ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್ ಬಳಸುವಂತಿಲ್ಲ: ಬಿಡುವಿನ ವೇಳೆಯಲ್ಲಿ ಜನರು ಏನು ಮಾಡುತ್ತಾರೆ ಗೊತ್ತಾ…?

0
182

ಸನ್ಮಾರ್ಗ ವಾರ್ತೆ

ಸಾಂಗ್ಲಿ: ಸೆಕೆಂಡ್‌ಗಳ ಕಾಲವೂ ಸ್ಮಾರ್ಟ್ ಫೋನ್ ಬಿಟ್ಟಿರಲಾಗದಷ್ಟು ಇಂಟರ್ನೆಟ್ ಯುಗ ಮನುಷ್ಯರ ಜೀವನವನ್ನು ಆವರಿಸಿಕೊಂಡಿದೆ. ಹೀಗಿರುವಾಗ ಈ ಹಳ್ಳಿಯೊಂದರಲ್ಲಿ ಪ್ರತಿದಿನ ಸಂಜೆ ಒಂದೂವರೆ ಗಂಟೆ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೋಹಿತಾಂಚೆಯ ಭಡಗಾಂವ್ ಗ್ರಾಮದಲ್ಲಿ ಈ ನಿಯಮ ಪಾಲಿಸಲಾಗುತ್ತಿದೆ..

ರಾತ್ರಿ 7 ಗಂಟೆಯಿಂದ 8:30ವರೆಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಎಲ್ಲವೂ ಬಂದ್ ಆಗುತ್ತದೆ. ಇದಕ್ಕೆ ಯಾವುದೇ ಸರಕಾರಿ ಆದೇಶ ಇಲ್ಲ. ಆದರೂ ಇಲ್ಲಿ ಈ ನಿಯಮ ಜನಜೀವನದಲ್ಲಿ ಬಹಳಷ್ಟು ಬದಲಾವಣೆಯನ್ನು ತಂದಿದೆ.

ಅಷ್ಟಕ್ಕೂ ಪ್ರತಿದಿನ ಕಡ್ಡಾಯವಾಗಿ ಒಂದೂವರೆ ಗಂಟೆ ಇಂಟರ್ನೆಟ್ ಬಳಕೆ ಬಂದ್ ಮಾಡಲು ಕಾರಣ ಅಲ್ಲಿನ ಮಕ್ಕಳು ಮೊಬೈಲ್ ಬಳಕೆಗೆ ಅಂಟಿಕೊಂಡಿರುವುದು. ಮಕ್ಕಳ ಅತಿಯಾದ ಮೊಬೈಲ್ ಬಳಕೆಯು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊಬೈಲ್ ಬಳಕೆಯಿಂದಾಗಿ ಕಲಿಕೆಯಲ್ಲೂ ಕಳಪೆ ಸಾಧನೆ ತೋರಿಸಿದ ಮಕ್ಕಳನ್ನು ಸರಿ ದಾರಿಗೆ ತರುವುದಕ್ಕೆ ಶಿಕ್ಷಕರು ಹೈರಾಣಾಗಿದ್ದರು. ಕೊನೆಗೆ ಗ್ರಾಮದ ಮುಖ್ಯಸ್ಥನಲ್ಲಿ ವಿಷಯ ಪ್ರಸ್ತಾಪಿಸಿದಾಗ ಆತ ಕಂಡುಕೊಂಡ ದಾರಿ ಇದು. ದಿನಕ್ಕೆ ಒಂದೂವರೆ ಗಂಟೆ ಇಂಟರ್ನೆಟ್ ಬಂದ್ ಮಾಡುವುದು.

ರಾತ್ರಿ 7 ಗಂಟೆಗೆ ಸರಿಯಾಗಿ ಸೈರನ್ ಮೊಳಗುತ್ತದೆ. ಸೈರನ್ ಮೊಳಗಿದಂತೆ ಎಲ್ಲಾ ಮನೆಗಳಲ್ಲಿಯೂ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಇಂಟರ್ನೆಟ್ ಬಳಕೆ ಮಾಡುವ ಸಾಧನಗಳನ್ನು ಕಡ್ಡಾಯವಾಗಿ ಸ್ವಿಚ್ ಆಫ್ ಮಾಡಬೇಕು. ಈ ಅವಧಿಯನ್ನು ಪರಸ್ಪರ ಮಾತುಕತೆ ನಡೆಸುವುದು, ಮಕ್ಕಳು ಓದಲು ವಿನಿಯೋಗಿಸುವುದು ನಡೆಯುತ್ತದೆ.

ವಿಶೇಷವೆಂದರೆ ಈ ನಿಯಮ ಹೇರಿದ ನಂತರ ಅಲ್ಲಿ ಸಂಬಂಧಗಳೂ ಸುಧಾರಿಸಿವೆ. ಮಕ್ಕಳು ಓದಿನಲ್ಲೂ ಗಮನಾರ್ಹ ಬೆಳವಣಿಗೆ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.