ಸನ್ಮಾರ್ಗ ವಾರ್ತೆ
ಕುವೈಟ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ನ ನಿಯಮಗಳನ್ನು ಪರಿಷ್ಕರಿಸಲಾಗಿದ್ದು ಸುಮಾರು 10ಸಾವಿರಕ್ಕಿಂತಲೂ ಅಧಿಕ ವಿದೇಶಿಯರ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿದೆ ಎಂಬುದಾಗಿ ವರದಿಯಾಗಿದೆ. ಈ ಬಗ್ಗೆ ಅವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಲಾಗುತ್ತಿದ್ದು, ಲೈಸೆನ್ಸ್ ಹಿಂತಿರುಗಿಸಲು ಹೇಳಲಾಗುತ್ತಿದೆ.
ಇನ್ನು ರದ್ದಾದ ಲೈಸೆನ್ಸ್‌ನೊಂದಿಗೆ ವಾಹನ ಚಲಾಯಿಸುವವರಿಗೆ ಎಚ್ಚರಿಕೆ ಮತ್ತು ದಂಡವನ್ನು ವಿಧಿಸಲಾಗುತ್ತಿದೆ. ಅಲ್ಲದೆ ವಾಹನಗಳಿಗೆ ಸಂಬಂಧಿಸಿ ಕಾನೂನುಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದ್ದು,
ಓರ್ವ ವಿದೇಶಿ ಒಂದಕ್ಕಿಂತ ಹೆಚ್ಚು ವಾಹನಗಳ ಮಾಲೀಕರಾಗುವುದನ್ನು ತಡೆಯುವುದಕ್ಕೂ ನಿಯಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ವರ್ಷದ ಅಕ್ಟೊಬರ್‌ನಲ್ಲಿ ಕುವೈತಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ವಿದೇಶಿಯರ ಫೈಲುಗಳನ್ನು ಪುನರ್ ಪರಿಶೋಧಿಸಲು ಗೃಹ ಸಚಿವಾಲಯ ತೀರ್ಮಾನಿಸಿತ್ತು. ನಿಯಮಗಳನ್ನು ಪೂರ್ಣವಾಗಿ ಪಾಲಿಸದೆ ಪಡೆದ ಲೈಸೆನ್ಸ್‌ಗಳು ಮತ್ತು ಕೆಲಸ ಬದಲಿಸಿದ ಬಳಿಕವೂ ಹಿಂತಿರುಗಿಸದ ಲೈಸೆನ್ಸ್‌ಗಳ ಬಗ್ಗೆ ಪರಿಶೀಲಿಸುವ ಪ್ರಯತ್ನ ನಡೆಸಲಾಗಿದೆ. ಅಂಥವುಗಳನ್ನು ಈಗ ರದ್ದು ಮಾಡಲಾಗುತ್ತಿದೆ.
ಸದ್ಯ ಎರಡು ವರ್ಷ ಕುವೈಟ್‌ನಲ್ಲಿ ವಾಸಿಸಿದವರಿಗೆ, ಪ್ರತಿ ತಿಂಗಳು 600 ದೀನಾರ್ ವೇತನ ಮತ್ತು ವಿಶ್ವವಿದ್ಯಾಲಯದಲ್ಲಿ ಬಿರುದು ಪಡೆದವರಿಗೆ ಲೈಸೆನ್ಸ್ ನೀಡಲಾಗುತ್ತಿದೆ. ಹೀಗೆ ಪಡೆದ ಲೈಸೆನ್ಸ್ ಅನ್ನು ಕಡಿಮೆ ಸಂಬಳದ ಉದ್ಯೋಗಕ್ಕೆ ಸೇರಿಯೂ ಮರಳಿಸದವರು ಮತ್ತು ಹೌಸ್ ಡ್ರೈವರ್‌ನ ಹೆಸರಲ್ಲಿ ಪಡೆದ ಲೈಸೆನ್ಸನ್ನು ಬೇರೆ ಉದ್ಯೋಗಗಳಿಗೆ ಸೇರಿದ ಬಳಿಕವೂ ಮರಳಿಸದವರಿಗೆ ಇದೀಗ ಸಂಕಷ್ಟ ಎದುರಾಗಿದೆ.