ತಬುಸ್ಸುಮ್ ಖಾನ್ ಪ್ರಕರಣ ಸಾರುವ ಸಂದೇಶ ಏನು?

0
370

ಸನ್ಮಾರ್ಗ ಸಂಪಾದಕೀಯ

ಮಧ್ಯಪ್ರದೇಶದ ನರ್ಮದಾಪುರಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ತಬುಸ್ಸುಮ್ ಖಾನ್ ಅವರಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ಅವರ ಪ್ರತಿಕೃತಿಯನ್ನು ಪ್ರತಿಭಟನಾಕಾರರು ಸುಟ್ಟಿದ್ದಾರೆ. ಅವರನ್ನು ‘ಮುಲ್ಲಿ’ ಎಂದು ನಿಂದಿಸಿದ್ದಾರೆ. ಆನ್‌ಲೈನ್‌ನಲ್ಲಿ ನಿಂದನೆಯ ಸರಮಾಲೆಯೇ ನಡೆದಿದೆ. ಅವರನ್ನು ನ್ಯಾಯಾಧೀಶೆ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಲಾಗಿದೆ. ಅವರು ಈವರೆಗೆ ನೀಡಿದ ತೀರ್ಪುಗಳನ್ನೆಲ್ಲಾ ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಇವರ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿದೆ. ಇವರು ಮುಸ್ಲಿಮ್ ಆಗಿರುವುದರಿಂದಲೇ 14 ಮಂದಿ ಹಿಂದೂಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲೂ ಇವರ ವಿರುದ್ಧ ಪ್ರತಿಭಟನೆ ನಡೆದಿದೆ. ತೀರ್ಪನ್ನು 10 ದಿನಗಳೊಳಗೆ ಹಿಂಪಡೆಯದಿದ್ದರೆ ಮಧ್ಯಪ್ರದೇಶದಲ್ಲಿ ಮುಸ್ಲಿಮರ ರಕ್ತಪಾತ ನಡೆಸುವುದಾಗಿ ಓರ್ವ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮೂಲಕ ಬೆದರಿಕೆ ಹಾಕಿದ್ದಾನೆ. ಇದೇ ಬೆದರಿಕೆಯನ್ನು ಗುಜರಾತ್‌ನಲ್ಲೂ ಓರ್ವ ಪುನರಾವರ್ತಿಸಿದ್ದಾನೆ. ಪರಿಸ್ಥಿತಿ ಎಷ್ಟು ಆಘಾತಕಾರಿ ಸ್ಥಿತಿಗೆ ತಲುಪಿತ್ತೆಂದರೆ, ಮಧ್ಯಪ್ರದೇಶ ಹೈಕೋರ್ಟೇ ಮಧ್ಯ ಪ್ರವೇಶಿಸಬೇಕಾಯಿತು. ನ್ಯಾಯಾಧೀಶೆಗೆ ವಿಶೇಷ ರಕ್ಷಣೆ ನೀಡುವಂತೆ ಆದೇಶಿಸಬೇಕಾಯಿತು. ಈ ಎಲ್ಲದಕ್ಕೂ ಕಾರಣ ಏನೆಂದರೆ,

ಜೂನ್ 12ರಂದು ತಬುಸ್ಸುಮ್ ಖಾನ್ ಅವರು ನೀಡಿದ ತೀರ್ಪು. 2022 ಆಗಸ್ಟ್ 2ರಂದು ನಡೆದ ಗುಂಪುಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರು ಕಳೆದ ಜೂನ್ 12ರಂದು 14 ಮಂದಿ ಗೋರಕ್ಷಕ ಗೂಂಡಾಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದರು. ಮಹಾರಾಷ್ಟ್ರದ ಅಮರಾವತಿಯಿಂದ ಜಾನುವಾರುಗಳನ್ನು ತುಂಬಿಕೊಂಡು ಬಂದ ಟ್ರಕ್ಕನ್ನು ಈ 14 ಮಂದಿ ತಡೆದು ನಿಲ್ಲಿಸಿದ್ದರು. ಅದರಲ್ಲಿದ್ದ ಮೂವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಈ ಹಲ್ಲೆಯಿಂದ 50 ವರ್ಷದ ನಝೀರ್ ಅಹ್ಮದ್ ಎಂಬವರು ಸಾವಿಗೀಡಾಗಿದ್ದರು. ಉಳಿದಿಬ್ಬರು ಗಾಯಗಳೊಂದಿಗೆ ಬದುಕುಳಿದಿದ್ದರು. ಈ ಇಬ್ಬರು ನ್ಯಾಯಾಲಯದಲ್ಲಿ ನೀಡಿದ ಸಾಕ್ಷ್ಯ ಈ ತೀರ್ಪಿಗೆ ಪ್ರಬಲ ಆಧಾರವಾಗಿ ಪರಿಣಮಿಸಿತ್ತು.

ಇದೀಗ ಈ ತೀರ್ಪು ನೀಡಿದ ನ್ಯಾಯಾಧೀಶೆಯನ್ನೇ ಈ ಸ್ವಘೋಷಿತ ಧರ್ಮರಕ್ಷಕ ಗುಂಪು ಅಪರಾಧಿಯೆಂದು ಹೇಳುತ್ತಿದೆ. ಅವರ ಧರ್ಮವನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತಿದೆ. ಮಾತ್ರವಲ್ಲ, ಮಧ್ಯಪ್ರದೇಶ ಸರಕಾರದ ಯಾರೊಬ್ಬರೂ ಈ ಬೆಳವಣಿಗೆಯನ್ನು ಖಂಡಿಸಿ ಹೇಳಿಕೆ ನೀಡುತ್ತಿಲ್ಲ. ಮುಖ್ಯಮಂತ್ರಿಯಿಂದ ಹಿಡಿದು ಸಚಿವರ ವರೆಗೆ ಎಲ್ಲರೂ ಒಂದು ಬಗೆಯ ಅಸಹಜ ಮೌನವನ್ನು ತಾಳಿದ್ದಾರೆ. ನ್ಯಾಯಾಧೀಶೆಯ ಬೆನ್ನಿಗೆ ನಿಂತು ಒತ್ತಡ ರಹಿತ ತೀರ್ಪಿಗೆ ಬೆಂಗಾವಲಾಗಿ ನಿಲ್ಲಬೇಕಾದ ಸರಕಾರವೇ ಅನುಮಾನಾಸ್ಪದವಾಗಿ ವರ್ತಿಸುತ್ತಾ ಇದೆ. ಒಂದುವೇಳೆ,

ನ್ಯಾಯಾಲಯಗಳ ತೀರ್ಪನ್ನು ನ್ಯಾಯಾಧೀಶರ ಧರ್ಮದ ಆಧಾರದಲ್ಲಿ ನೋಡುವುದಾದರೆ, ಈ ದೇಶದ ಮುಸ್ಲಿಮರು ಇಂಥ ಎಷ್ಟು ಪ್ರತಿಭಟನೆಗಳನ್ನು ಮಾಡಬೇಕಿತ್ತು? ಎಷ್ಟು ಬಾರಿ ನ್ಯಾಯಾಧೀಶರಿಗೆ ಜೀವ ಬೆದರಿಕೆಯನ್ನು ಹಾಕಬೇಕಿತ್ತು? ಬಾಬರಿ ಮಸೀದಿಯ ವಿಷಯದಲ್ಲಿ ತೀರ್ಪು ನೀಡಿದ ಸುಪ್ರೀಮ್ ಕೋರ್ಟ್‌ನ 5 ಮಂದಿ ನ್ಯಾಯಾಧೀಶರ ಪೈಕಿ ನಾಲ್ವರು ನ್ಯಾಯಾಧೀಶರೂ ಮುಸ್ಲಿಮರಲ್ಲ. ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಶಿ ಸೇರಿದಂತೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಆರೋಪದಲ್ಲಿ 32 ಮಂದಿಯ ಮೇಲೆ ಹೂಡಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು 2020ರಲ್ಲಿ ಸಾರಿದ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರೂ ಮುಸ್ಲಿಮರಲ್ಲ. ವಕ್ಫ್ ಕಾಯ್ದೆಯ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ಬಹುತೇಕ ಅನುಕೂಲಕರವಾಗುವಂತೆ ತೀರ್ಪು ನೀಡಿದ ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶರೂ ಮುಸ್ಲಿಮರಲ್ಲ.

ಉತ್ತರ ಪ್ರದೇಶದ ಸಂಭಾಲ್‌ನ ಜುಮಾ ಮಸೀದಿಯ ಸರ್ವೇ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಅದೇ ದಿನ ವಿಚಾರಣೆಗೆ ಎತ್ತಿಕೊಂಡದ್ದಲ್ಲದೇ ಅದೇ ದಿನ ಸರ್ವೇ ನಡೆಸುವುದಕ್ಕೆ ಅನುಮತಿ ನೀಡಿದ ನ್ಯಾಯಾಧೀಶರೂ ಮುಸ್ಲಿಮರಲ್ಲ. ಮಾತ್ರವಲ್ಲ, ಅದೇ ದಿನ ಸರ್ವೇ ಕಾರ್ಯಕ್ಕೆ ಹೋಗುವಷ್ಟು ತುರ್ತಾಗಿ ಸ್ಪಂದಿಸಿದ ಅಧಿಕಾರಿಗಳೂ ಮುಸ್ಲಿಮರಲ್ಲ. ವಿಚಾರಣೆಯೇ ಇಲ್ಲದೇ ಕಳೆದ 6 ವರ್ಷಗಳಿಂದ ಜೈಲಲ್ಲಿರುವ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ರಿಗೆ ಪದೇ ಪದೇ ಜಾಮೀನು ನಿರಾಕರಿಸುತ್ತಿರುವ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶರೂ ಮುಸ್ಲಿಮರಲ್ಲ. ಗಂಗಾನದಿಯಲ್ಲಿ ದೋಣಿಯಲ್ಲಿ ಇಫ್ತಾರ್ ಮಾಡಿದ ಮತ್ತು ಈ ಸಂದರ್ಭದಲ್ಲಿ ಕೋಳಿ ಪದಾರ್ಥವನ್ನು ತಿಂದು ಅದರ ತ್ಯಾಜ್ಯವನ್ನು ನದಿಗೆಸೆದ 14 ಮಂದಿಗೆ 2 ತಿಂಗಳ ಕಾಲ ಜಾಮೀನು ನಿರಾಕರಿಸಿದ ನ್ಯಾಯಾಧೀಶರೂ ಮುಸ್ಲಿಮರಲ್ಲ..

ಇಂಥ ಇನ್ನೂ ಅನೇಕ ಘಟನೆಗಳಿವೆ. ಒಂದುವೇಳೆ, ಮುಸ್ಲಿಮರು ಈ ತೀರ್ಪುಗಳನ್ನು ಖಂಡಿಸಿ ಪ್ರತಿಭಟಿಸಿರುತ್ತಿದ್ದರೆ ಏನಾಗುತ್ತಿತ್ತು? ತೀರ್ಪು ನೀಡಿದ ನ್ಯಾಯಾಧೀಶರಿಗೆ ಜೀವಬೇದರಿಕೆಯನ್ನು ಹಾಕಿರುತ್ತಿದ್ದರೆ ನಮ್ಮ ಸರಕಾರಗಳ ಕ್ರಮ ಹೇಗಿರುತ್ತಿತ್ತು? ನ್ಯಾಯಾಧೀಶರನ್ನು ಅವರ ಧರ್ಮದ ಆಧಾರದಲ್ಲಿ ಅಣಕಿಸಿ, ನಿಂದಿಸಿ, ವಜಾಕ್ಕೆ ಆಗ್ರಹಿಸಿರುತ್ತಿದ್ದರೆ ನಮ್ಮ ಮೀಡಿಯಾಗಳ ವರದಿ ಹೇಗಿರುತ್ತಿತ್ತು? ಇಂಥವರ ವಿರುದ್ಧ ಕೇಂದ್ರ ಸರಕಾರ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿರಲಿಲ್ಲವೇ? ಕೇಂದ್ರದ ಗೃಹಸಚಿವರಿಂದ ಹಿಡಿದು ವಕ್ಫ್ ಸಚಿವರ ವರೆಗೆ ಹತ್ತು-ಹಲವು ಹೇಳಿಕೆಗಳು ಬಿಡುಗಡೆಗೊಳ್ಳುತ್ತಿರಲಿಲ್ಲವೇ? ಮುಸ್ಲಿಮರು ದೇಶದ ಕಾನೂನನ್ನು ಗೌರವಿಸಬೇಕು ಎಂಬ ಉಚಿತ ಸಲಹೆಗಳು ನೂರು ಕಡೆಯಿಂದ ಕೇಳಿ ಬರುತ್ತಿರಲಿಲ್ಲವೇ? ಟಿವಿ ಚಾನೆಲ್‌ಗಳು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಿ ಎಷ್ಟು ಪ್ರೆöÊಮ್‌ಟೈಮ್ ಡಿಬೇಟ್‌ಗಳನ್ನು ಪ್ರಸಾರ ಮಾಡುತ್ತಿತ್ತು? ಮುಸ್ಲಿಮ ರನ್ನು ಅಸಹಿಷ್ಣುಗಳು ಮತ್ತು ನೆಲದ ಕಾನೂನಿಗೆ ಗೌರವ ಕೊಡದವರು ಎಂದು ಷರಾ ಬರೆದು ಬಿಡುವ ಚರ್ಚಾಪಟುಗಳು, ಬರಹಗಾರರು ಎಷ್ಟು ಮಂದಿ ಕಾಣಿಸಿಕೊಳ್ಳುತ್ತಾ ಇದ್ದರು?

ಈ ದೇಶ ಹೇಗೆ ಫ್ಯಾಸಿಸ್ಟ್ ಆಲೋಚನೆಗೆ ಒಗ್ಗಿಕೊಳ್ಳುತ್ತಾ ಹೋಗುತ್ತಿದೆ ಎಂಬುದನ್ನು ಈ ತಬುಸ್ಸುಮ್ ಖಾನ್ ಪ್ರಕರಣ ಸ್ಪಷ್ಟವಾಗಿ ವಿವರಿಸುತ್ತಿದೆ. ಪ್ರಭುತ್ವ ಹೇಗೆ ದೇಶವನ್ನು ಧರ್ಮಾಧಾರಿತವಾಗಿ ವಿಭಜಿಸಿ ಆಳುತ್ತಿದೆ ಎಂಬುದಕ್ಕೂ ಈ ಪ್ರಕರಣ ಉದಾಹರಣೆಯಾಗಿದೆ. ಪ್ರಭುತ್ವದ ಪರೋಕ್ಷ ಬೆಂಗಾವಲು ಇಲ್ಲದ ಹೊರತು ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ನ್ಯಾಯಾಧೀಶೆಯ ವಿರುದ್ಧ ಪ್ರತಿಭಟನೆ ಮತ್ತು ನಿಂದನಾ ಸರಣಿ ಉಂಟಾಗಲು ಸಾಧ್ಯವೇ ಇಲ್ಲ. ಪ್ರಭುತ್ವ ನಮ್ಮ ಪರ ಇದೆ ಎಂಬ ಧೈರ್ಯದಿಂದಲೇ ಇವರೆಲ್ಲ ಇಷ್ಟೊಂದು ರಾಜಾರೋಷವಾಗಿ ಕಾನೂನಿಗೆ ಸಡ್ಡು ಹೊಡೆಯುತ್ತಿದ್ದಾರೆ. ನ್ಯಾಯಾಲಯವನ್ನೇ ಎದುರು ಹಾಕಿಕೊಳ್ಳುತ್ತಿದ್ದಾರೆ. ಇದರ ಹಿಂದೆ ನ್ಯಾಯಾಧೀಶರ ಮೇಲೆ ಒತ್ತಡ ಹಾಕುವ ಉದ್ದೇಶ ಇದೆ. ಮುಂದೆ ಇಂಥದ್ದೊಂದು ತೀರ್ಪು ನೀಡುವ ಮೊದಲು ನೂರು ಬಾರಿ ಆಲೋಚಿಸುವಂತೆ ಮಾಡುವುದೇ ಈ ಬೆಳವಣಿಗೆಯ ಹಿಂದಿನ ತಂತ್ರ.

ಪ್ರಭುತ್ವ ಸುಮ್ಮನಿರುವುದರ ಹಿಂದೆಯೂ ಇದೇ ಉದ್ದೇಶ ಇದ್ದಂತಿದೆ. ‘ನೀವು ನಮ್ಮ ಸಮುದಾಯದ ವಿರುದ್ಧ ತೀರ್ಪು ನೀಡಿದರೆ ನಿಮಗೆ ಸುರಕ್ಷಿತವಾಗಿ ಬದುಕಲು ಸಾಧ್ಯವಿಲ್ಲ’ ಎಂಬ ಸಂದೇಶ ನೀಡುವುದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಸಾಕ್ಷ್ಯದ ಆಧಾರಕ್ಕಿಂತ ಸಮುದಾಯದ ಆಧಾರದಲ್ಲಿ ತೀರ್ಪು ನೀಡಬೇಕು ಎಂಬ ಸೂಕ್ಷ್ಮ ಸಂದೇಶವನ್ನು ಎಲ್ಲಾ ನ್ಯಾಯಾಧೀಶರಿಗೂ ಈ ಮೂಲಕ ರವಾನಿಸಲಾಗಿದೆ. ಒಂದುವೇಳೆ,

ಪ್ರಭುತ್ವ ಈ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೆ ಮತ್ತು ಜಾಮೀನು ಸಿಗದಂಥ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಿದ್ದರೆ, ಅದೊಂದು ಮೈಲಿಗಲ್ಲಾಗುತ್ತಿತ್ತು. ಇನ್ನು ಮುಂದೆ ಇನ್ನಾರೂ ಇಂಥ ‘ಬೆದರಿಕೆ ತಂತ್ರ’ ಅನುಸರಿಸುವುದಕ್ಕೆ ತಡೆ ಬೀಳುತ್ತಿತ್ತು. ನ್ಯಾಯಾಧೀಶರಲ್ಲೂ ಇದು ಧೈರ್ಯವನ್ನು ತರುತ್ತಿತ್ತು. ಆದರೆ, ಪ್ರಭುತ್ವದಿಂದ ಇಂಥ ಕಠಿಣ ನಡೆ ಕಂಡುಬಂದಿಲ್ಲ. ಅದರ ಬದಲು ಬಹುತೇಕ ಮೌನ ಪಾಲಿಸುವುದನ್ನೇ ಈ ಗೂಂಡಾ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ನೀಡಿದೆ. ಈ ಮೂಲಕ ನ್ಯಾಯಾಧೀಶರಿಗೆ ಪರೋಕ್ಷ ಸಂದೇಶ ರವಾನಿಸುವ ಕೆಲಸವನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದೆ. ಈ ಬೆಳವಣಿಗೆ ಆಘಾತಕಾರಿ.