್ನು ತೆರವುಗೊಳಿಸಲಾಗುತ್ತಿದ್ದು ಇಲ್ಲಿನ ನಿವಾಸಿಗಳಲ್ಲಿ ಮುಸ್ಲಿಮರೇ ಅಧಿಕವಿದ್ದಾರೆ.
ಇವರು ಇರುವ ಸ್ಥಳ ರೈಲ್ವೆದ್ದೆಂದು ರೈಲ್ವೆ ಇಲಾಖೆ ಹೈಕೋರ್ಟಿನ ಮೊರೆಹೋಗಿತ್ತು. ಹೈಕೋರ್ಟು ಇವರನ್ನು ತೆರವುಗೊಳಿಸಲು ನೋಟೀಟಿಸು ನೀಡಿತು. ಏಳು ದಿವಸದ ಸಮಯವನ್ನು ತೆರವಿಗೆ ನಿಗದಿಗೊಳಿಸಿತು.
ಭೂಮಿ ಒತ್ತುವರಿಯನ್ನು ತೊರೆದು ಹೋಗಲು ಸಿದ್ಧರಿಲ್ಲದಿದ್ದರೆ ಅವರನ್ನು ಬಲವಂತದಿಂದ ತೆರವುಗೊಳಿಸಬಹುದು. ಅವರನ್ನು ತೆರವುಗೊಳಿಸಲು ಪೊಲೀಸರು ಮತ್ತು ಅರೆಸೇನಾ ಪಡೆಯ ಸಹಾಯ ಪಡೆಯಬಹುದು ಎಂದು ಕೋರ್ಟು ಹೇಳಿತು. ಇದಕ್ಕೆ ಖರ್ಚಾಗುವ ಹಣವನ್ನು ಅಕ್ರಮವಾಗಿ ವಾಸಿಸುವವರಿಂದ ದಂಡವಾಗಿ ವಸೂಲು ಮಾಡಬೇಕೆಂದು ಕೋರ್ಟು ಹೇಳಿದೆ.
ಇಲ್ಲಿ 4,365 ಮಂದಿ ಅಕ್ರಮ ವಾಸವಿರುವ ಪ್ರಕರಣವಿದ್ದು ಅವರನ್ನು ತೆರವುಗೊಳಿಸಲಾಗುವುದು ಎಂದು ನೈನಿತಾಲ್ ಜಿಲ್ಲಾಧಿಕಾರಿ ಹೇಳಿದರು. 2.2 ಕಿಲೊಮೀಟರ್ ಪ್ರದೇಶದಲ್ಲಿ ಮನೆಗಳು ಮತ್ತು ಇತರ ಕಟ್ಟಡಗಳಿವೆ. ಇದನ್ನು ಕೆಡವುವ ಕ್ರಮವನ್ನು ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು. ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುವ ಕುಟುಂಬಗಳು ಹೈಕೋರ್ಟು ಆದೇಶದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇವೇಳೆ ಹೈಕೋರ್ಟು ತೀರ್ಪಿನ ವಿರುದ್ಧ ಹಲ್ದ್ವಾನಿಯ ಕಾಂಗ್ರೆಸ್ ಶಾಸಕ ಸುಮಿತ್ ಹೃದಯೇಶ್ ನೇತೃತ್ವದಲ್ಲಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಜ.೫ ಗುರುವಾರ ವಿಚಾರಣೆ ಆರಂಭವಾಗಲಿದೆ. ಚೀಫ್ ಜಸ್ಟಿಸ್ ಡಿವೈ ಚಂದ್ರ ಚೂಡ್, ಜಸ್ಟಿಸ್ ಅಬ್ದುಲ್ ನಝೀರ್, ಜಸ್ಟಿಸ್ ವಿಎಸ್ ನರಸಿಂಹರ ಪೀಠದ ಮುಂದೆ ವಿಚಾರಣೆಗೆ ಅರ್ಜಿ ಬರಲಿದೆ. ಅರ್ಜಿದಾರರ ಪರ ಪ್ರಮುಖ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಲಿದ್ದಾರೆ.
ತೆರವು ಕ್ರಮದ ವಿರುದ್ಧ ಹಲ್ದ್ವಾನಿಯ ಬಾನ್ಭೂಲ್ಪುರಿಯ ವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳೆಯರು ಮಕ್ಕಳ ಸಹಿತ ಸಾವಿರಾರು ಮಂದಿ ರಸ್ತೆಯಲ್ಲಿ ಪ್ರತಿಭಟನೆಯ ಡೇರೆ ಹಾಕಿದ್ದು ಮಕ್ಕಳ ಶಿಕ್ಷಣಕ್ಕೆ ಅಡಚಣೆ ಆಗಲಿದೆ ಮತ್ತು ತಮಗೆ ವಾಸಿಸಲು ಬೇರೆ ಜಾಗ ಇಲ್ಲ ಎಂದು ಹೇಳುತ್ತಿದ್ದಾರೆ.
ಕೋರ್ಟಿನಲ್ಲಿ ಮಾಲಕತ್ವಕ್ಕೆ ಸಂಬಂಧಿಸಿದ ವಿವಾದ 29 ಎಕೆರೆಗೆ ಮಾತ್ರ ಇರುವುದು. ಆದರೆ ಈಗ 78 ಎಕರೆ ಸ್ಥಳವನ್ನು ರೈಲ್ವೆಗೆ ಸೇರಿದ ಸ್ಥಳವೆಂದು ಹೇಳಲಾಗುತ್ತಿದ್ದು, ಇದರ ತೆರವಿಗೆ ನೋಟಿಸು ನೀಡಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹೇಳಿದೆ.
ಘಟನೆಯಲ್ಲಿ ಮಾನವೀಯ ಪರಿಗಣನೆ ಅಗತ್ಯವಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. 70 ವರ್ಷಗಳಿಂದ ಇಲ್ಲಿ ವಾಸಿಸುವವರೂ ಇದ್ದಾರೆ. ಇಲ್ಲಿ ಎರಡು ಕಾಲೇಜುಗಳು ಪ್ರೈಮರಿ ಸ್ಕೂಲು, ೪ ಮಂದಿರ, ೧೦ ಮಸೀದಿ ,ನೀರಿನ ಟ್ಯಾಂಕ್ , ಹೆಲ್ತ್ ಸೆಂಟರ್ಗಳಿವೆ. ಇವೆಲ್ಲ ಇರುವ ಜಮೀನು ತೆರವು ನಡೆಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಹೇಳಿದ್ದು ಈ ವಿಷಯದಲ್ಲಿ ಮಾನವೀಯ ಪರಿಗಣನೆ ಅಗತ್ಯವೆಂದು ತಿಳಿಸಿದೆ. ಸರಕಾರಿ ಕಾಲೇಜು ಇರುವ ಜಾಗ ಹೇಗೆ ಅತಿಕ್ರಮಿತ ಸ್ಥಳ ಆಗುವುದೆಂದು ಎಐಎಂಐಎಂಎ ಅಧ್ಯಕ್ಷ ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.












