ಹರಡಿದ ಮಕ್ಕಳು ಕಳ್ಳರ ಭೀತಿ: ಗುಪ್ತ ಸರ್ವೇ ಮಾಡಲು ಬಂದ ಅಧಿಕಾರಿಗೆ ಬಿತ್ತು ಗ್ರಾಮಸ್ಥರ ಧರ್ಮದೇಟು

0
222

ಸನ್ಮಾರ್ಗ ವಾರ್ತೆ

ವಿಜಯಪುರ: ವಿಜಯಪುರದ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದ ಹೊಲವೊಂದರಲ್ಲಿ ಮಣ್ಣು ಪರೀಕ್ಷೆ ನಡೆಸಲು ಬಂದಿದ್ದ ಬೆಂಗಳೂರಿನ ಭೂಗರ್ಭ ಇಲಾಖೆಯ ಅಧಿಕಾರಿಗಳನ್ನು ಮಕ್ಕಳ ಕಳ್ಳರೆಂದು ಸಂಶಯ ವ್ಯಕ್ತಪಡಿಸಿ ಗ್ರಾಮಸ್ಥರು ಥಳಿಸಿದ ಘಟನೆ ನಡೆದಿದೆ.

ಗ್ರಾಮದ ಹೊಲದ ಸುತ್ತಮುತ್ತ ಖನಿಜದ ಅದಿರು ಇದೆಯೇ? ಎಂಬ ಪರೀಕ್ಷೆಗಾಗಿ ಬೆಂಗಳೂರಿನಿಂದ ಭೂಗರ್ಭ ಇಲಾಖೆಯ ಸಹಾಯಕ ಅಧಿಕಾರಿ ದಿನೋ ಮನ್ ಸಹಾಯಕರ ಜೊತೆ ಇಂಡಿಗೆ ಬಂದಿದ್ದರು. ಅಲ್ಲಿಂದ ಇಬ್ಬರು ಹುಡುಗರೊಂದಿಗೆ ಮಾಹಿತಿಗಾಗಿ ಹಿರೇಬೇವನೂರ ತೋಟಕ್ಕೆ ಜೀಪಿನಲ್ಲಿ ತೆರಳಿದ್ದರು .

“ತಾವು ಯಾರು? ಇಲ್ಲಿಗೆ ಯಾಕೆ ಬಂದಿರಿ?” ಎಂದು ತೋಟದ ಮಾಲಿಕ ಕೇಳಿದಾಗ ಅಧಿಕಾರಿಗಳು ಸರಿಯಾದ ಮಾಹಿತಿ ಒದಗಿಸಿಲ್ಲ. ಆದ್ದರಿಂದ ತೋಟದ ಮಾಲೀಕ ಇವರು ಮಕ್ಕಳ ಕಳ್ಳರು ಎಂದು ಭಾವಿಸಿ ಜನರಿಗೆ ತಿಳಿಸಿದ್ದಾರೆ. ಕೆಲವೇ ನಿಮಿಷದಲ್ಲಿ ನೂರಕ್ಕೂ ಹೆಚ್ಚು ಗ್ರಾಮಸ್ತರು ಸೇರಿದ್ದಾರೆ. ಮಾತಿಗೆ ಮಾತು ಬೆಳೆದು ಅಧಿಕಾರಿಗಳನ್ನು ಗ್ರಾಮಸ್ಥರು ಥಳಿಸಿದ್ದಾರೆ. ಬಳಿಕ ಪೊಲೀಸರು ಬಂದು ಅಧಿಕಾರಿಗಳನ್ನು ಠಾಣೆಗೆ ಕರೆಸಿಕೊಂಡಿದ್ದಾರೆ.

ನಮ್ಮ ಸರ್ವೇ ಕಾರ್ಯ ಯಾರಿಗೂ ತಿಳಿಯದಂತೆ ಮಾಡಬೇಕಾಗಿತ್ತು. ಗೌಪ್ಯತೆ ಕಾಯ್ದುಕೊಳ್ಳಲು ರೈತರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಬಳಿಕ ಗ್ರಾಮಸ್ಥರು ಅಧಿಕಾರಿಗಳಲ್ಲಿ ಕ್ಷಮೆ ಕೇಳಿದ್ದಾರೆ.