ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಬಂಧನ: ಬೇಷರತ್ ಬಿಡುಗಡೆಗೆ ವೆಲ್ಫೇರ್ ಪಾರ್ಟಿ ಆಗ್ರಹ

0
281

ಸನ್ಮಾರ್ಗ ವಾರ್ತೆ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಬಂಧನವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್ ಖಂಡಿಸಿದರು.

ಗುಜರಾತ್ ಭಯೋತ್ಪಾದನಾ ನಿಗ್ರಹದಳವು ಆಧಾರರಹಿತವಾಗಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿರುವುದು ಬಿಜೆಪಿ ಸರ್ಕಾರಗಳ ಪ್ಯಾಸಿಸ್ಟ್ ಧೊರಣೆಯ ಮುಂದುವರಿಕೆಯೇ ಆಗಿದೆ. ಕೂಡಲೇ ತೀಸ್ತಾ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ, ಅಂದಿನ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಎಲ್ಲವೂ ಕೋಮುಗಲಭೆಗೆ ಸಹಕಾರ ನೀಡಿದ್ದವು ಎಂಬ ಆರೋಪ ಕೇಳಿಬಂದಿತ್ತು. ಆದರೆ, ಸುಪ್ರೀಂ ಕೋರ್ಟ್ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಈ ಬಂಧನವಾಗಿರುವುದು ಸರ್ವಾಧಿಕಾರವಲ್ಲದೇ ಮತ್ತೇನೂ ಅಲ್ಲ.

ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವವರನ್ನು ಹಾಗೂ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವವರನ್ನು ರಕ್ಷಣೆ ಹಾಗೂ ಸುರಕ್ಷತೆಯ ಹೆಸರಿನಲ್ಲಿ ವ್ಯವಸ್ಥಿತವಾಗಿ ಬಂಧಿಸುವ ಮೂಲಕ ಹೋರಾಟ ಚಳವಳಿಗಳನ್ನು ಸದೆ ಬಡಿಯಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಜನರ ಆಕ್ರೋಶ ಹೆಚ್ಚಿದಾಗ ಹೋರಾಟ ಬುಗಿಲೇಳುವುದನ್ನು ತಡೆಯಲಾಗುವುದಿಲ್ಲ ಎಂಬುದನ್ನು ಇತಿಹಾಸ ಸಾಬೀತು ಮಾಡಿದೆ ಎಂದು ಅವರು ಎಚ್ಚರಿಸಿದರು.