ದೇಶಾದ್ಯಂತ ಪ್ರತಿಭಟನೆಯ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ ಈ ಸೌಹಾರ್ದದ ಫೋಟೊ; ನೀವು ಗಮನಿಸಿದ್ದೀರಾ…?

0
3642

ಸನ್ಮಾರ್ಗ ವಾರ್ತೆ-
ಕನ್ನಡಕ್ಕೆ: ಇರ್ಷಾದ್ ವೇಣೂರು

ಕೇರಳ: ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ತೀವ್ರ ಪ್ರತಿಭಟನೆ ಹೆಚ್ಚಾಗುತ್ತಿದೆ. ಅಸಾಂವಿಧಾನಿಕವಾಗಿರುವ ಈ ಕಾಯ್ದೆಯು ಧರ್ಮಗಳ ನಡುವೆ ಒಡಕುಂಟು ಮಾಡುತ್ತದೆ ಎಂಬ ಅಭಿಪ್ರಾಯಗಳ ಮಧ್ಯೆ ರೈಲು ಪ್ರಯಾಣದ ಸಂದರ್ಭದಲ್ಲಿ ಕೇರಳದಲ್ಲಿ ಅಯ್ಯಪ್ಪ ಮಾಲಾಧಾರಿಯಾಗಿರುವ ಬಾಲಕಿಯೋರ್ವಳು ಮುಸ್ಲಿಂ ಮಹಿಳೆಯೋರ್ವರ ಮಡಿಲಲ್ಲಿ ತಲೆ ಇಟ್ಟು ನಿದ್ರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್, ಟ್ವಿಟ್ಟರ್ ಗಳಲ್ಲಿ ಸಾಕಷ್ಟು ವೈರಲಾಗಿದ್ದು, ಸುದ್ದಿ ಮಾಡುತ್ತಿದೆ.

ಘಟನೆಯ ವಿವರ:

ಮೂಲತಃ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪ್ರದೇಶದ ನಿವಾಸಿ, ದುಬೈನ ಎಸ್. ಜೆ. ಲೂಯಿಸ್ ಕಂಪೆನಿಯಲ್ಲಿ ಸೀನಿಯರ್ ಎಂಜಿನಿಯರ್ ಆಗಿ ದುಡಿಯುತ್ತಿರುವ ಖದೀಜಾ ಹಬೀಬಾ ತಬ್ ಶೀರಾ, ನಿನ್ನೆ ಪರುಶುರಾಮ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕೊಟ್ಟಾಯಂ ಗೆ ತನ್ನ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಸೀಟಿನ ಪಕ್ಕದಲ್ಲಿ ಕುಳಿತುಕೊಂಡಿದ್ದ ಅಯ್ಯಪ್ಪ ಮಾಲಾಧಾರಿಯಾಗಿರುವ ವೇಧಾ ಎಂಬ ಬಾಲಕಿಯೋರ್ವಳು ಶಬರಿಮಲೆಗೆ ಪ್ರಯಾಣಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಪ್ರಯಾಣದ ವೇಳೆ ಸುಸ್ತಾಗಿದ್ದ ಬಾಲಕಿ ವೇಧಾ, ಪಕ್ಕದಲ್ಲೇ ಇದ್ದ ತಬ್ ಶೀರಾ ರವರ ಮಡಿಲಿಗೆ ತಲೆ ಇಟ್ಟು ಮಲಗಿದ್ದರು. ಜೊತೆಗೆ ಅವರು ಕೂಡ ಸೀಟಿಗೆ ಬಾಗಿ ನಿದ್ರೆಗೆ ಜಾರಿದ್ದರು. ಇದೇ ವೇಳೆ ಈ ಸಂದರ್ಭದಲ್ಲಿ ಎದುರು ಬದಿಯ ಸೀಟಿನಲ್ಲಿದ್ದ ಬಾಲಕಿ ವೇದಾಳ ತಂದೆ ಸಂದೀಪ್, ಈ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಲ್ಲದೆ, ತನ್ನ ಸ್ನೇಹಿತ ಸಂದೀಪ್ ಗೋವಿಂದನ್ ಎಂಬವರಿಗೆ ಕಳಿಸಿದ್ದರು.

ಸಂದೀಪ್ ಗೋವಿಂದನ್ ರವರು ಫೋಟೋ ನೋಡಿ, ಫೇಸ್ ಬುಕ್ ನಲ್ಲಿ ಹಾಕಿ, ವೇಷ ಭೂಷಣವೂ ಇಂದು ರಾಷ್ಟ್ರೀಯತೆಯ ಮಾನದಂಡವಾಗಿರುವ ಈ ವೇಳೆಯಲ್ಲಿ, ಈ ಚಿತ್ರವು ಎಲ್ಲಕ್ಕಿಂತ ಮಿಗಿಲಾದುದು. ಈ ಫೋಟೊ ದೇಶದಲ್ಲಿ ನಡೆಯುತ್ತಿರುವ ಒಡೆಯುವ ನೀತಿಗೆ ವಿರುದ್ಧವಾಗಿ ಕಾಣುತ್ತಿದೆ ಎಂದು ಪೋಸ್ಟ್ ಹಾಕಿದ್ದರು.

ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಈ ಫೋಟೊ ವಾಟ್ಸಪ್ ಹಾಗೂ ಫೇಸ್ ಬುಕ್ ಸಿನಿಮಾ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಮಂದಿ ಶೇರ್ ಮಾಡಿದ್ದಲ್ಲದೆ, ಫೋಟೊದಲ್ಲಿರುವವರನ್ನು ಕಂಡು ಚೆಮ್ನಾಡ್ ನ ನಿವಾಸಿಗಳು ಮಹಿಳೆಯ ಗುರುತು ಪತ್ತೆ ಹಚ್ಚಿ, ಆಕೆ ನಮ್ಮೂರಿನ ಖದೀಜಾ ಹಬೀಬಾ ತಬ್ ಶೀರ್ ಎಂದು ಮಾಹಿತಿ ನೀಡಿದ್ದರು. ಇದ್ಯಾವುದರ ಪರಿವೆಯೇ ಇಲ್ಲದ ತಬ್ ಶೀರಾ ರವರು, ಫೋಟೋ ವೈರಲಾದ ಬಗ್ಗೆ ಆಶ್ಚರ್ಯಗೊಂಡು, ಸಂತಸ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಬ್ ಶೀರಾ ರವರ ಸಹೋದರ, ಕ್ಯಾಲಿಗ್ರಫಿ ಕಲಾಕಾರರಾದ ಖಲೀಲುಲ್ಲಾಹ್, ಒಂದೇ ಪಾತ್ರೆಯಲ್ಲಿ ಉಣ್ಣುವ, ಕಷ್ಟ ಸುಖಗಳನ್ನು ಹಂಚುವ ನಮಗೆ ಇದು ದೊಡ್ಡ ಫೋಟೋ ಅಲ್ಲ. ಆದರೆ ದೇಶದಲ್ಲಿಂದು ಧರ್ಮ ಹಾಗೂ ಉಡುಪಿನ ಆಧಾರದಲ್ಲಿ ಒಡಕುಂಟು ಮಾಡುವ ಈ ಸಂದರ್ಭದಲ್ಲಿ ಈ ಫೋಟೊ ಬಹಳಷ್ಟು ಗಾಯಗಳನ್ನು ಒಣಗಿಸಲು ಸಹಕಾರಿಯಾಗಿದೆ ಎಂದವರು ಅಭಿಪ್ರಾಯಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪ್ರದೇಶದ ನಿವಾಸಿ, ಕುಂಞ ಅಹ್ಮದ್ ರವರ ಪತ್ನಿ.
ಪ್ರಸಕ್ತ ಪರಿಸ್ಥಿತಿಯಲ್ಲಿ ತಬ್ ಶೀರಾ ಹಾಗೂ ವೇದಾ ರವರು ಸೋಷಿಯಲ್ ಮೀಡಿಯಾದಲ್ಲಿ ಸೌಹಾರ್ದದ ಸಂಕೇತಗಳಾಗಿ ಮೂಡಿದ್ದನ್ನು ಕಂಡ ದೇಶದ ನೆಟ್ಟಿಗರು ಫೋಟೋವನ್ನು ಇನ್ನೂ ಕೂಡಾ ಶೇರ್ ಮಾಡುತ್ತಲೇ ಇದ್ದು, ದೇಶದ ಜನತೆಯ ಮನಸ್ಸನ್ನು ಯಾವುದೇ ಕಾನೂನಿನಿಂದ ಒಡೆಯಲು ಅಸಾಧ್ಯ ಎಂಬ ಸ್ಪಷ್ಟವಾದ ಸಂದೇಶವನ್ನು ಕೇಂದ್ರ ಸರಕಾರಕ್ಕೆ ತಲುಪಿಸುತ್ತಿದ್ದಾರೆ.