ಸಭಾಪತಿ ಸ್ಥಾನಕ್ಕೆ ನಸೀರ್ ಅಹ್ಮದ್: ಕಾಂಗ್ರೆಸ್‌ನಿಂದ ಕಣ್ಣೊರೆಸುವ ತಂತ್ರವೆಂದು ಆರೋಪಿಸಿದ ವೆಲ್ಫೇರ್ ಪಾರ್ಟಿ

0
578

ಸನ್ಮಾರ್ಗ ವಾರ್ತೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನಾಗಿ ಬಸವರಾಜ ಹೊರಟ್ಟಿ ಅವರನ್ನು ಕಣಕ್ಕಿಳಿಸಿವೆ. ಉಭಯ ಪಕ್ಷಗಳ ಅಭ್ಯರ್ಥಿಯ ಗೆಲುವು ಖಚಿತವಾಗಿರುವ ಹೊರತಾಗಿಯೂ ಕಾಂಗ್ರೆಸ್ ಪಕ್ಷ ಮಾತ್ರ ಅಲ್ಪಸಂಖ್ಯಾತರ ಕಣ್ಣೊರೆಸಲು ನಸೀರ್ ಅಹ್ಮದ್‌ರಿಂದ ನಾಮಪತ್ರ ಸಲ್ಲಿಸಿರುವುದು ಖೇದಕರ ಸಂಗತಿಯಾಗಿದೆ.

ಅಲ್ಪಸಂಖ್ಯಾತರ ಕಡೆಗಣನೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸೋಲು ಖಚಿತ ಎನ್ನುವ ಮಾಹಿತಿ ಇರುವ ಸಂದರ್ಭದಲ್ಲಿ ಮಾತ್ರ ಅಲ್ಪಸಂಖ್ಯಾತರ ಬಳಕೆ ಮಾಡುವ ಕಾಂಗ್ರೆಸ್ ಪಕ್ಷದ ಕ್ರಮ ಖಂಡನೀಯವಾಗಿದೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷರಾದ ತಾಹೇರ್ ಹುಸೇನ್ ಹೇಳಿದರು.

ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ದಶಕಗಳಿಂದ ರಾಜಕೀಯದಲ್ಲಿ ಹಿಂದುಳಿಯುವಂತೆ ಮಾಡಿರುವುದು ಶೋಚನೀಯವಾಗಿದೆ ಎಂದ ಅವರು ವೆಲ್ಫೇರ್ ಪಾರ್ಟಿ ಆಫ್ ಕರ್ನಾಟಕ ಕಾಂಗ್ರೆಸ್‌ನ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು‌.