ಪಶ್ಚಿಮ ಬೆಂಗಾಲ | ಅಪ್ರಾಪ್ತೆಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು

0
259

ಸನ್ಮಾರ್ಗ ವಾರ್ತೆ

ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನು ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಬುಧವಾರ ಎಎನ್‌ಐ ವರದಿ ಮಾಡಿದೆ.

“ಅಪರಾಧ ನಡೆದ ಸ್ಥಳದ ಮರುಸೃಷ್ಟಿ (ಕ್ರೈಮ್ ಸೀನ್ ರಿಕನ್‌ಸ್ಟ್ರಕ್ಷನ್) ಮಾಡುವಾಗ, ಆತ [ಪ್ರಭಾಸ್ ಮೊಂಡಲ್] ಪೊಲೀಸರಿಂದ ಆಯುಧವನ್ನು ಕಸಿದುಕೊಳ್ಳಲು ಮತ್ತು ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿರುವುದನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಪೊಲೀಸರು ಪ್ರಭಾಷ್ ಮೊಂಡಲ್ ಮೇಲೆ “ಪ್ರತೀಕಾರವಾಗಿ” ಗುಂಡು ಹಾರಿಸಿದ್ದು, ಅದು ಆತನಿಗೆ ತಗುಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರ ಪಟ್ಟಣದಲ್ಲಿ 11 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಮೂವರು ವ್ಯಕ್ತಿಗಳಲ್ಲಿ ಪ್ರಭಾಷ್ ಮೊಂಡಲ್ ಕೂಡ ಒಬ್ಬನಾಗಿದ್ದನು.
ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ವರದಿಯಾದ ಮರುದಿನ, ಸೂರ್ಯಪುರ ಪ್ರದೇಶದ ಕೊಳವೊಂದರಲ್ಲಿ ಚೀಲದಲ್ಲಿದ್ದ ಆಕೆಯ ಶವವನ್ನು ವಶಪಡಿಸಿಕೊಳ್ಳಲಾಗಿತ್ತು.

ಆಕೆಯ ತಂದೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಶನಿವಾರ ಆರಂಭದಲ್ಲಿ ಪ್ರಕರಣವನ್ನು ನಾಪತ್ತೆ ದೂರು ಎಂದು ದಾಖಲಿಸಲಾಗಿತ್ತು. ಪ್ರಾಥಮಿಕ ತನಿಖೆಯ ನಂತರ, ಪೊಲೀಸರು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ, ಸಾಕ್ಷ್ಯ ನಾಶ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಸೇರಿಸಿದರು.

ಈ ಘಟನೆಯು ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು, ಪ್ರತಿಭಟನಾಕಾರರು ರಸ್ತೆಗಳು ಮತ್ತು ರೈಲ್ವೆ ಮಾರ್ಗವನ್ನು ತಡೆದರು, ಟೈರ್‌ಗಳನ್ನು ಸುಟ್ಟುಹಾಕಿದರು ಮತ್ತು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದರು.

ಅಶಾಂತಿಯ ಸಮಯದಲ್ಲಿ, ನಿವಾಸಿಗಳು ಇಬ್ಬರು ಶಂಕಿತರನ್ನು ಹಿಡಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಆರೋಪಿಗಳೊಂದಿಗೆ ಸಂಬಂಧ ಹೊಂದಿರುವ ಶಂಕಿತ 26 ವರ್ಷದ ವ್ಯಕ್ತಿಯೊಬ್ಬನನ್ನು ಭಾನುವಾರ ಜ‌ನಸಮೂಹವು ಹೊಡೆದು ಕೊಂದಿದೆ.

ಲಿಂಚಿಂಗ್‌ಗೆ ಒಳಗಾದ ವ್ಯಕ್ತಿ ನಿರಪರಾಧಿ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.

ಶಂಕಿತರಲ್ಲಿ ಒಬ್ಬನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಸ್ಥಳೀಯ ಭಾರತೀಯ ಜನತಾ ಪಕ್ಷದ ನಾಯಕ ಸಂತಾನು ಮೊಂಡಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ನಿವಾಸಿಗಳು ಇಬ್ಬರು ಶಂಕಿತರನ್ನು ಹಿಡಿದು ಪೊಲೀಸ್ ಚೌಕಿಗೆ ಕರೆದೊಯ್ದ ನಂತರ ಸಂತಾನು ಮೊಂಡಲ್ ಮಧ್ಯಪ್ರವೇಶಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಜ‌ನಸಮೂಹವು ಮತ್ತೆ ಶಂಕಿತರ ಮೇಲೆ ದಾಳಿ ಮಾಡಿದಾಗ ಚೌಕಿಯಲ್ಲಿದ್ದ ಅಧಿಕಾರಿಗಳ ಸಂಖ್ಯೆಗಿಂತ ಜನರ ಸಂಖ್ಯೆ ಹೆಚ್ಚಾಗಿತ್ತು.

“ಪೊಲೀಸ್ ಬಲದ ಸಂಖ್ಯೆ ಕಡಿಮೆಯಿತ್ತು ಮತ್ತು ಬಿಜೆಪಿ ನಾಯಕ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಜ‌ನಸಮೂಹವು ಥಳಿಸಲು ಪ್ರಾರಂಭಿಸಿತು,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಮುಖ್ಯ ಆರೋಪಿ ಆನಂದ ಸರ್ದಾರ್ ಗೊಂದಲದ ಲಾಭ ಪಡೆದು ಪರಾರಿಯಾಗಿದ್ದನು.

ಆನಂದ ಸರ್ದಾರ್‌ನನ್ನು ನಂತರ ಸೋಮವಾರ ಬಂಧಿಸಲಾಯಿತು. ಪ್ರಭಾಸ್ ಮೊಂಡಲ್ ಜೊತೆಗೆ ಈ ಪ್ರಕರಣದಲ್ಲಿ ಬಂಧಿತರಾದ ಮೂರನೇ ವ್ಯಕ್ತಿ ದಿಬಾಕರ್ ಸರ್ದಾರ್. ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕಿ ದತ್ತಾ ನೇತೃತ್ವದಲ್ಲಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ ಎಂದು ವರದಿಯಾಗಿದೆ.