ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ ಹೇಗಿರಬೇಕು?

0
385

✍️ ಏಕೆಕೆ

ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಅಗತ್ಯವಿದೆಯೇ ಅನ್ನುವ ಪ್ರಶ್ನೆ ಒಂದು ಕಡೆ ಇದ್ದರೆ ಪ್ರತಿಭಟಿಸುವುದಾದರೆ ಆ ಪ್ರತಿಭಟನೆ ಹೇಗಿರಬೇಕು ಅನ್ನುವ ಪ್ರಶ್ನೆ ಇನ್ನೊಂದು ಕಡೆ ಇದೆ. ಈಗಾಗಲೇ ತ್ರಿವಳಿ ತಲಾಕ್ ಕಾನೂನಿನ ವಿರುದ್ಧ ಮುಸ್ಲಿಂ ಸಮುದಾಯ ಪ್ರತಿಭಟಿಸಿದೆ. ಸಿಎಎ, ಎನ್‌ಆರ್‌ಸಿ ವಿರುದ್ಧವೂ ಮುಸ್ಲಿಂ ಸಮುದಾಯ ಪ್ರತಿಭಟಿಸಿದೆ.

ಆದರೆ ಅದರ ಫಲಿತಾಂಶ ಏನು ಅನ್ನುವುದು ಎಲ್ಲರಿಗೂ ಗೊತ್ತು. ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಂಧಿತರಾದ ಅನೇಕ ಮಂದಿ ಈಗಲೂ ಜೈಲಲ್ಲಿ ಇದ್ದಾರೆ. ನೂರಾರು ಮಂದಿ ಈಗಲೂ ನ್ಯಾಯಾಲಯಕ್ಕೆ ಓಡಾಡ್ತಾ ಇದ್ದಾರೆ. ಮುಸ್ಲಿಂ ಸಮುದಾಯ ಬೀದಿಗಿಳಿಯಬೇಕು, ಪ್ರತಿಭಟಿಸಬೇಕು ಎಂದು ಬಯಸುವ ಪ್ರಭುತ್ವ ಇರುವಾಗ ಮುಸ್ಲಿಮರು ಪ್ರತಿಭಟಿಸುವುದು ಎಷ್ಟು ಸರಿ ಅನ್ನುವ ಪ್ರಶ್ನೆ ಒಂದು ಕಡೆ ಇದ್ದರೆ, ವಕ್ಫ್ ಕಾಯ್ದೆಯ ವಿರುದ್ಧ ದೇಶಾದ್ಯಂತ ಈಗಾಗಲೇ ನಡೆದಿರುವ ಪ್ರತಿಭಟನೆಗಳು ಏನನ್ನು ಸೂಚಿಸುತ್ತದೆ ಅನ್ನುವ ಪ್ರಶ್ನೆ ಇನ್ನೊಂದು ಕಡೆ ಇದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮೂವರು ಪ್ರತಿಭಟನಾಕಾರರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ 230 ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯೂ ಹಿಂಸಾ ಚಾರಕ್ಕೆ ತಿರುಗಿದೆ. ಪೊಲೀಸರು ಲಾಠಿ ಪ್ರಹಾರ ಮಾಡಿಸಿದ್ದಾರೆ. ತ್ರಿಪುರದಲ್ಲಿ ನಡೆದ ಪ್ರತಿಭಟನೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. 18 ಮಂದಿ ಗಾಯಗೊಂಡಿದ್ದಾರೆ. 8 ಮಂದಿಯನ್ನು ಬಂಧಿಸಲಾಗಿದೆ. ಮಣಿಪುರದಲ್ಲಿ ಪ್ರತಿಭಟನಾಕಾರರು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷ ಮೊಹಮ್ಮದ್ ಅಜ್ಗರ್ ಅಲಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಆ ಬಳಿಕ ಪ್ರದೇಶದಲ್ಲಿ ಕರ್ಫ್ಯೂ ಹೇರಲಾಗಿದೆ.

ಇವೆಲ್ಲ ಹೇಳೋದೇನು? ಮುಸ್ಲಿಮರು ತಾನಾ ಗಿಯೇ ಪ್ರಭುತ್ವ ಬೀಸಿದ ಬಲೆಗೆ ಬೀಳ್ತಾ ಇದ್ದಾರಾ? ಮುಸ್ಲಿಮರನ್ನು ಅಶಾಂತಿ ಪ್ರಿಯರು, ಕಾನೂನು ಭಂಜಕರು, ದಂಗೆಕೋರರು ಎಂದು ಬಿಂಬಿಸುವುದಕ್ಕೆ ಪ್ರಭುತ್ವಕ್ಕೆ ಮುಸ್ಲಿಮರು ಅವಕಾಶವನ್ನು ಮಾಡಿ ಕೊಡುತ್ತಾ ಇದ್ದಾರಾ? ಮುಸ್ಲಿಮರ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಪರಿವರ್ತಿಸಲು ಪ್ರಭುತ್ವ ತನ್ನ ಕಡೆಯಿಂದ ತಂತ್ರವನ್ನು ಹೆಣೆಯುತ್ತಾ ಇರಬಹುದು ಎಂಬ ಎಚ್ಚರಿಕೆ ಪ್ರತಿಭಟನಾಕಾರರಲ್ಲಿ ಇದೆಯಾ ಅಥವಾ ಮುಗ್ಧವಾಗಿ ಅವರು ಪ್ರಭುತ್ವದ ತಂತ್ರಕ್ಕೆ ಬಲಿಯಾಗ್ತಾ ಇದ್ದಾರಾ?

ಮುಸ್ಲಿಮರು ಪ್ರತಿಭಟಿಸಬೇಕು, ಬೀದಿಗಿಳಿಯಬೇಕು, ಭಾಷಣ ಮಾಡಬೇಕು, ಘೋಷಣೆ ಕೂಗಬೇಕು… ಎಂಬುದಾಗಿ ಪ್ರಭುತ್ವವೇ ಬಯಸ್ತಾ ಇದೆ. ಯಾಕಂದ್ರೆ ಈ ಭಾಷಣ, ಘೋಷಣೆಗಳಿಂದ ತನಗೆ ಬೇಕಾದುದನ್ನು ಕತ್ತರಿಸಿ ತಿರುಚಿ ಅವುಗಳನ್ನು ಹಿಂದೂ ವಿರೋಧಿ ಮತ್ತು ದೇಶ ವಿರೋಧಿಯಾಗಿ ಬಿಂಬಿಸುವ ಸಾಮರ್ಥ್ಯ ಪ್ರಭುತ್ವದ ಬಳಿ ಇದೆ. ಅದಕ್ಕೆ ಬೇಕಾದ ಐಟಿಸೆಲ್ ಅದರ ಬಳಿ ಇದೆ. ಮಾತ್ರ ಅಲ್ಲ ಅದನ್ನು ದೇಶಡೆಲ್ಲೆಡೆ ತಲುಪಿಸುವುದಕ್ಕೆ ಬೇಕಾದ ಕಾಲಾಳುಗಳೂ ಅದರ ಬಳಿ ಇದ್ದಾರೆ.

ಈ ಹಿಂದಿನ ಎನ್‌ಆರ್‌ಸಿ ವಿರೋಧಿ ಪ್ರತಿ ಭಟನೆಯ ನ್ನು ಪ್ರಭುತ್ವ ಹೀಗೆಯೇ ದುರುಪಯೋಗಪಡಿಸಿ ಕೊಂಡಿತ್ತು. ಅದನ್ನು ಹಿಂದೂ ವಿರೋಧಿಯಾಗಿ ಬಿಂಬಿಸುವುದಕ್ಕೆ ಯಶಸ್ವಿಯಾಗಿತ್ತು. ತ್ರಿವಳಿ ತಲಾಕ್ ಕಾನೂನಿನ ವಿರುದ್ಧ ನಡೆಸಲಾದ ಪ್ರತಿಭಟನೆಯನ್ನೂ ಅದು ಹಿಂದೂ ವಿರೋಧಿಯಾಗಿಯೇ ಪರಿವರ್ತಿಸಿತ್ತು.

ಆದ್ದರಿಂದ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಅದು ಹಿಂದೂ ವಿರೋಧಿಯಾಗಿ ಮತ್ತು ದೇಶ ವಿರೋಧಿಯಾಗಿ ಪರಿವರ್ತಿಸುವುದಕ್ಕೆ ಹುನ್ನಾರ ನಡೆಸುತ್ತಿರುವುದು ರಹಸ್ಯವೇನೂ ಅಲ್ಲ. ಆದ್ದರಿಂದ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಆಯೋಜಿಸುವ ಯಾರೇ ಆಗಲಿ ಮೊದಲಾಗಿ ಈ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ಪ್ರತಿಭಟನೆಯ ಸ್ವರೂಪ ಹೇಗಿರಬೇಕು, ಅದರಲ್ಲಿರುವ ಘೋಷಣೆಗಳು ಏನಿರಬೇಕು, ಭಾಷಣ ಮಾಡುವವರು ಯಾರಾಗಿರಬೇಕು ಮತ್ತು ಅವರ ಭಾಷಣದ ವಿಷಯಗಳು ಏನಿರಬೇಕು ಎಂಬುದನ್ನು ಸ್ಪಷ್ಟ ಪಡಿಸಿಕೊಂಡೇ ಪ್ರತಿಭಟನೆಯನ್ನು ಆಯೋಜಿಸಬೇಕು.

ಈ ಪ್ರತಿಭಟನೆಯಲ್ಲಿ ಕೂಗಲಾಗುವ ಘೋಷಣೆಯನ್ನು ಆಯೋಜಕರು ಮೊದಲಾಗಿ ಪರಿಶೀಲಿಸಬೇಕು. ಆಯೋಜಕರಿಂದ ಅನುಮತಿಸಲಾದ ಘೋಷಣೆಯ ಹೊರತಾಗಿ ಬೇರೆ ಯಾವ ಘೋಷಣೆಯನ್ನೂ ಯಾರೂ ಕೂಗಬಾರದು. ಮಾತ್ರ ಅಲ್ಲ ಈ ಘೋಷಣೆ ಪೂರ್ಣವಾಗಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಇರಬೇಕೇ ಹೊರತು ಯಾವ ಸಮುದಾಯವನ್ನೂ ಗುರಿ ಮಾಡಲೇಬಾರದು.

ದೇಶದ ಸಂವಿಧಾನ, ಸರ್ವೋಚ್ಚ ನ್ಯಾಯಾಲಯ ಇತ್ಯಾದಿಗಳ ಬಗ್ಗೆ ಅಗೌರವ ಸೂಚಿಸುವ ಯಾವ ಘೋಷಣೆಗಳೂ ಕೇಳಿ ಬರಬಾರದು. ವಿಷಯ ತಜ್ಞರನ್ನೇ ಭಾಷಣಗಾರರಾಗಿ ಆಹ್ವಾನಿಸಬೇಕು. ಅವರು ವಿಷಯದ ಮೇಲೆ ಮಾತ್ರ ಗಮನಹರಿಸುವಂತೆ ತಿಳಿಸಬೇಕು. ಮುಖ್ಯವಾಗಿ ಭಾಷಣಗಳು ವಕ್ಫ್ ಕಾಯ್ದೆ ಏನು ಮತ್ತು ಅದರಲ್ಲಿ ಮಾಡಲಾಗಿರುವ ತಿದ್ದುಪಡಿಗಳಿಂದ ಆಗುವ ಅನಾಹುತಗಳು ಏನು ಎಂಬುದನ್ನೇ ಕೇಂದ್ರೀಕರಿಸಿ ಇರಬೇಕು.

ಪ್ರಭುತ್ವ ಹರಡಿರುವ ಸುಳ್ಳುಗಳಿಂದ ಈ ದೇಶದ ದೊಡ್ಡದೊಂದು ಸಮೂಹ ಪ್ರಭಾವಿತವಾಗಿದ್ದು ಅವರಿಗೆ ನಿಜ ಸ್ಥಿತಿಯನ್ನು ಮನನ ಮಾಡಿಸುವ ರೀತಿಯಲ್ಲೇ ಘೋಷಣೆ ಮತ್ತು ಭಾಷಣಗಳು ಇರಬೇಕು.. ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಸಂಘಟಕರು ನೋಡಿಕೊಳ್ಳಬೇಕು. ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುವ ರೀತಿಯಲ್ಲಿ ಇಡೀ ಪ್ರತಿಭಟನೆಯನ್ನು ನಿರ್ವಹಿಸಬೇಕು.

ಈ ಪ್ರತಿಭಟನೆ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧವೇ ಹೊರತು ಹಿಂದುಗಳ ವಿರುದ್ಧ ಅಲ್ಲ. ಹಿಂದುಗಳು ಮುಸ್ಲಿಮರಿಗೆ ಏನೂ ಮಾಡಿಲ್ಲ. ರಾಜಕಾರಣಿಗಳು ತಮ್ಮ ದುರುದ್ದೇಶಕ್ಕಾಗಿ ಮುಸ್ಲಿಮರನ್ನು ಹಿಂದುಗಳ ವೈರಿಗಳಂತೆ ಬಿಂಬಿಸುತ್ತಿದ್ದಾರೆ. ಅದಕ್ಕಾಗಿ ಧರ್ಮ ಕೇಂದ್ರಿತ ಚರ್ಚೆಗೆ ಸಮಾಜವನ್ನು ಸದಾ ನೂಕುತ್ತಿದ್ದಾರೆ.

ಅವರಿಗೆ ಮುಸ್ಲಿಂ ಸಮುದಾಯ ಹಿಂಸೆಗಿಳಿಯಬೇಕಾಗಿದೆ, ಕಾನೂನು ಭಂಜಕವAತೆ ಕಾಣಿಸಬೇಕಾಗಿದೆ, ಹಿಂದುಗಳ ವಿರುದ್ಧ ಮಾತನಾ ಡುವುದಕ್ಕೆ ಅವರ ನ್ನು ಪ್ರೇರೇಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಆಯೋಜಿಸುವವರು ಮೈಯೆಲ್ಲಾ ಕಣ್ಣಾಗಿರಬೇಕು. ಯಾವ ಕಾರಣಕ್ಕೂ ಪ್ರತಿಭಟನೆ ಹಿಂದುಗಳ ವಿರುದ್ಧವೋ ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗದ ವಿರುದ್ಧವೋ ತಿರುಗದಂತೆ ನೋಡಿಕೊಳ್ಳಲೇಬೇಕು.

ಕಾಯ್ದೆಯನ್ನು ವಿರೋಧಿಸುವುದು ಮತ್ತು ಕಾಯ್ದೆಯಲ್ಲಿನ ಲೋಪ ದೋಷಗಳನ್ನು ಹಿಂದೂ-ಮುಸ್ಲಿಮ್‌ ಒಳಗೊಂಡ ಇಡೀ ಸಮಾಜಕ್ಕೆ ತಿಳಿಯಪಡಿಸುವುದೇ ಪ್ರತಿಭಟನೆಯ ಉದ್ದೇಶವಾಗಬೇಕು. ಯಾವ ಕಾರಣಕ್ಕೂ ಪ್ರಭುತ್ವ ಹೆಣೆದ ಸಂಚಿನ ಬಲೆಗೆ ಸಮುದಾಯ ಬೀಳದಂತೆ ಪ್ರತಿಭಟನಾಕಾರರು ಎಚ್ಚರಿಕೆ ವಹಿಸಲೇಬೇಕು. ಅಂದಹಾಗೆ,

ಪ್ರತಿಭಟನೆ ಸಾಂವಿಧಾನಿಕ ಹಕ್ಕು ನಿಜ. ಆದರೆ ಆ ಪ್ರತಿಭಟನೆಯನ್ನು ಸಂವಿಧಾನ ವಿರೋಧಿಯಾಗಿ ಮಾರ್ಪಡಿಸುವುದಕ್ಕೆ ಒಂದೇ ಒಂದು ಹಿಂಸಾಚಾರ ಸಾಕು ಅನ್ನುವ ಪ್ರಜ್ಞೆ ಮುಸ್ಲಿಂ ಸಮುದಾಯದಲ್ಲಿ ಸದಾ ಇರಬೇಕು.