‘ವೀ ದಿ ಪೀಪಲ್ ಆಫ್ ಇಂಡಿಯಾ ವರ್ಸಸ್ ಇಂಡಿಯಾ ಸರ್ಕಾರ’; ಮೋದಿ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್‌ ಬಿಡುಗಡೆ

0
81

ಸನ್ಮಾರ್ಗ ವಾರ್ತೆ

ಸಂಸದೀಯ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿದ್ದಕ್ಕಾಗಿ ಮುಖ್ಯವಾಹಿನಿಯ ಹಲವು ಸಾಮಾಜಿಕ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್‌ನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಪ್ರಜಾತಾಂತ್ರಿಕ ಮೌಲ್ಯಗಳನ್ನು ಉಲ್ಲಂಘಿಸಿರುವ ಎಂಟು ಪ್ರಮುಖ ದೋಷಾರೋಪಗಳನ್ನು ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ 8 ಆರೋಪಗಳನ್ನು ಚಾರ್ಜ್‌ಶೀಟ್‌ನಲ್ಲಿ ಹೊರಿಸಲಾಗಿದ್ದು, ಅದನ್ನು ಸಮರ್ಥಿಸುವ ಸಾಕ್ಷ್ಯಗಳನ್ನು ಒದಗಿಸಲಾಗಿದೆ. ಈ ಚಾರ್ಜ್‌ಶೀಟ್ ಸರಕಾರದ ತಪ್ಪು ಕ್ರಮಗಳ ಪಟ್ಟಿಯಾಗಿದ್ದು, ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಈ ದೋಷಾರೋಪ ಪಟ್ಟಿಯನ್ನು ಸಾಮಾಜಿಕ ಸಂಘಟನೆಗಳು ಹಾಗೂ ಗಣ್ಯ ವ್ಯಕ್ತಿಗಳು ಅನುಮೋದಿಸಿದ್ದಾರೆ. ಈ ಪೈಕಿ ನ್ಯಾಯಕ್ಕಾಗಿ ಅಖಿಲ ಭಾರತೀಯ ವಕೀಲರ ಸಂಘಟನೆ, ಅಖಿಲ ಭಾರತ ಭಾರತೀಯ ಪ್ರಜೆಗಳ ವಿಜ್ಞಾನ ಜಾಲ, ನಾಗರಿಕ ಹಕ್ಕುಗಳ ರಕ್ಷಣಾ ಒಕ್ಕೂಟ ಸೇರಿದಂತೆ ಒಟ್ಟು 22 ಸಂಘಟನೆಗಳು ಸೇರಿವೆ.

‘ವೀ ದಿ ಪೀಪಲ್ ಆಫ್ ಇಂಡಿಯಾ ವರ್ಸಸ್ ಇಂಡಿಯಾ ಸರ್ಕಾರ’ ಎಂಬ ಶೀರ್ಷಿಕೆಯ ಚಾರ್ಜ್ ಶೀಟ್‌ನಲ್ಲಿ, ಹಲವಾರು ನಾಗರಿಕ ಸಮಾಜದ ಗುಂಪುಗಳು ಮತ್ತು ಕಾರ್ಯಕರ್ತರು, ಸಂಸದೀಯ ಪ್ರಜಾಪ್ರಭುತ್ವದ ಮೇಲೆ ವ್ಯವಸ್ಥಿತ ದಾಳಿಗಾಗಿ ಸರ್ಕಾರವನ್ನು ಟೀಕಿಸಿದ್ದಾರೆ. ಆಡಳಿತ ಪಕ್ಷದ ಉದ್ದೇಶಪೂರ್ವಕ ಪ್ರಕ್ರಿಯೆಗಳು ಮತ್ತು ಕಾನೂನುಗಳಿಂದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹಾನಿಯಾಗಿರುವುದನ್ನು ಎತ್ತಿ ತೋರಿಸುವುದು ಚಾರ್ಜ್ ಶೀಟ್‌ನ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಚಾರ್ಜ್ ಶೀಟ್‌ನ್ನು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗಿದೆ. ಸಂಸತ್ತಿನ ಹೊಸ ಕಟ್ಟಡದಲ್ಲಿ ಸದನ ನಡೆಯುವ ಈ ಸನ್ನಿವೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಕಳೆದ ಹತ್ತು ವರ್ಷಗಳಿಂದ ಸತತವಾಗಿ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದೆ. ಸಂಸತ್ತನ್ನು ಬಹುಮತದ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾನೂನು ರಚನೆಯ ಸಾಧನವಾಗಿ ಪರಿವರ್ತಿಸುವ ಸರ್ಕಾರದ ಉದ್ದೇಶಪೂರ್ವಕ ಕಾರ್ಯವಿಧಾನಗಳು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಚಾರ್ಜ್ ಶೀಟ್ ಸೂಚಿಸುತ್ತದೆ.

ಸಂಸದೀಯ ಪ್ರಜಾಪ್ರಭುತ್ವದ ಇಂತಹ ಕ್ರಮಗಳು ಪ್ರಜಾಪ್ರಭುತ್ವದ ಪತನಕ್ಕೆ ಕಾರಣವಾಗುತ್ತದೆ.
ಚರ್ಚೆಗೆ ಅವಕಾಶವನ್ನು ನಿರ್ಬಂಧಿಸಲಾಗುತ್ತಿದೆ. ಕಳೆದ ಎರಡು ಲೋಕಸಭೆ ಅವಧಿಗಳಲ್ಲಿ ಕಡಿಮೆ ಸಂಖ್ಯೆಯ ಅಧಿವೇಶನಗಳನ್ನು ನಡೆಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ದೋಷಾರೋಪ 1: ಉಪ ಲೋಕಸಭಾಧ್ಯಕ್ಷರನ್ನು ನೇಮಕ ಮಾಡಿಲ್ಲ:

2019ರಲ್ಲಿ 17ನೇ ಲೋಕಸಭೆಯು ಅಸ್ತಿತ್ವಕ್ಕೆ ಬಂದ ಬಳಿಕ ಲೋಕಸಭೆಯಲ್ಲಿ ಉಪ ಲೋಕಸಭಾಧ್ಯಕ್ಷರನ್ನು ಚುನಾಯಿಸಿಲ್ಲ. ಭಾರತದ ಸಂವಿಧಾನದ 97ನೇ ವಿಧಿಯ ಪ್ರಕಾರ, ಲೋಕಸಭಾಧ್ಯಕ್ಷ ಹಾಗೂ ಉಪ ಲೋಕ ಸಭಾಧ್ಯಕ್ಷರನ್ನು ಚುನಾಯಿಸುವುದು ಕಡ್ಡಾಯವಾಗಿದೆ. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಉಪ ಲೋಕ ಸಭಾಧ್ಯಕ್ಷರಿಲ್ಲದೆ ಸರಕಾರ ತನ್ನ ಅವಧಿಯನ್ನು ಮುಗಿಸಿದೆ. ಲೋಕಸಭಾಧ್ಯಕ್ಷರು ಸರಕಾರದ ನಾಮನಿರ್ದೇಶಿತರಾಗಿದ್ದರೆ, ಉಪ ಸಭಾಧ್ಯಕ್ಷರು ವಿರೋಧ ಪಕ್ಷಗಳ ನಾಮ ನಿರ್ದೇಶಿತರಾಗಿರುತ್ತಾರೆ.

ದೋಷಾರೋಪ 2ಕಡಿಮೆ ಸಂಖ್ಯೆಯ ಅಧಿವೇಶನ

ಲೋಕಸಭೆಯ ಪೂರ್ಣಾವಧಿಯಲ್ಲಿ ಕಡಿಮೆ ಸಂಖ್ಯೆಯ ಅಧಿವೇಶನಗಳನ್ನು ನಡೆಸುವುದರೊಂದಿಗೆ ಸಂಸತ್ತನ್ನು ತನ್ನ ಇಚ್ಛೆಗನುಸಾರವಾಗಿ ನಿಯಂತ್ರಿಸಲಾಗಿದೆ. ಲೋಕಸಭೆಯ ಅವಧಿಯಾದ 2014-2019ರ ಐದು ವರ್ಷಗಳ ನಡುವೆ ಕೇವಲ 331 ಅಧಿವೇಶವನಗಳನ್ನು ಮಾತ್ರ ನಡೆಸಲಾಗಿದೆ. ಆದರೆ 17ನೇ ಲೋಕಸಭೆಯು ಅದಕ್ಕಿಂತ ಕಡಿಮೆ ಸಂಖ್ಯೆಯ ಅಧಿವೇಶನ ಅಂದರೆ 278 ಅಧಿವೇಶನಗಳನ್ನು ಮಾತ್ರ ನಡೆಸಲಾಗಿದೆ.

ದೋಷಾರೋಪ 3ಹೆಚ್ಚು ಸುಗ್ರೀವಾಜ್ಞೆ ಜಾರಿಗೊಳಿಸಿರುವುದು

ಮೋದಿ ಆಡಳಿತದಲ್ಲಿ ಹೆಚ್ಚು ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಲಾಗಿದೆ.  2014-2021ರ ಅವಧಿಯಲ್ಲಿ 76 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಲಾಗಿದೆ.

ದೋಷಾರೋಪ 4: ಚರ್ಚೆಗಳಿಲ್ಲದೆ ಮಸೂದೆಗಳನ್ನು ಅಂಗೀಕರಿಸುವುದು

ವಿರೋಧ ಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ ಪ್ರಜಾಸತ್ತಾತ್ಮಕ ಚರ್ಚೆಯಿಲ್ಲದೆ ಮೋದಿ ಆಡಳಿತದಲ್ಲಿ ಮಸೂದೆಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ. 17ನೇ ಲೋಕಸಭಾ ಅವಧಿಯಲ್ಲಿ ಲೋಕಸಭೆಯಲ್ಲಿ 86 ಮಸೂದೆಗಳು ಹಾಗೂ ರಾಜ್ಯಸಭೆಯಲ್ಲಿ 103 ಮಸೂದೆಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡಿವೆ. 2023ರ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಹೆಚ್ಚಿನ ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಉಭಯ ಸದನಗಳಲ್ಲಿ 14 ಮಸೂದೆಗಳನ್ನು ಕೇವಲ 3 ದಿನಗಳಲ್ಲಿ ಅಂಗೀಕರಿಸಲಾಗಿದೆ.

ದೋಷಾರೋಪ 5: ಶಾಸನ ರೂಪಿಸುವಾಗ ಪಾರದರ್ಶಕತೆ ಕೊರತೆ

ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ, ಸೂಕ್ತ ರೀತಿಯಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಸದಿರುವುದು, ಶಾಸನ ಪೂರ್ವ ಸಮಾಲೋಚನಾ ನೀತಿಯ ಉಲ್ಲಂಘನೆ ಹಾಗೂ ಮಸೂದೆಗಳನ್ನು ಸ್ಥಾಯಿ ಸಮಿತಿಗಳಿಗೆ ರವಾನಿಸದಿರುವುದು ಕಂಡು ಬಂದಿದೆ. 2009-2014ರ ಅವಧಿಯಲ್ಲಿ ಶೇ. 71ರಷ್ಟು ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದೆ, 2019ರಿಂದ ಕೇವಲ ಶೇ.16ರಷ್ಟು ಮಸೂದೆಗಳನ್ನು ಮಾತ್ರ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದೆ. ಲೋಕಸಭೆಯಲ್ಲಿ ಮಂಡಿಸಲಾಗಿರುವ 301 ಮಸೂದೆಗಳ ಪೈಕಿ ಕೇವಲ 74 ಮಸೂದೆಗಳು ಅಂದರೆ ಶೇ. 24.5ರಷ್ಟು ಮಸೂದೆಗಳನ್ನು ಮಾತ್ರ 2014-2021ರ ನಡುವೆ ಸಾರ್ವಜನಿಕ ಸಮಾಲೋಚನೆಗೆ ಬಿಡುಗಡೆ ಮಾಡಲಾಗಿದೆ. 74 ಮಸೂದೆಗಳ ಪೈಕಿ ಕನಿಷ್ಠ 40 ಮಸೂದೆಗಳನ್ನು ಶಾಸನಪೂರ್ವ ಸಮಾಲೋಚನಾ ನೀತಿಯ ಪ್ರಕಾರ 30 ದಿನಗಳ ಕಾಲ ಸಮಾಲೋಚನೆಗಾಗಿ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಲಾಗಿದೆ.

ದೋಷಾರೋಪ 6ಚುನಾವಣಾ ಬಾಂಡ್ ಹಾಗೂ ಹಣಕಾಸು ಮಸೂದೆ ಸೇರಿದಂತೆ ನಿರ್ಣಾಯಕ ಮಸೂದೆಗಳನ್ನು ಸಾಕಷ್ಟು ಪರಿಶೀಲನೆ ನಡೆಸದೆ ಅಂಗೀಕಾರ

2016-2023ರ ಮಧ್ಯೆ ಸರಾಸರಿ ಶೇ.79ರಷ್ಟು ಬಜೆಟ್‌ನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಗಿದೆ.  ಕಡಿಮೆ ಸಂಖ್ಯೆಯ ಅಧಿವೇಶನ, ಕಡಿಮೆ ಅವಧಿಯ ಬಜೆಟ್ ಅಧಿವೇಶನಗಳು, ಕಳಪೆಯಾಗಿ ಯೋಜಿಸಲಾದ ಕಾರ್ಯಸೂಚಿಗಳ ಮೂಲಕ ಬಜೆಟ್‌ನ ಕೆಲ ಭಾಗವನ್ನು ಮಾತ್ರ ವಿಸ್ತೃತವಾಗಿ ಚರ್ಚಿಸಿ, ದೊಡ್ಡ ಭಾಗವನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ.

ದೋಷಾರೋಪ 7: ವಿರೋಧ ಪಕ್ಷಗಳ ಸಂಸದರ ಸಾಮೂಹಿಕ ಅಮಾನತು

2023ರ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ ಇತಿಹಾಸದಲ್ಲೇ ಅತಿಹೆಚ್ಚು ಸಂಸದರನ್ನು ಅಮಾನತು ಮಾಡಲಾಗಿತ್ತು. ಸಂಸತ್ತಿನ ಭದ್ರತಾ ವೈಫಲ್ಯದ ಕುರಿತು ವಿರೋಧ ಪಕ್ಷಗಳ ಸಂಸದರು ಚರ್ಚೆಗೆ ಆಗ್ರಹಿಸಿದಾಗ, ಈ ಹಿಂದೆಂದೂ ಇಲ್ಲದಂತೆ 146 ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು. ಇದು ಇಲ್ಲಿಯವರೆಗೆ ಅಮಾನತುಗೊಂಡಿರುವ ಸಂಸದರ ಗರಿಷ್ಠ ಸಂಖ್ಯೆಯಾಗಿದೆ. ಇದು ಲೋಕಸಭೆಯ ಉಭಯ ಸದನಗಳ ಸದಸ್ಯ ಬಲದ ಶೇ. 20ರಷ್ಟಾಗಿದ್ದು, ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಲ್ಲದ ಸ್ಥಿತಿಯಾಗಿತ್ತು. ಇದೇ ವೇಳೆ ನಿರ್ಣಾಯಕ ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಗಿತ್ತು.

ದೋಷಾರೋಪ 8: ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿರುವುದು

ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗಳನ್ನು ಅಳಿಸಿ ಹಾಕುವುದು, ಸಚಿವಾಲಯಗಳು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡುವುದು ಮೋದಿ ಆಡಳಿತದ ಅವಧಿಯಲ್ಲಿ ಕಂಡು ಬಂದಿದೆ. 2023ರ ಚಳಿಗಾಲದ ಅಧಿವೇಶನದ ವೇಳೆ ವಿರೋಧ ಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ ನಂತರ ಅವರು ಕೇಳಿದ್ದ 290 ಪ್ರಶ್ನೆಗಳನ್ನು ಅಳಿಸಿ ಹಾಕಲಾಗಿತ್ತು.


LEAVE A REPLY

Please enter your comment!
Please enter your name here