ನ್ಯಾಯಾಂಗ ನಿಂದನೆ ಪ್ರಕರಣ: ಬೇಷರತ್‌ ಕ್ಷಮೆಯಾಚಿಸಿದ ವಿವೇಕ್‌ ಅಗ್ನಿಹೋತ್ರಿ

0
300

ಸನ್ಮಾರ್ಗ ವಾರ್ತೆ

ದಿ ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಜಸ್ಟಿಸ್ ಎಸ್.ಮುರಳೀಧರ್ ಹೊರಡಿಸಿದ್ದ ಆದೇಶದ ವಿರುದ್ಧ ತಾರತಮ್ಯದ ಆರೋಪ ಹೊರಿಸಿ ನೀಡಿದ್ದ ನ್ಯಾಯಾಂಗ ನಿಂದನೆ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.

2018ರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿರುವ ಹೋರಾಟಗಾರ ಗೌತಮ್ ನವ್ಲಾಖರ ಟ್ರಾನ್ಸಿಟ್ ರಿಮಾಂಡ್ ಮತ್ತು ಗೃಹ ಬಂಧನವನ್ನು ರದ್ದುಗೊಳಿಸಿ ಜಸ್ಟಿಸ್ ಎಸ್.ಮುರಳೀಧರ್  ಆದೇಶ ಹೊರಡಿಸಿದ್ದರು. ಈ ಆದೇಶ ತಾರತಮ್ಯದಿಂದ ಕೂಡಿದೆ ಎಂದು ಆರೋಪ ಹೊರಿಸಿ ನೀಡಿದ್ದ ಹೇಳಿಕೆಗಾಗಿ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ದಿಲ್ಲಿ ಹೈಕೋರ್ಟ್ 2018ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.

ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿದ್ದ ಅಗ್ನಿಹೋತ್ರಿ ತಾವು ಮುರಳೀಧರ್ ಕುರಿತು ಮಾಡಿದ್ದ ಟ್ವೀಟ್‌ನ್ನು ಡಿಲೀಟ್ ಮಾಡಿದ್ದಾಗಿ ಹೇಳಿದ್ದರು. ಆದರೆ ಈ ಟ್ವೀಟ್‌ಗಳನ್ನು ಅಗ್ನಿಹೋತ್ರಿ ಡಿಲೀಟ್ ಮಾಡಿಲ್ಲ, ಟ್ವಿಟರ್ ಡಿಲೀಟ್ ಮಾಡಿತ್ತು ಎಂದು ಅಮಿಕಸ್ ಕ್ಯುರೇ ಹೇಳಿದ್ದರು.

ಪ್ರಕರಣದ ಮುಂದಿನ ವಿಚಾರಣೆ ಮುಂದಿನ ವರ್ಷದ ಮಾರ್ಚ್ 16ರಂದು  ನಡೆಯಲಿದ್ದು, ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ನ್ಯಾಯಾಧೀಶರು ಅಗ್ನಿಹೋತ್ರಿಗೆ ಸೂಚಿಸಿದ್ದಾರೆ. “ಖುದ್ದು ಹಾಜರಾಗಿ ಕ್ಷಮೆಕೋರುವುದಕ್ಕೆ ಅವರಿಗೇನಾದರೂ ಕಷ್ಟವಿದೆಯೇ? ಅಫಿಡವಿಟ್ ಮೂಲಕ ಯಾವತ್ತೂ ಕ್ಷಮೆಯಾಚಿಸುವ ಹಾಗಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.