ಆಕ್ಸಿಜನ್ ಪೂರೈಕೆಗೆ ಕರ್ನಾಟಕದ ಮನವಿಯನ್ನು ಎತ್ತಿ ಹಿಡಿದ‌ ಸುಪ್ರೀಂ ಕೋರ್ಟ್: ಕೇಂದ್ರಕ್ಕೆ ಮುಖಭಂಗ

0
635

ಸನ್ಮಾರ್ಗ ವಾರ್ತೆ

ದೆಹಲಿ: ಆಮ್ಲಜನಕದ ಬೇಡಿಕೆಯನ್ನು ಪರಿಷ್ಕರಿಸಲು ಕರ್ನಾಟಕ ಸರಕಾರ ಮಾಡಿದ ಮನವಿಗೆ ಹೈಕೋರ್ಟ್ ನೀಡಿದ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು,ಆ ಮೂಲಕ ಕೇಂದ್ರ ಸರಕಾರಕ್ಕೆ ಮುಖಭಂಗವಾಗಿದೆ‌.

ಕೋವಿಡ್-19 ರೋಗಿಗಳಿಗಾಗಿ ಪ್ರಸ್ತುತ ನೀಡುತ್ತಿರುವ ದೈನಂದಿನ ಧ್ರುವೀಕೃತ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು 965 ಮೆಟ್ರಿಕ್ ಟನ್ ನಿಂದ 1200 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಬೇಕೆಂದು ಕೇಳಿರುವ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ಸರಿ ಇದೆ ಎಂದಿರುವ ಸುಪ್ರೀಂಕೋರ್ಟ್, ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ ಎಂದಿದೆ.

ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನ ತೀರ್ಪನ್ನು ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ‌.

ಪ್ರಸ್ತುತ ಕರ್ನಾಟಕಕ್ಕೆ 965 ಮೆಟ್ರಿಕ್ ಟನ್ ಧ್ರುವೀಕೃತ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ತುರ್ತಾಗಿ ತಡೆಹಿಡಿಯುವ ಅಗತ್ಯವಿದೆ ಎಂದು ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದೆದುರು ಮನವಿ ಮಾಡಿದ್ದರು.

ಕೇಂದ್ರ ಸರಕಾರ ಸಲ್ಲಿಸಿದ್ದ ಈ ಮನವಿಯ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.