1971ರಲ್ಲಿ ಭಾರತಕ್ಕೆ ಶರಣಾಗಿದ್ದ ಪಾಕ್: ಫೋಟೋ ಹಂಚಿಕೊಂಡು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ತಾಲಿಬಾನ್

0
183

ಸನ್ಮಾರ್ಗ ವಾರ್ತೆ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಮರು ಸ್ಥಾಪನೆಗೊಂಡ ಬಳಿಕ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿ ತಕರಾರುಗಳು ಜೋರಾಗಿದೆ. ಇದೇ ವಿಷಯವಾಗಿ ಮಾತನಾಡಿದ್ದ ಪಾಕಿಸ್ತಾನದ ಸಚಿವರೋರ್ವರು, “ಹೀಗೆಯೇ ಇದು ಮುಂದುವರಿದರೆ ಅಫ್ಘಾನಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ” ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ರಚನೆಗೆ ಕಾರಣವಾದ 1971ರ ಯುದ್ಧದ ವೇಳೆ ಭಾರತಕ್ಕೆ ಶರಣಾಗಿದ್ದ ಫೋಟೋ ಹಂಚಿಕೊಂಡು ಪಾಕಿಸ್ತಾನವನ್ನು ಕಾಲೆಳೆದಿರುವ ತಾಲಿಬಾನ್, “ನಮ್ಮ ಮೇಲೆ ದಾಳಿ ಮಾಡುವ ಯೋಚನೆ ಇದ್ದವರು 1971ರ ಯುದ್ಧದ ಪರಿಣಾಮವನ್ನೊಮ್ಮೆ ನೆನೆಪಿಸಿಕೊಳ್ಳುವುದು ಒಳಿತು” ಎಂದು ಎಚ್ಚರಿಕೆ ನೀಡಿದೆ.

ತಾಲಿಬಾನ್‌ ನಾಯಕ ಅಹ್ಮದ್‌ ಯಾಸಿರ್‌ ಫೋಟೋ ಹಂಚಿಕೊಳ್ಳುತ್ತಾ, “ಪಾಕಿಸ್ತಾನ ಒಂದು ವೇಳೆ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡುವ ಯೋಚನೆ ಹೊಂದಿದ್ದರೆ, 1971ರ ಅವಮಾನಕರ ಸೋಲನ್ನು ನೆನಪಿಸಿಕೊಳ್ಳುವುದು ಒಳಿತು. ಏಕೆಂದರೆ ನಮ್ಮ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನ ಮತ್ತೊಂದು ಅವಮಾನಕರ ಸೋಲನ್ನು ಕಾಣಬೇಕಾಗುತ್ತದೆ. ಯುದ್ಧದಲ್ಲಿ ಸೋತು ಭಾರತದೊಂದಿಗೆ ಶರಣಾಗತಿಯ ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನ, ಇದೀಗ ಮತ್ತೊಮ್ಮೆ ಅಂತಹದ್ದೇ ಅವಮಾನ ಅನುಭವಿಸಲು ಸಿದ್ಧತೆ ನಡೆಸಿದಂತಿದೆ. ತಾಲಿಬಾನಿಗರನ್ನು ಹಗುರವಾಗಿ ಪರಿಗಣಿಸಿದರೆ, ಜಗತ್ತು 1971ರ ಶರಣಾಗತಿಯ ರೀತಿಯದ್ದೇ ಮತ್ತೊಂದು ಫೋಟೋವನ್ನು ನೋಡಬೇಕಾಗುತ್ತದೆ” ಎಚ್ಚರಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತಕ್ಕೆ ಮನ್ನಣೆ ನೀಡಿದ ಆರಂಭಿಕ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಕೂಡ ಒಂದು. ತಾಲಿಬಾನಿ ಸರ್ಕಾರದ ಜೊತೆಗೆ ಸ್ನೇಹ ಹಸ್ತ ಚಾಚುವ ನಿರ್ಣಯ ಕೈಗೊಂಡಿದ್ದ ಪಾಕಿಸ್ತಾನ, ತನ್ನ ಪ್ರಭಾವ ಉಳಿಸಿಕೊಳ್ಳುವ ಯೋಜನೆ ಹೊಂದಿತ್ತು. ಆದರೆ ತಾಲಿಬಾನಿಗರಿಗೆ ಪಾಕ್‌ನೊಂದಿಗೆ ಸೌಹಾರ್ದ ಸಂಬಂಧದ ಆಸಕ್ತಿ ಇಲ್ಲ ಎಂದು ತಿಳಿದುಬಂದಿದೆ. 1971ರಲ್ಲಿ ಪಾಕಿಸ್ತಾನದ ಸೇನೆಯು ಭಾರತಕ್ಕೆ ಶರಣಾದ ಪರಿಣಾಮವಾಗಿ ಬಾಂಗ್ಲಾದೇಶ ಎಂಬ ನೂತನ ರಾಷ್ಟ್ರದ ಉಗಮಕ್ಕೆ ಕಾರಣವಾಗಿತ್ತು.