ಮುಸ್ಲಿಮ್ ಸಮುದಾಯದ ಕೀಳರಿಮೆಗೆ ಮದ್ದೇನು?

0
258

ಸನ್ಮಾರ್ಗ ವಾರ್ತೆ

ಮಾಲ್ಕಮ್ ಎಕ್ಸ್ ತನ್ನ ಆತ್ಮಕಥೆಯಲ್ಲಿ ಒಂದೆಡೆ, ಕರಿಯರು ತಮ್ಮ ಕೂದಲನ್ನು ಬಿಳಿಯರಂತೆ ಮಾಡಲು ನಡೆಸುವ ದೀರ್ಘ, ಕಠಿಣ ಮತ್ತು ನೋವಿನ ಪ್ರಯತ್ನವನ್ನು ವಿವರಿಸುತ್ತಾರೆ. “ತಲೆಗೂದಲನ್ನು ಬಿಳಿಯರಂತೆ ಮಾಡುವುದು ದೊಡ್ಡ ಘನ ಕಾರ್ಯವೆಂದು ಭಾವಿಸಿರುವ ಮೂರ್ಖರ ಚಿತ್ರಣ ಕನ್ನಡಿಯಲ್ಲಿ ಮೂಡಿಬಂತು. ನನ್ನ ತಲೆಗೂದಲು ಇನ್ನು ಮುಂದೆ ಹೀಗೆಯೇ ಇರುತ್ತದೆಯೆಂದು ಅಂದು ನಾನು ಪ್ರತಿಜ್ಞೆ ಮಾಡಿದೆ. ವರ್ಷಗಳ ಕಾಲ ನಾನು ಹಾಗೆಯೇ ಇದ್ದೆ. ಸ್ವಯಂ ನಿಂದ್ಯತೆಗೆ ಇರುವ ನನ್ನ ಪಯಣದ ಮೊದಲ ಸರಿಯಾದ ದೃಢ ಹೆಜ್ಜೆಯಾಗಿತ್ತದು..

ಕರಿಯರು ಕೀಳು ಮತ್ತು ಬಿಳಿಯರು ಮೇಲು ಎಂದು ನಂಬುವಂತಹ ಬ್ರೈನ್‌ವಾಶ್ ಮಾಡಲ್ಪಟ್ಟ ಅಸಂಖ್ಯಾತ ನೀಗ್ರೋ ಪುರುಷರು ಮತ್ತು ಮಹಿಳೆಯರ ಕೂಟದಲ್ಲಿ ನಾನೂ ಸೇರಿದ್ದೆ. ಬಿಳಿಯರ ಮಾನದಂಡಗಳಿಗೆ ಅನುಗುಣವಾಗಿ ರೂಪ ಸೌಂದರ್ಯವನ್ನು ಪಡೆಯುವ ಪ್ರಯತ್ನದಲ್ಲಿ ದೇವನು ನಮಗೆ ನೀಡಿರುವ ಶರೀರವನ್ನು ವಿರೂಪಗೊಳಿಸಲು, ಅದನ್ನು ನಾಶಗೊಳಿಸಲು ಕೂಡಾ ಇವರಿಗೆ ಹಿಂಜರಿಕೆಯಿಲ್ಲ… ತಲೆಗೂದಲಿನ ವಿಷಯಕ್ಕೆ ನೀಡುವ ಕಾಳಜಿಯ ಅರ್ಧದಷ್ಟಾದರೂ ತಲೆಯೊಳಗಿನ ಮೆದುಳಿಗೆ ನೀಡಿದ್ದರೆ ಅವರು ಈಗಿರುವುದಕ್ಕಿಂತ ಸಾವಿರ ಪಟ್ಟು ಉತ್ತಮ ಸ್ಥಿತಿಗೆ ತಲುಪುತ್ತಿದ್ದರು.

ಬಿಳಿಯರು, ತಾವು ಬುದ್ಧಿವಂತರು, ಚಿಂತನಾಶೀಲರೂ, ಜ್ಞಾನ ಹಾಗೂ ಸಾಮರ್ಥ್ಯವುಳ್ಳವರೆಂದೂ, ಕರಿಯರು ಅಸಮರ್ಥರು, ಅಸಂಸ್ಕೃತರು ಮತ್ತು ಯಾವುದಕ್ಕೂ ಸಲ್ಲದವರು ಎಂದು ವ್ಯಾಪಕವಾಗಿ ಪ್ರಚಾರ ಪಡಿಸಿದರು. ಇದು ಕಪ್ಪು ವರ್ಣದವರ ಮೇಲೆ ಆಳವಾದ ಪರಿಣಾಮ ಬೀರಿತು. ತಾವು ಕೀಳು ಮತ್ತು ಅಧಃಪತನ ಹೊಂದಿದವರೆಂದೂ, ಬಿಳಿಯರಂತೆ ಬದಲಾಗಬೇಕೆಂದೂ ಕರಿಯರು ಬಲವಾಗಿ ನಂಬಿದರು. ಆದ್ದರಿಂದ ಬಿಳಿ ಚರ್ಮದವರಂತಾಗಲು ಕರಿಯರು ತೀವ್ರ ಪ್ರಯತ್ನ ನಡೆಸಿದರು. ಅವರ ಉಡುಗೆ-ತೊಡುಗೆ, ಆಚಾರ ವಿಚಾರಗಳನ್ನು ಅನುಕರಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದರು. ಆದ್ದರಿಂದ ಅವರು ತಮ್ಮ ಐಡೆಂಟಿಟಿಯನ್ನು ಕಳೆದುಕೊಂಡರು. ಬಿಳಿಯರಂತಾಗಲೂ ಅವರಿಗೆ ಸಾಧ್ಯವಾಗಲಿಲ್ಲ.

ಇನ್ನು ಪಾಶ್ಚಾತ್ಯರು ಪೌರ್ವಾತ್ಯರೊಂದಿಗೆ ಅನುಸರಿಸಿದ ವಿಧಾನವೂ ಇದೇ ಆಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನವು ತಮ್ಮದೆ ಆಗಿದ್ದು ತಾವು ಉನ್ನತ ಸಂಸ್ಕೃತಿ ಮತ್ತು ನಾಗರಿಕತೆಯ ವಾರಸುದಾರರೆಂದು ವ್ಯಾಪಕವಾಗಿ ಪ್ರಚಾರ ಮಾಡಿದರು. ಪೌರ್ವಾತ್ಯರು ಅನಾಗರಿಕರು ಮತ್ತು ಅಸಂಸ್ಕೃತರಾಗಿದ್ದಾರೆ. ಆದ್ದರಿಂದ ಅವರು ಪರಿಷ್ಕರಿಸಲ್ಪಡಬೇಕು ಎಂಬ ಅಭಿಪ್ರಾಯವನ್ನು ಮೂಡಿಸಲಾಯಿತು. ಇದು ಪೌರ್ವಾತ್ಯರ ಮೇಲೂ ಆಳವಾದ ಪ್ರಭಾವ ಬೀರಿತು. ತಾವು ಕೆಟ್ಟವರೆಂದೂ ಯಾವುದಕ್ಕೂ ಸಲ್ಲದವರೆಂಬ ಭಾವನೆ ಅವರಲ್ಲೂ ಬೆಳೆದು ಬಂತು. ಆದ್ದರಿಂದ ಕೀಳರಿಮೆಗೆ ಗುರಿಯಾದ ಅವರು ಎಲ್ಲಾ ವಿಷಯಗಳಲ್ಲೂ ಪಾಶ್ಚಾತ್ಯರನ್ನು ಅನುಕರಿಸಲು ಪ್ರಯತ್ನಿಸಿದರು.

ಭಾರತದ ಮೇಲ್ಜಾತಿಯವರು ಕೆಳವರ್ಗದವರೊಂದಿಗೆ ಹೇಳಿದರು: ನಾವು ದೇವರ ವಿಶೇಷ ಜನರಾಗಿದ್ದೇವೆ. ನಾವು ಭಗವಂತನ ತಲೆ, ಭುಜಗಳು ಮತ್ತು ತೊಡೆಗಳಿಂದ ಸೃಷ್ಟಿಸಲ್ಪಟ್ಟವರು. ನೀವು ಕೆಳ ಜಾತಿಯವರು. ನೀವು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪಗಳೇ ಇದಕ್ಕೆ ಕಾರಣ. ಅದು ನಿಮ್ಮದೇ ಕರ್ಮಫಲವಾಗಿದೆ. ಆದ್ದರಿಂದ ನೀವು ನಿಂದ್ಯರೂ, ನೀಚರೂ, ನಿಕೃಷ್ಟರೂ ಆಗಿದ್ದೀರಿ. ನಮ್ಮ ಸೇವೆ ಮಾಡುವುದೇ ನಿಮ್ಮ ಧರ್ಮ. ನಮ್ಮ ಆದೇಶವನ್ನು ಪಾಲಿಸುವುದು, ನಿಮ್ಮ ಮನೆ, ದಾರಿ, ವೇಷ ಭೂಷಣಗಳು, ಭಾಷೆ, ಆಚಾರ, ಅನುಷ್ಠಾನ ಕರ್ಮಗಳು ನಮ್ಮಂತಾಗಬಾರದು. ನಮ್ಮ ಬಾವಿ, ಕೆರೆ, ದಾರಿ ಹಾಗೂ ಇತರ ವಸ್ತುಗಳನ್ನು ನೀವು ಉಪಯೋಗಿಸಬಾರದು. ನಮಗೆ ಸಂಬಂಧಿಸಿದಂತೆ ನೀವು ಅಸ್ಪೃಶ್ಯರು ಹಾಗೂ ಮುಟ್ಟಬಾರದಂತವರಾಗಿದ್ದೀರಿ.

ಈ ಪ್ರಚಾರಕ್ಕೆ ತಲೆಬಾಗಿದವರು ತಾವು ಕೆಳಜಾತಿಯವರೆಂದು ಸ್ವಯಂ ಒಪ್ಪಿಕೊಂಡರು. ಅವರಲ್ಲಿ ಗುಲಾಮಗಿರಿ, ಕೀಳರಿಮೆ, ಆತ್ಮ ನಿಂದನೆಯು ಬೇರೂರಿತು. ಮೇಲ್ಜಾತಿಯವರ ಕಲ್ಪನೆಗಳನ್ನು ಅಕ್ಷರಶಃ ಅನುಸರಿಸಲು ಆರಂಭಿಸಿದರು. ಅವರಲ್ಲಿರುವ ಶಿಕ್ಷಿತರ ಹಾಗೂ ತಿಳುವಳಿಕೆಯಿರುವವರ ಏಕೈಕ ಬಯಕೆ ತಾವು ಜಾತಿ ಮುಖ್ಯಸ್ಥರಂತಾಗಬೇಕೆಂಬುದಾಗಿತ್ತು. ಅದು ಸಂಪೂರ್ಣ ಅಸಾಧ್ಯವಾದರೂ, ತುಳಿತಕ್ಕೊಳಗಾದ ಕೆಳಜಾತಿಯವರ ಈ ಹತಾಶ ಆಸೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೋಮುವಾದಿ ಶಕ್ತಿಗಳು ಅಂತಹವರನ್ನು ಒಟ್ಟು ಸೇರಿಸಿದರು. ಮೇಲ್ಜಾತಿಯವರೊಂದಿಗೆ ಹಲವು ಕಾರ್ಯಕ್ರಮ, ವೇದಿಕೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದರ ಮೂಲಕ ತಾವೂ ಮೇಲ್ವರ್ಗದವರಿಗೆ ಸಮಾನರಾದೆವೆಂದು ಕೆಳವರ್ಗದವರು ತಪ್ಪು ತಿಳಿದುಕೊಂಡರು. ಆದರೆ ನಿಜವಾಗಿ ಅವರು ಹಿಂದಿನಂತೆಯೇ ಮೇಲ್ಜಾತಿಯವರ ಆಜ್ಞಾಪಾಲಕರಾಗಿ, ಗುಲಾಮರಾಗಿ ಪೌರ ಸೇವಕರಾಗಿಯೇ ಮುಂದುವರಿದಿದ್ದಾರೆ. ಅಭಿವ್ಯಕ್ತಿಗಳು, ರಚನೆಗಳು ಹಾಗೂ ಆಸನಗಳಲ್ಲಿ ಕೆಲವು ಬದಲಾವಣೆಗಳಾಗಿವೆ ಎಂಬುದು ಮಾತ್ರ.

ಈ ರೀತಿಯೇ ಪುರುಷಾದಿಪತ್ಯವು ಮಹಿಳೆಯರಿಗೆ ನಿರಂತರವಾಗಿ ಹೇಳಿ ದಾರಿ ತಪ್ಪಿಸಿತು. ಪುರುಷರೇ ಶ್ರೇಷ್ಠ ಅವರು ಮಾಡುವ ಕೆಲಸ ಅದ್ಭುತ, ಅವರ ವೇಷ-ಭೂಷಣ ಗೌರವಾರ್ಹ. ನಿಮ್ಮ ಗರ್ಭಾವಸ್ಥೆ, ಹೆರಿಗೆ ಮತ್ತು ಹಾಲುಣಿಸುವಿಕೆಯು ಒಳ್ಳೆಯ ವಿಚಾರವಿಲ್ಲ. ನಿಮಗೆ ಸ್ವಾತಂತ್ರ್ಯವಿಲ್ಲ. ಗೌರವಕ್ಕೆ ಹೊಂದುವಂತಹದ್ದಲ್ಲ. ಅವೆಲ್ಲವನ್ನೂ ಬಿಟ್ಟು ಕಾರ್ಖಾನೆಗಳು, ವ್ಯಾಪಾರ ಕೇಂದ್ರಗಳಲ್ಲಿ ಕೆಲಸ ಮಾಡಿ. ನಮ್ಮ ಎಲ್ಲಾ ಕೆಲಸಗಳು ಮಹತ್ವದ್ದಾಗಿದೆ. ಅದು ಇತರರ ವಾಹನವನ್ನು ಓಡಿಸುವ ಡ್ರೈವರ್ ಆದರೂ, ವಾಹನ ತೊಳೆದು ಸ್ವಚ್ಛಗೊಳಿಸುವುದಾದರೂ, ಹೊಟೇಲ್‌ಗಳಲ್ಲಿ ಆಹಾರ ತಯಾರಿಸುವುದಾದರೂ, ಬರುವವರಿಗೆ ಆಹಾರ ಬಡಿಸುವುದಾದರೂ, ಅವರು ತಿಂದ ಪಾತ್ರೆ ತೊಳೆಯುವುದಾದರೂ ಅವೆಲ್ಲವೂ ಗೌರವಾರ್ಹ ಮತ್ತು ಉತ್ತಮ ಕೆಲಸ. ಆದರೆ ನೀವು ಮನೆಯಲ್ಲಿ ಜೀವನ ಸಂಗಾತಿಗಳಿಗೆ, ಮಕ್ಕಳಿಗೆ ಆಹಾರ ಸಿದ್ಧಪಡಿಸುವುದು, ಬಡಿಸುವುದು, ಅವರು ತಿಂದ ಪಾತ್ರೆ ತೊಳೆಯುವುದು ಇವೆಲ್ಲವೂ ಒಳ್ಳೆಯ ಉದ್ಯೋಗವಲ್ಲ. ಗಂಡಸರು ಇತರರ ಮನೆಯ ಪಹರೆ ಕಾಯುವುದು ಅಥವಾ ಸಂರಕ್ಷಣೆ ಮಾಡುವುದು ಗೌರವದ ಕೆಲಸ. ಆದರೆ ನೀವು ಮಹಿಳೆಯರು ಸ್ವಂತ ಮನೆಗಳನ್ನು ಸಂರಕ್ಷಿಸುವುದು ಕೀಳಾದ ಮತ್ತು ಘನತೆಯಿಲ್ಲದ ಕೆಲಸ. ಅದ್ದರಿಂದ ನೀವು ಹೇಗಾದರೂ ಪುರುಷರು ಮಾಡುವ ಕೆಲಸವನ್ನು ಪಡೆದುಕೊಳ್ಳಬೇಕು. ಅದುವೇ ನಿಮ್ಮ ಗುರಿಯಾಗಿರಬೇಕು. ನಿಮ್ಮ ಗಮನ, ಶ್ರದ್ಧೆಯನ್ನು ಅದರಲ್ಲೇ ಕೇಂದ್ರೀಕರಿಸಬೇಕು. ನಿಮ್ಮ ಸಲ್ವಾರ್, ಸೀರೆ, ಪರ್ದಾವನ್ನು ತೆಗೆದು ನಮ್ಮ ಹಾಗೆ ಪ್ಯಾಂಟು ಶರ್ಟು ಧರಿಸಬೇಕು. ತಲೆಗೂದಲು ಕತ್ತರಿಸಿ ನಮ್ಮಂತೆ ಮಾಡಬೇಕು.

ಪುರುಷಾಧಿಪತ್ಯದ ಈ ಆಕ್ರಮಣವು ಶಾಲೆಗಳಲ್ಲಿ ಕೊನೆಯಿಲ್ಲದ ಕೀಳರಿಮೆ ಮತ್ತು ಸ್ವಯಂ ಆತ್ಮಹತ್ಯೆಯ ಭಾವನೆಯನ್ನು ಹುಟ್ಟು ಹಾಕಿತು. ತಾವು ಗಂಡುಗಳಾಗಿ ಜನಿಸದಿದ್ದುದರಿಂದ ಅವರು ಬಹಳ ದುಃಖಿತರಾದರು. ತಮ್ಮ ದೇಹವೂ ಗಂಡಿನಂತಾಗಬೇಕೆಂದು ಬಯಸಿದರು. ಶಸ್ತ್ರಕ್ರಿಯೆಯಿಂದ ಅದನ್ನು ಮಾರ್ಪಡಿಸಲು ಗಂಡುಗಳಂತೆ ಜೀವಿಸಿದರು. ಪುರುಷರನ್ನು ಸಂಪೂರ್ಣವಾಗಿ ಅನುಸರಿಸಿ ಅನುಕರಿಸಿ ಅವರೊಂದಿಗೆ ಕಳೆಯಲು ತೀರ್ಮಾನಿಸಿದರು. ಹೆಣ್ಣಿನ ಜೊತೆ ಬೆರೆಯುವುದು ಕೆಟ್ಟದ್ದೆಂದೂ ಮತ್ತು ಗಂಡುಗಳೊಂದಿಗೆ ಬೆರೆತುಕೊಂಡಿರುವುದಕ್ಕೆ ಹೆಚ್ಚಿನ ಪ್ರಾದಾನ್ಯತೆಯೆಂದೂ ಪ್ರತಿಪಾದಿಸಿದರು. ಹೀಗಾಗಿ ಲಿಂಗ ಸಮಾನತೆ ಪಡೆದು ಕೊಂಡೆವೆಂದು ಹೇಳಿಕೊಂಡರು.

ಐತಿಹಾಸಿಕ ಕಾರಣಗಳಿಂದ ಹಿಂದುಳಿದ ಮುಸ್ಲಿಮರಲ್ಲಿಯೂ ಕೀಳರಿಮೆ ಮತ್ತು ಸ್ವಾಭಿಮಾನದ ಕೊರತೆ ಕಾಣಿಸಿಕೊಂಡಿತು. ಬಹುಸಂಖ್ಯಾತ ಸಂಸ್ಕೃತಿ ಮತ್ತು ನಾಗರಿಕತೆಯ ಬಗ್ಗೆ ವಿಪರೀತ ಮೆಚ್ಚುಗೆ ಮತ್ತು ಗೌರವ ಬೆಳೆಯಿತು. ತಮ್ಮ ವಿಶ್ವಾಸ, ಆದರ್ಶ, ಆಚಾರ, ಸಂಪ್ರದಾಯಗಳು, ಧಾರ್ಮಿಕ ಚಿಹ್ನೆಗಳೊಂದಿಗೆ ಹಾಗೂ ಇಸ್ಲಾಮೀ ಸಂಸ್ಕೃತಿಯೊಂದಿಗೆ ತಿರಸ್ಕಾರವು ಮೂಡಿತು. ಪ್ರಬಲ ಜಾತಿಯ ಪದ್ಧತಿಗಳು ಮತ್ತು ಜೀವನ ವಿಧಾನವನ್ನು ಅಳವಡಿಸಿಕೊಳ್ಳಲು ಮತ್ತು ಅನುಸರಿಸಲು ಉತ್ಸಾಹ ಪಟ್ಟರು. ಹೀಗೆ ಸಮುದಾಯದಲ್ಲಿ ಇಂತಹ ಸಾಂಸ್ಕೃತಿಕ ಆಕ್ರಮಣ ನಡೆಯಿತು.

ಆರಾಧನೆಗಳಲ್ಲಿಯೂ ಇಸ್ಲಾಮೇತರ ಆಚರಣೆಗಳೂ ನುಸುಳಿ ಕೊಂಡಿತು. ಇದು ಮದುವೆ ಸಮಾರಂಭ, ಹುಟ್ಟು ಹಬ್ಬ ಸಮಾರಂಭ ಮಾತ್ರವಲ್ಲದೆ ಹಬ್ಬದಾಚರಣೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ.

ಒಬ್ಬರ ಸ್ವಂತ ಆದರ್ಶ, ನಂಬಿಕೆಗಳು, ಆಚರಣೆಗಳು, ನೈತಿಕ ಮೌಲ್ಯದ ಕುರಿತು ಕೀಳರಿಮೆ ಹಾಗೂ ಜಿಗುಪ್ಸೆಯು ಆದರ್ಶ, ನಂಬಿಕೆಗಳ ದೌರ್ಬಲ್ಯಗಳಿಗೂ ನಿರಾಕರಣೆಗೂ ದಾರಿ ಮಾಡಿ ಕೊಡುತ್ತದೆ.

ಹೀಗೆ ಸಂಭವಿಸದಿರಲು ಪವಿತ್ರ ಕುರ್‌ಆನ್ ಇಸ್ಲಾಮೀ ಸಮೂಹದಲ್ಲಿ ಘನತೆ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸಲು ಅಗತ್ಯವಾದ ಪಾಠಗಳನ್ನು ತಿಳಿಸಿದೆ. ಅಲ್ಲಾಹನು ಹೇಳುತ್ತಾನೆ: “ನೀವು ಧೈರ್ಯ ಗುಂದ ಬೇಡಿರಿ, ವ್ಯಥೆ ಪಡಲೂಬೇಡಿರಿ. ನೀವು ವಿಶ್ವಾಸಿಗಳಾಗಿದ್ದರೆ ನೀವೇ ವಿಜಯಿಗಳಾಗುವಿರಿ.” (3: 139)

ಸತ್ಯವಿಶ್ವಾಸಿಯಲ್ಲಿ ಈ ಉನ್ನತ ಭಾವನೆಯು ಸದಾ ಇರಬೇಕು. ವಿಶ್ವಾಸ, ನಂಬಿಕೆ, ಜೀವನದ ದೃಷ್ಟಿಕೋನ, ಗುಣಸ್ವಭಾವ, ಮರ್ಯಾದೆಗಳು, ವರ್ತನೆಗಳು, ಒಡ ನಾಟಗಳು, ಆರಾಧನಾ ಕರ್ಮಗಳು, ನೈತಿಕ ಮೌಲ್ಯಗಳು, ಮಾನದಂಡಗಳು, ನ್ಯಾಯ ಸಂಕಲ್ಪನೆ… ಹೀಗೆ ಮೊದಲಾಗಿ ಮಾನವೀಯತೆಯ ಸಕಲ ಆಧಾರಗಳಲ್ಲೂ ಇಸ್ಲಾಮಿನ ಮೌಲ್ಯಗಳನ್ನು ಪ್ರತಿನಿಧಿಸುವ ವಿಶ್ವಾಸಿಯು ಕೀಳರಿಮೆ ಸ್ವಾಭಿಮಾನದ ಕೊರತೆ ಹಾಗೂ ಆತ್ಮವಿಶ್ವಾಸದ ಕೊರತೆಗೆ ಒಳಗಾಗಬಾರದೆಂದೂ ಕುರ್‌ಆನ್ ಹೇಳಿದೆ.

ಇಸ್ಲಾಮೀ ಸಮಾಜದಲ್ಲಿ ಕಾರ್ಯನಿರ್ವಹಣೆಗೆ ಆತ್ಮವಿಶ್ವಾಸ ಮತ್ತು ಆತ್ಮಗೌರವ ಅನಿವಾರ್ಯವಾಗಿದೆ. ಆದ್ದರಿಂದ ಪವಿತ್ರ ಕುರ್‌ಆನ್ ಇಸ್ಲಾಮೀ ಸಮೂಹವನ್ನು ಹೀಗೆ ವಿಶ್ಲೇಷಿಸಿದೆ: “ನೀವು ಜನರಿಗಾಗಿ ಎದ್ದೇಳಲ್ಪಟ್ಟಿರುವ ಉತ್ತಮ ಸಮುದಾಯವಾಗಿದ್ದೀರಿ. ನೀವು ಒಳಿತನ್ನು ಆಜ್ಞಾಪಿಸುತ್ತೀರಿ. ಕೆಡುಕಿನಿಂದ ತಡೆಯುತ್ತೀರಿ. ಅಲ್ಲಾಹನಲ್ಲಿ ವಿಶ್ವಾಸವಿರಿಸುತ್ತೀರಿ.” (3: 110)

ವಿಶ್ವಾಸದ ದೌರ್ಬಲ್ಯದಿಂದ ಸಮುದಾಯದಲ್ಲಿ ಬೆಳೆದಿರುವ ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯು ಕೊನೆಗೊಳ್ಳಬೇಕಾದರೆ ಅವರಲ್ಲಿ ಇಸ್ಲಾಮಿನ ಅನುಪಮವಾದ ಶ್ರೇಷ್ಠತೆ ಒಳ್ಳೆಯತನ ಮತ್ತು ವಿಶ್ವಾಸ ಪ್ರಜ್ಞೆಯನ್ನು ಬೆಳೆಸಬೇಕು. ಹೀಗೆ ಮಾಡುವ ಮೂಲಕ ಮಾತ್ರ ಸಮುದಾಯದಲ್ಲಿ ವ್ಯಾಪಕವಾಗಿರುವ ಸಾಂಸ್ಕೃತಿಕ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಸಮಕಾಲೀನ ಭಾರತದಲ್ಲಿ ಆದರ್ಶ ನಂಬಿಕೆಗಳಲ್ಲೂ, ಜೀವನ ಮೌಲ್ಯಗಳಲ್ಲೂ, ಸಾಂಸ್ಕೃತಿಕ ಪರಿಸರದಲ್ಲೂ ಉಳಿದಿರುವ ಆಕ್ರಮಣವನ್ನು ಪ್ರತಿರೋಧಿಸದೆ ಇಸ್ಲಾಮೀ ಸಮಾಜದ ಉದಯ ಸಾಧ್ಯವಾಗದು.