ಮೀಸಲಾತಿ ವಿವಾದ- ಬಿಜೆಪಿಗೆ ನೀಡಿರುವ ಬೆಂಬಲವನ್ನು ಮರು ಪರಿಶೀಲನೆಗೆ ಒಡ್ಡಿ: ದಲಿತ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ ವೆಲ್ಫೇರ್ ಪಾರ್ಟಿ

0
559

ಸನ್ಮಾರ್ಗ ವಾರ್ತೆ-

ನವದೆಹಲಿ, ಆ, 20: ಎಸ್‌ಸಿ / ಎಸ್‌ಟಿಗೆ ಮೀಸಲಾತಿ ಕುರಿತು ರಾಷ್ಟ್ರೀಯ ಚರ್ಚೆಗೆ ಕರೆ ನೀಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ದಾಸ್ ಭಾಗವತ್ ಅವರ ಹೇಳಿಕೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸಿದೆ. ಇದು ಸಾಮಾಜಿಕ ನ್ಯಾಯಕ್ಕೆ ಅಪಾಯಕಾರಿ ಎಂದು ಪಕ್ಷವು ಹೇಳಿದ್ದು, ಅವರ ಉದ್ದೇಶವನ್ನು ಅನುಮಾನಿಸಿದೆ.

ಶ್ರೀ ಭಾಗವತ್ ಅವರ ಹೇಳಿಕೆಯನ್ನು ಟೀಕಿಸಿದ ವೆಲ್ಫೇರ್ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್‌ ಕ್ಯು ಆರ್ ಇಲ್ಯಾಸ್‌ರವರು ಇದು ಎಸ್‌ಸಿ/ ಎಸ್‌ಟಿ ಗಳ ವಿರುದ್ಧ ಹೂಡಲಾಗುತ್ತಿರುವ ಪಿತೂರಿಯಾಗಿದೆ. ಇದು ದೇಶಕ್ಕೆ ಮಾರಕ ಎಂದಿದ್ದಾರೆ.

ಎಸ್ಸಿ / ಎಸ್ಟಿ ಸಮುದಾಯಗಳ ಮೇಲೆ ಮೇಲ್ಜಾತಿಯವರ ನಡೆಸುತ್ತಿರುವ ತಾರತಮ್ಯ ನೀತಿಯನ್ನು ತೆಗೆದುಹಾಕಲು ಮತ್ತು ಅವರನ್ನು ಸಶಕ್ತಗೊಳಿಸಿ ಮುಖ್ಯವಾಹಿನಿಗೆ ತರಲು ಅಳವಡಿಸಲಾಗಿರುವ ಒಂದು ಮಾರ್ಗವು ಸಂವಿಧಾನವು ನೀಡಿರುವ ಮೀಸಲಾತಿಯಾಗಿದೆ ಎಂದು ಡಾ. ಇಲ್ಯಾಸ್ ಹೇಳಿದರು. ಇದರಲ್ಲಿ ಯಾವುದೇ ಬದಲಾವಣೆಗಳನ್ನು ತರಲು ಯತ್ನಿಸುತ್ತಿರುವುದನ್ನು ಕಾಣುವಾಗ ಸಂಘಿಸ್ಟ್ ಸಿದ್ಧಾಂತವನ್ನು ಪುನಃ ಬಲಪಡಿಸುವ ಹುನ್ನಾರ ನಡೆಯುತ್ತಿರುವಂತಿದೆ ಎಂದು ಅವರು ನುಡಿದರು.

ಈ ದಲಿತ ವಿರೋಧಿ ನಿಲುವನ್ನು ಬಿಜೆಪಿ ಸರ್ಕಾರವು ಈ ಹಿಂದೆಯೂ ವ್ಯಕ್ತಪಡಿಸಿದೆ, ಎಸ್‌ಸಿ / ಎಸ್‌ಟಿ ಮೀಸಲಾತಿಯನ್ನು ಮೇಲ್ಜಾತಿಯವರಿಗೆ 10% ಆರ್ಥಿಕ ಮೀಸಲಾತಿಯನ್ನು ಪರಿಚಯಿಸುವ ಮೂಲಕ ದುರ್ಬಲಗೊಳಿಸಿದೆ ಮತ್ತು ಆರೆಸ್ಸೆಸ್ ನ ಈ ಹೇಳಿಕೆಯು ಮತ್ತೆ ಆ ನಿಲುವನ್ನು ಪುನರುಚ್ಚರಿಸಿದಂತಿದೆ ಎಂದು ಅವರು ಹೇಳಿದರು.

ಮೂಲತಃ ದಲಿತ ವಿರೋಧಿ, ಮೀಸಲಾತಿ ವಿರೋಧಿ ಮತ್ತು ಸಂವಿಧಾನ ವಿರೋಧಿ ಬಿಜೆಪಿಗೆ ತಮ್ಮ ಬೆಂಬಲದ ಬಗ್ಗೆ ಪುನರ್ವಿಮರ್ಶೆ ಮಾಡಬೇಕೆಂದು ಡಾ.ಇಲ್ಯಾಸ್ ಎನ್‌ಡಿಎಯ ಬೆಂಬಲಿಗ ಎಸ್‌ಸಿ / ಎಸ್‌ಟಿ ರಾಜಕೀಯ ಪಕ್ಷಗಳಿಗೆ ಕರೆ ನೀಡಿದರು.