ಉತ್ತರಾಖಂಡ್| ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿತ; ಹಲವು ಕಾರ್ಮಿಕರು ಸಿಲುಕಿರುವ ಶಂಕೆ

0
148

ಸನ್ಮಾರ್ಗ ವಾರ್ತೆ

ಉತ್ತರಾಖಂಡ| ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗದ ಒಂದು ಭಾಗ ಕುಸಿದು ಬಿದ್ದು ಅವಘಡ ಸಂಭವಿಸಿರುವುದಾಗಿ ವರದಿಯಾಗಿದ್ದು, ಸುಮಾರು 40ರಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸುರಂಗದ ಮಣ್ಣಿನಡಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಪ್ರಯತ್ನ ನಡೆಸುತ್ತಿರುವುದಾಗಿ ವರದಿಯಾಗಿದೆ.

ಚಾರ್ ಧಾಮ್ ರಸ್ತೆ ಯೋಜನೆಯಡಿ ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಿಂದ ದಾಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಉತ್ತರಕಾಶಿಯಿಂದ ಯಮುನೋತ್ರಿ ಧಾಮಕ್ಕೆ 26 ಕಿಲೋಮೀಟರ್‌ಗಳಷ್ಟು ಪ್ರಯಾಣವನ್ನು ಕಡಿಮೆ ಮಾಡುವ ಗುರಿಯನ್ನು ಈ ಸುರಂಗ ಮಾರ್ಗ ಹೊಂದಿದೆ.

ನಾಲ್ಕೂವರೆ ಕಿಲೋಮೀಟರ್ ಉದ್ದದ ಸುರಂಗದ 150 ಮೀಟರ್ ಉದ್ದದ ಭಾಗ ಮುಂಜಾನೆ 4 ಗಂಟೆಯ ಸುಮಾರಿಗೆ ಕುಸಿದು, ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳಿಗೆ ಸ್ಥಳೀಯ ಪೊಲೀಸರು ಸಹಕಾರ ನೀಡುತ್ತಿದ್ದಾರೆ.

ವರದಿಗಳ ಪ್ರಕಾರ, 40 ಕಾರ್ಮಿಕರು ಸಿಕ್ಕಿಬಿದ್ದಿರುವ ಶಂಕೆ ಇದೆ. ಸುರಂಗವನ್ನು ತೆರೆಯಲು ಸುಮಾರು 200 ಮೀಟರ್ ಸ್ಲ್ಯಾಬ್ ಅನ್ನು ತೆರವುಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಗೆ ಆಮ್ಲಜನಕ ಪೂರೈಸಲು ಸಣ್ಣದಾದ ರಂಧ್ರವನ್ನು ಕೊರೆಯಲಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, “ಘಟನೆಯ ಬಗ್ಗೆ ನನಗೆ ತಿಳಿದ ಕೂಡಲೇ ನಾನು ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿದೆ. ಎಲ್ಲರೂ ಸುರಕ್ಷಿತವಾಗಿ ಮರಳಲು ನಾವು ಪ್ರಾರ್ಥಿಸುತ್ತೇವೆ’ ಎಂದು ತಿಳಿಸಿದ್ದಾರೆ.