ವಯಸ್ಸಾಯಿತು, ಇನ್ನು ಜೈಲಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಜಾಮೀನು ಕೊಡಿ: ಕೋರ್ಟಿನಲ್ಲಿ ಪೀಟರ್ ಮುಖರ್ಜಿ

0
1060

ಮುಂಬೈ, ಮಾ.12: ಜೈಲಿನಲ್ಲಿ ಸಾಯಲು ಬಯಸುವುದಿಲ್ಲ. ಆದ್ದರಿಂದ ಜಾಮೀನು ಕೊಡಿ ಎಂದು ಸಿಬಿಐ ಕೋರ್ಟಿನಲ್ಲಿ ಸ್ಟಾರ್ ಇಂಡಿಯದ ಮಾಜಿ ಮುಖ್ಯಸ್ಥ ಮತ್ತು ಶೀನಾ ಬೋರ ಕೊಲೆ ಪ್ರಕರಣದ ಆರೋಪಿ ಪೀಟರ್ ಮುಖರ್ಜಿ ಮನವಿ ಮಾಡಿದ್ದಾರೆ. ತನಗೆ 64 ವರ್ಷ ವಯಸ್ಸಾಯಿತು. ಜಾಮೀನು ಸಿಕ್ಕಿದರೂ ವಿಚಾರಣೆ ಒಳ್ಳೆಯ ರೀತಿಯಲ್ಲಿ ಸಹಕರಿಸುವೆ. ಜೈಲಿನಲ್ಲಿ ಸಾಯಲು ಬಯಸುವುದಿಲ್ಲ ಎಂದು ಪೀಟರ್ ವಕೀಲರ ಮೂಲಕ ಕೋರ್ಟಿಗೆ ತಿಳಿಸಿದರು.

ಈ ಹಿಂದೆ ಪೀಟರ್‍ ರ ಜಾಮೀನು ಅರ್ಜಿಯನ್ನು ಕೋರ್ಟು ತಿರಸ್ಕರಿಸಿತ್ತು. ಪ್ರಕರಣದ ಪ್ರಧಾನ ಸಾಕ್ಷಿಯಾದ ಪೀಟರ್ ಪುತ್ರ ರಾಹುಲ್ ಮುಖರ್ಜಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಸಿಬಿಐ ಪೀಟರ್‍ ರ ಜಾಮೀನು ಅರ್ಜಿಯನ್ನು ಕೋರ್ಟಿನಲ್ಲಿ ವಿರೋಧಿಸಿತ್ತು. ಸಿಬಿಐ ಪೀಟರ್ ರನ್ನು ಸೈಲೆಂಟ್ ಕಿಲ್ಲರ್ ಎಂದು ಕೋರ್ಟಿನಲ್ಲಿ ವಾದಿಸಿದೆ. ಪುತ್ರನ ಭಾವೀ ವಧುವಾಗಿದ್ದರೂ ಶೀನಾ ಕಾಣೆಯಾದ ಕುರಿತು ಹುಡುಕಲು ಪೀಟರ್ ಮುಂದಾಗಿಲ್ಲ ಮತ್ತು ಶೀನಾ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದರೆಂದು ಪ್ರಾಸಿಕ್ಯೂಶನ್ ವಾದಿಸಿದೆ.

2015ರಿಂದ ಪೀಟರ್ ಜೈಲುಪಾಲಾಗಿದ್ದಾರೆ. ಬಂಧನಕ್ಕೊಳಗಾಗುವವರೆಗೂ ಪೀಟರ್ ಪುತ್ರ ರಾಹುಲ್‍ನ ಜತೆ ವಾಸಿಸುತ್ತಿದ್ದರು. ಪ್ರಭಾವ ಬೀರುವುದಾಗಿದ್ದರೆ ಅಂದು ಅದು ಸಾಧ್ಯವಿತ್ತು ಎಂದು ಪೀಟರ್‍ ರ ವಕೀಲರು ಪ್ರತಿಪಾದಿಸಿದ್ದಾರೆ. ಶೀನಾಳ ಕೊಲೆ ನಡೆಯುವಾಗ ತಾನು ಲಂಡನ್‍ನಲ್ಲಿದ್ದೆ ಎಂದು ಪೀಟರ್ ಕೋರ್ಟಿಗೆ ಈ ಹಿಂದೆಯೇ ತಿಳಿಸಿದ್ದಾರೆ. ಅದಕ್ಕೆ, ಪಾಕಿಸ್ತಾನದ ಹಾಫಿಝ್ ಸಯೀದ್ ಭಾರತಕ್ಕೆ ಬಂದು ಭಯೋತ್ಪಾದನಾ ಕೃತ್ಯ ನಡೆಸಿಲ್ಲ ಎಂದು ಪ್ರಾಸಿಕ್ಯೂಶನ್ ಉತ್ತರಿಸಿತ್ತು.

ಶೀನಾ ಬೊರ ಪೀಟರ್ ರ ಎರಡನೆ ಪತ್ನಿ ಇಂದ್ರಾಣಿ ಮುಖರ್ಜಿಯ ಮೊದಲ ಪತಿಗೆ ಹುಟ್ಟಿದ ಮಗಳು ಆಗಿದ್ದು ಪೀಟರ್ ರೊಂದಿಗೆ ಮದುವೆಯಾಗುವ ವೇಳೆ ಇಂದ್ರಾಣಿ ತನ್ನ ಪುತ್ರಿ ಶೀನಾಳನ್ನು ಸಹೋದರಿ ಎಂದು ಪರಿಚಯಿಸಿಕೊಂಡಿದ್ದರು. ತನ್ನ ಮಲ ಸಹೋದರಿ ಎಂದು ತಿಳಿಯದೆ ರಾಹುಲ್ ಶೀನಾಳನ್ನು ಪ್ರೀತಿಸಿದ್ದ. ಮದುವೆಯಾಗಲು ನಿರ್ಧರಿಸಿದ್ದ. ನಂತರ 2012 ಎಪ್ರಿಲ್‍ನಲ್ಲಿ ಶೀನಾ ಕಾಣೆಯಾಗಿ ಕೊಲೆಯಾಗಿದ್ದಳು.