ಕೊನೆಗಳಿಗೆಯಲ್ಲಿ ಕ್ಷಮೆ ನೀಡಿದ ಸಂತ್ರಸ್ತ ಕುಟುಂಬ: ನೇಣು ತಪ್ಪಿಸಿಕೊಂಡ ಸೌದಿ ಯುವಕ

0
494

ಸನ್ಮಾರ್ಗ ವಾರ್ತೆ

ತನ್ನ ಮಗನನ್ನು ಹತ್ಯಗೈದ ಅಪರಾಧಿಯನ್ನು ಅಂತಿಮ ಕ್ಷಣದಲ್ಲಿ ಕ್ಷಮಿಸಿ ನೇಣು ಶಿಕ್ಷೆಯಿಂದ ಪಾರು ಮಾಡಿದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಗಲ್ಲು ಶಿಕ್ಷೆ ಜಾರಿಗೆ ರಂಗ ಸಜ್ಜುಗೊಂಡು ಇನ್ನೇನು ಜಾರಿಯಾಗುತ್ತದೆ ಎಂಬ ಸನ್ನಿವೇಶ ಸೃಷ್ಟಿಯಾಗಿದ್ದಾಗ ಹತ್ಯೆಗೀಡಾದ ಯುವಕನ ತಂದೆ ಶಿಕ್ಷೆ ಜಾರಿಗೊಳಿಸುವ ಅಧಿಕಾರಿಗಳ ಬಳಿ ಬಂದು ತಾನು ಈ ವ್ಯಕ್ತಿಯನ್ನು ಕ್ಷಮಿಸಿರುವುದಾಗಿ ಹೇಳಿದ್ದಾರೆ.

ತಮ್ಮ ಮಗನನ್ನು ನೇಣು ಶಿಕ್ಷೆಯಿಂದ ಪಾರುಗೊಳಿಸುವುದಕ್ಕಾಗಿ ಈ ಮೊದಲು ರಕ್ತ ಪರಿಹಾರದೊಂದಿಗೆ ಹಲವಾರು ಬಾರಿ ಈ ತಂದೆಯನ್ನು ಅಪರಾಧಿ ಕುಟುಂಬ ಸಂಪರ್ಕಿಸಿತ್ತು. ಆದರೆ ಆ ಎಲ್ಲ ಸಂದರ್ಭಗಳಲ್ಲಿ ಈ ತಂದೆ ಕ್ಷಮೆಗೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ.

ತನ್ನ ಮಗನನ್ನು ಹತ್ಯೆ ಮಾಡಿದ ವ್ಯಕ್ತಿಯ ನೇಣು ಶಿಕ್ಷೆಯನ್ನು ಕಣ್ಣಾರೆ ನೋಡುವುದಕ್ಕಾಗಿ ಈ ಹುಮೈದ್ಅಲ್ ಅರ್ಬಿಯ ಎಂಬ ತಂದೆ ಆಗಮಿಸಿದ್ದರು. ನೇಣು ಶಿಕ್ಷೆಗೆ ರಂಗ ಸಿದ್ದಗೊಂಡಿತ್ತು. ಅಂತಿಮವಾಗಿ ಈ ತಂದೆಯಲ್ಲಿ ನೇಣು ಶಿಕ್ಷೆ ಜಾರಿಗೆ ಅನುಮತಿ ಕೋರಿದಾಗ ಅವರು ತಾನು ಕ್ಷಮಿಸಿರುವುದಾಗಿ ಘೋಷಿಸಿದರು. ಆ ಮೂಲಕ ಅಲ್ಲಿ ನೆರೆದವರನ್ನು ಮತ್ತು ಅಪರಾಧಿಯನ್ನು ತಬ್ಬಿಬ್ಬುಗೊಳಿಸಿದರು.

ಈ ಕ್ಷಮೆಗಾಗಿ ತಾನು ಯಾವ ಪರಿಹಾರ ಮೊತ್ತವನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು. ತನ್ನ ಮಗನನ್ನು ಹತ್ಯಗೈದ ವ್ಯಕ್ತಿಗೆ ಕೊನೆ ಕ್ಷಣದಲ್ಲಿ ಕ್ಷಮೆ ನೀಡುವಂಥ ಪ್ರೇರಣೆಯನ್ನು ಅಲ್ಲಾಹನು ನನಗೆ ಒದಗಿಸಿದ ಎಂದು ಈ ತಂದೆ ಹೇಳಿದ್ದಾರೆ.

ತನ್ನ ಮಗನನ್ನು ಕೊಂದವನಿಗೆ ಕೊನೆ ಕ್ಷಣದಲ್ಲಿ ಕ್ಷಮೆ ನೀಡಿ ಜೀವ ಉಳಿಸಿದ ಈ ತಂದೆಗೆ ಸೋಶಿಯಲ್ ಮೀಡಿಯಾ ಸಲ್ಯೂಟ್ ಹೇಳಿದೆ. ಅವರ ಕ್ಷಮಾ ಗುಣವನ್ನು ಕೊಂಡಾಡಿದೆ.

LEAVE A REPLY

Please enter your comment!
Please enter your name here