ಕೊರೋನದಿಂದಾಗಿ ಇತರೆ ವ್ಯಾಧಿಗಳಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ; ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರಕಾರ ಮುಂದಾಗಬೇಕು- ವೆಲ್ಫೇರ್ ಪಾರ್ಟಿ

0
312

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಜನರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲಿಯೂ ವಿಶೇಷವಾಗಿ ಗರ್ಭಿಣಿಯರು, ಹೃದಯ ಸಂಬಂಧಿ ಕಾಯಿಲೆಗಳು, ಶುಗರ್, ಬಿಪಿ ಸೇರಿ ಸಣ್ಣಪುಟ್ಟ ಕಾಯಿಲೆಗಳು ಇರುವ ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರಗಳಿಗೆ ಹೋದರೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ.

ಕೇವಲ ಕೊರೋನ ರೋಗಿಗಳಿಗೆ ಮಾತ್ರವೇ ಆಸ್ಪತ್ರೆಗಳು ಇವೆಯೇನೋ ಎನ್ನುವಷ್ಟರ ಮಟ್ಟಿಗೆ ಆರೋಗ್ಯ ಇಲಾಖೆ ಇತರೆ ವ್ಯಾಧಿಗಳ ಬಗ್ಗೆ ಕಾಳಜಿ ವಹಿಸದೆ ಇರುವುದು, ಇತರೆ ರೋಗಿಗಳಿಗೆ ತೀವ್ರ ಸಮಸ್ಯೆ ಉಂಟುಮಾಡಿದೆ.

ಈ ಕೂಡಲೇ ಸರಕಾರ ಕೊರೋನ ರೋಗಿಗಳ ತಪಾಸಣೆ ಜೊತೆಗೆ ಇತರೆ ರೋಗಿಗಳಿಗೆ ಪರ್ಯಾಯವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಮುಂದಾಗಬೇಕು. ಈಗಾಗಲೇ ಕೋವಿಡ್ ಸಾಂಕ್ರಾಮಿಕ ರೋಗದಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿದೆ. ಹಾಗಾಗಿ ಸಾಮಾನ್ಯವಾಗಿರುವ ಲಕ್ಷಣ ಇರುವರಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸರಕಾರದಿಂದ ಸಾಧ್ಯವಾಗುತ್ತಿಲ್ಲ ಎನಿಸುತ್ತಿದೆ.

ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಕೋವಿಡ್ ಮಹಾಮಾರಿಯ ಜೊತೆಗೆ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸಕ್ಕೆ ತೀವ್ರ ಗತಿಯಲ್ಲಿ ಮುಂದಾಗಬೇಕೆಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ತಾಹೀರ್ ಹುಸೇನ್ ಒತ್ತಾಯಿಸಿದ್ದಾರೆ.