“ಮಹಾ ಧರಣಿ “ಗೆ ವೆಲ್ಫೇರ್ ಪಾರ್ಟಿ ಸಂಪೂರ್ಣ ಬೆಂಬಲ

0
391

ಸನ್ಮಾರ್ಗ ವಾರ್ತೆ

ಬೆಂಗಳೂರು : ಜನ ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ನೀತಿಗಳ ವಿರುದ್ಧ ದುಡಿಯುವ ಜನರ ಮಹಾ ಧರಣಿಗೆ ವೆಲ್ಫೇರ್ ಪಾರ್ಟಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ” ಎಂದು ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಇಂದು ದೇಶದಲ್ಲಿ ದುಡಿಯುವ ಜನರ ಬದುಕು ನರಕ ಸದೃಶವಾಗಿದೆ. ಕೇಂದ್ರ ಸರಕಾರ ಜನರ ಸಂಕಷ್ಟ ನಿವಾರಿಸುವ ಬದಲು ಕಾರ್ಪೊರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆ. ರೈತರಿಗೆ ಸುಳ್ಳು ವಾಗ್ದಾನ ಮಾಡಿ ಮೋಸ ಮಾಡುತ್ತಿದೆ. ರೈತ ವಿರೋಧಿ ಕಾನೂನುಗಳನ್ನು ಈ ತನಕ ರದ್ದು ಗೊಳಿಸಿಲ್ಲ. ಹಾಗೆಯೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವ ಖಾತ್ರಿ ಕಾಯ್ದೆಯನ್ನು ಕೂಡ ಜಾರಿ ಮಾಡಿಲ್ಲ. ಇದರಿಂದ ದೇಶದ ರೈತರ ಬದ್ಕಕು ಅತ್ಯಂತ ಅಸಹನೀಯವಾಗಿದೆ.

ಅದೇ ರೀತಿ ಕಾರ್ಮಿಕ ವಿರೋಧಿ ನೀತಿಗಳಿಂದ ದುಡಿಯುವ ಕಾರ್ಮಿಕರ ಜೀವನ ನರಕವಾಗಿದೆ ಕಾರ್ಪೋರೇಟ್ ಪರ ನೀತಿಗಳಿಂದಾಗಿ ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರು ತನ್ನ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲದೆ ಕಂಗಲಾಗಿದ್ದಾರೆ. ಒಟ್ಟಾರೆ ದೇಶದಲ್ಲಿ ದುಡಿಯುವ ಜನರ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ.

ರೈತರು, ಕಾರ್ಮಿಕರು ಬಡಜನರು ಮತ್ತೊಮೆ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ಕೂಡಲೇ ಕೈಬಿಡಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ರೈತರನ್ನು ಕಾಪಾಡಬೇಕು. ರೈತರ ಆತ್ಮಹತ್ಯೆಯ ಪ್ರಕರಣಗಳಿಗೆ ಈ ಮೂಲಕ ತಡೆ ಹಾಕಬೇಕು.

ಕೃಷಿ ಪ್ರಧಾನವಾದ ದೇಶದಲ್ಲಿ ರೈತರ ಬದುಕು ಕಳವಳಕಾರಿಯಾಗಿದೆ. ರೈತರ ಬೆಳೆಗಳಿಗೆ ಬೆಲೆ ಖಾತ್ರಿ ಕಾಯ್ದೆ ಜಾರಿ ಗೊಳಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು ಮತ್ತು ಸಾಮನ್ಯ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಅಗ್ರಹಿಸಿದರು.

ಈ ಬೇಡಿಕೆಗಳಿಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ದುಡಿಯುವ ಜನರ ಮಹಾ ಧರಣಿಗೆ ವೆಲ್ಫೇರ್ ಪಾರ್ಟಿಯು ತನ್ನ ಸಂಪೂರ್ಣ ಬೆಂಬಲ ನೀಡಲಿದೆ. ಸರಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ‌‌.