ಪ್ರಚಲಿತ ಕ್ಷೋಭೆಗಳಿಂದ ರಕ್ಷಣೆಯ ಹಾದಿ

0
248

✍️ ಸಬೀಹಾ ಫಾತಿಮಾ
ಸಂಪಾದಕರು, ಅನುಪಮ ಮಾಸಿಕ

ಅಬುಹುರೈರ(ರ) ವರದಿ ಮಾಡಿರುವರು: ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು, ಕಪ್ಪು ಕವಿದಿರುವ ರಾತ್ರಿಯ ಕ್ಷೋಭೆಯ ಮೊದಲು ನೀನು ಕರ್ಮ ನಿರತನಾಗು. ಪ್ರಭಾತದ ವೇಳೆ ಸತ್ಯವಿಶ್ವಾಸಿಯಾಗಿದ್ದ ಓರ್ವ ವ್ಯಕ್ತಿ ಸಾಯಂ ಕಾಲವಾಗುವಾಗ ಸತ್ಯ ನಿಷೇಧಿಯಾಗುವನು. ಸಾಯಂಕಾಲ ಸತ್ಯವಿಶ್ವಾಸಿಯಾಗಿರುವವನು ಬೆಳಗಾಗುವಾಗ ಸತ್ಯ ನಿಷೇಧಿಯಾಗಿ ಬಿಡುವನು. ಅವನು ತನ್ನ ವಿಶ್ವಾಸವನ್ನು ಲೌಕಿಕ ಲಾಭಕ್ಕಾಗಿ ಮಾರಾಟ ಮಾಡುತ್ತಾನೆ.(ಮುಸ್ಲಿಮ್)

ಈ ಪ್ರವಾದಿ ವಚನವು ಕ್ಷೋಭೆ ಯಾವ ರೀತಿಯಲ್ಲಿ ಮನುಷ್ಯನನ್ನು ಹಾದಿ ತಪ್ಪಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಸುತ್ತದೆ. ಆದುದರಿಂದ ಕ್ಷೋಭೆಯ ಬಗ್ಗೆ ನಮ್ಮಲ್ಲಿ ಭಯ ಇರಬೇಕು ಮತ್ತು ಅದರಿಂದ ದೂರ ಉಳಿಯಬೇಕು. ಎಲ್ಲ ರೀತಿಯ ವ್ಯಕ್ತಿಗಳು ಅದಕ್ಕೆ ಬಲಿ ಬೀಳುವ ಸಾಧ್ಯತೆ ಇರುತ್ತದೆ. ಇದು ನಮ್ಮ ಧರ್ಮ ಮತ್ತು ಈಮಾನ್‌ಗೆ ತೊಂದರೆಯನ್ನುಂಟು ಮಾಡುವ ವಿಷಯವಾಗಿದೆ. ನಮ್ಮ ಚಾರಿತ್ರಕ್ಕೂ ಅಪಾಯವನ್ನುಂಟು ಮಾಡುವ ಶಕ್ತಿ ಇದಕ್ಕಿದೆ. ಕ್ಷೋಭೆ ವ್ಯಾಪಕವಾಗಿ ಹರಡಿರುವ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಧರ್ಮ ವಿಶ್ವಾಸ ಕಾಪಾಡಲು ಮತ್ತು ಒಳಿತನ್ನು ಮಾಡಲು ಪ್ರಯಾಸವೆನಿಸುತ್ತದೆ.

ಪ್ರವಾದಿ ಮುಹಮ್ಮದ್(ಸ) ಮೂರು ರೀತಿಯಲ್ಲಿ ಕ್ಷೋಭೆ ವರ್ಣಿಸಿರುವರು.

  1. ಕಪ್ಪು ಕವಿದಿರುವ ರಾತ್ರಿಯ ಅಂಧಕಾರ
  2. ಮಳೆಯ ಹನಿಗಳು (ಮಳೆಯ ಹನಿಯು ಎಲ್ಲರ ಮನೆಗಳನ್ನು ತಲುಪುತ್ತದೆ.)
  3. ಹುಲ್ಲಿನ ಚಾಪೆ (ಇದರ ಒಂದು ಕಡ್ಡಿ ಹೋದರೆ ಉಳಿದವುಗಳೆಲ್ಲ ಒಂದರ ಹಿಂದೆ ಒಂದು ಬಿಚ್ಚಿಕೊಳ್ಳುತ್ತದೆ.)

ಹಿಂದಿನ ಹಿರಿಯರು ಈಮಾನ್ ಬಾಕಿ ಉಳಿಯಲು ಸದಾ ಪ್ರಾರ್ಥಿಸುತ್ತಿದ್ದರು. ಮುಸ್ಲಿಮರಾಗಿ ಜೀವಿಸಿದಂತೆ ಈಮಾನಿನೊಂದಿಗೆ ಮರಣ ಹೊಂದುವುದು ಕೂಡ ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕನಸಾಗಿದೆ. ಆದರೆ ಇಂದು ಪರಸ್ಪರ ಭೇಟಿಯಾಗುವಾಗ ಈ ರೀತಿಯ ಪ್ರಾರ್ಥನೆ ಕೇಳಿಸುತ್ತಿಲ್ಲ.

ಇಂದು ನಾವು ಲೌಕಿಕ ಲಾಭದ ಹಿಂದೆ ಅತಿಯಾಗಿ ಓಡುವವರಾಗಿದ್ದೇವೆ. ಸಂಪತ್ತನ್ನು ಅತಿಯಾಗಿ ಪ್ರೀತಿಸುವವರಾಗಿ ಮಾರ್ಪಟ್ಟಿದ್ದೇವೆ. ಹಣಕ್ಕಾಗಿ ಪ್ರಾಮಾಣಿಕತೆ, ಸತ್ಯಸಂಧತೆ, ಚಾರಿತ್ರ್ಯವನ್ನು ಪಣಕ್ಕಿಡಲು ಸಿದ್ದವಾದ ಒಂದು ಸಮೂಹವು ನಮ್ಮ ಮಧ್ಯೆ ಬೆಳೆದು ಬರುತ್ತಿದೆ. ಮಕ್ಕಳು ಧರ್ಮದಿಂದ ದೂರ ಸರಿಯುತ್ತಿದ್ದಾರೆ. ನಾಸ್ತಿಕತೆಯಡೆಗೆ ವಾಲುತ್ತಿದ್ದಾರೆ. ಇನ್ನೊಂದೆಡೆ ಧರ್ಮದಲ್ಲಿ ಅತಿರೇಕದ ವರ್ತನೆಗಳು ಹೆಚ್ಚಾಗುತ್ತಿವೆ. ಧರ್ಮದಲ್ಲಿ ಅತಿರೇಕ ವೆಸಗುವವನು ನಾಶ ಹೊಂದುವನು ಎಂಬುದಾಗಿ ಪ್ರವಾದಿ ಮುಹಮ್ಮದರು(ಸ) ಮೂರು ಬಾರಿ ಪುನರಾವರ್ತಿಸಿ ಹೇಳಿದ್ದರು. ಪ್ರತೀಬಾರಿಯೂ ಹೊಸ ಹೊಸ ರೀತಿಯ ಫಿತ್ನಗಳು ಕಾಣಿಸಿಕೊಳ್ಳುತ್ತವೆ ಮತ್ತು ಅದು ಹಿಂದಿನ ಕಾಲಕ್ಕಿಂತ ಹೆಚ್ಚು ತೀವ್ರವಾದ ರೂಪವನ್ನು ತಾಳುತ್ತದೆ.

ನಾವು ಇದುವರೆಗೆ ಕಂಡ ವಂಚನೆಗಳನ್ನು ಬಹಳ ಕ್ಷುಲ್ಲಕವೆಂದು ಪರಿಗಣಿಸಲಾರಂಭಿಸಿದ್ದೇವೆ. ವ್ಯಭಿಚಾರವನ್ನು ಸಲಿಂಗಿ ಲೈಂಗಿಕತೆಗಿಂತ ಪರವಾಗಿಲ್ಲ ಎಂಬ ರೀತಿಯಲ್ಲಿ ಒಪ್ಪಿಕೊಳ್ಳಲಾರಂಭಿಸಿದ್ದೇವೆ. ನಮ್ಮ ಮಗಳಿಗೆ ಬಾಯ್ ಫ್ರೆಂಡ್ ಇದ್ದರೂ ಪರವಾಗಿಲ್ಲ ಹೆಣ್ಣು ಹೆಣ್ಣು ವಿವಾಹವಾಗುವ ಈ ದಿನಗಳಲ್ಲಿ ಹೆಣ್ಣಿನೊಂದಿಗೆ ಗೆಳೆತನ ಬೆಳೆಸುವುದನ್ನೇ ಸಂಶಯದ ಕಣ್ಣುಗಳಿಂದ ನೋಡುವಂತಾಗಿದೆ. ವಿವಾಹಕ್ಕಾಗಿ ಹೆಣ್ಣು ಹುಡುಕುವುದು ಗಂಡು ಹುಡುಕುವುದು ಎಷ್ಟು ಪ್ರಯಾಸದ ಕೆಲಸವಾಗಿದೆ ಎಂದರೆ ಮಕ್ಕಳೇ ಅವರಿಗಾಗಿ ಹುಡುಕಿ ಇಡಬೇಕಾಗಿತ್ತು ಎಂದು ಹೆತ್ತವರು ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ.

ನಾವು ಇದುವರೆಗೆ ಧೂಮಪಾನ, ಮದ್ಯಪಾನವನ್ನು ಭಯ ಪಡುತ್ತಿದ್ದೆವು ಆದರೆ ಪರಿಸ್ಥಿತಿ ಅದಕ್ಕಿಂತಲೂ ಮುಂದುವರಿದು ಮಾದಕ ವ್ಯಸನಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಲಿಬರಲಿಸಂ, ಎಲ್‌ಜಿಬಿಟಿಕ್ಯೂನ ಹೆಸರಿನಲ್ಲಿ ಚಿತ್ರ ವಿಚಿತ್ರ ಕಥೆಗಳು ದಿನ ಬೆಳಗಾದರೆ ಕೇಳಲಿಕ್ಕೆ ಸಿಗುತ್ತದೆ.

ಹೆಣ್ಣು ಪುರುಷನಿಗೆ ಯಾವ ಸಂದರ್ಭದಲ್ಲಿಯೂ ವಂಚನೆ ಆಗಬಹುದು. ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ಇದರಿಂದ ನಮ್ಮನ್ನು ಕಾಪಾಡಿ ಕೊಳ್ಳುವುದು ಬಹಳ ಚಾಲೆಂಜಿಂಗ್ ಕೆಲಸ ವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೆ ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬೀಳುವ ಅವಸ್ಥೆ ಉಂಟಾಗಬಹುದು. ಇಂತಹ ಘಟನೆಗಳು ಸಾಕಷ್ಟು ಸಮಾಜದಲ್ಲಿ ಸಂಭವಿಸುತ್ತಿದೆ. ಕೌಟುಂಬಿಕ ಭದ್ರತೆ ಛಿದ್ರವಾಗುತ್ತಿದೆ. ಮಕ್ಕಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಪ್ರವಾದಿ ಮುಹಮ್ಮದರು(ಸ) ಹೇಳಿರುವರು ತಿಹಾಮ ಪರ್ವತ ಶ್ರೇಣಿಯಷ್ಟು ದೊಡ್ಡ ಪ್ರಮಾಣದಲ್ಲಿ ಒಳಿತಿನೊಂದಿಗೆ ಹಾಜರಾಗುವರು. ಆದರೆ ಅದನ್ನೆಲ್ಲ ಅಲ್ಲಾಹನು ಮರಳಿನ ಕಣದಂತೆ ಹಾರಿಸಿ ಬಿಡುವನು. ಏಕೆಂದರೆ ಅವನು ಏಕಾಂತದ ಸಮಯದಲ್ಲಿ ಕೆಡುಕಿನಲ್ಲಿ ಮುಳುಗುವನಾಗಿದ್ದನು.

ಯಾರೂ ನೋಡುವುದಿಲ್ಲ. ಯಾರೂ ನೋಡಲಿಕ್ಕೆ ಸಾಧ್ಯವಿಲ್ಲ ಎಂಬುದಾಗಿ ಖಚಿತ ಪಡಿಸಿಕೊಂಡು ಮುಚ್ಚಿದ ಬಾಗಿಲುಗಳೊಳಗೆ ನಾವು ನಮ್ಮ ಮೊಬೈಲ್‌ಗಳನ್ನು ಉಪಯೋಗಿಸಿ ನೋಡುತ್ತಿರುವ ಚಿತ್ರಗಳು, ಕಳುಹಿಸುತ್ತಿರು ವಂತಹ ಮೆಸೇಜುಗಳು ಯಾವ ರೀತಿಯದ್ದು ಎಂಬುದನ್ನು ನಾವೇ ಆತ್ಮಾವಲೋಕನಕ್ಕೆ ಒಳಪಡಿಸಿಕೊಳ್ಳಬೇಕಾಗಿದೆ. ನಾನು ನನ್ನ ಏಕಾಂತದ ಸಮಯದಲ್ಲಿ ಮೊಬೈಲಿನೊಂದಿಗೆ ಏನು ಮಾಡುತ್ತಿದ್ದೇನೆ? ಏನು ನೋಡುತ್ತಿದ್ದೇನೆ? ನಾವು ಏನನ್ನು ನೋಡಿದ್ದೇವೆ? ಯಾವ ಮೆಸೇಜನ್ನು ಯಾರಿಗೆ ಕಳುಹಿಸಿದ್ದೇವೆ? ಎಂಬುದು ಈ ಲೋಕದಲ್ಲಿ ಯಾರಿಗೂ ತಿಳಿಯದೆ ಹೋಗಬಹುದು. ಏಕೆಂದರೆ ನಮ್ಮ ಮೊಬೈಲಿಗೆ ಪಾಸ್ವರ್ಡ್ ಹಾಕಲಾಗುತ್ತದೆ. ಅದು ಭದ್ರವಾಗಿರುತ್ತದೆ. ವಾಟ್ಸಪ್, ಇನ್ಸ್ಟಾಗ್ರಾಮ್‌, ಯೂಟ್ಯೂಬ್ ಇಂತಹವುಗಳಿಗೂ ಪಾಸ್ವರ್ಡ್ ಹಾಕುವ ವ್ಯವಸ್ಥೆ ಇದೆ. ಆದರೆ ಯಾವ ಪಾಸ್ವರ್ಡ್ ಅಗತ್ಯವಿಲ್ಲದೆ ನಮ್ಮ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ವಹಿಸುತ್ತಿರುವ ಅಲ್ಲಾಹನಿಂದ ಅಡಗಿಸಲು ಸಾಧ್ಯವಿರುವ ಯಾವುದೂ ನಮ್ಮ ಬಳಿ ಇಲ್ಲ. ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲದ ಆದರೆ ನಮ್ಮ ಕಣ್ಣುಗಳನ್ನು ಗಮನಿಸುತ್ತಿರುವ ಅಲ್ಲಾಹನ ವೀಕ್ಷಣೆಯಲ್ಲಿ ನಾವು ಇದ್ದೇವೆ ಎಂಬ ಸತ್ಯವನ್ನು ನಾವು ಜೀವನದಲ್ಲಿ ಒಂದು ಕ್ಷಣವೂ ಮರೆತು ಬಿಡಬಾರದು.

ನಿಮ್ಮ ಸಂಪತ್ತು ಮತ್ತು ಸಂತತಿಗಳು ಒಂದು ಪರೀಕ್ಷೆಯಾಗಿದೆ. ಅತ್ಯುನ್ನತ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲಿಯೇ ಇದೆ. (ಸೂರಃ ಅತ್ತ ಗಾಬುನ್- 15) ಮಕ್ಕಳು ನಿಮ್ಮ ಪಾಲಿಗೆ ವಂಚನೆ ಆಗಿದ್ದಾರೆ ಎಂದು ಅಲ್ಲಾಹನು ಹೇಳಿರುತ್ತಾನೆ. ಹೆಚ್ಚಿನ ಹೆತ್ತವರು ಮಕ್ಕಳಿಗಾಗಿ ತಮ್ಮ ಬದುಕನ್ನು ಸಮರ್ಪಿಸಿ ಬಿಟ್ಟಿದ್ದಾರೆ. ಮಕ್ಕಳಿಗಾಗಿ ನಾವು ಬದುಕುತ್ತಿದ್ದೇವೆ ಎಂಬ ಭಾವನೆ ಇದೆ. ಖಂಡಿತವಾಗಿಯೂ ಮಕ್ಕಳನ್ನು ನೋಡಿಕೊಳ್ಳುವುದು, ಅವರ ತರಬೇತಿ ನಮ್ಮ ಜವಾಬ್ದಾರಿಯಾಗಿದೆ. ಆದರೆ ಮಕ್ಕಳು ನಾವಿಲ್ಲದಿದ್ದರೂ ಬದುಕುತ್ತಾರೆ. ಆದುದರಿಂದ ನಾವು ಮೊಟ್ಟ ಮೊದಲು ನಮ್ಮ ಪರಲೋಕವನ್ನು ದೃಢ ಪಡಿಸಿಕೊಳ್ಳೋಣ. ಅವರ ಪರಲೋಕಕ್ಕಾಗಿ ಗಮನ ಕೊಡುವವರಾಗೋಣ. ಎಲ್ಲವನ್ನು ಖರೀದಿಸಿ ಕೊಡುವ ಒದಗಿಸಿ ಕೊಡುವ ಹೆತ್ತವರಾಗಿ ನಾವು ಮಾರ್ಪಡುತ್ತಿದ್ದೇವೆ. ಇದು ಮಕ್ಕಳನ್ನು ದಾರಿಗೆಡಿಸುತ್ತಿದೆ. ಅವರ ಬೇಡಿಕೆಗಳನ್ನು ಪೂರೈಸುವುದರಲ್ಲಿ ಅವರ ಹೊಟ್ಟೆ ತುಂಬಿಸುವುದರಲ್ಲಿ ಸಿಂಧು, ನಿಷಿದ್ಧ ಶರೀಯತ್‌ಗಳ ಪಾಲನೆಯನ್ನು ಗಾಳಿಗೆ ತೂರುತ್ತಿದ್ದೇವೆ.

ಪ್ರವಾದಿ ಮುಹಮ್ಮದ್(ಸ)ರ ಪ್ರವಾದಿ ವಚನ ಒಂದು ಸದಾ ನಮ್ಮ ನೆನಪಿನಲ್ಲಿ ಉಳಿಯಬೇಕು ಪ್ರತಿಯೊಂದು ಸಮುದಾಯಕ್ಕೂ ಒಂದು ವಂಚನೆ ಇದೆ. ನನ್ನ ಸಮುದಾಯದ ವಂಚನೆ ಸಂಪತ್ತಾಗಿದೆ. ಹಲಾಲ್ ಹರಾಮ್‌ನ್ನು ಪರಿಗಣಿಸದೆ ಸಂಪಾದನೆ ಮಾಡುವವರು ಪದೇ ಪದೇ ಈ ವಚನ ವನ್ನು ನೆನಪಿಸುತ್ತಿರುವುದು ಒಳಿತು.
ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಅಧ್ಯಯನದಿಂದ ಕ್ಷೋಭೆಯಿಂದ ಪಾರಾಗುವ ಉಪಾಯಗಳು ಕೂಡ ನಮ್ಮ ಮುಂದೆ ಸ್ಪಷ್ಟವಾಗುತ್ತದೆ.

ನಿರಂತರವಾದ ಪ್ರಾರ್ಥನೆ, ಅಲ್ಲಾಹನ ಸ್ಮರಣೆ, ಅಲ್ಲಾಹನ ಗ್ರಂಥ ಮತ್ತು ಪ್ರವಾದಿ ಚರ್ಯೆಯೊಂದಿಗೆ ಗಾಢ ಸಂಬಂಧ, ಒಳಿತಿನ ಕೆಲಸಗಳಲ್ಲಿ ತಲ್ಲೀನರಾಗಿರುವುದು, ಸಮಯವನ್ನು ಸದುಪಯೋಗಪಡಿಸುವುದು, ಸೋಶಿಯಲ್ ಮೀಡಿಯಾ ಬಳಕೆಗೆ ಸಮಯವನ್ನು ಫಿಕ್ಸ್ ಮಾಡಿ ಸಮಯ ಪೋಲಾಗದಂತೆ ಗರಿಷ್ಠ ಜಾಗರೂಕತೆ ವಹಿಸುವುದು, ಸಣ್ಣ ಪುಟ್ಟ ಪಾಪಗಳಿಂದ ದೂರ ಉಳಿಯುವುದು ಇವುಗಳನ್ನು ಪಾಲಿಸುವ ಮೂಲಕ ನಾವು ಈ ಜಗತ್ತಿನ ಎಲ್ಲ ರೀತಿಯ ವಂಚನೆಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಬಹುದು.